ಗಂಗಾಧರ್​ ಬೈರಾಪಟ್ಟಣ ರಾಮನಗರಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ತವರು ಕ್ಷೇತ್ರ ಕನಕಪುರ ಈಗ ಶಿಕ್ಷಕರ ಬರ ಎದುರಿಸುತ್ತಿದೆ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಕನಕಪುರದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಎದುರಾಗಿದ್ದು, ಶಾಲಾ ಶಿಕ್ಷಣ ಇಲಾಖೆ ಅಸಹಾಯಕ ಪರಿಸ್ಥಿತಿಗೆ ಸಿಲುಕಿದೆ.
ಇತ್ತೀಚೆಗೆ ನಡೆದ ವರ್ಗಾವಣೆ ಕೌನ್ಸಲಿಂಗ್​ನಲ್ಲಿ ಪ್ರವಾಹದ ರೀತಿಯಲ್ಲಿ ಕನಕಪುರದಿಂದ ಶಿಕ್ಷಕರು ಬೇರೆಡೆಗೆ ವರ್ಗಾವಣೆ ತೆಗೆದುಕೊಂಡಿದ್ದು, ಇದರಿಂದಾಗಿ ಅತಿ ಶ್ರೀದಲ್ಲಿಯೇ 73 ಶಾಲೆಗಳು ಶಿಕ್ಷಕರಹಿತ ಶಾಲೆಗಳಾಗಿ ಬದಲಾಗಲಿವೆ.
ಬಂದವರೂ ಇರುತ್ತಿಲ್ಲ:ಕನಕಪುರದ ನಾಲ್ಕೂ ಹೋಬಳಿಗಳಲ್ಲಿ ಒಟ್ಟು 280 ಸರ್ಕಾರಿ ಶಾಲೆಗಳಿದ್ದು, ಇವುಗಳಿಗೆ 767 ಹುದ್ದೆಗಳು ಮಂಜೂರಾಗಿವೆ. ಆದರೆ ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದು, 409 ಶಿಕ್ಷಕರು ಮಾತ್ರ. ಆದರೆ ಕಳೆದ ಹಲವು ವರ್ಷಗಳಿಂದಲೂ ವರ್ಗಾವಣೆಗಾಗಿ ಕಾದು ಕುಳಿತಿದ್ದ ಬೇರೆ ತಾಲೂಕು ಮತ್ತು ಜಿಲ್ಲೆಗಳ ಶಿಕ್ಷಕರು ಅವಕಾಶ ಸಿಗುತ್ತಿದ್ದಂತೆ ತಮ್ಮ ಜಿಲ್ಲೆ ಇಲ್ಲವೇ ಜಿಲ್ಲೆಗೆ ಹತ್ತಿರ ತಾಲೂಕುಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ಈ ರೀತಿ ವರ್ಗಾವಣೆ ಮಾಡಿಸಿಕೊಂಡ ತಾಲೂಕಿನ ಒಟ್ಟು ಶಿಕ್ಷಕರ ಸಂಖ್ಯೆ 113. ಇದರ ಜತೆಗೆ ಇನ್ನೂ ಕೆಲವು ವಿಭಾಗಗಳ ಕೌನ್ಸೆಲಿಂಗ್​ ಬಾಕಿ ಇದ್ದು, ಮತ್ತಷ್ಟು ಶಿಕ್ಷಕರು ಕನಕಪುರ ಬಿಡಲಿದ್ದಾರೆ ಎನ್ನುವುದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾಹಿತಿ.
ಶಿಕ್ಷಕರಹಿತ ಶಾಲೆಗಳು:ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಶಾಲೆಗಳು ಬಂದ್​ ಆಗುತ್ತಿದ್ದವು. ಆದರೆ, ಶಿಕ್ಷಕರ ವರ್ಗಾವಣೆಯಿಂದ ಕನಕಪುರ ತಾಲೂಕಿನ ಒಟ್ಟು 73 ಶಾಲೆಗಳು ಶಿಕ್ಷಕರಹಿತ ಶಾಲೆಗಳಾಗಲಿವೆ. ಪ್ರಮುಖವಾಗಿ ಸಂಸದ ಡಿ.ಕೆ.ಸುರೇಶ್​ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಪ್ರಭಾವ ಹೆಚ್ಚಿರುವ ಕೋಡಂಬಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿಯ 51 ಶಾಲೆಗಳು ಶಿಕ್ಷಕರಿಲ್ಲದ ಶಾಲೆಗಳಾಗಲಿವೆ. ಶಿಕ್ಷಕರೇ ಇಲ್ಲದ ಶಾಲೆಗೆ ಮಕ್ಕಳು ಬಾರದೇ ಇರುವುದರಿಂದ ಈ ಶಾಲೆಗಳು ಬಾಗಿಲು ಹಾಕುವುದು ನಿಶ್ಚಿತ.
ಅತಿಥಿ ಶಿಕ್ಷಕರೂ ಬರುತ್ತಿಲ್ಲ:ವರ್ಗಾವಣೆ ಕೌನ್ಸೆಲಿಂಗ್​ಗೂ ಮುನ್ನಾ ಖಾಲಿ ಇದ್ದ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಆದರೆ, ಜಿಲ್ಲೆಯ ಬೇರೆ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳುವ ಅತಿಥಿ ಶಿಕ್ಷಕರು, ಕನಕಪುರ ತಾಲೂಕನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹಿಂಜರಿಯುತ್ತಾರೆ. ಅದರಲ್ಲೂ ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿಗಳ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಇಲ್ಲ. ಕಾರಣ ಈ ಎರಡೂ ಹೋಬಳಿಗಳು ಬಹುತೇಕ ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು, ಅರಣ್ಯ ಪ್ರದೇಶದಿಂದ ಕೂಡಿವೆ.
ಅಡಕತ್ತರಿಯಲ್ಲಿ ಇಲಾಖೆ:ವರ್ಗಾವಣೆ ಕೌನ್ಸೆಲಿಂಗ್​ ಶಾಲಾ ಶಿಕ್ಷಣ ಇಲಾಖೆಯನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ವರ್ಗಾವಣೆ ಮಾಡಿಸಿಕೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸದಿದ್ದರೆ ಅವರು ಕೋರ್ಟ್​ ಮೊರೆ ಹೋಗುವ ಸಾಧ್ಯತೆ ಇದೆ. ಇತ್ತ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶಿಕ್ಷಕರೇ ಇಲ್ಲದ ಶಾಲೆಗಳ ಗತಿ ಏನು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ.
ಇರುವುದೊಂದೇ ಪರಿಹಾರಶಿಕ್ಷಕರ ಕೊರತೆ ನೀಗಿಸಬೇಕಾದರೆ ಸರ್ಕಾರ ಕೂಡಲೇ ಶಿಕ್ಷಕರ ನೇಮಕಾತಿಗೆ ಮುಂದಾಗಬೇಕು. ಅಲ್ಲದೆ ಆಯಾ ಜಿಲ್ಲೆಯಲ್ಲಿರುವ ಶಿಕ್ಷಕರನ್ನೇ ಹೆಚ್ಚಿನ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾಗ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದರ ಜತೆಗೆ ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಗ್ರಾಪಂ ಮಟ್ಟದಲ್ಲಿ ಒಂದು ಮಾದರಿ ಪಬ್ಲಿಕ್​ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದು ಪೂರ್ಣ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯನ್ನು ನೀಗದಿದ್ದರೂ, ಮುಚ್ಚುವ ಶಾಲೆಗಳ ಮಕ್ಕಳನ್ನು ಒಂದೆಡೆ ತರುವ ಅವಕಾಶ ದೊರೆತಂತೆ ಆಗುತ್ತದೆ.
ವರ್ಗಾವಣೆ ಕೌನ್ಸಲಿಂಗ್​ನಿಂದ ಹಲವು ಶಿಕ್ಷಕರು ಬೇರೆಡೆಗೆ ವರ್ಗಾವಣೆಯಾಗಿದ್ದು, ಇದರಿಂದ ಕನಕಪುರ ತಾಲೂಕಿನ ಹೆಚ್ಚಿನ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿವೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ, ಶಾಲೆಗಳನ್ನು ಉಳಿಸಿಕೊಳ್ಳಲು ಕ್ರಮವಹಿಸಬೇಕು.ನೇ.ರ ಪ್ರಭಾಕರ್​, ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂ, ಕನಕಪುರ
—
ವರ್ಗಾವಣೆಯಿಂದ ಹೆಚ್ಚಿನ ಹುದ್ದೆಗಳು ಖಾಲಿ ಆಗಿವೆ. ಈ ಭಾಗದಲ್ಲಿ ಅತಿಥಿ ಶಿಕ್ಷಕರೂ ಲಭ್ಯವಾಗುತ್ತಿಲ್ಲ. ವರ್ಗಾವಣೆಯಿಂದ ಆಗಿರುವ ಸಮಸ್ಯೆಯನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಸೋಮಲಿಂಗಯ್ಯ, ಬಿಇಒ, ಕನಕಪುರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
