ಕನ್ನಡದಲ್ಲಿ ಉನ್ನತ ಶಿಕ್ಷಣ: ಯೋಗ ವಿಜ್ಞಾನ, ಭೌತಶಾಸ್ತ್ರ ಒಳಗೊಂಡು ಅನೇಕ ಅಧ್ಯಯನಗಳು ಕನ್ನಡದಲ್ಲಿ ಮೂಡಿಬಂದಿವೆ. ಇಂಗ್ಲಿಷಿನಲ್ಲಿಯೇ ಶಿಕ್ಷಣ ಪಡೆಯಲು ನನ್ನ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎಂಬ ಕೊರಗು ಇರಬಾರದು. ಕಾರ್ಯಸೂಚಿ ರೂಪಿಸಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕು. ಕನ್ನಡವು ದೈನಂದಿನ ವ್ಯಾವಹಾರಿಕ ಭಾಷೆಯಾಗಷ್ಟೇ ಉಳಿದರೆ ಸಾಲದು. ಅದು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿ ವಿಕಸಿತಗೊಳ್ಳಬೇಕು. ಅಂತಿಮ ಪದವಿ ತರಗತಿಗಳಲ್ಲೂ ಸಾಮಾನ್ಯ ಕನ್ನಡ ಪಠ್ಯ ಕಲಿಕೆ ಮುಂದುವರಿಸು ವಂತಾಗಬೇಕು. ಇದರಿಂದಾಗಿ ಮತ್ತಷ್ಟು ಕನ್ನಡದ ಅಧ್ಯಾಪಕರಿಗೆ ಉದ್ಯೋಗದ ಅವಕಾಶಗಳು ಸಿಕ್ಕಂತಾಗಲಿದೆ. ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಸ್ಪೇನ್, ಚೀನಾ, ಫ್ರಾನ್ಸ್, ರಷಿಯಾ ಮುಂತಾದ ದೇಶಗಳಲ್ಲಿ ಇದು ಸಾಧ್ಯವಿದ್ದ ಮೇಲೆ ಏಳು ಕೋಟಿ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಾಮರ್ಥ್ಯ, ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗಿಲ್ಲವೆ?
ಪಾರಿಭಾಷಿಕ ಪದಕೋಶ ರೂಪಿಸಿ:ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡ, ಕಂಗ್ಲಿಷ್ ಪದಗಳನ್ನು ರೂಪಿಸುವುದರ ಒಟ್ಟಿಗೆ ಇವುಗಳಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಸಮಗ್ರ ಪಾರಿಭಾಷಿಕ ಪದಕೋಶ ರೂಪಿಸಬೇಕು. ಕನ್ನಡ ಅನ್ನದ ಭಾಷೆಯಾಗಿ, ಉದ್ಯೋಗದ ಭಾಷೆಯಾಗಿ, ಉದ್ಯಮಶೀಲತೆಯ ಭಾಷೆಯಾಗಿ ಸಶಕ್ತವಾಗಬೇಕಾದರೆ ಮಾರುಕಟ್ಟೆ ಸಂಸ್ಕೃತಿಯ ಇಂದಿನ ದಿನಗಳಲ್ಲಿ ತಾವು ಪಡೆಯುವ ಸೇವೆಗಳನ್ನು ಕನ್ನಡದಲ್ಲಿಯೇ ಪಡೆಯುವ ಜಾಗೃತಿ, ಆಗ್ರಹಗಳನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ವಿಪರ್ಯಾಸವೆಂದರೆ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ.
ಅಧಿಕಾರಿಗಳಿಗೆ ಕನ್ನಡ ಕಲಿ-ನಲಿ:ಐಎಎಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಕನ್ನಡ ಕಲಿಯಲು 3 ಅಥವಾ 6 ತಿಂಗಳ ಕನ್ನಡ ಕಲಿ-ನಲಿ ಪ್ರಶಿಕ್ಷಣ ನೀಡಬೇಕು ಎಂದು ಡಾ. ದೊಡ್ಡರಂಗೇಗೌಡ ಸರ್ಕಾರವನ್ನು ಆಗ್ರಹಿಸಿದರು. ಅನೇಕ ಅಧಿಕಾರಿಗಳು ಇನ್ನೂ ಇಂಗ್ಲಿಷ್​ನಲ್ಲಿಯೇ ಟಿಪ್ಪಣಿ ಬರೆಯುತ್ತಾರೆ. ಅವರು ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಬೇಕು. ಬೇರೆ ಬೇರೆ ರಾಜ್ಯಗಳಿಂದ ಕೆಲಸ ಅರಸಿ ಬಂದು ಇಲ್ಲಿ ನೆಲೆಕಂಡುಕೊಂಡಿರುವವರು ಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು. ಇಲ್ಲದಿದ್ದರೆ ಕನ್ನಡ ಕಾರ್ಯಕರ್ತರು ಕನ್ನಡವನ್ನು ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಕನ್ನಡವೆನ್ನುವುದು ಕಪ್ಪೆಚಿಪ್ಪಿನಲ್ಲಿ ಅಡಗಿ ಕೂರಬೇಕಾದ ಭಾಷೆಯಲ್ಲ. ಸರ್ಕಾರ ಯಾವುದೇ ಇರಲಿ, ಕನ್ನಡವನ್ನು ಬರೀ ಭಾವಕೋಶದ ಭಾಷೆಯಾಗಿ ಕಾಣಬೇಡಿ. ಅದು ಜ್ಞಾನಕೋಶದ ಭಾಷೆ ಎಂದರು.
ಬುದ್ಧಿಜೀವಿಗಳಿಗೆ ಚಾಟಿ:ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರು ಬುದ್ಧಿಜೀವಿಗಳಿಗೆ ಜೋರಾಗಿಯೇ ಚಾಟಿ ಬೀಸಿದರು. ಬಾವಿಯೊಳಗಿನ ಕಪ್ಪೆಯಾದರೆ ಅದು ನಿಮ್ಮ ಕೂಪಮಂಡೂಕತನ. ಇಲ್ಲಿ ಕನ್ನಡ ಜಾತ್ರೆಯೇ ನಡೆಯುತ್ತಿದೆ, ನೀವೂ ಜಾತ್ರೆಗೆ ಬನ್ನಿ. ಸಂಬಂಧ ಗಟ್ಟಿಯಾಗಬೇಕೇ ವಿನಃ ಹಳಸಬಾರದು ಎಂದು ಕಿವಿಮಾತು ಹೇಳಿದರು.
ಕನ್ನಡ ಸಂಘ ಸಂಸ್ಥೆ ನಿರ್ಲಕ್ಷ್ಯ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ/ಅನುದಾನ ಪಡೆದುಕೊಳ್ಳುತ್ತಿರುವ ಸಂಘ, ಸಂಸ್ಥೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. 40-50 ವರ್ಷಗಳಿಂದ ಕನ್ನಡ ಸಂಸ್ಕೃತಿ ಸಂವರ್ಧನೆಯ ಚಟುವಟಿಕೆಗಳನ್ನು ಬದ್ಧತೆಯಿಂದ ಮಾಡುತ್ತಿರುವ ಹಿರಿಯ ಸಂಸ್ಥೆಗಳ ಸಹಾಯಧನ ಕಡಿಗೊಳಿಸುವುದು, ಸಹಾಯಧನ ಮಂಜೂರು ಮಾಡದಿರುವುದು ಸರಿಯಲ್ಲ.
ಒಟಿಟಿಯಲ್ಲಿ ಕನ್ನಡಕ್ಕೆ ಒತ್ತು:ಒಟಿಟಿ ವೇದಿಕೆಗಳಲ್ಲಿ ವಿವಿಧ ಜಾಗತಿಕ ಭಾಷೆಗಳ ಮನರಂಜನಾ ಸರಣಿ, ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಯಲ್ಲಿ ಬಿತ್ತರಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ. ಆ ಮೂಲಕ ಜಾಗತಿಕ ಮನರಂಜನೆ, ಉತ್ತಮ ಕಾರ್ಯಕ್ರಮಗಳು ಕನ್ನಡದಲ್ಲೇ ಲಭ್ಯವಾಗಬೇಕು. ಡಬ್ಬಿಂಗ್​ಗೆ ನಾವು ಸೀಮಿತವಾಗಬೇಕಿಲ್ಲ. ಜಾಗತಿಕ ಮಟ್ಟದ ಒಟಿಟಿ ವೇದಿಕೆಗಳು ಕನ್ನಡದಲ್ಲಿಯೂ ಹೆಚ್ಚೆಚ್ಚು ಕಂಟೆಂಟ್ ತಯಾರಿಸುವಂತೆ ಕನ್ನಡಿಗರು ಒತ್ತಡ ಹೇರಬೇಕು.
ಕನ್ನಡಿಗ ರಾಯಭಾರಿ:ಪ್ರತಿಯೊಬ್ಬ ಹೊರನಾಡ ಕನ್ನಡಿಗನನ್ನು ಕನ್ನಡದ ರಾಯ ಭಾರಿ ಎಂದೇ ಸರ್ಕಾರ ನೋಡಬೇಕು. ಅಲ್ಲಿನ ಕನ್ನಡಪರ ಸಂಘಟನೆಗಳಿಗೆ ಉತ್ತೇಜನ ನೀಡಬೇಕು. ಹೊರನಾಡ ಕನ್ನಡಿಗರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕು.
ಕನ್ನಡದಲ್ಲಿ ಸೇವೆ ನೀಡದಿದ್ದರೆ ಧಿಕ್ಕರಿಸಿ:ನಮ್ಮ ಭಾಷೆಗಳಲ್ಲಿ ಸೇವೆ ನೀಡದ ಬ್ಯಾಂಕುಗಳನ್ನು, ಸರ್ಕಾರಿ ಉದ್ದಿಮೆ ಗಳನ್ನು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಕರ್ನಾ ಟಕದ ಎಲ್ಲೆಡೆ ಕನ್ನಡದಲ್ಲಿ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಬಲವಾಗಿ ಆಗ್ರಹಿಸತೊಡಗಿದರೆ ಸಹಜವಾಗಿಯೇ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚುತ್ತದೆ.
ಡಬಲ್ ಇಂಜಿನ್ ಸರ್ಕಾರದಿಂದೇನು ಉಪಯೋಗ?:ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನನ್ನು ಸಾಧಿಸಲು ಸಾಧ್ಯ? ಡಬಲ್ ಇಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇಪದೆ ಹೇಳುವ ಕೇಂದ್ರ ಸರ್ಕಾರ ಕನ್ನಡಕ್ಕೆ ಮಾಡಿರುವ ಅನುಕೂಲತೆ ಏನು? ಕನ್ನಡಕ್ಕೆ ದೊರೆಯಬಹುದಾದ ಹಕ್ಕಿನ ಹಣವನ್ನು ತರುವ ಜವಾಬ್ದಾರಿ ಸರ್ಕಾರದ್ದು. ಶಾಸ್ತ್ರೀಯ ಭಾಷೆ ವಿಚಾರದಲ್ಲಿ ಕೇಂದ್ರದಿಂದ ಕೇವಲ 2-3 ಕೋಟಿ ರೂ. ನೆರವು ಪಡೆದಿರಬಹುದು. ಇದು ನಮ್ಮ ಜಡತೆಯ ಕುರುಹಲ್ಲವೆ? ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಕೇಂದ್ರದ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲಿ ್ಲಾಸ್ತ್ರೀಯ ಭಾಷಾ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ಬೇಕು. ಈ ಅಧ್ಯಯನಕ್ಕೆ ಶಾಸನಾತ್ಮಕ ಮಾನ್ಯತೆ ದೊರೆಯಬೇಕು. ತಮಿಳುನಾಡಿನ ಯೋಜನೆಗಳ ಮಾದರಿಯನ್ನು ಅಧ್ಯಯನ ಮಾಡಬೇಕು.
ವಿಶೇಷ ನೀತಿ ರೂಪಿಸಿ:ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನು ವ್ಯಾಪಿಸಲು ಸರ್ಕಾರ ವಿಶೇಷ ನೀತಿ ರೂಪಿಸಬೇಕು. ಕೇವಲ ಆದೇಶಗಳಿಂದ ಇದು ಅನುಷ್ಠಾನವಾಗದೇ ಹೋಗಬಹುದು. ಹಾಗಾಗಿ ಸೇವೆಯಲ್ಲಿ ಸಹಭಾಗಿತ್ವ ಎನ್ನುವ ತತ್ವದಡಿ ಕನ್ನಡದಲ್ಲಿ ಸೇವೆ ನೀಡುವ ಖಾಸಗಿ ಆನ್​ಲೈನ್ ಸೇವಾ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿ, ಧನಸಹಾಯ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷರು ಆಗ್ರಹಿಸಿದರು.
ಕನ್ನಡದ ನೆಲ, ಜಲ, ಗಡಿ ವಿಚಾರದಲ್ಲಿ ಸರ್ಕಾರ ಎಂದೂ ಉದಾಸೀನ ಮಾಡುವುದಿಲ್ಲ. ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ. ಕನ್ನಡಿಗರು ವಿಶಾಲ ಹೃದಯದವರು. ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡಲು ಹಿಂಜರಿಯುವ ಸ್ಥಿತಿ ಆತಂಕಕಾರಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡತನ ಬಿಟ್ಟುಕೊಡಬಾರದು. ಹಿಂದೆ ಸಂಸ್ಕಾರ ಇತ್ತು, ಶಿಕ್ಷಣ ಇರಲಿಲ್ಲ. ಇಂದು ಶಿಕ್ಷಣ ಇದೆ; ಸಂಸ್ಕಾರ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇದಕ್ಕೆ ಕನ್ನಡಿಗರು ಅವಕಾಶ ನೀಡಬಾರದು. ಅನೇಕ ಸಾಹಿತಿಗಳು, ದಾರ್ಶನಿಕರನ್ನು ನೀಡಿದ ಹಾವೇರಿ ನೆಲದ ಹಿರಿಮೆ ಅನನ್ಯ. ಇಲ್ಲಿ ಆಯೋಜಿತ ಪುಸ್ತಕ ಮೇಳದಲ್ಲಿ ಪ್ರತಿಯೊಬ್ಬರೂ ಒಂದು ಪುಸ್ತಕ ಖರೀದಿಸಿ ಓದಬೇಕು. ವಿಶೇಷ ಗೋಷ್ಠಿಗಳಲ್ಲಿ ಅರ್ಥಪೂರ್ಣ ಚರ್ಚೆಯಾಗುವ ವಿಶ್ವಾಸ ಇದೆ.
| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ
ನೆರೆಯ ಪ್ರಾಂತದವರು ಅಖಂಡ ಭಾರತದ ಪರಿಕಲ್ಪನೆ ಮರೆತು ವರ್ತಿಸುತ್ತಿರುವುದು ಹಾಗೂ ಕನ್ನಡಿಗರಲ್ಲಿನ ಆಂಗ್ಲ ಭಾಷೆಯ ವ್ಯಾಮೋಹವು ಕನ್ನಡ ಜನತೆಯ ಮುಂದಿರುವ ಕುತ್ತುಗಳು. ಮಹಾರಾಷ್ಟ್ರವು ಕರ್ನಾಟಕದ ಪ್ರಾಂತಗಳನ್ನು ಕೇಳುತ್ತಿರುವುದು ಬಿಕ್ಕಟ್ಟಿನ ವಿಷಯ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ರಾಜ್ಯದಲ್ಲಿ ಕನ್ನಡದ ಶಾಲೆಗಳು ಕಡಿಮೆಯಾಗುತ್ತಿವೆ. ರಾಜಕೀಯ, ಸಾಹಿತ್ಯ ಹಾಗೂ ಕನ್ನಡ ಸಮುದಾಯದ ಅಭಿಮಾನದ ಶಕ್ತಿಗಳನ್ನು ಹೊಂದಿದ ಹಾವೇರಿಯ ಈ ಸಮ್ಮೇಳನ ಅಪೂರ್ವವಾಗಿದೆ. ಕಲಬುರಗಿಯಲ್ಲಿ ನಡೆದ 85ನೇ ಸಮ್ಮೇಳನದಲ್ಲಾದ ನಾಡು-ನುಡಿಯ ಚರ್ಚೆ ಇಲ್ಲಿಯೂ ಮುಂದುವರಿಯುತ್ತಿರುವುದು ಕನ್ನಡದ ಬೆಳವಣಿಗೆ ದೃಷ್ಟಿಯಿಂದ ಉತ್ತಮ. ಕನ್ನಡ ಸಾಹಿತ್ಯ ಎಂದರೆ ಕೆಲವೇ ಸಾಹಿತಿಗಳ ಹೆಸರುಗಳು ಕೇಳಿಬರುತ್ತಿದ್ದವು. ಇತ್ತೀಚೆಗೆ ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಕನ್ನಡದ ಅಪರೂಪದ ಕೃತಿಗಳು ಇಂಗ್ಲಿಷ್​ಗೆ ಅನುವಾದಗೊಳ್ಳುತ್ತಿವೆ. ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಿನಿಮಾ, ನಾಟಕ, ಸಂಗೀತ, ಯಕ್ಷಗಾನ ಕರ್ನಾಟಕದಲ್ಲಿ ಪ್ರಬಲಗೊಳ್ಳುತ್ತಿವೆ. ಇತ್ತೀಚೆಗೆ ಕನ್ನಡದ ಸಿನಿಮಾವೊಂದು (ಕಾಂತಾರ) ಜಾಗತಿಕ ಗಮನ ಸೆಳೆಯಿತು.
| ಎಚ್.ಎಸ್. ವೆಂಕಟೇಶಮೂರ್ತಿ ಸಾಹಿತಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ
ಸಹಸ್ರಾರು ಕನ್ನಡಿಗರು:ಸಮ್ಮೇಳನ ಆಯೋಜಿಸಿದ್ದ ಸ್ಥಳ ಕೊಂಚ ದೂರವೆನಿಸಿದರೂ, ಆಗಮಿಸುವ ಕನ್ನಡಾಭಿಮಾನಿಗಳಿಗೆ ಕೊರತೆ ಆಗಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳು ಗಣ್ಯರ ಮಾತುಗಳಿಗೆ ಪ್ರತಿಕ್ರಿಯಿಸಿ ಹಾಕುತ್ತಿದ್ದ ಜೈಕಾರ, ಚಪ್ಪಾಳೆ ಆಸಕ್ತಿ, ಕನ್ನಡ ಪ್ರೀತಿಯನ್ನು ತೋರಿಸುತ್ತಿತ್ತು. ರೈತ ನಾಡಗೀತೆ ಹಾಡುವಾಗ ನೆರೆದಿದ್ದ ಜನ ಎದ್ದು ನಿಂತು ಗೌರವ ತೋರಿಸಿದ್ದರಿಂದ ಮುಖ್ಯಮಂತ್ರಿ ಆದಿಯಾಗಿ ವೇದಿಕೆಯಲ್ಲಿ ನೆರೆದವರೂ ಎದ್ದು ನಿಂತು ಗೌರವಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು.
ಸಾಗರ:ಕೊಡಗಿನಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾಡಿನ ಹೆಸರಾಂತ ಸಾಹಿತಿ ಡಾ. ನಾ.ಡಿಸೋಜ ಅವರಿಗೆ ಪಾಸ್ ಇಲ್ಲ ಎಂಬ ಕಾರಣಕ್ಕೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವಿಐಪಿ ಪ್ರವೇಶ ದ್ವಾರದಲ್ಲಿ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದು, ಊರಿಗೆ ವಾಪಸ್ ಮರಳಿದ್ದಾರೆ. ‘ಭಾರಿ ಜನಸ್ತೋಮವಿದ್ದ ಕಾರಣ ಸಾಮಾನ್ಯ ಪ್ರವೇಶ ದ್ವಾರದ ಮೂಲಕ ಸಮ್ಮೇಳನಕ್ಕೆ ತೆರಳಲು ಸಾಧ್ಯವಾಗಲಿಲ್ಲ. ವಿಐಪಿ ಪ್ರವೇಶ ದ್ವಾರದಲ್ಲಿ ಪಾಸ್ ಇಲ್ಲದ ಕಾರಣ ಒಳಗೆ ಬಿಡಲಿಲ್ಲ, ಹೀಗಾಗಿ ವಾಪಸ್ ಬಂದೆ. ಇದಕ್ಕೆ ಅಷ್ಟೊಂದು ಮಹತ್ವ ಕೊಡುವುದು ಬೇಡ’ ಎಂದು ನಾ. ಡಿಸೋಜ ‘ವಿಜಯವಾಣಿ’ಗೆ ತಿಳಿಸಿದರು.
ಭರಪೂರ ಸೌಲಭ್ಯ:ಹಾವೇರಿ ಮುಖ್ಯಮಂತ್ರಿ ಗಳ ತವರು ಜಿಲ್ಲೆಯಲ್ಲೇ ಆಗಿದ್ದರಿಂದ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ಮುತು ವರ್ಜಿ ವಹಿಸಿದ್ದಲ್ಲದೆ 20 ಕೋಟಿ ರೂ. ಭರಪೂರ ಅನುದಾನವನ್ನೂ ನೀಡಿದ್ದರಿಂದ ಸಮ್ಮೇಳನದಲ್ಲಿ ವಿಜೃಂಭಣೆ, ಸೌಲಭ್ಯಕ್ಕೆ ಕೊರತೆ ಆಗಲಿಲ್ಲ. ಜರ್ಮನ್ ತಂತ್ರಜ್ಞಾನದ ಟೆಂಟ್ ಅಡಿಯಲ್ಲಿ ಕುಳಿತ ಕನ್ನಡಾಭಿಮಾನಿಗಳು ಸಂತೃಪ್ತಿ, ಸಮಾಧಾನದಿಂದ ಮಾತು ಆಲಿಸಿದರು.
ರಾಜಕಾರಣಿಗಳ ಅಬ್ಬರ ಇಲ್ಲ:ರಾಯಚೂರಿನಲ್ಲಿ ನಡೆದ ಸಮ್ಮೇಳನದಲ್ಲಿ ವೇದಿಕೆಯಲ್ಲಿ ಜನಪ್ರತಿನಿಧಿಗಳ, ರಾಜಕಾರಣಿಗಳ ಅಬ್ಬರ ಕಂಡು, ಇಲ್ಲಿ ರಾಜಕಾರಣಿಗಳು ಅಪೇಕ್ಷಿತರೂ ಅಲ್ಲ, ಅವರ ಶಂಖ ಊದುವ ವೇದಿಕೆಯೂ ಅಲ್ಲ ಎಂದು ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದರು. ಹಾಗೆ ಹೋಲಿಸಿದಾಗ ಹಾವೇರಿಯ ಸಮ್ಮೇಳನದಲ್ಲಿ ರಾಜಕೀಯದ ಅಬ್ಬರ ಕಾಣಲಿಲ್ಲ. ವೇದಿಕೆಯಲ್ಲಿ ಅನಗತ್ಯ ತಿರುಗಾಡುವವರು, ಊಟದಲ್ಲಿ ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಸಮ್ಮೇಳನದಲ್ಲಿ ಕನ್ನಡ ಕಲರವ ಜೋರಾಗಿಯೇ ಇದೆ.
ವಿಜಯವಾಣಿ ಸುದ್ದಿಜಾಲ, ಕನಕ-ಶರೀಫ-ಸರ್ವಜ್ಞ ವೇದಿಕೆ, ಹಾವೇರಿ
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ನೀಡುವ ಕಾನೂನನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ‘ಕನ್ನಡಕ್ಕೆ ಹತ್ತು ಹಲವು ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶಗಳಲ್ಲೊಂದು. ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸುವ ಐತಿಹಾಸಿಕ ತೀರ್ವನವನ್ನು ಸರ್ಕಾರ ತೆಗೆದುಕೊಂಡಿದೆ. ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಕಾಯ್ದೆಯನ್ನು ಈಗಾಗಲೇ ಉಭಯ ಸದನಗಳಲ್ಲಿ ಮಂಡಿಸಲಾಗಿದೆ. ಕಾನೂನು ಆಯೋಗ ಈ ಕಾಯಿದೆಗೆ ಅಂತಿಮ ಸ್ವರೂಪ ಕೊಡುತ್ತಿದೆ. ಕಾಯಿದೆ ಕುರಿತು ಅಂತಿಮ ಚರ್ಚೆಯಾದ ನಂತರ ಅನುಷ್ಠಾನವಾಗಲಿದೆ. ಗಡಿನಾಡ ಅಭಿವೃದ್ಧಿಗೂ ಕ್ರಮಕೈಗೊಂಡಿದ್ದೇವೆ. ಆ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧ ಎಂದು ಸಿಎಂ ಭರವಸೆ ನೀಡಿದರು.
ಕನ್ನಡಿಗರ ಸಮಗ್ರ ಅಭಿವೖದ್ಧಿಗೆ ಬದ್ಧ:ಗಡಿನಾಡು, ಒಳನಾಡು ಮತ್ತು ಹೊರನಾಡು ಕನ್ನಡಿಗರ ಸಮಗ್ರ ಅಭಿವೖದ್ಧಿಗೆ ಸರ್ಕಾರ ಬದ್ಧ ಎನ್ನುವ ದಿಕ್ಸೂಚಿ ನುಡಿಗಳನ್ನಾಡಿದ ಸಿಎಂ, ಗಡಿ ಶಾಲೆಗಳ ಅಭಿವೃದ್ಧಿ ಜತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಸಹ ನಮ್ಮ ಜತೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಹೊರನಾಡ ಕನ್ನಡಿಗರ ರಕ್ಷಣೆ ನಮ್ಮ ಕರ್ತವ್ಯ. ನಾಡಿನ ಕುರಿತು ಸಮ್ಮೇಳನ ತೆಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರ ಚಾಚೂತಪ್ಪದೆ ಜಾರಿಗೆ ತರುವ ಕೆಲಸ ಮಾಡುತ್ತದೆ. ಇದರ ಬಗ್ಗೆ ಅನುಮಾನ ಬೇಡ ಎಂದು ಸ್ಪಷ್ಟ ಭರವಸೆ ನೀಡಿದರು.
ಕನ್ನಡ ಶ್ರೇಷ್ಠ ಮತ್ತು ಪ್ರಾಚೀನ ಪರಂಪರೆ ಇರುವ ಸಂಸ್ಕೃತಿ. ಅಂತಃಸ್ಸತ್ವ ,ಬದುಕುವ ತತ್ವ ಹೇಳಿಕೊಟ್ಟಿದ್ದು ಈ ನಾಡಿನ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ. ಪೀಳಿಗೆಯಿಂದ ಪೀಳಿಗೆಗೆ ಸಾಹಿತ್ಯವು ಹರಿಯುತ್ತಿರಬೇಕು. ಕನ್ನಡದ ಭಾಷಾ ಸೊಗಡೇ ಒಂದು ಸೊಗಸು ಎಂದರು. ಕೃಷಿಕರು ಮತ್ತು ಕೃಷಿ ಯೋಜನೆ ಹಾಗೂ ಕರ್ನಾಟಕ ಏಕೀಕರಣಕ್ಕೆ ಸಮರ್ಪಿಸಿ ಕೊಂಡ ಹೋರಾಟಗಾರರನ್ನು ಸ್ಮರಿಸಿದರು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ, ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾದ ಸುನಿಲ ಕುಮಾರ, ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ರಾದ ನೆಹರೂ ಒಲೇಕಾರ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಸಲೀಂ ಅಹಮ್ಮದ, ಎಸ್.ವಿ.ಸಂಕನೂರು ಸೇರಿ ಅನೇಕ ಗಣ್ಯರು ಇದ್ದರು.
ಹೆಸರಿನಂತೆಯೇ ದೊಡ್ಡವರು:ದೊಡ್ಡರಂಗೇಗೌಡರು ಪರಿಪೂರ್ಣ ಸಾಹಿತಿ. ಮಾರ್ವಿುಕ ಪದಗಳ ಮೂಲಕ ಜಸಾಮಾನ್ಯರಿಗೆ ತಿಳಿಹೇಳುತ್ತಾರೆ. ಹೆಸರಿನಂತೆ ದೊಡ್ಡ ಹೃದಯ, ಎಲ್ಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.
ನೀರಾವರಿ ದಶಕ:ರಾಜ್ಯ ಸರ್ಕಾರ 1.50 ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಿದೆ. ಮುಂದಿನ ದಶಕ ನೀರಾವರಿ ದಶಕ ಆಗಿರಲಿದೆ ಹಾಗೂ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಕಲ ಪ್ರಯತ್ನ ಮಾಡಲಾಗುವುದು. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಇದರಿಂದ ಕೃಷಿ ವಲಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಾವೇರಿ:ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಭರ್ಜರಿ ಭೋಜನ ಸವಿದರು. ಮೊದಲನೇ ದಿನ ಶುಕ್ರವಾರ ಉತ್ತರ ಕರ್ನಾಟಕದ ಸ್ಪೆಷಲ್ ಶೇಂಗಾ ಹೋಳಿಗೆ, ಚಪಾತಿ, ಬದನೆಕಾಯಿ ಪಲ್ಲೆ, ಹೆಸರುಕಾಳು ಪಲ್ಲೆ, ಪಲಾವು ಹಾಗೂ ಅನ್ನ-ಸಾಂಬಾರ ಬಡಿಸಲಾಯಿತು. ಬೆಳಗ್ಗೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಸ್ತಾಗಿದ್ದ ಜನತೆ ರುಚಿಯಾದ ಭೋಜನ ಸವಿದು ಸಂತೃಪ್ತರಾದರು.
ಊಟಕ್ಕಾಗಿ ಸಾರ್ವಜನಿಕರಿಗೆ, ಗಣ್ಯ ವ್ಯಕ್ತಿಗಳಿಗೆ, ಅತಿ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಊಟ ಆರಂಭವಾದ ಕೆಲ ಸಮಯದಲ್ಲಿ ಸಾರ್ವಜನಿಕರು ಗಣ್ಯ ವ್ಯಕ್ತಿಗಳ ಕೌಂಟರ್​ಗಳಿಗೆ ನುಗ್ಗಿ ಊಟ ಮಾಡುವಂತಾಯಿತು. ಇದರಿಂದ ಕೆಲ ಕಾಲ ನುಕುನೂಗ್ಗಲು ಉಂಟಾಯಿತು. ಕೆಲವರು ಸಮ್ಮೇಳನ ಉದ್ಘಾಟನೆ ಬಳಿಕ ಮುಖ್ಯ ವೇದಿಕೆಯಲ್ಲಿ ಭಾಷಣ ಶುರುವಾಗುತ್ತಿದ್ದಂತೆ ನೇರವಾಗಿ ಊಟದ ಕೌಂಟರ್ ಬಳಿ ತೆರಳಿ ಸರತಿ ಸಾಲಿನಲ್ಲಿ ನಿಲ್ಲತೊಡಗಿದರು. ಕೆಲವರು ತಟ್ಟೆಗಾಗಿ ನೂಕಾಟ ನಡೆಸಿದರು. ಬೆಳಗ್ಗಿನ ಉಪಾಹಾರಕ್ಕೆ ಶಿರಾ, ಉಪ್ಪಿಟ್ಟು ನೀಡಲಾಯಿತು. ರಾತ್ರಿ ಹೆಸರುಬೇಳೆ ಪಾಯಸ, ಪುಳಿಒಗ್ಗರಣೆ, ಸಾಂಬಾರ ನೀಡಲಾಗಿತ್ತು.
ಇಂದು ಬಿರಂಜಿ:ಜ. 7ರಂದು ಬೆಳಗ್ಗಿನ ಉಪಾಹಾರಕ್ಕೆ ರವೆ ಉಂಡಿ, ವೆಜಿಟೇಬಲ್ ಪಲಾವ್, ಚಹಾ, ಮಧ್ಯಾಹ್ನದ ಊಟಕ್ಕೆ ರಾಣೆಬೆನ್ನೂರಿನ ಸ್ಪೆಷಲ್ ಬಿರಂಜಿ ರೈಸ್, ಮಾದ್ಲಿ, ಲಡಕಿ ಪಾಕ್, ಮಿಕ್ಸ್ ವೆಜಿಟೇಬಲ್, ಚಪಾತಿ, ಅನ್ನ-ಸಾಂಬಾರ ಹಾಗೂ ರಾತ್ರಿ ಊಟಕ್ಕೆ ಶಾವಗಿ ಪಾಯಸ, ಬಿಸಿಬೇಳೆ ಬಾತ್, ಅನ್ನಸಾಂಬಾರ ಮೆನು ಸಿದ್ಧಪಡಿಸಲಾಗಿದೆ.
ತಡವಾಗಿ ಬಂದ ಮುಖ್ಯಮಂತ್ರಿ:ಇದುವರೆಗೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮುಂದೆ ಜಾನಪದ ಕಲಾತಂಡಗಳು ಇರುತ್ತಿದ್ದವು. ಈ ಬಾರಿ ಸಮ್ಮೇಳನಾಧ್ಯಕ್ಷರ ಹಿಂದೆ ಜಾನಪದ ಕಲಾತಂಡಗಳು ಇವೆಯಲ್ಲ ಎಂದು ಜನರು ಮಾತನಾಡಿಕೊಳ್ಳಲು ಆರಂಭಿಸಿದರು. ಸಮಯ ಉಳಿತಾಯ, ನಿಗದಿತ ಕಾರ್ಯಕ್ರಮ ಮುಂದುವರಿಸಬೇಕೆಂಬ ಉದ್ದೇಶದಿಂದ ಸಮ್ಮೇಳನಾಧ್ಯಕ್ಷರು ಬಹುಬೇಗ ಮುಂದೆ ಬಂದು ಮುಖ್ಯ ವೇದಿಕೆ ತಲುಪಿದರು ಎನ್ನುವುದು ಅಧಿಕಾರಿಗಳ ಸಮಜಾಯಿಷಿ. ಈ ಘಟನೆಯಿಂದ ಕಲಾ ತಂಡಗಳು ಉತ್ಸವ ಮೂರ್ತಿ ಇಲ್ಲದೇ ಉತ್ಸಾಹ ಕಳೆದುಕೊಂಡಂತೆ ಕಂಡುಬಂತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಗದಿತ ಸಮಯಕ್ಕೆ ಬರಬಹುದೆಂಬ ನಿರೀಕ್ಷೆ ಇತ್ತು. ಬಹುಬೇಗ ಮುಖ್ಯ ವೇದಿಕೆಗೆ ಕರೆ ತರಲಾಗಿತ್ತು. ಆದರೂ ಮುಖ್ಯಮಂತ್ರಿಗಳು ತಡವಾಗಿ ಆಗಮಿಸಿದರು.
ಅದ್ದೂರಿ ಮೆರವಣಿಗೆಗೆ ಸಾಂಸ್ಕೃತಿಕ ರಂಗು:ಅಲಂಕೃತ ಸಾರೋಟಿನಲ್ಲಿ ಕುಳಿತಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರು, ಮೆರವಣಿಗೆಯುದ್ದಕ್ಕೂ ಜನಸ್ತೋಮದತ್ತ ಕೈಬೀಸಿ ನಮಿಸುತ್ತ ಹೋದಂತೆ ಕನ್ನಡ ಮನಸುಗಳು ಕುಣಿದಾಡಿದವು. ಅಧ್ಯಕ್ಷರ ಸಾರೋಟು ಮುಂದೆ ಮುಂದೆ ಸಾಗುತ್ತಿದ್ದರೆ, ಕಂಸಾಳೆ, ಕೀಲು ಕುದುರೆ, ವೀರಗಾಸೆ, ಚಿಲಿಪಿಲಿ ಗೊಂಬೆ ಸೇರಿದಂತೆ ನೂರಾರು ಪ್ರಕಾರದ ಕಲಾ ತಂಡಗಳು ಮೆರವಣಿಗೆಗೆ ಸಾಂಸ್ಕೃತಿಕ ವೈಭವದ ಮೆರುಗು ನೀಡಿದವು. ಕೊಂಬುಕಹಳೆ, ತಮಟೆ, ಡೊಳ್ಳು, ಹಲಗೆಯ ನಾದ ಕೇಳುಗರನ್ನು ಮಂತ್ರಮುಗ್ಧಗೊಳಿಸಿದವು. -ಇವು ಏಲಕ್ಕಿ ನಾಡಿನಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆತ ಮೆರವಣಿಗೆಯ ಕ್ಷಣಗಳು. ತಾಯಿ ಭುವನೇಶ್ವರಿ ಮೂರ್ತಿಗೆ ದೊಡ್ಡರಂಗೇಗೌಡರು ನಮಿಸಿದ ನಂತರ ಮೆರವಣಿಗೆ ಆರಂಭವಾಯಿತು. ಪುರಸಿದ್ದೇಶ್ವರ ದೇವಸ್ಥಾನ ಎದುರಿನಿಂದ ಗಾಂಧಿವೃತ್ತ, ಮೈಲಾರ ಮಹಾದೇವ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಹಳೆಯ ಪಿಬಿ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯು ಮುಖ್ಯ ವೇದಿಕೆ ತಲುಪಲು ಮೂರೂವರೆ ಗಂಟೆ ಹಿಡಿಯಿತು. ದಾರಿಯುದ್ದಕ್ಕೂ ಜನರು ಮೆರವಣಿಗೆಯ ಸಂಭ್ರಮವನ್ನು ಕಣ್ತುಂಬಿಕೊಂಡರು. ಕಲಾವಿದರು, ಅಧಿಕಾರಿಗಳು, ಸ್ವಯಂ ಸೇವಕರಿಗೆ ಜನರು ಕುಡಿಯುವ ನೀರು, ಚಹಾ ನೀಡಿದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಚಪ್ಪಾಳೆ ತಟ್ಟಿ ಕಲಾವಿದರನ್ನು ಹುರಿದುಂಬಿಸಿದರು.
ವಿಜಯವಾಣಿ ಟೀಮ್: ಪ್ರಕಾಶ ಶೇಟ್, ವಿಲಾಸ ಮೇಲಗಿರಿ, ಮರಿದೇವ ಹೂಗಾರ, ಬಸವರಾಜ ಇದ್ಲಿ, ಮಂಜುನಾಥ ಅಂಗಡಿ, ಕೇಶವಮೂರ್ತಿ ವಿ.ಬಿ., ಕರಿಯಪ್ಪ ಅರಳಿಕಟ್ಟಿ, ಶಿವಾನಂದ ಹಿರೇಮಠ, ಗುರು ಭಾಂಡಗೆ, ರಾಘವೇಂದ್ರ ಸಿ.
ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದಾಗಲೇ ಡಾಕ್ಟರ್​ಗೆ ಹೃದಯಾಘಾತ; ಕುಸಿದುಬಿದ್ದು 30 ವರ್ಷದ ವೈದ್ಯರ ಸಾವು

ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seven =
Remember me
