ಬೆಂಗಳೂರು:ಕನ್ನಡ ನಮ್ಮ ದೈನಂದಿನ ಜೀವನ ಹಾಗೂ ಹೃದಯದ ಭಾಷೆಯೂ ಆಗಬೇಕು. ಕನ್ನಡದ ಸೌಂದರ್ಯವನ್ನು ನಾವೆಲ್ಲರೂ ಸೇರಿ ಕಾಪಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡವು ಕರ್ನಾಟಕದಲ್ಲಿ ಅಲ್ಲದೆ ಇನ್ನೆಲ್ಲಿ ಬೆಳೆಯಲು ಸಾಧ್ಯ? ಇನ್ನೆಲ್ಲಿ ಉತ್ತೇಜನ ಸಿಗಲು ಸಾಧ್ಯ? ಕನ್ನಡದ ಸೌಂದರ್ಯವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಕನ್ನಡ ನಾಡು- ನುಡಿಯನ್ನು ತಮ್ಮ ಜೀವನವನ್ನಾಗಿಸಿ ಅನೇಕ ಮಹನೀಯರು ನಾಡಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ಅಮೂಲ್ಯ ಸಾಧಕರನ್ನು ಹೆಕ್ಕಿ ತೆಗೆದು ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದಾಗಿ ಅವರ ಕೊಡುಗೆ ಇನ್ನಷ್ಟು ಹೆಚ್ಚಾಗಲಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾತನಾಡಿ, ಭಾಷೆಯನ್ನು ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಂಡಂತೆ. ಹರಪ್ಪ ಮೊಹೆಂಜೊದಾರೊವರೆಗೆ ಕನ್ನಡದ ಇತಿಹಾಸ ಹಬ್ಬಿದೆ. ಆರ್ಥಿಕ ವೈಭವದ ಜತೆಗೆ ಸಾಂಸ್ಕೃತಿಕ ವೈಭವವನ್ನೂ ಹೊಂದಿದ್ದ ನಾಡು ನಮ್ಮದು. ಇಂತಹ ಕರ್ನಾಟಕದಲ್ಲಿ 65 ಸಾಧಕರನ್ನಷ್ಟೆ ಆಯ್ಕೆ ಮಾಡುವ ಸವಾಲು ಆಯ್ಕೆ ಸಮಿತಿ ಮುಂದಿತ್ತು. ಅಧಿಕೃತವಾಗಿ 1,872 ಅರ್ಜಿಗಳು ಪ್ರಶಸ್ತಿಗೆ ಸಲ್ಲಿಕೆಯಾಗಿದ್ದರೆ, ತೆರೆಮರೆ ಕಾಯಿಗಳೆಂದು ಸಮಿತಿ ಮಾಡಿದ ಪಟ್ಟಿಯಲ್ಲಿ ಸಾವಿರಾರು ಜನರಿದ್ದರು. ಪ್ರಶಸ್ತಿಗೆ ಆಯ್ಕೆ ಮಾಡಲಾದ ಶೇ.70 ಜನರನ್ನು ಸಮಿತಿ ಸದಸ್ಯರು ಮುಖತಃ ಭೇಟಿಯನ್ನೂ ಮಾಡದ, ಯಾವುದೇ ಶಿಫಾರಸನ್ನೂ ಮಾಡದವರಿದ್ದಾರೆ. ಪ್ರಶಸ್ತಿ ಆಯ್ಕೆಯಲ್ಲಿ ಸಮಿತಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮುಖ್ಯಮಂತ್ರಿಯವರ ಔದಾರ್ಯದಿಂದ ಇಂತಹ ಅಮೂಲ್ಯ ರತ್ನಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿದೆ ಎಂದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ್ ಬಿ. ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನಿರ್ದೇಶಕ ಎಸ್. ರಂಗಪ್ಪ ಮತ್ತಿತರರಿದ್ದರು.
ನಾಲ್ವರು ಗೈರು
ಪ್ರಶಸ್ತಿ ಸ್ವೀಕರಿಸಬೇಕಾದ ಎಲ್ಲರಿಗೂ ಬೆಳಗ್ಗೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದ 61 ಜನರಲ್ಲೂ ಕರೊನಾ ನೆಗೆಟಿವ್ ವರದಿ ಬಂದಿದೆ. ನ್ಯಾಯಾಂಗ ಕ್ಷೇತ್ರದ ಕೆ.ಎನ್.ಭಟ್, ಸಮಾಜಸೇವಾ ವಿಭಾಗದ ಎಂ.ಕೆ.ಪ್ರೇಮಾ, ವೈದ್ಯಕೀಯ ಕ್ಷೇತ್ರದ ಅಶೋಕ್ ಆರ್. ಸೊನ್ನದ್ ಹಾಗೂ ಸಮಾಜ ಸೇವಾ ವಿಭಾಗದ ಮೊಹಮ್ಮದ್ ಮೀರಾನ್ ಸಾಹೇಬ್ ಅವರು ವಯಸ್ಸಿನ ಹಾಗೂ ಅನಾರೋಗ್ಯ ಕಾರಣಕ್ಕೆ ಆಗಮಿಸಲಿಲ್ಲ. ಅವರಿಗೆ ಸರ್ಕಾರದ ವತಿಯಿಂದ ಅಧಿಕಾರಿಗಳು ಮನೆಗೆ ತೆರಳಿ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಇಲಾಖೆ ನಿರ್ದೇಶಕ ಎಸ್.ರಂಗಪ್ಪ ‘ವಿಜಯವಾಣಿ’ಗೆ ತಿಳಿಸಿದರು.
ಕೆರೆಯ ನೀರನು ಕೆರೆಗೆ ಚೆಲ್ಲಿ
ನಾಲ್ವರು ಪುರಸ್ಕೃತರು ಪ್ರಶಸ್ತಿ ಜತೆಗೆ ತಮಗೆ ಲಭಿಸಿದ್ದ 1 ಲಕ್ಷ ರೂ. ಚೆಕ್ ಅನ್ನು ಸಾಮಾಜಿಕ ಕಾರ್ಯಕ್ಕೆ ಅರ್ಪಿಸಿದರು. ಕೃಷಿ ಕ್ಷೇತ್ರದ ಪುರಸ್ಕೃತ ಡಾ.ಸಿದ್ರಾಮಪ್ಪ ಬ. ಪಾಟೀಲ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಗೆ 50 ಸಾವಿರ ರೂ. ಹಾಗೂ ಉಳಿದ 50 ಸಾವಿರ ರೂ. ತಮ್ಮ ಗ್ರಾಮದ ಅಭಿವೃದ್ಧಿಗೆಂದು ಘೋಷಿಸಿದರು. ಸಂಗೀತ ಕ್ಷೇತ್ರದ ಪುರಸ್ಕೃತೆ ಗಿರಿಜಾ ನಾರಾಯಣ ಕಲಾವಿದರ ಅಭಿವೃದ್ಧಿಗಾಗಿ ಸಿಎಂ ಅವರಿಗೆ, ಪರಿಸರ ಕ್ಷೇತ್ರದ ಸನ್ಮಾನಿತ ಕೆಂಪರೆಡ್ಡಿ ಅಮರನಾರಾಯಣ ಸಿಎಂ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡುವುದಾಗಿ ಚೆಕ್ ಅನ್ನು ಸರ್ಕಾರಕ್ಕೆ ನೀಡಿದರು.
ಕೆಯುಡಬ್ಲು್ಯಜೆ ದತ್ತಿ ನಿಧಿಗೆ
ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಈ ಸಂಜೆ ಪತ್ರಿಕೆ ಸಂಪಾದಕರಾದ ಟಿ.ವೆಂಕಟೇಶ್, ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಬಾಬ್ತು 1 ಲಕ್ಷ ರೂ. ಅನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ನಿಧಿಗೆ ಅರ್ಪಿಸುವುದಾಗಿ ಘೋಷಿಸಿದ್ದಾರೆ. ಈ ಹಣವನ್ನು ಕೆಯುಡಬ್ಲು್ಯಜೆ ದತ್ತಿ ನಿಧಿಯಲ್ಲಿ ಠೇವಣಿಯಾಗಿರಿಸಿ, ಪ್ರತಿ ವರ್ಷದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಈ ಸಂಜೆ ಪತ್ರಿಕೆ ಹೆಸರಿನಲ್ಲಿ ಪ್ರತಿಭಾನ್ವಿತ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಭಿನಂದನೆ: ಕೆಯುಡಬ್ಲು್ಯಜೆ ಮೇಲೆ ಅಭಿಮಾನವಿರಿಸಿ ತಮಗೆ ದೊರೆತ ಪ್ರಶಸ್ತಿಯ 1 ಲಕ್ಷ ರೂ. ಅನ್ನು ಪ್ರಶಸ್ತಿ ದತ್ತಿ ನಿಧಿಗೆ ಸಮರ್ಪಣೆ ಮಾಡಲು ನಿರ್ಧರಿಸಿರುವುದನ್ನು ನಾಡಿನ ಪತ್ರಕರ್ತರ ಪರವಾಗಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.
ಸಚಿವ ಸ್ಥಾನದ ಕೊನೆಯ ದಿನ
ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿಯವರು ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗು ಎಂದಾಗ ಬೇಸರವಾಗಿತ್ತು. ಆದರೆ ಇಲಾಖೆಯ ಒಳಹೊಕ್ಕಾಗ ಅದರ ಆಳ ತಿಳಿಯಿತು. ಆನಂದದ ಮತ್ತೇರಿಸುವಂತಹ ಇಲಾಖೆಯಲ್ಲಿ ಕಾರ್ಯ ಮಾಡಲು ಸಂತಸ ತರಲಾರಂಭಿಸಿತು. ಪಕ್ಷದಲ್ಲಿ ಹೊಸ ಜವಾಬ್ದಾರಿ ಸಿಕ್ಕ ನಂತರದಲ್ಲಿ, ಸಚಿವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಹೇಳಿದೆ. ಆದರೆ ಅವರು ಒಪ್ಪಿಗೆ ನೀಡಲಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನವಾಗುವವರೆಗೂ ಕಾಯಲು ನಿರ್ಧರಿಸಿದೆ. ಇಂದು ಪ್ರಶಸ್ತಿ ಪ್ರದಾನ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ಮುಕ್ತಗೊಳಿಸದಿರಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮರಗಳ ಮಾರಣಹೋಮ ತಡೆಯಲು ಸಹಕರಿಸಿ…
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಚಿತ್ರದುರ್ಗದ ರೈತಮಹಿಳೆ ಎಸ್.ವಿ.ಸುಮಂಗಳಮ್ಮ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ನಮ್ಮ ಪ್ರದೇಶದಲ್ಲಿ ನೀರಿಗೆ ಹಾಹಾಕಾರ ವಿದ್ದರೂ ರೈತರು ಧೃತಿಗೆಡದೆ ಕೃಷಿ ಮಾಡುತ್ತಿದ್ದೇವೆ. ಯಾರೂ ಆತ್ಮಹತ್ಯೆ ದಾರಿ ಹಿಡಿಯುತ್ತಿಲ್ಲ. ಅಂತರ್ಜಲ ತೀರಾ ಕೆಳಮಟ್ಟದಲ್ಲಿದ್ದು, ಸರ್ಕಾರ ಸಕಾಲದಲ್ಲಿ ಮೋಡ ಬಿತ್ತನೆ ಮಾಡಿದರೆ ಅನುಕೂಲ ವಾಗುತ್ತದೆ. ಮೊಹರಂ ಸಮಯ ಕಾಡಿನ ಮರಗಳಿಗೆ ಬೆಂಕಿ ಹಚ್ಚಿ ಮಾರಣ ಹೋಮ ಮಾಡಲಾಗುತ್ತದೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದು, ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮರ ಬೆಳೆಸವುದು ಎಷ್ಟು ಕಷ್ಟ ಎಂಬುದು ಗೊತ್ತಿದ್ದರೂ ಹೀಗೆ ಮಾಡುವುದು ಸರಿಯಲ್ಲ ಎಂದರು.
ರಾಜ್ಯದೆಲ್ಲ ಅಂಗವಿಕಲರಿಗೆ ಅರ್ಪಣೆ
ನಂಬಿಕೆ ಇಟ್ಟು ಕಾರ್ಯ ಮಾಡಿದರೆ ಪ್ರಶಸ್ತಿ ತಾನಾಗಿಯೇ ಒಲಿದುಬರುತ್ತದೆ ಎಂಬುದಕ್ಕೆ ಇಂದಿನ ದಿನವೇ ಸಾಕ್ಷಿ. ಅಂಗವೈಕಲ್ಯ ಎಂದು ಸುಮ್ಮನೆ ಕೂರದೆ ನಾನೇ ಕಾರು ಚಲಾಯಿಸುತ್ತೇನೆ, ಈಜುತ್ತೇನೆ. ಎಲ್ಲ ಕನ್ನಡಿಗರು ನೀಡಿರುವ ಶಕ್ತಿ ಇದು. ರಾಜ್ಯದಲ್ಲಿರುವ ಎಲ್ಲ ಅಂಗವಿಕಲರಿಗೂ ಸಂದ ಗೌರವ ಈ ಪ್ರಶಸ್ತಿ ಎಂದು ಡಾ.ಕೆ.ಎಸ್.ರಾಜಣ್ಣ ಹೇಳಿದರು.
ಸಮಾರಂಭದ ವೈಶಿಷ್ಠ್ಯಳು
ಕೇಶಪ್ಪಗೆ ಪ್ರಶಸ್ತಿ ರದ್ದು
ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಆಯ್ಕೆಯಾಗಿದ್ದ ಜಾನಪದ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ್ ಆಯ್ಕೆಯನ್ನು ರದ್ದುಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಬದಲು ರಂಗಭೂಮಿ ಕಲಾವಿದೆ ಜಿ.ವಂದನಾ ಅವರನ್ನು ಆಯ್ಕೆ ಮಾಡಿದೆ. ರದ್ದು ಮಾಡಲು ವಯಸ್ಸಿನ ಕಾರಣ ನೀಡಿರುವ ಸಮಿತಿ, ವಿಷಯವನ್ನು ಕೇಶಪ್ಪ ಅವರಿಗೆ ದೂರವಾಣಿ ಮೂಲಕ ತಿಳಿಸಿ, ಪ್ರಶಸ್ತಿ ಹಿಂಪಡೆದ ಬಗ್ಗೆ ಪತ್ರ ರವಾನಿಸಿದೆ. ಕೇಶಪ್ಪ ಅವರ ಆಧಾರ್​ಕಾರ್ಡ್ ನಲ್ಲಿ ಜನ್ಮವರ್ಷ 1974 ಎಂದಿದೆ. ಅದರ ಪ್ರಕಾರ ವಯಸ್ಸು 46 ಆಗುತ್ತದೆ. ಕ್ರೀಡೆ ಮತ್ತು ಬೇರೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರನ್ನು ಹೊರತುಪಡಿಸಿ ಉಳಿದವರಿಗೆ 60 ವರ್ಷ ವಯಸ್ಸಾಗಿರಬೇಕೆಂಬ ನಿಯಮ ವಿದೆ. ಕೇಶಪ್ಪ ಅವರು ಸೂಕ್ತ ದಾಖಲೆ ಸಲ್ಲಿಸದ ಕಾರಣ, ಅವರ ಆಯ್ಕೆ ರದ್ದು ಪಡಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
