ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕ ಕಸುಬು ಎಂಬುದು ಮನದಟ್ಟಾಗಿದೆ. ಕೆಲವು ವರ್ಷದ ಹಿಂದೆ ಹೈನುಗಾರಿಕೆ ಕೃಷಿಕ್ಷೇತ್ರದ ಉಪಕಸುಬಾಗಿತ್ತು. ಕೃಷಿಕ ಹೊಲ ಊಳುವುದಕ್ಕೆ ಎತ್ತುಗಳನ್ನು ಸಾಕಿದಂತೆ, ಮನೆಯಲ್ಲಿ ಹಾಲು, ಮೊಸರು ತುಪ್ಪಕ್ಕೆಂದು ಹಸುಗಳನ್ನು ಸಾಕುತ್ತಿದ್ದ. ಆದರೀಗ ಕಾಲ ಬದಲಾಗಿದೆ, ಅನೇಕರು ಹೈನುಗಾರಿಕೆಯನ್ನೇ ಪ್ರಧಾನ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲ ಕೆಲವೇ ವರ್ಷಗಳಲ್ಲಿ ಆಗಿರುವಂಥದ್ದಲ್ಲ. ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ನ್ಯಾಷನಲ್ ಡೈರಿ ಡೆವಲಪ್​ವೆುಂಟ್ ಬೋರ್ಡ್’ ಅನ್ನು ಸ್ಥಾಪಿಸಿದರು. ಈ ಮಹತ್ವದ ಬೋರ್ಡ್​ಗೆ ಮೊದಲ ಅಧ್ಯಕ್ಷರನ್ನಾಗಿ ವರ್ಗೀಸ್ ಕುರಿಯನ್ ಅವರನ್ನು ನೇಮಿಸಿದರು. ಕುರಿಯನ್ ದೇಶ್ಯಾದಂತ ಕ್ಷೀರಕ್ರಾಂತಿಯನ್ನೇ ಮಾಡಿದರು. ತಮ್ಮ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಸಂಚರಿಸಿದ ಕುರಿಯನ್, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಆರಂಭಿಸಿದರು. ಈ ಮೂಲಕ ಗ್ರಾಮೀಣ ಭಾಗದಲ್ಲಿ ಹಾಲಿನ ಶೇಖರಣೆ ಹೆಚ್ಚಿಸಿ, ಪಟ್ಟಣ ಪ್ರದೇಶದಲ್ಲಿರುವ ಮಾರುಕಟ್ಟೆಗೆ ಒದಗಿಸುವ ವ್ಯವಸ್ಥೆಗೆ ನಾಂದಿ ಹಾಡಿದರು.
ಡೈರಿ ಕ್ಷೇತ್ರದಲ್ಲಿ ಈ ಸಾಧನೆ ಸುಲಭದ ಮಾತಾಗಿರಲಿಲ್ಲ. ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಹಾಲು ಉತ್ಪಾದನಾ ಸಾಮರ್ಥ್ಯ ಕೇವಲ ಶೇ.1.64ರಷ್ಟಿತ್ತು. 1960ರ ವೇಳೆಗೆ ಇದು 1.15ಕ್ಕೆ ಇಳಿದಿತ್ತು. ಹೀಗಿರುವಾಗ ದೇಶದಲ್ಲಿ ಅಗತ್ಯವಿರುವಷ್ಟು ಹಾಲನ್ನು ಉತ್ಪಾದಿಸಲು 1950, 60ರ ದಶಕದಲ್ಲಿ ಹಲವು ಯೋಜನೆ ಜಾರಿಗೊಳಿಸಲಾಯಿತು.
ಪ್ರಮುಖವಾಗಿ 3 ಹಂತದಲ್ಲಿ ಡೈರಿ ಉದ್ಯಮ ನಡೆಯುತ್ತಿದೆ. ಮೊದಲನೆಯದಾಗಿ ನೋಂದಾಯಿತ ಹಾಲು ಉತ್ಪಾದಕ ಸದಸ್ಯರು ಅಥವಾ ರೈತರಿಂದ ಗ್ರಾಮಗಳ ಮಟ್ಟದಲ್ಲಿ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲನ್ನು ಖರೀದಿಸಿ, ತಿಂಗಳಿಗೆ ಒಂದು ಬಾರಿ ಹಾಲಿನ ಗುಣಮಟ್ಟದ ಆಧಾರದಲ್ಲಿ ಹಾಲು ಉತ್ಪಾದಕರಿಗೆ ಹಣ ನೀಡುವುದು. ಎರಡನೇ ಹಂತದಲ್ಲಿ, ಜಿಲ್ಲಾ ಹಾಲು ಒಕ್ಕೂಟಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಪ್ರಾಥಮಿಕ ಸಹಕಾರ ಸಂಘಗಳಿಂದ ಸಂಗ್ರಹಿಸಿ, ಸಂಸ್ಕರಿಸಿದ ಬಳಿಕ ಗ್ರಾಹಕರಿಗೆ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದು. ಇದರೊಂದಿಗೆ ಕಾಲಕಾಲಕ್ಕೆ, ರೈತರ ಬಳಿಯಿರುವ ಹಸುಗಳ ಆರೋಗ್ಯ ತಪಾಸಣೆ, ಪಶುಆಹಾರ ಒದಗಿಸುವ ವ್ಯವಸ್ಥೆಯನ್ನು ತಮ್ಮ ಒಕ್ಕೂಟದ ವ್ಯಾಪ್ತಿಗೆ ಬರುವ ರೈತರಿಗೆ ಒದಗಿಸುತ್ತದೆ. ಮೂರನೇ ಹಾಗೂ ಅಂತಿಮ ಹಂತದಲ್ಲಿ, ಮಹಾಮಂಡಳಗಳು ಜಿಲ್ಲಾ ಒಕ್ಕೂಟಗಳಿಂದ ಪೂರೈಕೆಯಾದ ಹಾಲು ಹಾಗೂ ಹಾಲು ಉತ್ಪನ್ನಗಳಿಗೆ ಸೂಕ್ತ ಬ್ರಾ್ಯಂಡ್ ಹಾಗೂ ಮಾರುಕಟ್ಟೆಯನ್ನು ಒದಗಿಸುತ್ತವೆ.
ಈ ರೀತಿ ವ್ಯವಸ್ಥಿತ ಯೋಜನೆಗಳನ್ನು ಜಾರಿಗೊಳಿಸಿದ ಫಲವೇ ಭಾರತ ಹೈನುಗಾರಿಕೆಯಲ್ಲಿ ಸ್ವಾವಲಂಬಿಯಾಗಿದೆ. 1951ರಲ್ಲಿ 17 ಮಿಲಿಯನ್ ಟನ್ ಹಾಲನ್ನು ಉತ್ಪಾದಿಸುತ್ತಿದ್ದ ಭಾರತ ಇದೀಗ, 196.7 ಮಿಲಿಯನ್ ಟನ್​ನಷ್ಟು ಹಾಲನ್ನು ಉತ್ಪಾದನೆ ಮಾಡುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಇದು 254.5 ಮಿಲಿಯನ್
ಟನ್​ಗೆ ತಲುಪುವ ಸಾಧ್ಯತೆಯಿದೆ. ಇನ್ನು 1960ರಲ್ಲಿ ಶೇ.1.15 ರಷ್ಟಿದ್ದ ಹೈನುಗಾರಿಕಾ ಬೆಳವಣಿಗೆ ಇದೀಗ ಶೇ.6.75ಕ್ಕೆ ಏರಿಕೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಯೂ ಮುಂಚೂಣಿಯಲ್ಲಿದೆ. ದೇಶದಲ್ಲಿ ಅತಿಹೆಚ್ಚು ಹಾಲು ಉತ್ಪಾದನೆಯಾಗುವ ಮೊದಲೈದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. 2.30 ಕೋಟಿ ಲೀಟರ್ ಉತ್ಪಾದನೆಯೊಂದಿಗೆ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, 80 ಲಕ್ಷ ಲೀಟರ್​ನೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ದೇಶದಲ್ಲಿ ಉತ್ಪತ್ತಿಯಾಗುವ ಒಟ್ಟು ಹಾಲಿನ ಪೈಕಿ ಶೇ.15ರಷ್ಟು ಮಾತ್ರ ಡೈರಿಗೆ ಬರುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ. ಜಾಗತಿಕ ಮಟ್ಟದಲ್ಲಿ ಇದು ಶೇ.70ರಷ್ಟಿದೆ!
ಜಾಗತಿಕ ಮಟ್ಟಕ್ಕೂ, ಭಾರತದಲ್ಲಿ ಡೈರಿಗೆ ಹೋಗುತ್ತಿರುವ ಹಾಲಿನ ಪ್ರಮಾಣಕ್ಕೂ ದೊಡ್ಡ ಪ್ರಮಾಣದ ವ್ಯತ್ಯಾಸವಿದೆ. ಇದನ್ನು ಸರಿದೂಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇನ್ನಷ್ಟು ಹೈನು ಉದ್ಯಮಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಬಹುದಾಗಿದೆ. ಪ್ರಮುಖವಾಗಿ ರಾಜ್ಯ ಸರ್ಕಾರಗಳು ರೈತರಿಗೆ ನೀಡುತ್ತಿರುವ ಸಹಾಯಧನದೊಂದಿಗೆ, ಹಸು ಖರೀದಿಗೆ, ಅಗತ್ಯ ಮೇವು ಪಡೆಯಲು ಹಾಗೂ ಇನ್ನಿತರ ಮೂಲಸೌಕರ್ಯಕ್ಕಾಗಿ ಸಬ್ಸಿಡಿ ನೀಡಬೇಕಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಹಾಲಿನ ಗುಣಲಕ್ಷಣ, ಇದರ ತಯಾರಿಗೆ ತಾಂತ್ರಿಕ ಸಹಾಯ ಹಾಗೂ ಜಾಗೃತಿಯನ್ನು ರೈತರಲ್ಲಿ ಮೂಡಿಸುವ ಕೆಲಸವಾಗಬೇಕು.
ಗ್ರಾಮೀಣ ಭಾಗದಲ್ಲಿರುವ ಭೂರಹಿತ ರೈತರು ಇತ್ತೀಚೆಗೆ ಹೈನುಗಾರಿಕೆಯತ್ತ ವಾಲುತ್ತಿದ್ದಾರೆ. ಕಾರ್ವಿುಕರು, ಸಣ್ಣ ಅಥವಾ ಅತಿಸಣ್ಣ ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಹೈನುಗಾರಿಕೆ ಸಹಕಾರಿಯಾಗಲಿದೆ. ಇನ್ನು ಜಮೀನು ರಹಿತ ಶೇಕಡ 67ರಷ್ಟು ಮಂದಿ ಹೈನುಗಾರಿಕೆ ಮಾರುಕಟ್ಟೆಯ ಶೇ.70ರಷ್ಟು ಮಾಲೀಕತ್ವವನ್ನು ಹೊಂದಿದ್ದಾರೆ. ಹೀಗಾಗಿ, ಹೈನುಗಾರಿಕೆ ಕ್ಷೇತ್ರ ದೇಶದಲ್ಲಿ ಬಡತನ ಕಡಿಮೆ ಮಾಡುವಲ್ಲಿಯೂ ನೆರವಾಗುತ್ತಿದೆ. ಅಷ್ಟೇ ಅಲ್ಲ, ಕೃಷಿ ಹಾಗೂ ಹೈನುಗಾರಿಕೆ ಸೇರಿ ದೇಶದಲ್ಲಿ ಶೇ.49ರಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ.
ಹೈನುಗಾರಿಕೆಯಲ್ಲಿ ಇತ್ತೀಚೆಗೆ ಮತ್ತೊಂದು ವಿಶಿಷ್ಟ ಉಪ ಪಂಗಡ ಆರಂಭವಾಗಿದೆ. ಅದೇನೆಂದರೆ ದೇಸಿ ತಳಿ ಹಸುಗಳ ಹಾಲಿನ ಮಾರಾಟ. ದೇಶದಲ್ಲಿ ಒಟ್ಟು 30ರಿಂದ 35 ಶುದ್ಧ ಗೋ ತಳಿಗಳನ್ನು ಕಾಣಬಹುದು. ಆರೋಗ್ಯ ಕಾಪಾಡಲು ಅಗತ್ಯವಿರುವ ‘ಎ2’ ಎನ್ನುವ ಅಂಶ ಕೇವಲ ದೇಸಿ ಹಸು ಹಾಗೂ ಎಮ್ಮೆಯಲ್ಲಿ ಮಾತ್ರ ಸಿಗುತ್ತದೆ ಎನ್ನುವ ಸಂಗತಿ ಸಂಶೋಧನೆ ಮೂಲಕ ಮನದಟ್ಟಾಗಿರುವುದರಿಂದ, ಅನೇಕರು ಇದೀಗ ಮತ್ತೆ ದೇಸಿ ಹಸುಗಳತ್ತ ವಾಲುತ್ತಿದ್ದಾರೆ.
ಹೈನುಗಾರಿಕೆ, ಹಸುಗಳಿಂದ ಇಷ್ಟೆಲ್ಲ ಉಪಯೋಗವಿದ್ದರೂ, ಅಕ್ರಮ ಗೋಮಾಂಸ ದಂಧೆ ಮಾತ್ರ ನಿಂತಿಲ್ಲ. ಕೆಲ ಕಟುಕರು ಗೋಮಾಂಸ ಆಸೆಗೆ ಬಿದ್ದು, ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡುವ ನಿದರ್ಶನಗಳು ನಮ್ಮ ಮುಂದಿವೆ. ಗೋವುಗಳು ಕಟುಕರ ಕೈಗೆ ಸಿಗಬಾರದು ಎನ್ನುವ ಕಾರಣಕ್ಕೆ, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಈಗಾಗಲೇ ಸಿದ್ಧತೆ ನಡೆಸಿದೆ.
ಹೈನುಗಾರಿಕೆ ಮತ್ತು ಕರ್ನಾಟಕವನ್ನು ನೋಡುವುದಾದರೆ, ರಾಜ್ಯದಲ್ಲಿ 22 ಸಾವಿರ ಹಳ್ಳಿಗಳಲ್ಲಿ ಡೈರಿ ವ್ಯವಸ್ಥೆಯಿದೆ. ಇದನ್ನು ಕೆಎಂಎಫ್ ಸಂಸ್ಥೆ ನಡೆಸುತ್ತಿದೆ. 16,522 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸಂಘಗಳು ಲಾಭದಾಯಕವಾಗಿ ನಡೆಯುತ್ತಿವೆ. ಈ 16,522 ಸಂಘಗಳ ಪೈಕಿ 4,494 ಸೊಸೈಟಿಗಳು ಸಂಪೂರ್ಣವಾಗಿ ಮಹಿಳೆಯರಿಂದ ನಡೆಯುತ್ತಿದೆ ಎನ್ನುವುದು ಗಮನಾರ್ಹ. ರಾಜ್ಯದಲ್ಲಿ ಅಧಿಕೃತವಾಗಿ 26 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಂಡಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎರಡು ಕೋಟಿ ಜನರು ಈ ಹೈನು ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ.
ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ಈ ಹೈನುಗಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ National program for Dairy Development ಎಂಬ ಯೋಜನೆಯನ್ನು 2014ರಲ್ಲಿ ಅನುಷ್ಠಾನಕ್ಕೆ ತಂದಿದೆ. ಹೆಚ್ಚು ಹಾಲು ಉತ್ಪಾದಿಸುವ 12 ರಾಜ್ಯಗಳಿಗೆ ಇನ್ನಷ್ಟು ಉತ್ತೇಜನ ನೀಡಲು 2,242 ಕೋಟಿ ರೂ. ಮೀಸಲಿಟ್ಟಿದೆ. 2017-18ರಲ್ಲಿ ನಬಾರ್ಡ್​ನಲ್ಲಿ ಡೈರಿಗಳ ಮೂಲಸೌಕರ್ಯ ವಿಸ್ತರಿಸಲು ಫಂಡ್ ಒಂದನ್ನು ಸ್ಥಾಪಿಸಿ, ಇದರಲ್ಲಿ 2,865 ಕೋಟಿ ರೂ. ಮೀಸಲಿಡಲಾಗಿದೆ. ಇನ್ನು ಕರೊನಾ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆತ್ಮನಿರ್ಭರ ಯೋಜನೆಯಲ್ಲಿ 15 ಸಾವಿರ ಕೋಟಿ ರೂ. ಪಶು ಸಂಗೋಪನೆಯಲ್ಲಿ ಮೂಲಭೂತ ಅಭಿವೃದ್ಧಿ ನಿಧಿ ಎಂದು ಮೀಸಲಿಟ್ಟಿದ್ದು, ಹೈನುಗಾರಿಕೆಯಲ್ಲಿ ಖಾಸಗಿ ಉದ್ಯಮವನ್ನು ಉತ್ತೇಜಿಸಲು ನೆರವಾಗಲಿದೆ.
ಆರ್ಥಿಕ ದೃಷ್ಟಿಯಿಂದ ರೈತರ ಪಾಲಿನ ಕಾಮಧೇನುವಾಗಿರುವ ಹೈನುಗಾರಿಕೆಯಲ್ಲಿ ಮತ್ತಷ್ಟು ತಾಂತ್ರಿಕತೆ ಸೇರಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈನೋದ್ಯಮಕ್ಕೆ ಜಾರಿಗೊಳಿಸಿರುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ.
(ಲೇಖಕರು ರಾಜ್ಯ ಬಿಜೆಪಿಯ ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಸಂಚಾಲಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
