ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆಯ (ಐಎಫ್​ಎಸ್) ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆಯಲ್ಲಿ ಐವರು ಕನ್ನಡಿಗರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸಿ.ಕೆ. ಯೋಗೀಶ್ 14ನೇ ರ್ಯಾಂಕ್ ಗಳಿಸಿದ್ದರೆ, ಸಚಿನ್ ಹನುಮಪ್ಪ ನಡಗಡ್ಡಿ-17ನೇ ರ್ಯಾಂಕ್, ಮನು ಅಶೋಕ್ ಭಟ್-26, ಕೆ.ಬಿ. ಅಮಿತ-43, ದಿಗಂತ್ ನಾಯಕ್ 55ನೇ ರ್ಯಾಂಕ್ ಪಡೆದಿದ್ದಾರೆ.
ಈ ಹುದ್ದೆಗಳ ನೇಮಕಾತಿಗಾಗಿ 2019ರ ಡಿಸೆಂಬರ್​ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಖಾಲಿಯಿದ್ದ 90 ಸ್ಥಾನಗಳ ಪೈಕಿ 88 ಜನರ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಇದಲ್ಲದೇ, ಇನ್ನು 20 ಜನರ ಆಯ್ಕೆಯನ್ನು ಪ್ರಾತಿನಿಧಿಕ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ಯುಪಿಎಸ್​ಸಿ ತಿಳಿಸಿದೆ. ವಿವರಗಳಿಗೆ ಡಿಡಿಡಿ.ಟಠ್ಚ.ಜಟಡ.ಜ್ಞಿ ಸಂರ್ಪಸಬಹುದು.
ತಹಸೀಲ್ದಾರ್ ಹುದ್ದೆಗೆ ತಣಿಯಲಿಲ್ಲ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೌಳಗಾಲದವರು ಯೋಗೀಶ್. ತಂದೆ ಕೃಷ್ಣೇಗೌಡ, ತಾಯಿ ಗೌರಮ್ಮ ಕೃಷಿಕರು. ಯೋಗೀಶ್ ಬೆಂಗಳೂರಿನ ಆರ್​ವಿ ಇಂಜಿನಿಯರಿಂಗ್ ಕಾಲೇಜ್ ಬಿಇ ಎಲೆಕ್ಟ್ರಾನಿಕ್ಸ್​ನಲ್ಲಿ ಪದವಿ ಪೂರೈಸಿದ್ದಾರೆ. ಇವರು ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿ ಎಂಬುದು ವಿಶೇಷ. ಭಾರತೀಯ ಅರಣ್ಯ ಸೇವೆಗೆ ಅರಣ್ಯಶಾಸ್ತ್ರ ಹಾಗೂ ಭೂಗರ್ಭಶಾಸ್ತ್ರ ಐಚ್ಛಿಕ ವಿಷಯವಾಗಿ ತೆಗೆದುಕೊಂಡು 14ನೇ ರ್ಯಾಂಕ್​ನೊಂದಿಗೆ ಎರಡನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ ಕೆಎಎಸ್ ಪರೀಕ್ಷೆಯಲ್ಲಿ ಇವರಿಗೆ ತಹಸೀಲ್ದಾರ್ ಹುದ್ದೆ ದೊರಕಿದೆ. ಆದರೆ, ಮುಖ್ಯ ಗುರಿ ಐಎಎಸ್ ಪಾಸಾಗುವುದಾಗಿದೆ.
ಐಎಎಸ್ ಎಂದರೆ ಎಲ್ಲೆಡೆ ಗೌರವ ಜಾಸ್ತಿ. ಡಿಸಿಗೆ ಇರುವ ಗೌರವ ನೋಡಿ ಬಾಲ್ಯದಲ್ಲೇ ನಾನೂ ಉನ್ನತ ಹುದ್ದೆಗೇರಬೇಕೆಂಬ ಆಸೆ ಚಿಗುರೊಡೆದಿತ್ತು. ಐಎಫ್​ಎಸ್ ಸಿಕ್ಕಿರುವುದಕ್ಕೆ ಖುಷಿ ಇದೆ. ನಮ್ಮ ರಾಜ್ಯದಲ್ಲೇ ಹುದ್ದೆ ಸಿಗುವ ಅವಕಾಶ ಇದೆ. ಅರಣ್ಯ ರಕ್ಷಣೆ, ವನ್ಯಜೀವಿ ರಕ್ಷಣೆ, ಕೃಷಿ ಅರಣ್ಯ ರಕ್ಷಣೆ. ರೈತರ, ಬಡವರ ಅಭಿವೃದ್ಧಿ ನನ್ನ ಪ್ರಮುಖ ಆದ್ಯತೆ.
| ಸಿ.ಕೆ. ಯೋಗೀಶ್
ಛಲಕ್ಕೆ ಮಣಿದ ಫಲಿತಾಂಶ
ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವ್ಯಾಸಂಗ ಮಾಡಿರುವ ಅಮಿತಾ ಮೂಲತಃ ಶಿವಮೊಗ್ಗದವರು. ತಂದೆ ಬಸಪ್ಪ ಕೃಷಿ ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ತಾಯಿ ಪ್ರಭಾವತಿ ಗೃಹಿಣಿ. ಅಮಿತಾ ಈ ಮೊದಲು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. 6 ನೇ ಪ್ರಯತ್ನದಲ್ಲಿ ಅರಣ್ಯ ಸೇವೆ ಪಾಸಾಗಿದ್ದಾರೆ.
ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ನೋಡಿದ್ದೇನೆ. ಅವರಲ್ಲಿನ್ನೂ ಪ್ರಗತಿಯಾಗಬೇಕಾದುದು ಸಾಕಷ್ಟಿದೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ ಅವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಯೋಜನೆ, ಹೊಸ ಪರಿಕಲ್ಪನೆ, ನನ್ನದೇ ಆದ ಯೋಜನೆಗಳನ್ನು ರೂಪಿಸಬೇಕೆಂಬ ಗುರಿ ಇದೆ.
| ಕೆ.ಬಿ. ಅಮಿತಾ
ಪಶ್ಚಿಮ ಘಟ್ಟಗಳ ಸಾಂಗತ್ಯವೇ ಸ್ಪೂರ್ತಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಮನು ಅಶೋಕ್ ಭಟ್ 4ನೇ ಪ್ರಯತ್ನದಲ್ಲಿ ಐಎಫ್​ಎಸ್ ಪಾಸಾಗಿದ್ದಾರೆ. 10ನೇ ತರಗತಿವರೆಗೆ ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. 11 ಮತ್ತು 12 ನೇ ತರಗತಿ ಹೈದರಾಬಾದ್​ನ ನಾರಾಯಣ ಕಾಲೇಜಿನಲ್ಲಿ ಕಲಿತಿದ್ದಾರೆ. ಐಐಟಿ ಖರಗ್​ಪುರದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ರೈಲ್ವೆಯಲ್ಲಿ ಮೆಕಾನಿಕಲ್ ಸರ್ವೀಸ್​ನ ಉನ್ನತಾಧಿಕಾರಿಯಾಗಿದ್ದಾರೆ. ತಂದೆ ಎಲ್​ಐಸಿ ಅಭಿವೃದ್ಧಿ ಅಧಿಕಾರಿ. ತಾಯಿ ವಿಮಾ ಕಂಪನಿ ಉದ್ಯೋಗಿ. ಪರಿಸರ, ಹವಾಮಾನ ಸಮತೋಲನ ಸಾಧಿಸಲು, ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅವಕಾಶಗಳೂ ಇವೆ. ಅಷ್ಟೇ ಸವಾಲುಗಳೂ ಇವೆ. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕೆಂಬ ಗುರಿ ನನ್ನದಾಗಿದೆ ಎನ್ನುತ್ತಾರೆ ಮನು.
ಎರಡನೇ ಪ್ರಯತ್ನಕ್ಕೆ ಗೆಲುವು
ದಿಗಂತ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ತಂದೆ ಹಾಗೂ ತಾಯಿ ವಾಣಿಜ್ಯ ತೆರಿಗೆ ಇಲಾಖೆಯ ನೌಕರರು. ಸಹೋದರಿ ಖಾಸಗಿ ಕಂಪನಿಯ ಉದ್ಯೋಗಿ. ಪ್ರೌಢಶಿಕ್ಷಣದವರೆಗೂ ಮಂಗಳೂರಿನ ಸೇಂಟ್ ಅಲೋಷಿಯಸ್ ಶಾಲೆಯಲ್ಲಿ ಪೂರೈಸಿ ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದರು. ನಂತರ 2 ವರ್ಷ ಅಧ್ಯಯನ ಸಿದ್ಧತೆ ನಡೆಸಿದರು. ಈ ನಡುವೆ ಕಾರ್ವಿುಕ ಇಲಾಖೆಯ ಎನ್​ಫೋರ್ಸ್​ವೆುಂಟ್ ಆಫೀಸರ್ ಪರೀಕ್ಷೆಯಲ್ಲಿ ಪಾಸಾಗಿ ಹುದ್ದೆಗೆ ನೇಮಕಗೊಂಡರು. ಎರಡೂವರೆ ವರ್ಷದಿಂದ ಬೆಂಗಳೂರಿನ ಕಾರ್ವಿುಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಸೇವೆ ಹುದ್ದೆಗೆ ಇದು ಎರಡನೇ ಪ್ರಯತ್ನ. ಐಎಎಸ್ ಪರೀಕ್ಷೆಗೆ ಐದನೇ ಪ್ರಯತ್ನದಲ್ಲಿದ್ದಾರೆ.
ಫಾರೆಸ್ಟ್ ಸರ್ವೀಸ್​ನಲ್ಲಿ ತುಂಬಾ ಮುಖ್ಯವಾದ ಅಂಶವೆಂದರೆ ಐಚ್ಛಿಕ ವಿಷಯ. ಕಳೆದ ಬಾರಿ ಕೇವಲ ನೋಟ್ಸ್ ರೆಫರ್ ಮಾಡಿದೆ. ಈ ಸಲ ಆ ತಪು್ಪ ಮಾಡದೆ ನೋಟ್ಸ್ ಜತೆಜತೆಗೆ ಅಧ್ಯಯನ ಸಾಮಗ್ರಿ, ಪುಸ್ತಕಗಳನ್ನು ಸಂಗ್ರಹಿಸಿ ಓದಿದೆ. ಒಂದು ಪ್ರಯತ್ನದಿಂದ ಮತ್ತೊಂದು ಪ್ರಯತ್ನಕ್ಕೆ ಸುಧಾರಣೆ ಹೆಜ್ಜೆ ಇಟ್ಟೆ. ಅಂತಿಮವಾಗಿ ಯಶಸ್ಸು ಕಂಡೆ. ಬುಡಕಟ್ಟು ಜನಾಂಗದವರ, ಹಿಂದುಳಿದ ವರ್ಗದ ಅಭಿವೃದ್ಧಿ ನನ್ನ ಕನಸು.
| ದಿಗಂತ್ ನಾಯಕ್

ಶಿವಲೀಲಾ ಎಸ್. ಪೂಜಾರ್
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:ten − ten =
Remember me
