ಬೆಂಗಳೂರು:ತ್ರಿವಿಧ ದಾಸೋಹಕ್ಕೆ ಖ್ಯಾತಿ ಪಡೆದಿರುವ ಕಲ್ಪವೃಕ್ಷ ನಾಡು ತುಮಕೂರಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯು ‘ಕಾರ್ಗಿಲ್ ವಿಜಯ ದಿವಸ್’ ರಜತ ಸಂಭ್ರಮ ನಿಮಿತ್ತ ಸಂಘಟಿಸಿದ್ದ ವಾಕಥಾನ್ ಹಾಗೂ ಮಾಜಿ ಸೈನಿಕರ ಗೌರವಾರ್ಪಣೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ತುಮಕೂರು ಇತಿಹಾಸದಲ್ಲೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿ ವೃಂದ ಹಾಗೂ ಸಾರ್ವಜನಿಕರು ಭಾಗವಹಿಸಿ ರಾಷ್ಟ್ರಸೇವೆಗೆ ಕಟಿಬದ್ಧರಾಗುವ ಸಂಕಲ್ಪ ಕೈಗೊಂಡರು.
ದೇಶಸೇವೆಗಾಗಿ ಜೀವದ ಹಂಗು ತೊರೆದು ಹೋರಾಟ ಮಾಡುವ ಯೋಧರೇ ನಿಜವಾದ ಹೀರೋಗಳು. ಭಾರತೀಯ ಸೈನಿಕರಲ್ಲಿರುವ ಪರಾಕ್ರಮ, ಶೌರ್ಯ, ಕೆಚ್ಚೆದೆಯ ಸಾಮರ್ಥ್ಯ, ದೇಶಪ್ರೇಮ ಯುವಜನರಿಗೆ ಪ್ರೇರಣಾದಾಯಕ. ಇಂತಹ ಶಿಸ್ತುಬದ್ಧ ಜೀವನ ನಡೆಸುವ ಯೋಧರ ಗುಣಗಳನ್ನು ಮೈಗೂಡಿಸಿಕೊಂಡು ಭವಿಷ್ಯ ಭಾರತದ ನೇತಾರರಾಗಿ ಹೊರಹೊಮ್ಮಬೇಕು ಎಂಬ ಸಂದೇಶ ‘ಕಾರ್ಗಿಲ್ ವಿಜಯ ದಿವಸ್’ ಬೆಳ್ಳಿ ಹಬ್ಬವನ್ನು ಸ್ಮರಣೀಯಗೊಳಿಸಿತು.
ತುಮಕೂರಿನ ಸರ್ಕಾರಿ ಜೂನಿಯರ್ ಪಿಯು ಕಾಲೇಜು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ವಾಕಥಾನ್‌ನಲ್ಲಿ ಪಾಲ್ಗೊಳ್ಳಲು ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಯಂಪ್ರೇರಿತವಾಗಿ ಧಾವಿಸಿ ಬಂದಿದ್ದರು. ಪ್ಲೇಗ್ರೌಂಡ್ ಪೂರ್ತಿ ಆವರಿಸಿಕೊಳ್ಳುವ ರೀತಿ 20ಕ್ಕೂ ಹೆಚ್ಚಿನ ಕಾಲೇಜುಗ ಸಾವಿರಾರು ಸಂಖ್ಯೆಯ ವಿದ್ಯಾರ್ಥಿ ವೃಂದ ಶಿಸ್ತಾಗಿ ಸಾಲುಗಟ್ಟಿ ನಿಂತಿದ್ದರು. ಇವರೊಂದಿಗೆ 100ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಹಾಗೂ ಮಾಜಿ ಸೈನಿಕರು ಹುರುಪು ಕಳೆಗಟ್ಟಿತು. ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಯುವಜನ ಹುರುಪು ಕಂಡು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ತುಮಕೂರು ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮುಚ್ಚುಗೆ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಗಣ್ಯರು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಟ್ಟು ವಾಕಥಾನ್‌ಗೆ ಚಾಲನೆ ನೀಡಲಾಯಿತು.
ಮುಗಿಲುಮುಟ್ಟಿದ ಘೋಷಣೆ:
ಸುಮಾರು 3 ಕಿ.ಮೀ. ನಡಿಗೆ ವೇಳೆ ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ತ್ರಿವರ್ಣಧ್ವಜ ಹಿಡಿದು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಹಾಗೂ ಯೋಧರ ಕುರಿತು ಘೋಷಣೆಗಳನ್ನು ಮೊಳಗಿಸಿದರು ಯುವಜನರೊಂದಿಗೆ ಸಾರ್ವಜನಿಕರು ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು. ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿ ಜಾನಪದ ಕಲಾ ತಂಡಗಳು ವಾಕಥಾನ್‌ಗೆ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕರ್ನಲ್ ಜಿ.ಎಸ್.ಗುಜ್ರಾಲ್, ಕರ್ನಲ್ ನರೇಂದ್ರ ಭಂಡಾರಿ, ತುಮಕೂರು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಲಿಂಗಣ್ಣ, ತುಮಕೂರು ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ವಿಜಯವಾಣಿ ಸಂಪಾದಕ ಕೆ.ಎನ್, ಚನ್ನೇಗೌಡ, ಡಿಜಿಟಲ್ ವಿಭಾಗದ ಸಂಪಾದಕ ಸಿದ್ದು ಕಾಳೊಜಿ, ಜಾಹೀರಾತು ವಿಭಾಗದ ಉಪಾಧ್ಯಕ್ಷ ಕೆ.ಆರ್. ಅರುಣ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
ಕಳೆಗಟ್ಟಿದ ಸಾಂಸ್ಕೃತಿ ಕಾರ್ಯಕ್ರಮ:
ವಾಕಥಾನ್ ಬೆನ್ನಲ್ಲೇ ನಡೆದ ವೇದಿಕೆ ಸಮಾರಂಭ ದೇಶಭಕ್ತಿ ಉದ್ಧೀಪಿಸುವ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕ್ಯಾ. ನವೀನ್ ನಾಗಪ್ಪ ಅವರು ‘ಆಪರೇಷನ್ ವಿಜಯ್’ ಘಟನಾವಳಿಯನ್ನು ವಿವರವಾಗಿ ತಿಳಿಸಿದ್ದು ಸಾರ್ವಜನಿಕರು ರೋಮಾಂಚನಗೊಂಡರು. ನಿವೃತ್ತ ವಿಂಗ್ ಕಮಾಂಡರ್ ಪಿ.ಬಿ.ಶೆಟ್ಟಿ ಅವರು ಕೂಡ ಕಾರ್ಗಿಲ್ ಕದನದ ಬಗ್ಗೆ ತಿಳಿಸಿ ಯುವಜನರು ಸೇನೆ ಸೇರುವಂತೆ ಹುರಿದುಂಬಿಸಿದರು. ಮಾಜಿ ಸೈನಿಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಾವಾಲಯ ತಂಡ ದೇಶಭಕ್ತಿಯ ಗಾನ ಸುಧೆ ಹರಿಸಿದರೆ ನೀಲಾಲಯ ನೃತ್ಯ ತಂಡವು ಭರತನಾಟ್ಯದ ಮೂಲಕ ಭಾರತಾಂಬೆ ಮತ್ತು ಯೋಧರ ವೀರಗಾಥೆಯನ್ನು ಪ್ರಸ್ತುತಪಡಿಸಿತು. ಮಳೆಯ ಸಿಂಚನದ ಹೊರತಾಗಿಯೂ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ಧವಾಗಿ ವರ್ತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತ್ಯಾಗ, ಬಲಿದಾನದ ಮೂಲಕ ಭಾರತೀಯ ಯೋಧರ ಸಾಹಸಗಾಥೆ, ಶೌರ್ಯ ಮೆರೆದ ದಿನವನ್ನು ಆಚರಿಸಿ ದೇಶಕ್ಕಾಗಿ ಹುತಾತ್ಮರಾದ 527 ಮಂದಿಗೆ ನಮನ ಸಲ್ಲಿಸಿದ್ದರು.
ಕಾರ್ಗಿಲ್ ಯುದ್ಧ ಸೈನ್ಯ ಸೇರಲು ಯುವಜನರಿಗೆ ಪ್ರೇರಣೆ ನೀಡಿದೆ. ನಮ್ಮ ಹುತಾತ್ಮ ಯೋಧರ ಬಗ್ಗೆ ಹೆಮ್ಮೆಪಡುವ ಜತೆಗೆ ಅವರಂತೆ ದೇಶಸೇವೆ ಮಾಡಲು ಸದಾ ಸಿದ್ಧರಾಗಿರಬೇಕು. ಸೈನಿಕರಲ್ಲಿ ಶಿಸ್ತನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಎನ್ನನ್ನಾದರೂ ಸಾಧಿಸಬಹುದು.– ಪಿ.ಬಿ.ಶೆಟ್ಟಿ, ನಿವೃತ್ತ ವಿಂಗ್ ಕಮಾಂಡರ್ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕರು
ಇಂದಿನ ಯುವಜನರು ಯೋಧರ ರೀತಿ ಬೆಳವಣಿಗೆ ಹೊಂದಲು ಶಿಸ್ತುಬದ್ಧ ಜೀವನಶೈಲಿ, ಛಲ, ಗುರಿಯೆಡೆಗೆ ತಲುಪಲು ಸತತ ಪ್ರಯತ್ನ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಇವುಗಳನ್ನು ಮಂತ್ರವನ್ನಾಗಿ ಪಠಿಸಿದ್ದಲ್ಲಿ ಗುರಿ ತಲುಪಿ ಜೀವನ ಸಾರ್ಥಕತೆ ಹೊಂದಬೇಕು.– ಕ್ಯಾ.ನವೀನ್ ನಾಗಪ್ಪ, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
