| ಜಗದೀಶ ಹೊಂಬಳಿ ಬೆಳಗಾವಿ
ಕನ್ನಡ ನೆಲದಲ್ಲಿ ಭಾಷೆ, ನಾಡು-ನುಡಿ, ಸಂಸ್ಕೃತಿ ಉಳಿಸಿ, ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡಪರ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ತಾಲೂಕುಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಅನುದಾನ ನೀಡಲು ತಿಣುಕಾಡುತ್ತಿದೆ. ಕನ್ನಡ ಭಾಷೆ ಅನಾದರಕ್ಕೊಳಪಡುತ್ತಿರುವ ಕೂಗು ದಟ್ಟವಾಗುತ್ತಿರುವ ದಿನಗಳಲ್ಲಿ ಕನ್ನಡತನ ಗಟ್ಟಿಗೊಳಿಸುವ ಕಾರ್ಯಕ್ರಮಗಳಿಗೂ ಅನುದಾನ ಲಭ್ಯವಾಗದಿರುವುದು ಕನ್ನಡ ಮನಸ್ಸುಗಳಿಗೆ ಘಾಸಿ ಉಂಟುಮಾಡಿದೆ.
ಸಾಹಿತ್ಯಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ತಾಲೂಕುಮಟ್ಟದ ಸಾಹಿತ್ಯ ಸಮ್ಮೇಳನಗಳನ್ನೂ ಆಯೋಜಿಸುವುದು ದುಸ್ತರವಾಗಿದೆ. ಫೆಬ್ರವರಿಯಿಂದ ಮಾರ್ಚ್ ಅವಧಿಯಲ್ಲಿ ಕೆಂಪು-ಹಳದಿ ಬಾವುಟದ ರಂಗಿನಲ್ಲಿ ಯುದ್ಧೋಪಾದಿಯಾಗಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನಗಳು ಬಹುತೇಕ ಸ್ಥಗಿತಗೊಂಡಿವೆ. ಕೆಲವೆಡೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು, ಜಿಲ್ಲಾ ಘಟಕದ ಪದಾಧಿಕಾರಿಗಳು ದೇಣಿಗೆ ಸಂಗ್ರಹಿಸಿ ಕನ್ನಡದ ತೇರು ಎಳೆಯುವ ಪರಿಸ್ಥಿತಿ ಬಂದೊದಗಿದೆ.
ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡುವಂತೆ ಕಸಾಪ ಅಧ್ಯಕ್ಷ, ಸದಸ್ಯರು ಪರಿಪರಿಯಾಗಿ ಕೇಳಿಕೊಂಡರೂ ಅನುದಾನ ಇಲ್ಲ ಎಂದು ಸರ್ಕಾರ ಕಡ್ಡಿ ಮುರಿದಂತೆ ಹೇಳುತ್ತಿದ್ದು, ನಯಾಪೈಸೆ ಬಿಡುಗಡೆ ಮಾಡುತ್ತಿಲ್ಲ. ‘ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದಾದರೆ ಮಾಡಿ, ಬಿಡುವುದಾದರೆ ಬಿಡಿ, ಅನುದಾನ ಇಲ್ಲ’ ಎಂದು ಸರ್ಕಾರ ಹೇಳುತ್ತಿದೆ ಎಂದು ಕೆಲ ಸಾಹಿತಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗಡಿಜಿಲ್ಲೆಗೂ ರೊಕ್ಕ ಇಲ್ಲ:ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಕನ್ನಡ-ಮರಾಠಿ ಭಾಷಿಕರಿರುವ ಅತಿಸೂಕ್ಷ್ಮ ಪ್ರದೇಶದಲ್ಲೂ ಕನ್ನಡ ಗಟ್ಟಿಗೊಳಿಸುವುದಕ್ಕೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬೇಕಾಗುತ್ತದೆ. ಆದರೆ, ಸರ್ಕಾರ ಬೆಳಗಾವಿಗೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಅನುದಾನ ನೀಡದೆ ಕೈ ಎತ್ತಿದೆ. ಹೀಗಾಗಿ ಗಡಿಭಾಗದಲ್ಲೂ ಸಮ್ಮೇಳನಗಳು ಸ್ಥಗಿತಗೊಂಡಿವೆ. ಗಡಿ ಜಿಲ್ಲೆಯಾಗಿದ್ದರಿಂದ ಸಮ್ಮೇಳನಗಳನ್ನು ನಡೆಸದಿದ್ದರೆ ಕನ್ನಡತನಕ್ಕೆ ಹಿನ್ನಡೆಯಾದೀತು ಎಂಬ ಕಾರಣಕ್ಕೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕಸಾಪ ತಾಲೂಕು ಅಧ್ಯಕ್ಷರು, ಸದಸ್ಯರು ದಾನಿಗಳಿಂದ ಹಣ ಸಂಗ್ರಹಿಸಿ ಸಮ್ಮೇಳನ ನಡೆಸಿದ್ದಾರೆ. ಸರ್ಕಾರ ಅನುದಾನ ನೀಡದಿದ್ದರೂ ಈಗಾಗಲೇ ಜಿಲ್ಲೆಯ ರಾಯಬಾಗ, ಖಾನಾಪುರ, ಬೆಳಗಾವಿ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಸಾಹಿತಿಗಳು, ದಾನಿಗಳಿಂದಲೇ ಹಣ ಸಂಗ್ರಹಿಸಿ ಪ್ರಯಾಸಪಟ್ಟು ನಡೆಸಿದ್ದಾರೆ.
ಗ್ಯಾರಂಟಿ ಭಾರ :ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 52 ಸಾವಿರ ಕೋಟಿ ರೂ. ಹೊಂದಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್​ನಲ್ಲಿ ಹಣ ಬಿಡುಗಡೆ ಮಾಡಿಲ್ಲ. ಮೇಲಾಗಿ ಬಜೆಟ್​ನಲ್ಲಿ 1 ಲಕ್ಷ 5 ಸಾವಿರ ಕೋಟಿ ರೂ. ಸಾಲದ ಪ್ರಸ್ತಾವನೆ ಇಟ್ಟಿದ್ದಾರೆ. ಹೀಗಾಗಿ ನಾಡು-ನುಡಿ, ಗಡಿ ವಿಷಯಗಳು ಹಳ್ಳ ಹಿಡಿದಂತಾಗಿದೆ. ಈ ಹಿಂದೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಮೀಸಲಿಡುತ್ತಿದ್ದರು. ಈ ವರ್ಷ ಕೇವಲ 15 ಕೋಟಿ ರೂ. ಇಟ್ಟಿದ್ದಾರೆ. ಇನ್ನು ಮರಾಠಿಗರು ಸಿಟ್ಟಾಗಬಾರದೆಂಬ ಕಾರಣಕ್ಕೆ ಗಡಿಭಾಗದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ನಮ್ಮ ಜನಪ್ರತಿನಿಧಿಗಳೇ ಬರುವುದಿಲ್ಲ. ಬದಲಾಗಿ ಶಿವಾಜಿ ಜಯಂತಿಯಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಕನ್ನಡದ ಪಲ್ಲಕ್ಕಿಯನ್ನು ನಾವೇ ಹೊರುವಂತಾಗಿದೆ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.
ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲ:ಸಾಹಿತ್ಯ ಸಮ್ಮೇಳನ, ಕನ್ನಡ ಉಳಿಸಿ-ಬೆಳೆಸುವ ಚಟುವಟಿಕೆಗಳ ಮೇಲೆ ಜನಪ್ರತಿನಿಧಿಗಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸರ್ಕಾರ ಅನುದಾನ ನೀಡದಿದ್ದರೂ ದೇಣಿಗೆ ಸಂಗ್ರಹಿಸಿ ಫೆ.24ರಂದು ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಭಾಗವಹಿಸುವಂತೆ ಬೆಳಗಾವಿ ಶಾಸಕರು, ಸಚಿವರಿಗೆ ಆಮಂತ್ರಣ ನೀಡಿದರೂ ಯಾವೊಬ್ಬ ಜನಪ್ರತಿನಿಧಿಯೂ ಹಾಜರಾಗದೆ ನಿಷ್ಕಾಳಜಿ ತೋರಿದ್ದಾರೆ ಎಂದು ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂ. ವೆಚ್ಚ :ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಕನಿಷ್ಠ 1 ರಿಂದ 2 ಲಕ್ಷ ರೂ. ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಕನಿಷ್ಠ 5ರಿಂದ 10 ಲಕ್ಷ ರೂ. ಅನುದಾನ ಬೇಕಾಗುತ್ತದೆ. ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಣ ಬಿಡುಗಡೆಯಾಗುತ್ತಿತ್ತು. ಪರಿಷತ್ತಿನಿಂದ ಎಲ್ಲ ಜಿಲ್ಲೆಗಳಿಗೆ ಅನುದಾನ ಹಂಚಿಕೆ ಆಗುತ್ತಿತ್ತು. ಜಿಲ್ಲಾ ಕಸಾಪ ಅಧ್ಯಕ್ಷರು ಎಲ್ಲ ತಾಲೂಕುಗಳಿಗೆ ಅನುದಾನ ವಿಂಗಡಣೆ ಮಾಡಿಕೊಡುತ್ತಾರೆ. ಆದರೆ, ಅನುದಾನಕ್ಕಾಗಿ ಕಸಾಪ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳ ಬಳಿ ಹೋದಾಗ ಈ ವರ್ಷ ಅನುದಾನ ಇಲ್ಲ ಎಂದು ಹೇಳಿದ್ದಾರಂತೆ. ಇದ ರಿಂದ ವರ್ಷದಲ್ಲಿ ಒಂದು ಸಲ ನಡೆಯುವ ನುಡಿ ಹಬ್ಬಕ್ಕೂ ಬ್ರೇಕ್ ಬಿದ್ದಂತಾಗಿದೆ.
ಜಿಲ್ಲೆ, ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದಕ್ಕೆ ಪ್ರಸಕ್ತ ವರ್ಷದ ಅನುದಾನ ಇನ್ನೂ ಬಿಡುಗಡೆ ಮಾಡಿಲ್ಲ. ಮಾಹಿತಿ ಪಡೆದು ಮಾರ್ಚ್ ಬಳಿಕ ಅನುದಾನ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ.
| ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದು ಹೇಗೆ ಎಂಬಂತಾಗಿದೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು.
| ಮಂಗಲಾ ಮೆಟಗುಡ್ಡ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ
ಕಾಂಗ್ರೆಸ್ ದೇಶದ್ರೋಹಿಗಳ ರಕ್ಷಣೆ ಗ್ಯಾರಂಟಿ ಘೋಷಿಸಲಿ: ಬಿ.ವೈ ವಿಜಯೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
