ಬೆಂಗಳೂರು:ದೈನಂದಿನ ಬದುಕಿಗೆ ಅಡೆತಡೆಯೊಡ್ಡಿದ ಸಮಸ್ಯೆಗಳ ಅನಾವರಣ… ಜನರ ಕಷ್ಟ-ಕಾರ್ಪಣ್ಯಗಳ ತ್ವರಿತ ನಿವಾರಣೆ… ನೆರವಿನಲ್ಲಿ ಔದಾರ್ಯ… ಇಂತಹ ಹಲವು ವಿಷಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಆಯೋಜಿಸಿದ್ದ ‘ಜನಸ್ಪಂದನ’ ಸಾಕ್ಷಿಯಾಯಿತು.
ಸಿಎಂ ಗೃಹ ಕಚೇರಿ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮಕ್ಕೆ ಜನಸಾಗರ ಹರಿದು ಬಂತು. ತಳಮಟ್ಟದಿಂದ ರಾಜ್ಯ ಹಂತದವರೆಗೂ ಆಡಳಿತ ಯಂತ್ರದ ಕಾರ್ಯಶೈಲಿಗೂ ಕೈಗನ್ನಡಿಯಾಯಿತು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಜಿಲ್ಲಾಮಟ್ಟದಲ್ಲಿ ಜನಸ್ಪಂದನ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಆಯೋಜಿಸಿದ ರಾಜ್ಯಮಟ್ಟದ ‘ಜನಸ್ಪಂದನ’ಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸಾಕ್ಷಿಯಾದರು. ಬೆಂಗಳೂರು ಆಸುಪಾಸಿನ ಜಿಲ್ಲೆಗಳಷ್ಟೇ ಅಲ್ಲದೆ ದೂರದ ಬೀದರ್, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಬೆಳಗಾವಿ, ಹಾವೇರಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳ ಜನರು ಆಗಮಿಸಿ ಕುಂದುಕೊರತೆಗಳನ್ನು ನಿವೇದಿಸಿಕೊಂಡರು.
ಮಧ್ಯಾಹ್ನದ ಊಟಕ್ಕೆ ಎದ್ದು ಹೋದರೆ ಸಾಲುಗಟ್ಟಿ ನಿಂತ ಜನರಲ್ಲಿ ಗೊಂದಲ, ಗಲಿಬಿಲಿ ಆಗಬಹುದು ಎಂದು ಅರಿತ ಸಿಎಂ, ಕುಳಿತಲ್ಲೇ ‘ರ್ವಂಗ್ ಲಂಚ್’ ಪೂರೈಸಿ, ಸಾರ್ವಜನಿಕರ ಅಹವಾಲು ಸಲ್ಲಿಕೆಗೆ ಅಡ್ಡಿಯಾಗದಂತೆ ನೋಡಿಕೊಂಡರು. ‘ಏನಯ್ಯಾ ಇಲ್ಲಿಯವರೆಗೆ ಬಂದೆ’ ಎಂಬ ಕಕ್ಕುಲಾತಿ ತುಂಬಿದ ಮಾತು, ಅಹವಾಲು ಹೇಳಿದ ನಂತರವೂ ನಿಂತವರಿಗೆ ‘ಆಯ್ತಮ್ಮಾ, ನಿಮ್ ಕೆಲ್ಸ ಮಾಡ್ತೀನಿ ನಡಿ’ ಎಂದು ಪ್ರೀತಿಯ ಗದರಿಕೆ ಮುಖೇನ ಬೇರೆಯವರಿಗೆ ಮನವಿ ಸಲ್ಲಿಸಲು ಅನುವು ಮಾಡಿಕೊಟ್ಟರು.
ಸ್ವಂತ ಊರಿನಲ್ಲಿ ಸ್ಥಾಪಿಸಿದ ಇಂದಿರಾ ಗಾಂಧಿ ಪ್ರತಿಮೆ ತೋರಿಸಲು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಸಬೇ ಕೆಂಬ ಅಥಣಿಯ ಅಶೋಕ್ ತಲವಾರ್ ಕೋರಿಕೆ, ಜಿಲ್ಲಾ ಸಮಿತಿಗೆ ಅಳಿಯನ ನೇಮಕಕ್ಕೆ ತಿ. ನರಸಿಪುರದ ಲಿಂಗಯ್ಯನ ಬೇಡಿಕೆ, ನಿಗಮ-ಮಂಡಳಿಯಲ್ಲಿ ಅವಕಾಶ ಕೊಡಿ ಎನ್ನುವ ಪಕ್ಷದ ಕಾರ್ಯಕರ್ತರ ಮನವಿಗಳೂ ತೂರಿಬಂದವು. ಸಾರ್ವಜನಿಕರ ಕುಂದು-ಕೊರತೆ ಸಲ್ಲಿಸುವುದಕ್ಕೆ ವೇದಿಕೆ ಇದಾಗಿದ್ದರೂ ವಿಚಿತ್ರ, ವಿಶಿಷ್ಟ ಬೇಡಿಕೆಗಳು ಮುಂದೆ ಬಂದಾಗ ಸಿದ್ದರಾಮಯ್ಯ ಸಹನೆ ಕಳೆದುಕೊಳ್ಳಲಿಲ್ಲ. ಆಯ್ತಪ್ಪ ನೋಡೋಣವೆಂದು ಗಟ್ಟಿ ಧ್ವನಿಯಲ್ಲಿ ಹೇಳಿ ಸಾಗಹಾಕಿದರು.
3,500ಕ್ಕೂ ಹೆಚ್ಚು ಅಹವಾಲುಗಳು
ನಾಡಿನ ದೊರೆತನಕ ದೂರಿತ್ತರೆ ತಳಮಟ್ಟದ ಅಧಿಕಾರಿಗಳು ವೇಗವಾಗಿ ಸ್ಪಂದಿಸುತ್ತಾರೆ, ಬೇಗ ತಮ್ಮ ಕೆಲಸ ಕೈಗೂಡುತ್ತದೆ ಎಂಬ ಜನರ ಬದಲಾಗದ ‘ಮನಸ್ಥಿತಿ’ ದೂರದ ಸಿಎಂ ಗೃಹ ಕಚೇರಿಯವರೆಗೂ ಅವರನ್ನು ಕರೆ ತಂದಿತ್ತು. ನಿರಂತರವಾಗಿ ಏಳು ತಾಸಿಗೂ ಹೆಚ್ಚು ಕಾಲ ನಡೆದ ಪೂರ್ಣಪ್ರಮಾಣದ ಜನತಾ ದರ್ಶನದಲ್ಲಿ 3,500ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿದ್ದು, ವೈಯಕ್ತಿಕ ಸಮಸ್ಯೆಗಳೇ ಸಿಂಹಪಾಲು ಇದ್ದವು. ಸಿಎಂ ಪರಿಹಾರ ನಿಧಿಯಡಿ ವೈದ್ಯಕೀಯ ವೆಚ್ಚದ ಭರಿಸಿಕೊಡಬೇಕೆಂಬ ಮನವಿಗಳು ಸೇರಿದ್ದವು. ವಸತಿ, ಪಡಿತರ ಚೀಟಿ, ಮಾಸಾಶನ, ನಿವೇಶನ ಮಂಜೂರು, ಜಮೀನು ಸರ್ವೆ, ಪೋಡಿ, ಖಾತಾ, ಬಗರ್​ಹುಕುಂ ಸಾಗುವಳಿಗೆ ಪಟ್ಟಾ, ಅನುಕಂಪದ ನೌಕರಿ, ಉದ್ಯೋಗದ ಮನವಿ ಇತ್ಯಾದಿ ತಾಲೂಕು, ಜಿಲ್ಲಾಮಟ್ಟದಲ್ಲಿ ಬಗೆಹರಿಯಬೇಕಾದ ಅರ್ಜಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದವು.
ಆನ್​ಲೈನ್​ನಲ್ಲೇ ಡಿಸಿಗಳಿಗೆ ಸಂಪರ್ಕ
ಅರ್ಜಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಸ್ಥಳದಲ್ಲಿದ್ದ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಆದ್ಯತೆಯ ಕ್ರಮಕ್ಕೆ ಸೂಚಿಸಿದರೆ, ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳಿಗೆ ಆನ್​ಲೈನ್​ನಲ್ಲೇ ಸಂರ್ಪಸಿ ಬಗೆಹರಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಬಳ್ಳಾರಿ ಜಿಲ್ಲೆಯ 10 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಪರಿಹಾರ ವಿತರಣೆಗೆ ಮುನ್ನವೇ ಜಮೀನು ಪಡೆದ ಉದ್ಯಮ ಕೆಲಸ ಆರಂಭಿಸಿದೆ ಎಂದು ರೈತರು ವ್ಯಕ್ತಪಡಿಸಿದ ಕಳವಳಕ್ಕೆ ಸಿದ್ದರಾಮಯ್ಯ ಸ್ಪಂದಿಸಿ, ಮಂಡಳಿ ಸಿಇಒ ಅವರನ್ನು ಕರೆದು ಕೂಡಲೇ ಪರಿಹಾರ ವಿತರಿಸಬೇಕು ಎಂದು ತಾಕೀತು ಮಾಡಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಫುಡ್ ಪಾರ್ಕ್​ನಲ್ಲಿ ಖರೀದಿಸಿದ ನಿವೇಶನಕ್ಕೆ ಹಣ ಪಾವತಿಸಿ ಏಳು ವರ್ಷ ಕಳೆದರೂ ಉದ್ಯಮಿ ಹೆಸರಿಗೆ ನೋಂದಣಿಯಾಗಿಲ್ಲ. ಈ ವಿಷಯ ತಿಳಿದ ಸಿಎಂ, ಕಲಬುರಗಿ ಜಿಲ್ಲಾಧಿಕಾರಿ ಸಹಿತ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ನಿವೇಶನ ನೋಂದಣಿಗೆ ನಿರ್ದೇಶಿಸಿದರು.
ಸ್ಥಳದಲ್ಲೇ ಪರಿಹಾರ
ಸಿಎಂ ಪರಿಹಾರ ನಿಧಿಯಡಿ ವೈದ್ಯಕೀಯ ವೆಚ್ಚ ಭರಿಸಲು ನೆರವು ಕೋರಿದ ಹಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿ, ಹೊಸ ಜೀವನ ಕಟ್ಟಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ಬೆಳಕಾದರು. ಗದಗ ನಿವಾಸಿ ಅಂಜಲಿ ಕುಂಬಾರ ಆರು ವರ್ಷದ ಮಗಳ ಹೃದಯದ ರಂಧ್ರ ಚಿಕಿತ್ಸೆಗೆ ಎರಡು ಲಕ್ಷ ರೂ. ಕಿಡ್ನಿ ಕಾಯಿಲೆ, ಅಂಗಾಂಗ ಸಮಸ್ಯೆ ಮತ್ತಿತರ ಕಾಯಿಲೆಗಳಿಗೆ ಕ್ರಮವಾಗಿ 30 ಸಾವಿರ ರೂ. ನಿಂದ ಐದು ಲಕ್ಷ ರೂ.ವರೆಗೆ ಪರಿಹಾರ ಮಂಜೂರು ಮಾಡಿ, ಅಹವಾಲು ಸಲ್ಲಿಸಿದವರಿಗೆ ಆತ್ಮಸ್ಥೈರ್ಯ ತುಂಬಿದರು. ಅನುಕಂಪದ ನೌಕರಿ, ಕೆಲಸದ ಅರ್ಜಿಗಳ ಬಗ್ಗೆ ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ನಿರ್ದಿಷ್ಟ ಕ್ರಮದ ಸೂಚನೆಯಿತ್ತರೆ, ಅಂಗವಿಕಲರ ತ್ರಿಚಕ್ರ ಸೈಕಲ್ ಬೇಡಿಕೆಯನ್ನು ಆದ್ಯತೆ ಮೇಲೆ ಈಡೇರಿಸಲು ನಿರ್ದೇಶಿಸಿದರು.
ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿಯಾಗಿದೆ. 40 ವರ್ಷಗಳಿಂದ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದು, ಸಾಗುವಳಿ ಚೀಟಿ ಕೊಟ್ಟಿಲ್ಲವೆಂದು ಚಿಕ್ಕಮಗಳೂರು ಜಿಲ್ಲೆಯ ಬಗರ್​ಹುಕುಂ ಸಾಗುವಳಿದಾರರು ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನು ಆನ್​ಲೈನ್​ನಲ್ಲಿ ಸಂರ್ಪಸಿದ ಸಿಎಂ ಸಿದ್ದರಾಮಯ್ಯ ಅಗತ್ಯ ಕ್ರಮವಹಿಸಲು ತಿಳಿಸಿದರು.
ತಂತ್ರಾಂಶ ಪೋರ್ಟಲ್ ಅನಾವರಣಜನಸ್ಪಂದನದಲ್ಲಿ ಸ್ವೀಕರಿಸಿದ ಅಹವಾಲುಗಳು ತಂತ್ರಾಂಶದಲ್ಲಿ ದಾಖಲಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನೇರವಾಗಿ ರವಾನೆಯಾಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವಿಲೇವಾರಿ, ಸಾಧ್ಯವಿಲ್ಲದವುಗಳಿಗೆ ಹಿಂಬರಹ ನೀಡುವುದಕ್ಕೂ ಅನುಕೂಲವಾಗಲಿದೆ.
ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ 2.3 ಹಾಗೂ ಜಿಲ್ಲೆಗಳ ಪ್ರಗತಿ ಪರಿಶೀಲನೆ ಕುರಿತಂತೆ ಡಿಐಎಸ್ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು. ಎಲ್ಲ ಇಲಾಖೆಗಳ ಒಂದು ಕೋಟಿ ರೂ.ಗಿಂತ ಹೆಚ್ಚಿನ ಕಾಮಗಾರಿಗಳ ಪ್ರಗತಿಯನ್ನು ನಿಯಮಬದ್ಧವಾಗಿ ಮೇಲ್ವಿಚಾರಣೆ, ಗುತ್ತಿಗೆ ನಿರ್ವಹಣೆ ಮಾಡ್ಯೂಲ್​ನಲ್ಲಿ ಡ್ಯಾಷ್​ಬೋರ್ಡ್​ನ್ನು ಇ-ಆಡಳಿತ ಅಭಿವೃದ್ಧಿಪಡಿಸಿದ್ದು, ಪೋರ್ಟಲ್ 2.0 ಮುಖೇನ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದ ಡಿಐಎಸ್ ತಂತ್ರಾಂಶ (http://districtincharge.karnataka.gov.in) ಮೂಲಕ ಎಲ್ಲ ಜಿಲ್ಲಾ ಉಸ್ತುವಾರಿ ಅಧಿಕಾರಿಗಳು ಆನ್​ಲೈನ್ ಮೂಲಕ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ, ಮಾರ್ಗದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
* ಕಾರ್ಯಾಂಗದ ಕಾರ್ಯಶೈಲಿಗೆ ಕೈಗನ್ನಡಿಯಾದ ಕಾರ್ಯಕ್ರಮ
* ಸಲ್ಲಿಕೆಯಾದ ಅಹವಾಲುಗಳ ಇತ್ಯರ್ಥಕ್ಕೆ 15 ದಿನಗಳ ಗಡುವು
* 3 ತಿಂಗಳ ಬಳಿಕ ಮತ್ತೆ ಜನಸ್ಪಂದನ, ಸಮಸ್ಯೆ ಮರುಕಳಿಸಿದರೆ ಕ್ರಮ
* ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಿ ಸಿಎಂ ಪರಿಹಾರ ನಿಧಿಗೆ ಒಟ್ಟು 25 ಕೋಟಿ ರೂ. ಬಿಡುಗಡೆ
* ಬಗೆಹರಿಸಲು ಅಸಾಧ್ಯವಾದ ಸಮಸ್ಯೆಗಳ ಬಗ್ಗೆ ಕಾರಣಗಳ ವಿವರ ಸಿಎಂ ಕಚೇರಿಗೆ ಒದಗಿಸಬೇಕು
* ಜಿಲ್ಲಾ ಸಚಿವರು ನಡೆಸಿದ ಜನಸ್ಪಂದನ ಕಾರ್ಯಕ್ರಮ ವರದಿ ಸಲ್ಲಿಸಲು ಎಲ್ಲ ಜಿಲ್ಲೆಗಳಿಗೆ ತಾಕೀತು
ಜಿಲ್ಲಾಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನ ವರೆಗೂ ಬರಕೂಡದು. ಜನರು ದುಡ್ಡು ಖರ್ಚು ಮಾಡಿಕೊಂಡು ಬೆಂಗಳೂರಿಗೆ ಬಂದರೆ ಅಧಿಕಾರಿಗಳ ವೈಫಲ್ಯವೆಂದೇ ಅರ್ಥ. ಜಿಲ್ಲಾಮಟ್ಟದ ಅಧಿಕಾರಿಗಳ ಇಂತಹ ವೈಫಲ್ಯ ಮರುಕಳಿಸಿದರೆ ಸಹಿಸುವುದಿಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಸಾರ್ವಜನಿಕರಿಗೆ ಅಚ್ಚುಕಟ್ಟು ವ್ಯವಸ್ಥೆಕುಂದು-ಕೊರತೆ ಹೇಳಿಕೊಳ್ಳಲು ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಬರುತ್ತಾರೆ ಎಂದು ಅಂದಾಜಿಸಿ ಸಿಎಂ ಕಚೇರಿಯು ‘ಜನಸ್ಪಂದನ’ಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ಜನರ ಸಾಲಾಗಿ ಬರಲು ಪ್ರತ್ಯೇಕ ವ್ಯವಸ್ಥೆ, ಅಹವಾಲು ಸ್ವೀಕರಿಸಿ ನೋಂದಣಿಗೆ 20 ಕೌಂಟರ್​ಗಳು, ಸಂಬಂಧಿಸಿದ ಇಲಾಖೆ ಉನ್ನತಮಟ್ಟದ ಅಧಿಕಾರಿಗಳಿಗೆ ಪ್ರತ್ಯೇಕ ಕೌಂಟರ್, ವರ್ಚುವಲ್ ವೇದಿಕೆ, ಗೃಹ ಕಚೇರಿ ಕೃಷ್ಣಾಕ್ಕೆ ಬರಲು ಸಾಧ್ಯವಾಗದವರಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಬೇರೆ ಊರಿನಿಂದ ಬಂದು ಅಹವಾಲು ಸಲ್ಲಿಸಿ ವಾಪಸ್ ರೈಲ್ವೆ, ಬಸ್ ನಿಲ್ದಾಣಕ್ಕೆ ಹೋಗುವವರಿಗೆ ಉಚಿತ ನಗರ ಸಾರಿಗೆ ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ಊಟ, ಆಸನ ವ್ಯವಸ್ಥೆ, ಸಹಾಯಕ್ಕೆ ಸಿಬ್ಬಂದಿಯಿದ್ದರು.
ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಧ್ವನಿ ಎನ್ನಲಾದ ಇನ್‌ಸ್ಪೆಕ್ಟರ್ ವರ್ಗಾವಣೆ ಕುರಿತ ಆಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
