ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅನುಮೋದನೆಗೊಂಡು ಟೆಂಡರ್ ಕರೆದ ಅನೇಕ ಕಾಮಗಾರಿಗಳನ್ನು ತಡೆಹಿಡಿದಿದ್ದು, ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಗುರುವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಶುರುವಾದಾಗ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಯಾವ ಯಾವ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ಹಣ ಬಿಡುಗಡೆ ಮಾಡಲಾಗಿತ್ತು ಎಂಬುದನ್ನು ಬಹಿರಂಗಪಡಿಸಿ ಅನೇಕ ಸದಸ್ಯರಿಗೆ ಅಚ್ಚರಿ ಮೂಡಿಸಿದರು.
ಅನೆಕ್ಷ್- ಸಿ ಅಡಿ 5,690 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಹಣಕಾಸು ಇಲಾಖೆ ಅನುಮತಿ ಪಡೆದೆ ಮಂಜೂರಾತಿ ನೀಡಲಾಗಿತ್ತು. ಆದರೂ ಆ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರಿದರು. ಆಗ ಮಾಜಿ ಸಚಿವ ಎಂ.ಬಿ.ಪಾಟೀಲ್, ಹಣಕಾಸು ಇಲಾಖೆ ಅನುಮತಿ ಪಡೆಯಲಾಗಿತ್ತು ಎಂದು ರೇವಣ್ಣ ಹೇಳುತ್ತಾರೆ. ಗೋವಿಂದ ಕಾರಜೋಳ ಹಣಕಾಸು ಇಲಾಖೆ ಅನುಮತಿ ಇಲ್ಲದ ಕಾರಣ ತಡೆ ಹಿಡಿಯಲಾಗಿದೆ ಎನ್ನುತ್ತಾರೆ. ಇಬ್ಬರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಸದನದಲ್ಲಿ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು. ಮಧ್ಯೆ ಪ್ರವೇಶಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನನ್ನ 14 ತಿಂಗಳ ಅಧಿಕಾರಾವಧಿಯಲ್ಲಿ ಆರ್ಥಿಕ ಇಲಾಖೆ ಅನುಮತಿ ಇಲ್ಲದೇ ಕಾಮಗಾರಿ ನಡೆಸಲು ಅನುಮತಿ ಕೊಟ್ಟಿಲ್ಲ ಎಂದರು.
ರಾಜೀನಾಮೆ ಸವಾಲು:ಈ ನಡುವೆ ಸಿಟ್ಟಿಗೆದ್ದ ಎಚ್.ಡಿ.ರೇವಣ್ಣ, ಸಚಿವ ಸಂಪುಟ ಒಪ್ಪಿಗೆ ಪಡೆದೇ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಲೋಪವಾಗಿರುವುದು ಸಾಬೀತಾದರೆ ಕ್ಷಮೆ ಕೇಳಲು ಸಿದ್ಧ. ರಾಜೀನಾಮೆಗೂ ಸಿದ್ಧ. ಸುಳ್ಳಾದರೆ ಸಚಿವರು ರಾಜೀನಾಮೆ ನೀಡುತ್ತಾರೆಯೇ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಲೋಕೋಪಯೋಗಿ ಇಲಾಖೆಯಲ್ಲಿ 59,112 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 36,000 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಕೆಲ ಕಾಮಗಾರಿಗಳು ಟೆಂಡರ್ ಇಲ್ಲದೆ ನಡೆದಿದೆ. ಪ್ರವಾಹದಿಂದ ಇಲಾಖೆಗೆ ಸೇರಿದ 7,021 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಜತೆಗೆ ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿತ್ತು. ಅದನ್ನು ಸರಿಪಡಿಸಲು ತಡೆಹಿಡಿಯಲಾಗಿದೆಯೇ ಹೊರತು ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗ ಕಾಂಗ್ರೆಸ್​ನ ಶಿವಾನಂದ ಪಾಟೀಲ, ಆರ್ಥಿಕ ಇಲಾಖೆ ಒಪ್ಪಿಗೆ ಇಲ್ಲದೆ ಟೆಂಡರ್ ಹೇಗೆ ಕರೆದರು. ನಮಗೂ ಆ ದಾರಿ ಹೇಳಿ ಕಲಿತುಕೊಳ್ಳುತ್ತೇವೆ. ನಾವು ಮಂತ್ರಿಗಳಾದಾಗ 5-10 ಕೋಟಿ ರೂ.ಗೂ ಹಣಕಾಸು ಇಲಾಖೆಯವರು ಸಮ್ಮತಿ ನೀಡುತ್ತಿರಲಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಎಚ್.ಕೆ.ಪಾಟೀಲ್, 10 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಕಾಮಗಾರಿ, ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯ. ಹಾಗಿದ್ದರೂ ಒಪ್ಪಿಗೆ ಇಲ್ಲದೇ ಕಾಮಗಾರಿ ನಡೆಸಿರುವುದು ಆಘಾತಕಾರಿ. ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಇದು ಗಂಭೀರ ಲೋಪವಾಗಿದ್ದು, ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲೆಲ್ಲಿ ತಾರತಮ್ಯವಾಗಿದೆ?: ಹೊಳೆನರಸೀಪುರ-280 ಕೋಟಿ ರೂ., ದೊಡ್ಡಬಳ್ಳಾಪುರ, ರಾಮನಗರ ಸೇರಿ ಕೆಲವು ಕಡೆ 200 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ಉತ್ತರ, ಕೆ.ಆರ್. ನಗರ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತಿತರ ಕ್ಷೇತ್ರಗಳಿಗೆ 3ರಿಂದ 30 ಕೋಟಿ ರೂ. ಮಾತ್ರ ಅನುದಾನ ನೀಡಲಾಗಿದೆ. ಇದು ಮೈತ್ರಿ ಸರ್ಕಾರದಲ್ಲಿ ಆಗಿರುವ ತಾರತಮ್ಯ ಎಂದು ಗೋವಿಂದ ಕಾರಜೋಳ ಸದನದ ಗಮನ ಸೆಳೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
