ಬೆಂಗಳೂರು:ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 4 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡುವುದು ಸೇರಿ ಆರು ಬೇಡಿಕೆಗಳನ್ನು ಬಿ.ಎಸ್. ಯಡಿಯೂರಪ್ಪ ಸರ್ಕಾರ ಕೇಂದ್ರದ ಮುಂದಿಟ್ಟಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯದ ಪರವಾಗಿ ಭಾಗವಹಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ರಾಜ್ಯದ 12 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ತೀವ್ರ ನಷ್ಟ ಉಂಟಾಗಿದೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೊಷಿಸಿ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದ ಕಾರಣ ಸಂವಾದದಲ್ಲಿ ಭಾಗವಹಿಸಿರಲಿಲ್ಲ.
ಸತತ ಮಳೆಯಿಂದಾಗಿ ರಾಜ್ಯದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ, ರಾಯಚೂರು ಜಿಲ್ಲೆಗಳ 56 ತಾಲೂಕುಗಳ 885 ಗ್ರಾಮಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿ ಪ್ರಕಾರ 3 ಸಾವಿರ ಮನೆಗಳು, 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು, 3,500 ಕಿ.ಮೀ. ರಸ್ತೆ, 104 ಸಣ್ಣ ನೀರಾವರಿ ಕೆರೆಗಳು, ವಿದ್ಯುತ್ ಪರಿವರ್ತಕಗಳು, 394 ಕಟ್ಟಡಗಳಿಗೆ ಮತ್ತಿತರ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿರುವ ಕುರಿತು ಕೇಂದ್ರದ ಗಮನ ಸೆಳೆಯಲಾಯಿತು.
ವೀಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಶೇ.18 ಹೆಚ್ಚು ಮಳೆಯಾಗಿದೆ. ಕಳೆದ ವಾರದಿಂದೀಚೆಗೆ ಉತ್ತರ ಕರ್ನಾಟಕ, ಬೆಳಗಾವಿ, ರಾಯಚೂರು, ಮಡಿಕೇರಿ, ಕೊಡಗು ಸೇರಿ 12 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರಾಥಮಿಕ ಹಂತದಲ್ಲಿ 4 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಮಾಹಿತಿ ಜತೆಗೆ ಪ್ರವಾಹ ಪರಿಸ್ಥಿತಿಯಲ್ಲಿ ನಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಸವಿವರ ಮಾಹಿತಿಯನ್ನು ಪ್ರಧಾನಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಎಂದು ಪ್ರಧಾನ ಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಆರು ಸಿಎಂಗಳ ಜತೆ ಪ್ರಧಾನಿ ಸಭೆ:ಪ್ರವಾಹಕ್ಕೆ ಸಿಲುಕಿರುವ ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳದ ಸಿಎಂ ಭಾಗವಹಿಸಿದ್ದರು. ಪ್ರತಿವರ್ಷ ಉಂಟಾಗುತ್ತಿರುವ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ವಿಚಾರ ವಿನಿಮಯ ಆಗಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.
ನೀರು ಬಿಡುವಾಗ ಮಾಹಿತಿ ನೀಡಲು ಸೂಚನೆ:ಬೆಂಗಳೂರು: ಯಾವುದೇ ರಾಜ್ಯದ ಜಲಾಶಯಗಳಿಂದ ಹೆಚ್ಚುವರಿ ನೀರು ಹೊರಬಿಡುವ ತೀರ್ಮಾನ ತೆಗೆದುಕೊಂಡರೆ, ಆ ಬಗ್ಗೆ ನೀರು ಹರಿದು ಹೋಗುವ ನೆರೆ ರಾಜ್ಯಗಳಿಗೆ ಮೊದಲೇ ಮಾಹಿತಿ ನೀಡುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೇಳೂರಿನ ಎ. ಮಲ್ಲಿಕಾರ್ಜುನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಕೇಂದ್ರ ಕೇಂದ್ರ ಸರ್ಕಾರದ ಪರ ವಕೀಲರು ಮೆಮೋ ಜತೆಗೆ ಆದೇಶದ ಪ್ರತಿಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಜಲಾಶಯಗಳಿಂದ ಹೆಚ್ಚುವರಿ ನೀರು ಹರಿಸುವ ತೀರ್ಮಾನ ತೆಗೆದುಕೊಳ್ಳುವ ರಾಜ್ಯಗಳು ಆ ಬಗ್ಗೆ ನೀರು ಹರಿದು ಹೋಗುವ ರಾಜ್ಯಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕೆಂದು ಆ. 9ರಂದು ಕೇಂದ್ರದಿಂದ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.
500ಕ್ಕೂ ಹೆಚ್ಚು ಮನೆಗಳು ಮುಳುಗಡೆ:ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದ 600ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ದೋಣಿಗಳ ಮೂಲಕ ಕಾಳಜಿ ಕೇಂದ್ರಗಳಿಗೆ ಕರೆತರಲಾಗಿದೆ. ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಹೊನ್ನಾವರ ತಾಲೂಕಿನ ಗುಂಡಬಾಳ, ಬಾಸ್ಕೇರಿ, ಹೊಳೆಗಳು ಉಕ್ಕಿದ ಪರಿಣಾಮ 12 ಗ್ರಾಮಗಳ 500 ಕ್ಕೂ ಹೆಚ್ಚು ಮನೆಗಳು ಮುಳುಗಡೆ ಆಗಿವೆ.
ಬಿಡುವು ನೀಡಿದ ಮಳೆರಾಯ:ಮಲೆನಾಡಿನಲ್ಲಿ ಮಳೆರಾಯ ಬಿಡುವು ನೀಡಿದ್ದರಿಂದ ಸೋಮವಾರ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಘಟ್ಟ ಪ್ರದೇಶ, ಶರಾವತಿ ಕೊಳ್ಳದಲ್ಲಿ ಮಾತ್ರ ಮಳೆ ಮುಂದುವರಿದಿದೆ. ಉಳಿದ ಕಡೆ ಮೋಡ ಕವಿದ ವಾತಾವರಣವಿತ್ತಲ್ಲದೆ ಆಗಾಗ ತುಂತುರು ಮಳೆಯಾಗುತ್ತಿದೆ.
21 ಮನೆ ನೆಲಸಮ:ಆಶ್ಲೇಷ ಮಳೆ ಅಬ್ಬರ ಮುಂದುವರಿದಿದ್ದು ದಾವಣಗೆರೆ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದೀಚೆಗೆ 12.6 ಮಿಲಿ ಮೀಟರ್ ಮಳೆಯಾಗಿದೆ. 10 ಪಕ್ಕಾ ಹಾಗೂ 11 ಕಚ್ಚಾ ಮನೆಗಳು ಹಾನಿಗೊಳಗಾಗಿವೆ.
ಹದಿನಾಲ್ಕು ಎಕರೆ ಅರಣ್ಯಭೂಮಿ ಕುಸಿತ:ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಾಧಾರಣ ಮಳೆಯಾಗಿದ್ದು, ಸುಮಾರು 4 ಎಕರೆ ಅರಣ್ಯ ಭೂಮಿ ಕುಸಿದಿದೆ. ಇದು ಕುದುರೆಮುಖ ಮೀಸಲು ಅರಣ್ಯ ಪ್ರದೇಶವಾಗಿದ್ದು, ಸಾಕಷ್ಟು ಮರಗಳು ಧರೆಗುರುಳಿವೆ. ಈ ಪ್ರದೇಶದ ಕೆಳಭಾಗದಲ್ಲಿ ಮೂರು ಕಿ.ಮೀ. ಅಂತರದಲ್ಲಿ 60 ಮನೆಗಳಿವೆ. ನಿರಂತರ ಮಳೆಯಾದರೆ ಇನ್ನಷ್ಟು ಅಪಾಯದ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
