ಕಲಿಯುಗದಲ್ಲಿ ಅಧ್ಯಾತ್ಮದ ಶಕ್ತಿಯ ದಿವ್ಯ ಉದಾಹರಣೆ ಶ್ರೀ ರಾಘವೇಂದ್ರ ಸ್ವಾಮಿಗಳು. ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಮಂಗಳವಾರದಿಂದ ರಾಯರ ಆರಾಧನಾ ಮಹೋತ್ಸವ ಆರಂಭವಾಗಿದೆ. ನಂಬಿದವರನ್ನು ಉದ್ಧರಿಸುವ ಬಾಳಪಥದಲ್ಲಿ ಬೆಳಕು ತೋರುವ ರಾಘವೇಂದ್ರ ಸ್ವಾಮಿಗಳ ಕಾರುಣ್ಯ ಅನನ್ಯ, ಅಸಾಧಾರಣ. ಈ ನಿಟ್ಟಿನಲ್ಲಿ ತಮಗಾಗಿರುವ ಸ್ವಂತ ಅನುಭವಗಳನ್ನು, ರಾಯರ ಬಗೆಗಿನ ಭಕ್ತಿಯನ್ನು ಧನ್ಯತೆಯ ಭಾವದೊಂದಿಗೆ ಹಂಚಿಕೊಂಡ ಭಕ್ತರ ಆಂತರ್ಯದ ನುಡಿಗಳು ಇಲ್ಲಿವೆ.
ಕ್ಷೇತ್ರ: ರಾಜಕೀಯ
ತಿರುವು: ಬಾಲ್ಯದಲ್ಲಿ ಮೂಡಿದ ಭಕ್ತಿ
ಶ್ರೀಗುರು ರಾಘವೇಂದ್ರ ಸ್ವಾಮೀಜಿ ಅವರ ಪರಮಭಕ್ತ ನಾನು. ಬಿಡುವು ಇದ್ದಾಗ ರಾಯರ ನಾಮಸ್ಮರಣೆ ಮಾಡುತ್ತಲೇ ಇರುತ್ತೇನೆ. ನನ್ನ ಜೀವನದಲ್ಲಿ ಆಗಿರುವ ಬೆಳವಣಿಗೆಗಳಿಗೆ ಗುರುರಾಯರ ಆಶೀರ್ವಾದ ಪ್ರಮುಖವಾದದ್ದು. ಸಂಸದನಾಗಿ, ಕೇಂದ್ರ ಸಚಿವನಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಗುರು ರಾಘವೇಂದ್ರ ಸ್ವಾಮೀಜಿ ಅವರಿಗೆ ಪೂಜೆ ಸಲ್ಲಿಸಿ, ಅವರ ನಾಮಸ್ಮರಣೆ ಮಾಡುತ್ತೇನೆ. ಯಾವುದೇ ಹೊಸ ಯೋಜನೆಗಳ ಅನುಷ್ಠಾನಕ್ಕೂ ಮೊದಲು ಹಾಗೂ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಮುಂಚೆ ಮನೆಯಲ್ಲಿ ಶ್ರೀ ರಾಯರಿಗೆ ಪೂಜೆ ಸಲ್ಲಿಸಿಯೇ ಮುಂದಿನ ಹೆಜ್ಜೆ ಇಡುತ್ತೇನೆ.
ಗುರುವಾರ ಹುಬ್ಬಳ್ಳಿಯಲ್ಲಿ ಇದ್ದ್ದಂತೂ ಅಲ್ಲಿನ ಭವಾನಿ ನಗರದಲ್ಲಿರುವ ರಾಯರ ಮಠಕ್ಕೆ ಭೇಟಿ ನೀಡಿ, ಶ್ರೀ ಗುರು ರಾಘವೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದೇ ಮುಂದಿನ ಕಾರ್ಯಕ್ರಮಗಳಿಗೆ ಸಿದ್ಧನಾಗುತ್ತೇನೆ. ನನಗೆ ಬಾಲ್ಯದಿಂದಲೇ ರಾಯರ ಬಗ್ಗೆ ಭಕ್ತಿ. ಶಾಲೆಗೆ ಹೋಗುವ ಮುಂಚೆ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||’ ಮಂತ್ರ ಜಪಿಸುವುದು ರೂಢಿಯಾಗಿತ್ತು. ನಾನಷ್ಟೇ ಅಲ್ಲ, ನಮ್ಮ ಮನೆಯವರೆಲ್ಲರೂ ಮೊದಲಿನಿಂದಲೂ ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳ ಭಕ್ತರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದಲ್ಲಿ ಅಲಂಕರಿಸಿದ ಹಲವಾರು ಸ್ಥಾನಮಾನಗಳು, ಸಂಸದ ಹಾಗೂ ಕೇಂದ್ರ ಸಚಿವನಾಗಿ ಕೈಗೊಂಡಿರುವ ಕಾರ್ಯಗಳ ಹಿಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಇದ್ದೇ ಇದೆ.
| ಪ್ರಲ್ಹಾದ ಜೋಶಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರು
ಕ್ಷೇತ್ರ: ರಾಜಕೀಯ
ತಿರುವು: ಹರಕೆಯ ಫಲ
ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ಗುರು ರಾಘವೇಂದ್ರ ರಾಯರ ಮೇಲೆ ಅಪಾರ ಭಕ್ತಿ. ತಂದೆ ಬಿ.ಎಸ್.ಯಡಿಯೂರಪ್ಪ ರಾಯರನ್ನು ನೆನೆಯದೆ ಯಾವುದೇ ಮಹತ್ಕಾರ್ಯ ಆರಂಭಿಸುವುದಿಲ್ಲ. ನನ್ನ ತಂದೆಗೆ ಮೂವರು ಹೆಣ್ಣುಮಕ್ಕಳು. ಬಳಿಕ ತಂದೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಲ್ಲಿ ಗಂಡುಮಗು ಕರುಣಿಸುವಂತೆ ಹರಕೆ ಮಾಡಿಕೊಂಡಿದ್ದರಂತೆ. ಮುಂದೆ ನಾನು ಜನಿಸಿದ್ದಕ್ಕೆ ರಾಯರ ಸ್ಮರಣೆಗಾಗಿ ನನ್ನ ಹೆಸರನ್ನು ರಾಘವೇಂದ್ರ ಎಂದೇ ನಾಮಕರಣ ಮಾಡಿದರು. ನನ್ನ ತಮ್ಮ ಜನಿಸಿದ ಬಳಿಕ ರಾಯರ ಗುರುಗಳಾದ ವಿಜಯೇಂದ್ರರ ಹೆಸರನ್ನು ಇಟ್ಟರು. ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಯವಾದಾಗ ಮಂತ್ರಾಲಯಕ್ಕೆ ತೆರಳಿ ರಾಯರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೆ. ಗುರು ರಾಘವೇಂದ್ರರ ಕೃಪಾಶೀರ್ವಾದದಿಂದ ನಮ್ಮ ಕುಟುಂಬಕ್ಕೆ ಸಕಲವೂ ಒಳ್ಳೆಯದಾಗಿದೆ. ಅನೇಕ ಕಷ್ಟಗಳು ಮಂಜಿನಂತೆ ಕರಗಿಹೋಗಿವೆ. ಈಗಲೂ ನಮ್ಮ ಕುಟುಂಬದವರು ಯಾವುದೇ ಶುಭಕಾರ್ಯ ಕೈಗೊಳ್ಳುವ ಮುನ್ನ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮಂತ್ರಾಲಯಕ್ಕೆ ತೆರಳಿ ರಾಯರಿಗೆ ಪೂಜೆ ಸಲ್ಲಿಸುವುದು ಪದ್ಧತಿಯಾಗಿಬಿಟ್ಟಿದೆ.
ತಂದೆ ಯಡಿಯೂರಪ್ಪ, ನಾನು, ಸಹೋದರ ವಿಜಯೇಂದ್ರ ಎಲ್ಲರೂ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ ಗುರುವಾರವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಅದು ರಾಯರ ವಾರವಾದ್ದರಿಂದ ಶುಭವಾಗುತ್ತದೆಂಬ ನಂಬಿಕೆ ನಮ್ಮೆಲ್ಲರದು.
| ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಸದಸ್ಯರು
ಕ್ಷೇತ್ರ: ಸಿನಿಮಾ
ತಿರುವು: ವೃತ್ತಿಯಲ್ಲಿ ಅವಕಾಶ
ಅದು 1980-81ರ ಸಮಯ. ಚಿತ್ರರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ. ಒಂದು ದಿನ ಛಾಯಾಗ್ರಾಹಕ ಹಾಗೂ ಗುರುಗಳಾದ ಸುಂದರನಾಥ ಸುವರ್ಣ ಅವರು ಅಂಬರೀಷ್​ರ ‘ಗಜೇಂದ್ರ’ ಚಿತ್ರದಲ್ಲಿ ಅವಕಾಶ ನೀಡಲು, ಸಹ-ನಿರ್ದೇಶಕ ಡಿ.ಬಾಬು ಬಳಿ ಕೇಳಿಕೊಂಡರು. ಆದರೆ, ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲ. ನೊಂದು ನಡೆದು ಬರುವಾಗ ಕೆಂಚಾಂಬ ಲಾಡ್ಜ್ ಬಳಿ ಒಬ್ಬ ಜ್ಯೋತಿಷಿ ನನ್ನನ್ನು ಕಂಡು ವಿಷಯ ಕೇಳಿ, ‘ನಿನಗೆ ಈ ಪ್ರಪಂಚದಲ್ಲಿ ಸಹಾಯ ಮಾಡುವುದು ಒಬ್ಬರೇ, ಅದು ರಾಯರು’ ಎಂದರು. ಮನೆಗೆ ಬಂದಾಗ ತುಳಸಿಕಟ್ಟೆ ಬಳಿ ಕುಳಿತಿದ್ದ ಅಮ್ಮ ನನ್ನ ಕಂಡು, ‘ಮಗನೇ ನಿನಗೆ ಒಳ್ಳೆಯದು ಆಗಬೇಕು ಅಂದರೆ ರಾಯರ ಬಳಿ ಹೋಗು’ ಎಂದು 500 ರೂ. ಕೊಟ್ಟರು. ನನಗೆ ಆಶ್ಚರ್ಯವಾಯಿತು. ಮತ್ತೇನೂ ಯೋಚಿಸದೆ ಮಂತ್ರಾಲಯಕ್ಕೆ ಹೊಗಿ, ಮೂರು ತಿಂಗಳು ಅಲ್ಲಿಯೇ ಇದ್ದು ಪ್ರತಿದಿನ ರಾಯರ ಸೇವೆ ಮಾಡಿದೆ. ಬಳಿಕ ಮನೆಗೆ ವಾಪಸ್ಸಾದ ತಕ್ಷಣ ಕೆ.ವಿ.ಜಯರಾಮ್ ಅವರ ‘ಶ್ವೇತಗುಲಾಬಿ’ ಚಿತ್ರದಲ್ಲಿ ಮುಖ್ಯ ಖಳನಟ ಪಾತ್ರದಲ್ಲಿ ಅವಕಾಶ ದೊರೆಯಿತು. ಅಲ್ಲಿಂದ ನನ್ನ ಬದುಕಿನಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿ ಹುಡುಗ ನವರಸನಾಯಕನಾದೆ. ಮುಂದೆ ನಾನು ಮತ್ತು ಪರಿಮಳ ಮದುವೆಯಾದ ಬಳಿಕವೂ ಆಕೆಯನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿದ್ದೆ. ಸುಮಾರು ಒಂದು ತಿಂಗಳು ಅಲ್ಲೇ ಇದ್ದೆವು. ಆಗ ಸಿಕ್ಕ ಸಂತರೊಬ್ಬರು ಪರಿಮಳಗೆ ‘ನಿನ್ನ ಗಂಡ ಮುಂದೆ ದೊಡ್ಡ ಸಾಧಕನಾಗುತ್ತಾನೆ’ ಎಂದಿದ್ದರು. ರಾಯರ ಕಾರುಣ್ಯವೇ ಹಾಗೆ. ರಾಯರನ್ನು ಅನನ್ಯವಾಗಿ ನಂಬಿ ಕಾಯಾ ವಾಚಾ ಮನಸಾ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡುವ ಕಾಮಧೇನು.
| ಜಗ್ಗೇಶ್ ನಟ, ರಾಜ್ಯಸಭಾ ಸದಸ್ಯ
ಮನೆ, ಮನದಲ್ಲೂ ರಾಯರು:ನನ್ನ ಪತ್ನಿ ಪರಿಮಳ. ರಾಯರನ್ನು ಪರಿಮಳಾಚಾರ್ಯರು ಎನ್ನುತ್ತಾರೆ. ನನ್ನ ಮಕ್ಕಳಾದ ಗುರುರಾಜ ಮತ್ತು ಯತಿರಾಜ ಇಬ್ಬರಿಗೂ ರಾಯರಿಗೆ ಸಂಬಂಧಿಸಿದ ಹೆಸರುಗಳನ್ನೇ ಇಟ್ಟಿದ್ದೇನೆ. ಬೆಂಗಳೂರು ಮನೆಯಲ್ಲಿ, ದೆಹಲಿಯಲ್ಲಿ, ಊರಿನ ಮನೆಯಲ್ಲಿ, ಎಲ್ಲೆಡೆ ರಾಯರ ಮೂರ್ತಿ, ಫೋಟೋಗಳಿವೆ. ರಾಜ್ಯಸಭೆಗೆ ಆಯ್ಕೆಯಾದ ಪ್ರಮಾಣಪತ್ರವನ್ನೂ ಮಂತ್ರಾಲಯದಲ್ಲಿ ರಾಯರ ಮುಂದಿಟ್ಟು ಆಶೀರ್ವಾದ ಪಡೆದಿದ್ದೆ.
ಕ್ಷೇತ್ರ: ಶಿಕ್ಷಣ
ತಿರುವು: ಹುದ್ದೆ ದೊರೆತದ್ದು
ನನ್ನ ಬದುಕಿನ ಗತಿಯನ್ನು ಬದಲಾಯಿಸಿದ್ದು ರಾಘವೇಂದ್ರಸ್ವಾಮಿ ಅವರ ಮೇಲಿನ ಭಕ್ತಿ. ಪದವಿ ಅಧ್ಯಯನ ಸಮಯದಲ್ಲಿ ಹಾಸ್ಟೆಲ್​ನಲ್ಲಿ ದೆವ್ವದ ಭೀತಿ ಕಾಡುತ್ತಿತ್ತು. ಅಂದು ರಾಯರ ಚಿತ್ರಪಟವನ್ನು ಮಲಗುವ ಜಾಗದಲ್ಲಿ ಗೋಡೆಗೆ ಹಾಕಿದ ಬಳಿಕ ಭೀತಿ ಮಾಯವಾಯಿತು. ಅಂದಿನಿಂದ ರಾಯರ ಮೇಲಿನ ಭಕ್ತಿ ಅಪಾರವಾಯಿತು.
ನಾನು ಬಯಸಿದ ವಿಷಯದಲ್ಲಿ ಸ್ನಾತಕ ಪದವಿ ಪಡೆದೆ, ಬಯಸಿದ ಹುದ್ದೆ ಲಭ್ಯವಾಯಿತು. ನಾನು ಅಭ್ಯಾಸ ಮಾಡಿದ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಪ್ರಾಧ್ಯಾಪಕ ವೃತ್ತಿ. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತದ್ದು ರಾಯರ ಆಶೀರ್ವಾದದಿಂದ. ನಾನು ಬಯಸಿದಂತೆ ಮೊದಲನೆಯದು ಹೆಣ್ಣು ಮಗಳು, ಎರಡನೆಯದು ಗಂಡು ಮಗ.
1987ರಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅನುಮೋದಿಸಲು ಅರ್ಜಿ ಕರೆಯಲಾಗಿತ್ತು. ನನ್ನ ವಿಷಯದ ಹುದ್ದೆಗೆ ರ್ಯಾಂಕ್ ವಿಜೇತರು ಅರ್ಜಿ ಸಲ್ಲಿಸಿದ್ದರು. ಮಠಕ್ಕೆ ದೇಣಿಗೆ ನೀಡುತ್ತೇವೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಳಿ ಅಂಗಲಾಚಿದ್ದರು. ಆದರೆ ರಾಯರ ಕೃಪಾಕಟಾಕ್ಷದಿಂದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಆ ಹುದ್ದೆಯನ್ನು ನನಗೆ ನೀಡಿದರು. ಪ್ರತಿ ವರ್ಷ ಒಂದು ಬಾರಿಯಾದರೂ ಮಂತ್ರಾಲಯಕ್ಕೆ ಸ್ನೇಹಿತರನ್ನು ಕರೆದುಕೊಂಡು ಯಾತ್ರೆ ಮಾಡುತ್ತೇವೆ. ಅವರೆಲ್ಲ ನನ್ನನ್ನು ಗುರುಸ್ವಾಮಿ ಎಂದು ಭಾವಿಸುತ್ತಾರೆ. ಇದಕ್ಕಿಂತ ಭಾಗ್ಯ ಬೇರೊಂದು ಇಲ್ಲ.
| ಡಾ.ಬಿ.ಕೆ.ಲೋಕೇಶ್, ನಿವೃತ್ತ ಪ್ರಾಂಶುಪಾಲ, ನಾಗಮಂಗಲ
ಕ್ಷೇತ್ರ: ಕಲೆ
ತಿರುವು: ಧ್ವನಿಸುರುಳಿ ಬಿಡುಗಡೆ
ಮಂತ್ರಾಲಯದ ರಾಯರ ಬದುಕು, ಸಂಗೀತ ಎಲ್ಲರಿಗೂ ಪ್ರೇರಣಾದಾಯಕ. ರಾಯರು ವೀಣಾ ವೆಂಕಣ್ಣರು ಎಂದೇ ಹೆಸರುವಾಸಿ. ಅವರ ಸಂಗೀತದೆಡೆಗಿನ ಪ್ರೀತಿಯೇ ನನ್ನನ್ನೂ ಸಂಗೀತದತ್ತ ಸೆಳೆಯಿತು. ನಮ್ಮ ತಾತ ಅಸ್ಕಿಹಾಳ ಗೋವಿಂದದಾಸರು ಸ್ವತಃ ರಾಯರಿಂದ ಅನುಗ್ರಹಿತರು. ಅವರ ನಂತರದಲ್ಲಿ ನನಗಂತೂ ಸಂಗೀತದ ಸಾಧನೆಗೆ ರಾಯರೇ ಪ್ರೇರಣೆ. 1998ರಲ್ಲಿ ನನ್ನ ಮೊದಲ ಧ್ವನಿಸುರುಳಿ ‘ಕಾಯೋ ಕಾವೇರಿ ರಂಗ’ ಬಿಡುಗಡೆಯಾಗಿದ್ದು ಮಂತ್ರಾಲಯದ ಗುರುಸಾರ್ವಭೌಮರ ಸನ್ನಿಧಾನದಲ್ಲಿಯೇ. ರಾಯರ ಸನ್ನಿಧಾನದಲ್ಲಿ ಬಿಡುಗಡೆಯಾದ ಈ ಧ್ವನಿಸುರುಳಿ ಸಂಗೀತ ಕ್ಷೇತ್ರದಲ್ಲಿ ಇಂದಿನ ನನ್ನ ಸಾಧನೆಗೆ ಮೆಟ್ಟಿಲು ಆಯಿತು. ರಾಯಚೂರಿಂದ ಆರಂಭವಾದ ನನ್ನ ಸಾಧನೆಯ ಓಟ ಅಮೆರಿಕದವರೆಗೆ ತಲುಪಲು ರಾಯರ ಕರುಣೆಯೇ ಕಾರಣ. ನನ್ನ ಬದುಕಿನ ಔನ್ನತ್ಯಕ್ಕೆ ರಾಯರೇ ಅಂತಃಶಕ್ತಿಯಾಗಿ ನನ್ನೊಳಗೆ ನಿಂತು ಸಂಗೀತದ ಸಾಧನೆಗೆ ಶಕ್ತಿ ತುಂಬುತ್ತಿದ್ದಾರೆ.
| ಶೇಷಗಿರಿದಾಸ ರಾಯಚೂರು, ಖ್ಯಾತ ಸಂಗೀತಗಾರರು
ಕ್ಷೇತ್ರ: ಹೋಟೆಲ್ ಉದ್ಯಮ
ತಿರುವು: ಪಾದಯಾತ್ರೆಯಲ್ಲಿ ಕೈಗೊಂಡ ಸೇವೆ
ಗುರುರಾಯರು ನಂಬಿದವರ ಪಾಲಿಗೆ ಅದಮ್ಯ ಶಕ್ತಿ. ಇಪ್ಪತ್ತು ವರ್ಷಗಳ ಹಿಂದೆ ತುಂಬ ಕಷ್ಟದಲ್ಲಿದ್ದಾಗ ಮಂತ್ರಾಲಯಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರ ಸೇವೆ ಮಾಡುವಂತೆ ನನಗೆ ಹಿರಿಯರು ಸಲಹೆ ನೀಡಿದರು. ಪಾದಯಾತ್ರಿಕರು ತೆರಳುತ್ತಿದ್ದ ದಾರಿಯಲ್ಲಿ ಕುಡಿಯುವ ನೀರು, ಹಣ್ಣು, ಔಷಧ, ಬಿಸ್ಕತ್ ಹೀಗೆ ಉಚಿತ ಸೇವೆ ಆರಂಭಿಸಿದೆ. ಅದಕ್ಕೆ ಕೆಲವು ಗೆಳೆಯರು ಸಾಥ್ ನೀಡಿದರು. ಈ ಸೇವೆ ಮುಂದುವರಿದಂತೆ ಬದುಕಿನಲ್ಲಿ ಸಾಧಿಸುವ ಛಲ ಬೆಳೆಯಿತು. ಉದ್ಯೋಗದೊಂದಿಗೆ ಹೋಟೆಲ್ ಉದ್ಯಮ ಆರಂಭಿಸಿದೆ. ರಾಯರ ಅನುಗ್ರಹದಿಂದ ಉದ್ಯಮ ಬೆಳೆಯಿತು. ಇಂದು ನೂರಾರು ಜನರಿಗೆ ಉದ್ಯೋಗ ನೀಡುವ ಎತ್ತರಕ್ಕೆ ಉದ್ಯಮ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಪ್ಪ ಅವರ ಮನೆಯಲ್ಲಿ ಮಂತ್ರಾಲಯದಿಂದ ತಂದ ಕಲ್ಲುಸಕ್ಕರೆ, ಮಂತ್ರಾಕ್ಷತೆಗಳೇ ಶಾಲಿಗ್ರಾಮಗಳಾಗಿ ಪರಿವರ್ತನೆಯಾದಾಗ ತುಂಬ ಆಶ್ಚರ್ಯವಾಯಿತು. ರಾಯರು ನಮ್ಮೊಂದಿಗೆ ಇದ್ದಾರೆ ಎನ್ನುವ ಆತ್ಮವಿಶ್ವಾಸ ಇನ್ನಷ್ಟು ಗಟ್ಟಿಯಾಯಿತು. ಅವರನ್ನು ನಂಬಿ ಬದುಕು ಸಮೃದ್ಧವಾಗಿದೆ.
| ಪವನ ಸೀಮಿಕೇರಿ, ಉದ್ಯಮಿ, ಬಾಗಲಕೋಟೆ
ಕ್ಷೇತ್ರ: ರಾಜಕೀಯ
ತಿರುವು: ಹೈಕಮಾಂಡ್ ಬುಲಾವ್
ಅನೇಕ ವರ್ಷಗಳಿಂದ ನಾನು ಮಂತ್ರಾಲಯಕ್ಕೆ ಹೋಗುತ್ತಿದ್ದು, ನಮ್ಮ ಕುಟುಂಬ ರಾಯರನ್ನು ನಂಬಿದೆ. ತುಂಗಭದ್ರಾ ನದಿಸ್ನಾನ, ಪ್ರದಕ್ಷಿಣೆ ಹಾಕಿ ದರ್ಶನ ಪಡೆದು ಧನ್ಯನಾಗುತ್ತೇನೆ. ಶ್ರೀಮಠದ ಪೀಠಾಧಿಪತಿ ಪೂಜ್ಯ ಸುಬುಧೇಂದ್ರ ತೀರ್ಥರು ಕಲಬುರಗಿಗೆ ಆಗಮಿಸಿದ್ದಾಗ ಬೃಹತ್ ಮೆರವಣಿಗೆ ಮೂಲಕ ನಮ್ಮ ನಿವಾಸಕ್ಕೆ ಕರೆತಂದು ಮನೆಯವರೆಲ್ಲ ಸೇರಿ ಪಾದಪೂಜೆ, ಸತ್ಕಾರ ಮಾಡಿದಾಗ ನನಗೆ ಸಾಕ್ಷಾತ್ ರಾಯರೇ ಎದುರು ಬಂದಂತೆ ಭಾಸವಾಗಿತ್ತು. ಹಿಂದುಳಿದ ಸಮುದಾಯದವನಾದ ನನಗೆ ರಾಜಕೀಯವಾಗಿ ಬೆಳೆಯುವಂತೆ ಆಶೀರ್ವದಿಸಿ ಎಂದು ಕೇಳಿದೆ. ಶ್ರೀಗಳು, ‘ನೀವಂದುಕೊಂಡಿದ್ದು ಗುರುರಾಯರ ಅನುಗ್ರಹದಿಂದ ಶೀಘ್ರದಲ್ಲಿ ಈಡೇರಲಿದೆ’ ಎಂದು ಹೇಳಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶ್ರೀಗಳು ಮಂತ್ರಾಲಯ ತಲುಪುವಷ್ಟರಲ್ಲಿ ಹೈಕಮಾಂಡ್ ಬುಲಾವ್ ಬಂತು. ಹೆಸರು ಅಂತಿಮಗೊಂಡು ವಿಧಾನ ಪರಿಷತ್ ಸದಸ್ಯನೂ ಆದೆ. ರಾಯರ ಆಶೀರ್ವಾದ ಅಲ್ಲದೆ ಮತ್ತೇನು? ಬಳಿಕ ಒಂದು ವರ್ಷದಲ್ಲಿ ಪೂರ್ಣಪ್ರಮಾಣದ ಅವಧಿಗೆ ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಒಲಿದು ಬಂತು. ನನ್ನ ಪುತ್ರ ಆರು ಅವಧಿಯಿಂದ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯನಾಗಿ ನಿರಂತರ ಆಯ್ಕೆಯಾಗುತ್ತಿರುವುದು ರಾಯರ ಕೃಪೆಯಿಂದ.
| ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ, ಕಲಬುರಗಿ
ಕ್ಷೇತ್ರ: ಧಾರ್ವಿುಕ
ತಿರುವು: ಸಾಲದಿಂದ ಮುಕ್ತಿ
ನಾನು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆರಾಧಕ. ಕಳೆದ 37 ವರ್ಷ ಗಳಿಂದ ರಾಯರ ಭಕ್ತನಾಗಿದ್ದೇನೆ. ಪ್ರತಿವರ್ಷ ಶ್ರಾವಣದಲ್ಲಿ ನಡೆಯುವ ಧಾರ್ವಿುಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತೇನೆ. 3 ದಿನಗಳ ಕಾಲ ನಡೆಯುವ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆಯಲ್ಲಿ ಕುಟುಂಬಸಮೇತ ಪಾಲ್ಗೊಳ್ಳುತ್ತೇನೆ. ಇದರ ಹಿಂದೆ ಒಂದು ಕಾರಣವಿದೆ. ಉದ್ಯೋಗಸ್ಥನಾಗಿದ್ದ ನಾನು ಕಾರಣಾಂತರಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದೆ. ಎಷ್ಟೇ ಪ್ರಯತ್ನಿಸಿದರೂ ಋಣಮುಕ್ತನಾಗಲು ಸಾಧ್ಯವಾಗಲಿಲ್ಲ. ಒಂದು ಮನೆಯಲ್ಲಿ ಅಷ್ಟೋತ್ತರ ನಡೆಯುತ್ತಿದ್ದ ವೇಳೆ ಬ್ಯಾಂಕ್​ನವರು ಸಾಲ ವಸೂಲಾತಿಗೆ ಬಂದರು. ಲೋಕ ಅದಾಲತ್ ಮೂಲಕ ಒಟಿಎಸ್ ಮಾಡಿಕೊಳ್ಳುವ ಮಾಹಿತಿ ಕೊಟ್ಟರು. ರಾಯರನ್ನು ಆರಾಧಿಸುತ್ತ ಮತ್ತೆ ಉದ್ಯೋಗ ಮುಂದುವರಿಸಿದೆ. ಮುಂದಿನ 6 ತಿಂಗಳಲ್ಲಿ 8 ಲಕ್ಷ ರೂಪಾಯಿ ಸಾಲ ತೀರಿಸಿ ಋಣಮುಕ್ತನಾದೆ.
| ಅಜಿತ ರಾಯಚೂರ ಧಾರವಾಡ
1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 12 =
Remember me
