ಬೆಂಗಳೂರು:ಮಾಲ್​ಗಳು ಹಾಗೂ ವಾಣಿಜ್ಯ ಮಳಿಗೆಗಳ ಮುಂಭಾಗ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ಧ್ವಂಸಗೊಳಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಕೆಲವೆಡೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟ ಹಿನ್ನೆಲೆಯಲ್ಲಿ ಆತಂಕದ ಪರಿಸ್ಥಿತಿ ಉದ್ಭವಿಸಿತ್ತು.
ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಸಮೀಪದಿಂದ ಬೆಳಗ್ಗೆ ಬೃಹತ್ ಪ್ರತಿಭಟನಾ ಜಾಥಾ ಆರಂಭಿಸಿದರು. ಕಾಲ್ನಡಿಗೆ ಜಾಥಾ ಮುಂದುವರಿದಂತೆ ಪ್ರತಿಭಟನೆಯ ಕಾವು ಏರತೊಡಗಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೆಲ ಕಾಲ ಆತಂಕ ಉಂಟಾಯಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಕರವೇ ಮುಖಂಡರನ್ನು ಬಂಧಿಸಿ ಬಿಎಂಟಿಸಿ ಬಸ್​ಗಳಲ್ಲಿ ಕರೆತಂದು ತಹಬಂದಿಗೆ ತರುವಲ್ಲಿ ಸಫಲರಾದರು.
ಎಲ್ಲಿ ಏನಾಯ್ತು?:ಸಾದಹಳ್ಳಿ ಟೋಲ್ ಬಳಿ ಕರವೇ ಕಾರ್ಯಕರ್ತರು ಜಮಾವಣೆಗೊಂಡು ಅಲ್ಲಿಂದಲೇ ಆಂಗ್ಲ ನಾಮಫಲಕಗಳನ್ನು ಧ್ವಂಸ ಗೊಳಿಸಲು ಆರಂಭಿಸಿದರು. ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವೂ ಆಯಿತು. ಟೋಲ್ ಸಮೀಪದಲ್ಲಿನ ಅಂಗಡಿ, ಹೋಟೆಲ್​ಗಳ ಮುಂದಿದ್ದ ಆಂಗ್ಲ ಭಾಷೆಯ ನಾಮಫಲಕಗಳು ಧ್ವಂಸಗೊಂಡವು. ಯಲಹಂಕದ ಮಾಲ್ ಆಫ್ ಏಷ್ಯಾ ಮುಂಭಾಗ ಕರವೇ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ ತಳ್ಳಿ ಮಾಲ್​ಗೆ ನುಗ್ಗಲೆತ್ನಿಸಿ ದರು. ಈ ವೇಳೆ ಖಾಕಿ ಪಡೆ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಎಸಿಪಿ, 6 ಇನ್ಸ್ ಪೆಕ್ಟರ್, 12 ಸಬ್ ಇನ್ಸ್​ಪೆಕ್ಟರ್ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ಕರವೇ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಸಂಚಾರದಟ್ಟಣೆ:ಟ್ರ್ಯಕ್ಟರ್​ಗಳಲ್ಲಿ ಬ್ಯಾರಿಕೇಡ್ ತರಿಸಿದ ಪೊಲೀಸರು, ವಿಮಾನ ನಿಲ್ದಾಣದ ಟೋಲ್​ನಿಂದ 1 ಕಿ.ಮೀ ದೂರದವರೆಗೂ ಬಿಗಿ ಬಂದೋಬಸ್ತ್ ಏರ್ಪಡಿಸಿದರು. ವಿವಿಧ ಭಾಗದಿಂದ ಜಮಾವಣೆಗೊಂಡ ಕರವೇ ಕಾರ್ಯಕರ್ತರನ್ನು ನಿಯಂತ್ರಿಸಲು ಟೋಲ್ ಬಳಿ ಕೆಲ ಸಮಯ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಯಿತು. ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡು ವಾಹನ ಸವಾರರು ಪರದಾಡುವಂತಾಯಿತು. ವಿಮಾನ ನಿಲ್ದಾಣ ಸೇರಿ ಹೈದರಾಬಾದ್, ಬಳ್ಳಾರಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ಂದಾಗಿ ಗಂಟೆಗಟ್ಟಲೆ ಕಾಯುವಂತಾಯಿತು.
ಹಿಂಸೆಗೆ ತಿರುಗಲು ಪೊಲೀಸರೇ ಕಾರಣ:‘ಕನ್ನಡ ನಾಡಿನಲ್ಲಿನ ಕನ್ನಡಿಗರನ್ನು ಹಾಗೂ ಕನ್ನಡ ಭಾಷೆಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಕನ್ನಡದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಪ್ರತಿಭಟನೆ ಹಿಂಸೆಗೆ ತಿರುಗಲು ಪೊಲೀಸರೇ ಕಾರಣ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಕಿಡಿಕಾರಿದರು. ನಾವು ಶಾಂತಿಯುತಾಗಿ ಜಾಗೃತಿ ಮೂಡಿಸುವ ಆಂದೋಲನಕ್ಕೆ ಮುಂದಾಗಿದ್ದೆವು, ಆದರೆ ಪೊಲೀಸರ ವರ್ತನೆಯಿಂದಾಗಿ ಕಾರ್ಯಕರ್ತರು ರೊಚ್ಚಿಗೆದ್ದರು. 35 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಎಂದಿಗೂ ಹಿಂಸಾತ್ಮಕವಾಗಿ ವರ್ತಿಸಿಲ್ಲ, ಯಾರಿಗೂ ತೊಂದರೆ ನೀಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದಿವಾಲಗಳಾಗಿದ್ದು, ಅವರ ಪ್ರಚೋದನೆಯಿಂದಾಗಿ ಈ ರೀತಿ ವರ್ತಿಸಿದ್ದಾರೆ ಎಂದರು. ವಿಧಾನಸೌಧದಲ್ಲಿ ಕುಳಿತಿರುವ ರಣಹೇಡಿಗಳ ನಿರ್ಲಕ್ಷ್ಯದಿಂದಾಗಿ ಕನ್ನಡ ನಾಡಿನಲ್ಲೇ ನಾವು ಕನ್ನಡದ ಬಗ್ಗೆ ಹೋರಾಡಬೇಕಾದ ಸ್ಥಿತಿ ನಿರ್ವಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಉಳಿವಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ಕೊಟ್ಟ ಗಡುವು ಮುಗಿಯುವುದರ ಒಳಗೆ ಕ್ರಮ ತೆಗೆದುಕೊಂಡರೆ ಒಳ್ಳೆಯದು. ನಮ್ಮನ್ನು ಆಳುವ ಸರ್ಕಾರಗಳಿಗೆ ನಾಡಿನ ಬಗ್ಗೆ ಕಳಕಳಿ, ಅಭಿಮಾನ ಇಲ್ಲ ಎಂದು ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು
ಕನ್ನಡ ನಾಮಫಲಕಕ್ಕೆ ಪಾಲಿಕೆ ಗಡುವು:ರಾಜಧಾನಿಯಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಮಾಲ್​ಗಳು ಫೆ.28ರೊಳಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಬಿಬಿಎಂಪಿ ಗಡುವು ಕೊಟ್ಟಿದೆ. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು ಸೇರಿ ಒಟ್ಟು 1,400 ಕಿ.ಮೀ. ಉದ್ದವಿದೆ. ಈ ರಸ್ತೆಗಳಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಆ ಬಳಿಕವೂ ನಾಮಫಲಕಗಳಲ್ಲಿ ಶೇ.60 ಭಾಗ ಕನ್ನಡ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಲಾಗುವುದು. ಬಳಿಕ ಫೆ.28ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ವರದಿ ಸಲ್ಲಿಸುವಂತೆ ಆಯಾ ವಲಯ ಆಯುಕ್ತರಿಗೆ ಪಾಲಿಕೆ ಸೂಚಿಸಿದೆ. ಗಡುವಿನೊಳಗೆ ಕನ್ನಡ ನಾಮಫಲಕಗಳನ್ನು ಅಳವಡಿಸದ ಅಂಗಡಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಕನ್ನಡ ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು, ಪರವಾನಗಿ ರದ್ದುಗೊಳಿಸಲಾಗುವುದು. ಸೂಕ್ತವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.
ಕನ್ನಡ ಅವಗಣನೆ:ರಾಜಧಾನಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಬದಲು ಅನ್ಯಭಾಷೆಗೆ ಆದ್ಯತೆ ನೀಡಲಾಗಿದೆ. ಕೆಲವೆಡೆ ನೆಪಮಾತ್ರಕ್ಕೆ ಚಿಕ್ಕದ್ದಾಗಿದ್ದರೂ ತಪ್ಪಾಗಿ ಕನ್ನಡ ಅಕ್ಷರಗಳನ್ನು ನಮೂದಿಸಲಾಗಿದೆ. ನಾಮಫಲಕ ಅಳವಡಿಕೆ ವೇಳೆ 60:40 ಅನುಪಾತದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿ ಇರಬೇಕೆಂದು ಆದೇಶವಿದೆ. ಆದರೆ, ಬಹುತೇಕ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮಾಲೀಕರು ಈ ನಿಯಮ ಪಾಲಿಸಿಲ್ಲ. ಶೇ.60 ಪ್ರಮಾಣದ ದಪ್ಪ ಅಕ್ಷರಗಳಲ್ಲಿ ಕನ್ನಡ ಪದ ಬಳಕೆ ಹಾಗೂ ಶೇ.40 ಪ್ರಮಾಣದಲ್ಲಿ ಇತರೆ ಭಾಷೆ ಪದ ಬಳಕೆ ಮಾಡುವಂತೆ ಬಿಬಿಎಂಪಿ ಪದೆಪದೇ ಆದೇಶ ಹೊರಡಿಸುತ್ತಾ ಬರುತ್ತಿದೆ. ಆದರೆ, ಯಾರೂ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಪಾಲಿಕೆ ಮತ್ತೊಮ್ಮೆ ಫೆ.28ರೊಳಗೆ ಕನ್ನಡ ಫಲಕ ಅಳವಡಿಸುವಂತೆ ಗಡುವು ಕೊಟ್ಟಿದೆ. ಕೆಲ ನಾಮಫಲಕಗಳಲ್ಲಿ ಕನ್ನಡ ಪದ ಬಳಕೆ ಮಾಡಿದ್ದರೂ ಕಾಗುಣಿತ ದೋಷಗಳಿವೆ. ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಿ, ಉರ್ದು ಭಾಷೆಗಳಲ್ಲಿ ಸರಿಯಾದ ಪದ ಬಳಕೆ ಮಾಡಲಾಗಿದ್ದು, ಅದರ ತರ್ಜುಮೆಯಲ್ಲಿ ತಪು್ಪಗಳು ಎದ್ದು ಕಾಣಿಸುತ್ತದೆ.
ಕಠಿಣ ಕ್ರಮ ತೆಗೆದುಕೊಳ್ಳಬೇಡಿ:ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಸಂಬಂಧ ಬಿಬಿಎಂಪಿ ಹೊರಡಿಸಿರುವ ನಿರ್ದೇಶನವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಸ್ವಾಗತಿಸಿದೆ. ಕನ್ನಡದಲ್ಲಿ ನಾಮ ಫಲಕ ಅಳವಡಿಸಲು 2024ರ ಫೆ.28ರವರೆಗೆ ಗಡುವು ನೀಡಿದೆ. ಕಡಿಮೆ ಸಮಯಾವಕಾಶ ನೀಡಿದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದೆ. ಬಿಬಿಎಂಪಿ ಮತ್ತು ಸರ್ಕಾರದ ಆದೇಶವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದೀಗ, ಪಾಲಿಕೆ ಹೊರಡಿಸಿರುವ ಸೂಚನೆ ಪಾಲಿಸಲಾಗುವುದು. ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಿರುಕುಳ ನೀಡಬಾರದು ಎಂದು ಕೋರಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
