ವಿದೇಶಗಳಲ್ಲಿ ಕಸಾಪ ಘಟಕಗಳ ಸ್ಥಾಪನೆ:ಕನ್ನಡದ ಕಂಪು ಪಸರಿಸಲು ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಘಟಕಗಳು ಸ್ಥಾಪನೆಯಾಗಲಿವೆ. ಸದ್ಯ ಐರೋಪ್ಯ ದೇಶಗಳಲ್ಲಿ ಘಟಕಗಳ ಆರಂಭಕ್ಕೆ ತಯಾರಿ ನಡೆದಿದೆ. ಮುಂದಿನ ವರ್ಷದೊಳಗೆ ಹೆಚ್ಚು ಕನ್ನಡಿಗರು ನೆಲೆಸಿರುವ ದೇಶಗಳಲ್ಲಿ ಕಸಾಪ ಘಟಕಗಳು ಆರಂಭವಾಗಲಿವೆ. ಸ್ವೀಡನ್ ದೇಶದ ಶಾಲೆಯೊಂದರಲ್ಲಿ 7 ಕನ್ನಡ ವಿದ್ಯಾರ್ಥಿಗಳಿದ್ದರೆ ಕನ್ನಡ ಕಲಿಸುವ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇತರ ದೇಶಗಳ ಶಾಲೆಗಳಲ್ಲೂ ಕನ್ನಡ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ನೇಮಿಸಲಾಗುವುದು. ಶಿಕ್ಷಕರಿಗೆ ಪರಿಷತ್ತಿನಿಂದ ಪ್ರಮಾಣಪತ್ರ ನೀಡಲಾಗುವುದು. ವಿದೇಶಗಳಲ್ಲಿರುವ ಮಕ್ಕಳಿಗೆ ಆನ್​ಲೈನ್​ನಲ್ಲಿ ಕನ್ನಡ ಕಲಿಸಲು ಯೋಜನೆ ರೂಪಿಸಲಾಗಿದೆ. ಇವರಿಗಾಗಿಯೇ ವಿಶೇಷ ಪಠ್ಯಕ್ರಮ ರಚಿಸಿ ಪರೀಕ್ಷೆ ನಡೆಸಲಾಗುವುದು. ಅಲ್ಲಿನ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಕಸಾಪ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗ ಪಡೆಯಲಾಗುವುದು.
ಮುಸ್ಲಿಂ ಸಮುದಾಯದ 11 ಮಂದಿಗೆ ಆಹ್ವಾನ:ಸಮ್ಮೇಳನದಲ್ಲಿ ಒಂದು ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ, ಹಿಂದಿನ ಸಮ್ಮೇಳನಗಳಿಗಿಂತ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಆ ಸಮುದಾಯದ 11 ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಹಿಂದೆ ಕಡಿಮೆ ಅವಕಾಶವಿದ್ದರೂ ಯಾರೂ ಧ್ವನಿ ಎತ್ತಿರಲಿಲ್ಲ. ಇದು ಕನ್ನಡದ ಸಮ್ಮೇಳನ. ಧರ್ವಧಾರಿತ, ಜಾತಿ ಆಧಾರಿತ ಸಮ್ಮೇಳನವಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪರಿಷತ್ತು ಪ್ರಾರಂಭವಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಶರೀಫರ ಹೆಸರು ಇಡಲಾಗಿದೆ.
ಸುಗ್ರೀವಾಜ್ಞೆ ಮೂಲಕ ಜಾರಿಗೆ ಬರಲಿ:ಇದು ಕನ್ನಡದ ಹಬ್ಬವಾದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಶಿಷ್ಟಾಚಾರ ಎಂಬ ಮಾತು ಬರುವುದಿಲ್ಲ. ಎಲ್ಲ ಕನ್ನಡಿಗರು ಸಮಾನರು. ‘ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ’ ಜಾರಿಯಾದರೆ ಶಿಕ್ಷಣ, ವ್ಯಾಪಾರ, ವಾಣಿಜ್ಯ, ಕಾನೂನು, ಉದ್ಯೋಗ ಮತ್ತು ಫಲಕಗಳಲ್ಲಿ ಕನ್ನಡ ಇನ್ನಷ್ಟು ರಾರಾಜಿಸಲಿದೆ. ಸರ್ಕಾರ ಕೂಡಲೇ ಸುಗ್ರಿವಾಜ್ಞೆ ಮೂಲಕ ಇದನ್ನು ಜಾರಿಗೆ ತರಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ರಕ್ಷಿಸುವುದಕ್ಕೆ ಇದರಿಂದ ಬಲ ಸಿಗಲಿದೆ.
ಯುವಜನತೆ, ಮಹಿಳೆ, ಕೃಷಿ, ಮಕ್ಕಳಿಗೆ ಆದ್ಯತೆ:ಸಮ್ಮೇಳನದಲ್ಲಿ ಯುವಕರು, ಮಕ್ಕಳು, ರೈತರು ಮತ್ತು ಮಹಿಳೆಯರಿಗಾಗಿ ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಭಾಷಣಕ್ಕೆ 45 ನಿಮಿಷ ನೀಡಲಾಗಿದೆ. ಸಮ್ಮೇಳನಾಧ್ಯಕ್ಷರು ಎಲ್ಲ ಕಾರ್ಯಕಾರಿಣಿ ಸಮಿತಿಗೆ ವಿಶೇಷ ಆಹ್ವಾನಿತರಾಗಿರುತ್ತಾರೆ. ಸಮ್ಮೇಳನ ನಡೆದ ನಂತರ ಒಂದು ವರ್ಷದವರೆಗೆ ಇವರು ನೀಡಲಿರುವ ಸಲಹೆ, ಸೂಚನೆಗಳನ್ನು ಕನ್ನಡದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು.
ವಿದೇಶಿ ಕನ್ನಡಿಗರಿಗೆ ಆಹ್ವಾನ:ಸಮ್ಮೇಳನದಲ್ಲಿ ಮೊಟ್ಟ ಮೊದಲ ಬಾರಿಗೆ ‘ವಿದೇಶದಲ್ಲಿ ಕನ್ನಡ ಡಿಂಡಿಮ’ ಗೋಷ್ಠಿ ಏರ್ಪಡಿಸಲಾಗಿದೆ. ಫರ್ಡಿನೆಂಡ್ ಕಿಟ್ಟೆಲ್ ಅವರ ಮರಿ ಮೊಮ್ಮಗ ಯಾರ್ಕ್ ಕಿಟ್ಟೆಲ್, ಅನಿವಾಸಿ ಕನ್ನಡಿಗರಾದ ನಂದಿನಿ ನಾರಾಯಣ್ ಮತ್ತು ಕನ್ನಡತಿ ಭಾಗೀರಥಿ ಅವರನ್ನು ಸನ್ಮಾನಿಸಲಾಗುತ್ತಿದೆ. ವಿದೇಶಗಳಲ್ಲಿ ಇವರು ಕನ್ನಡವನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜರ್ಮನಿ, ಆಸ್ಟ್ರೇಲಿಯಾ, ದುಬೈ, ಅಮೆರಿಕ, ಶ್ರೀಲಂಕಾ, ಇಂಗ್ಲೆಂಡ್, ಸ್ವೀಡನ್ ಸೇರಿ ಇತರ ದೇಶಗಳಲ್ಲಿ ಕನ್ನಡ ಕಲಿಸುತ್ತಿರುವವರನ್ನು ಗುರುತಿಸಲಾಗುತ್ತಿದೆ.
ನಾನು ಕನ್ನಡ ಪಂಥದವನು:ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ. ಮಾಧ್ಯಮದಲ್ಲಿ 30 ವರ್ಷ ಕಾಲ ಸೇವೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷದವರೂ ನನಗೆ ಪರಿಚಯ. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎಲ್ಲ ಪಕ್ಷಗಳ ರಾಜಕೀಯ ನಾಯಕರಿದ್ದಾರೆ. ನಾನು ಎಡ-ಬಲ ಪಂಥದವನಲ್ಲ. ಮೇಲು, ಕೆಳಗಡೆ ಮತ್ತು ಮಧ್ಯಮ ಪಂಥದವನೂ ಅಲ್ಲ. ನಾನು ಕನ್ನಡ ಪಂಥದವನು.
ಮಹಾಜನ್ ವರದಿಯೇ ಅಂತಿಮ:ಸಮ್ಮೇಳನದಲ್ಲಿ ‘ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು’ ಕುರಿತು ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ಮಹಾಜನ್ ವರದಿಯೇ ಅಂತಿಮ. ಶೇ. 2 ಮಂದಿ ಮಾತ್ರ ಅನಗತ್ಯವಾಗಿ ಉಭಯ ರಾಜ್ಯಗಳ ಗಡಿ ವಿವಾದವನ್ನು ಜೀವಂತವಾಗಿಡಲು ಬಯಸುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಜನರು ಸೌಹಾರ್ದದಿಂದ ಜೀವಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಕೆಲವರು ಗಡಿ ವಿವಾದ ಕೆದಕುತ್ತಿದ್ದಾರೆ ಅಷ್ಟೇ.
ಚಿತ್ರರಂಗದಲ್ಲಿ ನಾನು ಆಶುಕವಿ:ತಪ್ಪಸ್ಸಿನ ರೀತಿಯಲ್ಲಿ ಬರವಣಿಗೆಯನ್ನು ಮಾಡಿದ್ದೇನೆ. ಕವಿತೆಗಳ ರಚನೆ, ನಾಟಕ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದೇನೆ. ಸಿನಿಮಾ ನಿರ್ದೇಶನ ಕೂಡ ಮಾಡಿದ್ದೇನೆ. ಮೇಲ್ಮನೆ ಸದಸ್ಯನಾಗಿದ್ದೆ. ಅವಕಾಶಗಳು ದೊರೆತಾಗ ಕೊಟ್ಟ ಕೆಲಸವನ್ನು ಕೈಂಕರ್ಯ ಎಂದು ಭಾವಿಸಿ ನಿರ್ವಹಿಸಿದ್ದೇನೆ. ಚಿತ್ರರಂಗದಲ್ಲಿ ಇಂದಿಗೂ ನನ್ನನ್ನು ‘ಆಶು ಕವಿ’ ಎಂದೇ ಕರೆಯುತ್ತಾರೆ. ಇಷ್ಟೆಲ್ಲಾ ಕೆಲಸಗಳಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟಿದ್ದು ಕಾವ್ಯ ರಚನೆ. ಹಾಗಾಗಿಯೇ ನನ್ನ ಮೊದಲ ಪ್ರೀತಿ ಕವಿತೆ, ನಂತರದ ಪ್ರೀತಿ ಹೆಂಡತಿ ಎಂದು ಯಾವಾಗಲೂ ಹೇಳುತ್ತಿರುತ್ತೇನೆ. ‘ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚೆಲುವೆ …’ ಎಂಬ ಜನಪ್ರಿಯ ಗೀತೆ ಮಧ್ಯಾಹ್ನದ ಭೋಜನ ವಿರಾಮದಲ್ಲಿ ನಾನು ಬರೆದಿದ್ದು. ಇದು ನನ್ನ ರಚನೆಗಳಲ್ಲೇ ಅತ್ಯಂತ ಇಷ್ಟಪಡುವ ಕವಿತೆಯಾಗಿದೆ.
ಒಂದಂಗುಲ ನೆಲವನ್ನೂ ಬಿಡೆವು:ಸಮ್ಮೇಳನ ಉದ್ದೇಶಿಸಿ ಕನ್ನಡ- ಕರ್ನಾಟಕ – ಕನ್ನಡಿಗರು ವಿಚಾರವಾಗಿ 48 ಪುಟಗಳ ಭಾಷಣದಲ್ಲಿ ರ್ಚಚಿಸಿದ್ದೇನೆ. ಒಂದಂಗುಲ ನೆಲವನ್ನೂ ಮರಾಠಿಗರಿಗೆ ಬಿಟ್ಟು ಕೊಡುವುದಿಲ್ಲ. ‘ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್…’ ಎಂಬ ಸಾಲುಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ಕಾಸರಗೋಡು ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಕುರಿತು ರ್ಚಚಿಸಿ ಕನ್ನಡ ಅಧ್ಯಾಪಕರ ನೇಮಕಕ್ಕೆ ಒತ್ತಾಯಿಸಿದ್ದೇನೆ. ಮಹಾಜನ್ ವರದಿ ಪ್ರಸ್ತಾಪಿಸಿದ್ದೇನೆ. ಚಲನಚಿತ್ರರಂಗದ ಬಗ್ಗೆಯೂ ರ್ಚಚಿಸಿದ್ದೇನೆ.
ಬರಹಗಾರ ಒಂದು ವಲಯಕ್ಕೆ ಸೀಮಿತವಾಗಬಾರದು:ಸಮಕಾಲೀನ ಸಾಹಿತ್ಯ ಸರಿಯಾದ ದಾರಿಯಲ್ಲಿಯೇ ಇದೆ. ಒಬ್ಬ ಡಾ. ಎಸ್.ಎಲ್. ಬೈರಪ್ಪ ಇಡೀ ನಮ್ಮ ಕನ್ನಡ ಸಾಹಿತ್ಯವನ್ನು ಭಾರತೀಯ ಸಾಹಿತ್ಯವನ್ನಾಗಿ ಮಾಡಿದವರು. ಅವರ ಕೃತಿಗಳು ಹಿಂದಿ, ಇಂಗ್ಲಿಷ್ ಸೇರಿ ಹಲವು ಭಾಷೆಗಳಿಗೆ ಅನುವಾದ ಆಗುವ ಮೂಲಕ ಇಡೀ ಜಗತ್ತಿಗೆ ಅವರು ಪರಿಚಿತರಾಗಿದ್ದಾರೆ. ಆ ತರಹದ ಲೇಖಕ ಯಾವುದೇ ಗಡಿ, ಭಾಷೆಯ ಕಕ್ಷೆಯಲ್ಲಿ ಇರಬಾರದು. ಅವರು ಅಂಬರದಷ್ಟು ವಿಶಾಲ, ಧರಿತ್ರಿಯಷ್ಟು ವಿಸ್ತಾರ ಹಾಗೂ ಹಿಮಾಲಯದಷ್ಟು ಎತ್ತರದ ಭಾವನೆ ಹೊಂದಿರಬೇಕು. ಅಂತಹ ವಸ್ತು ಆಯ್ಕೆ ಮಾಡಿಕೊಂಡು ಅದರ ನಿರ್ವಹಣೆ ಮಾಡಬೇಕು.
ಮಹಿಳೆಯರಿಂದ ಉತ್ತಮ ಕೃತಿ ರಚನೆ:ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರಿಂದ ಅತ್ಯುತ್ತಮ ರಚನೆಗಳನ್ನು ಕಾಣಬಹುದಾಗಿದೆ. ಶತಶತಮಾನಗಳಿಂದ ತುಳಿತಕ್ಕೆ ಒಳಗಾದವರಲ್ಲಿ ದಲಿತರಷ್ಟೇ ಅಲ್ಲ ಮಹಿಳೆಯರೂ ಅದಕ್ಕೆ ಹೊರತಾಗಿಲ್ಲ. ಆದರೆ, ಇಂದು ಸಾಹಿತ್ಯಿಕವಾಗಿ ಮೈಚಳಿ ಬಿಟ್ಟು ಬರೆಯುತ್ತಿದ್ದಾರೆ. ಎದೆಗೆ ನಾಲ್ಕು ಅಕ್ಷರ ಬಿದ್ದ ಮೇಲೆ ಆಗಿರುವ ದೊಡ್ಡ ಪರಿವರ್ತನೆ ಇದು. 70ರ ದಶಕದಲ್ಲಿ 12-14 ಪುಸ್ತಕಗಳು ಪ್ರಕಟವಾಗುತ್ತಿದ್ದವು. ಇಂದು ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಅಪಾಯ ಏನು ಎಂದರೆ ಸಾಮಾಜಿಕ ಜಾಲತಾಣದಿಂದ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ರಂಗೇಗೌಡರ ಚುಟುಕು ಕದ್ದು, ಹೆಸರು ಬದಲಿಸಿ ಅವರಿಗೇ ಕಳುಹಿಸು ವವರಿದ್ದಾರೆ!
ನಲವತ್ತೇಳು ಪ್ರಗಾಥಗಳ ದಾಖಲೆ:ಗ್ರೀಕ್​ನ ಎಪಿಕ್ ಥಿಯೇಟರ್​ನಿಂದ ಬಂದದ್ದು ‘ಓಡ್’ (ಪ್ರಗಾಥ). ನನಗೆ ಸಂಗೀತ ಇಷ್ಟ ಆಗಿರುವುದರಿಂದ ಓಡ್ ಬರೆಯಲು ಪ್ರಾರಂಭಿಸಿದೆ. ನಾನು 47 ಪ್ರಗಾಥ ಬರೆದಿದ್ದೇನೆ. ಅದನ್ನು ಆಕ್ಸ್​ಫರ್ಡ್ ವಿವಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಿಸಿದೆ.
ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
