ಬೆಂಗಳೂರು:ಕಾಡು ಪ್ರಾಣಿಗಳ ಉತ್ಪನ್ನಗಳಿಗೂ ಪೊಗರಿಗೂ ಅವಿನಾಭಾವ ಸಂಬಂಧವಿದ್ದಂತಿದೆ. ಹಾಗೆಯೇ ‘ಪಾವಿತ್ರ್ಯ ಭಾವನೆ’ಯ ತೆಳು ಗೆರೆಯೂ ಇದೆ. ಪ್ರತಿಷ್ಠೆ, ಗತ್ತು ಮೆರೆಯಲು ಸೆಲೆಬ್ರಿಟಿಗಳು ಅರಣ್ಯ ಶಿಕಾರಿಯಾಡಿದ ಪ್ರಕರಣಗಳು ಮಾಸುತ್ತಿರುವಾಗ ರಾಜ್ಯದಲ್ಲಿ ‘ಟೈಗರ್ ಪಂಜಾ’ ಬಿಗಿಯಾಗುತ್ತಿದೆ. ಹುಲಿ ಉಗುರು ಹಲವರ ಕೊರಳಿಗೆ ಉರುಳಾಗುವ ಸಾಧ್ಯತೆಯು ಬಿಸಿ ಚರ್ಚೆಗೆ ಗ್ರಾಸವಾಗಿದೆ.
ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದ ಸಂತೋಷ್ ವರ್ತರು ಹುಲಿ ಉಗುರು ಲಾಕೆಟ್ ಧರಿಸಿದ್ದ ಕಾರಣಕ್ಕೆ ಬಂಧಿತರಾಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಅನೇಕ ಗಣ್ಯರ ಬಳಿಯೂ ಇಂತಹ ವನ್ಯಜೀವಿ ಉತ್ಪನ್ನಗಳಿವೆ ಎಂದು ದೂರುಗಳು ಸರ್ಕಾರದ ಬಾಗಿಲು ಬಡಿಯಲಾರಂಭಿಸಿವೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಫೋಟೊಗಳು ವೈರಲ್ ಆಗಿದ್ದು, ಕಾವೇರಿದ ಚರ್ಚೆಯು ಪ್ರಕರಣಕ್ಕೆ ಗಂಭೀರ ತಿರುವು ನೀಡುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡಿದೆ. ಅರಣ್ಯ ಹಾಗೂ ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೂಚನೆಯಂತೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ನೇತೃತ್ವದಲ್ಲಿ ತ್ರಿಸದಸ್ಯರ ತಪಾಸಣಾ ತಂಡ ರಚಿಸಿ, ಬುಧವಾರ ಆದೇಶ ಹೊರಡಿಸಲಾಗಿದೆ.
ಸೆಲೆಬ್ರಿಟಿ ಮನೆಗಳ ದಿಢೀರ್ ತಪಾಸಣೆ:ದೂರುಗಳು, ಮಾಹಿತಿ ಮೇರೆಗೆ ಸರ್ಕಾರದ ಸೂಚನೆಯಂತೆ ಅರಣ್ಯಾಧಿಕಾರಿಗಳು ರಾಜ್ಯದ ಹಲವೆಡೆ ಕ್ಷಿಪ್ರ ಕಾರ್ಯಾಚರಣೆಗೆ ಧುಮುಕಿದ್ದಾರೆ. ಬೆಂಗಳೂರಿನಲ್ಲಿ ಚಿತ್ರನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ನಿರ್ವಪಕ ರಾಕ್​ಲೈನ್ ವೆಂಕಟೇಶ್ ಅವರ ಮನೆಗಳು, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ.
ಅರಣ್ಯಾಧಿಕಾರಿಗಳಾದ ಚಿದಾನಂದ, ರವೀಂದ್ರಕುಮಾರ್ ಹೇಳಿದ ಪ್ರಕಾರ ಚಿತ್ರನಟರಾದ ಜಗ್ಗೇಶ್, ರಾಕ್​ಲೈನ್ ವೆಂಕಟೇಶ, ದರ್ಶನ್​ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜಗ್ಗೇಶ್ ಮನೆಯಲ್ಲಿ ಹುಲಿ ಉಗುರಿನದು ಎನ್ನಲಾದ ಪೆಂಡೆಂಟ್ ವಶಕ್ಕೆ ಪಡೆದು, ಖಚಿತ ಪಡಿಸಿಕೊಳ್ಳಲೆಂದು ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ ವೇಳೆ ಹಾಜರಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲಾಕೆಟ್ ತೋರಿಸಿ, ತಮ್ಮ ಬಳಿ ಇರುವುದು ಸಿಂಥೆಟಿಕ್ ಪೆಂಡೆಂಟ್, ಹುಲಿ ಉಗುರಿನ ಲಾಕೆಟ್ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಆಧರಿಸಿ ರಾಕ್​ಲೈನ್ ವೆಂಕಟೇಶ್ ಮನೆ, ಲಾಕರ್ ಸೇರಿ ಎಲ್ಲ ಕಡೆ ತಪಾಸಣೆ ಮಾಡಿದ್ದು, ಲಾಕೆಟ್ ನೋಡಿಲ್ಲವೆಂದು ಮನೆಯವರು ಹೇಳಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಧರಿಸಿದ್ದೆನ್ನಲಾದ ಲಾಕೆಟ್ ಬಗ್ಗೆ ಹೆಚ್ಚಿನ ಮಾಹಿತಿಯಿದ್ದಂತಿಲ್ಲ. ಆದರೆ, ವಿಚಾರಣೆಗೆ ಹಾಜರಾಗಲು ರಾಕ್​ಲೈನ್ ವೆಂಕಟೇಶ್​ಗೆ ತಿಳಿಸಲಾಗಿದೆ.
ವಿನಯ್ ಗುರೂಜಿಯಿಂದ ಮಾಹಿತಿ ಸಂಗ್ರಹಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದ ಹಳೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಕೊಪ್ಪ ಡಿಎಫ್​ಒ ನಂದೀಶ್ ಆಶ್ರಮಕ್ಕೆ ಬುಧವಾರ ಭೇಟಿ ನೀಡಿ 3 ತಾಸಿನವರೆಗೆ ಮಾಹಿತಿ ಸಂಗ್ರಹಿಸಿದರು. ಗುರೂಜಿ ಈ ಹಿಂದೆಯೇ ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆ ಬಗ್ಗೆ ದಾಖಲೆಗಳನ್ನೂ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮತ್ತೊಂದೆಡೆ, ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಧನಂಜಯ ಸ್ವಾಮಿ ಹುಲಿ ಉಗುರು ಧರಿಸಿರುವ ಫೋಟೋ ಮತ್ತು ವಿಡಿಯೋಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದು ಅವರ ಮನೆ, ಕಚೇರಿಗೆ ಬುಧವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ವಿಜುಗೌಡರ ಪುತ್ರನ ಬಳಿ ಹುಲಿ ಉಗುರು?ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲರ ಪುತ್ರ ಶಾಶ್ವತಗೌಡ ಕೊರಳಲ್ಲಿ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್ ರಾರಾಜಿಸುತ್ತಿರುವ ಫೋಟೊಗಳು ಭರ್ಜರಿ ವೈರಲ್ ಆಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜುಗೌಡ, ನಕಲಿ ಉಗುರು ಹಾಗೂ ಹಳೆಯ ಫೋಟೊ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಗ್ಗೇಶ್ ವಿರುದ್ಧ ದೂರುನಟ, ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಹುಲಿ ಉಗುರಿನ ಲಾಕೆಟ್ ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್​ಗೆ ದೂರು ನೀಡಿದ್ದಾರೆ. ಈ ಕಾರಣದಿಂದ ಜಗ್ಗೇಶ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ವರದಿಗೆ ವಾರದ ಗಡುವುಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸೇರಿ ತ್ರಿಸದಸ್ಯರ ತಂಡಕ್ಕೆ ತಪಾಸಣೆ ನಡೆಸಿ ವರದಿ ಸಲ್ಲಿಸುವುದಕ್ಕೆ ಸರ್ಕಾರ ಒಂದು ವಾರದ ಗಡುವು ವಿಧಿಸಿದೆ.
ನಾನು ಮದುವೆಯಲ್ಲಿ ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟವರು ಪರಿಶೀಲಿಸಬಹುದು.
| ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ.
ಹುಲಿ ಉಗುರಿನಿಂದ ತಯಾರಿಸಿದ ಪೆಂಡೆಂಟ್ ಧರಿಸಿದ ನಟರು, ಸೆಲೆಬ್ರೆಟಿಗಳು ಸೇರಿ ಯಾರೇ ಇರಲಿ ಅವರ ವಿರುದ್ಧ ಕಾನೂನಿನಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ದೂರಿನ ಮೇರೆಗೆ ಸಂತೋಷ್ ವರ್ತರು ಸೇರಿ ಕೆಲವರನ್ನು ಬಂಧಿಸಲಾಗಿದೆ.
| ಈಶ್ವರ್ ಖಂಡ್ರೆ, ಅರಣ್ಯ ಸಚಿವ
ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ನನ್ನ ತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲ.
| ಜಗ್ಗೇಶ್ ನಟ (ಟ್ವಿಟರ್​ನಲ್ಲಿ)
ಹುಲಿ ಚರ್ಮವನ್ನು ಭಕ್ತರು ಉಡುಗೊರೆ ನೀಡಿದ್ದರು. ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎಲ್ಲ ದಾಖಲೆಗಳಿದ್ದು, ತನಿಖೆಗೆ ಸಹಕರಿಸುತ್ತೇನೆ.
| ಅವಧೂತ ವಿನಯ್ ಗುರೂಜಿ
ಹುಲಿ ಉಗುರು ಧರಿಸಿದ ಸಂಬಂಧ ನಟರಾದ ದರ್ಶನ್ ಹಾಗೂ ಜಗ್ಗೇಶ್ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ಪಡೆದು ಪರಿಶೀಲಿಸ\ಲಾಗುವುದು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಕಾಯ್ದೆ ಹೇಳುವುದೇನು?
ಪ್ರಕರಣ ವೇಗದ ತಿರುವು ಪಡೆದುಕೊಂಡಿರುವುದರಿಂದ ವನ್ಯಜೀವಿ ಸಂರಕ್ಷಣೆ ಕಾಯ್ದೆ ಏನು ಹೇಳುತ್ತದೆ ಎಂಬ ಕುತೂಹಲವೂ ಗರಿಗೆದರಿದೆ. ವನ್ಯಪ್ರಾಣಿಗಳು, ಹುಲಿ ಉಗುರು, ಚರ್ಮ, ಆನೆ ದಂತ ಸೇರಿ ಯಾವುದೇ ಉತ್ಪನ್ನ ಅಥವಾ ವಸ್ತು ಇಟ್ಟುಕೊಳ್ಳುವುದು ಅಪರಾಧವಾಗಿದೆ. ಈ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿ ತಮ್ಮ ಬಳಿಯಿರುವ ವನ್ಯಜೀವಿ ಉತ್ಪನ್ನ, ವನ್ಯ ಸಂಪತ್ತು ಸರ್ಕಾರಕ್ಕೆ ಹಿಂತಿರುಗಿಸಲು ಅವಕಾಶವಿದೆ. ಹಿಂತಿರುಗಿಸಿದ ಮಾತ್ರಕ್ಕೆ ಯಾವುದೇ ವಿನಾಯಿತಿಯನ್ನೂ ಕಾಯ್ದೆ ನೀಡುವುದಿಲ್ಲ. ಹೀಗೆ ಹಸ್ತಾಂತರಿಸಿದ ಉತ್ಪನ್ನ ಅಥವಾ ವಸ್ತುಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಅಲ್ಲದೆ, ಅನುಮತಿ ಪ್ರಮಾಣಪತ್ರವೂ ತನ್ನಿಂದತಾನೇ ರದ್ದಾಗುತ್ತದೆ. ಈ ಕಾಯ್ದೆ ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಆಯಾ ನ್ಯಾಯಾಲಯಗಳು ನಿರ್ಧರಿಸುತ್ತವೆ.
ನೋಟಿಸ್ ನೀಡಬೇಕು:ತಿದ್ದುಪಡಿ ಕಾಯ್ದೆ ಸೆಕ್ಷನ್ 42ಎ (1)ರ ಪ್ರಕಾರ ವನ್ಯಜೀವಿಗಳು, ಉತ್ಪನ್ನ ಮತ್ತಿತರ ವಸ್ತುಗಳನ್ನು ಹೊಂದಿರುವ ವ್ಯಕ್ತಿಯು ಏಳು ಕೆಲಸದ ದಿನಗಳ ನೋಟಿಸ್ ನೀಡಿದ ಮುಖ್ಯ ಅರಣ್ಯಸಂರಕ್ಷಣಾ ವಾರ್ಡನ್ ಸುಪರ್ದಿಗೆ ಒಪ್ಪಿಸಬೇಕು.
ಒಂದು ಬಾರಿ ಅವಕಾಶ:ತಲೆಮಾರುಗಳಿಂದ (1962ರ ಪೂರ್ವ) ವನ್ಯಜೀವಿ ಉತ್ಪನ್ನ ಅಥವಾ ವಸ್ತುಗಳನ್ನು ಇಟ್ಟುಕೊಂಡವರು ಸ್ವಯಂಘೋಷಿಸಿಕೊಂಡು ಸಕ್ರಮ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಂದು ಬಾರಿಗೆ ಅವಕಾಶ ನೀಡಿತ್ತು. 1962ರ ಪೂರ್ವ ದೇಶದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಇದ್ದಿಲ್ಲವಾದ ಕಾರಣ ಒಂದು ಬಾರಿ ಅವಕಾಶ ಕಲ್ಪಿಸಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಹುಲಿ ಉಗುರು ಪ್ರಕರಣ: ಪ್ರಭಾವಿಗಳ ಬಂಧನ ಯಾವಾಗ? ಜಾಲತಾಣದಲ್ಲಿ ಹೊತ್ತಿಕೊಂಡ ಆಕ್ರೋಶದ ಕಿಚ್ಚು

ಹುಲಿ ಉಗುರು ಪ್ರಕರಣ: ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 1 =
Remember me
