ಬೆಂಗಳೂರು:ಮುಂಬರುವ ಚುನಾವಣೆ ಎದುರಿಸಲು ರೋಡ್ ಮ್ಯಾಪ್ ಸಿದ್ಧಪಡಿಸುವ ಗುರಿಯೊಂದಿಗೆ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡ ಎರಡು ದಿನದ ನವ ಸಂಕಲ್ಪ ಶಿಬಿರದಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು, ಅಧಿಕಾರಕ್ಕೆ ಬರುತ್ತಿದ್ದಂತೆ ಖಾಸಗಿ ವಲಯದಲ್ಲಿ ಮೀಸಲು ಜಾರಿ, ಗುತ್ತಿಗೆಯಲ್ಲಿ ಮೀಸಲು, ಮುಸ್ಲಿಂ ಹಾಗೂ ಕ್ರೖೆಸ್ತರ ಪರ ಗಟ್ಟಿಯಾಗಿ ನಿಲ್ಲುವುದು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ 50 ವರ್ಷದೊಳಗಿನವರಿಗೆ ಆದ್ಯತೆ ನೀಡುವುದು, ಪಕ್ಷದ ಎಲ್ಲ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ನೀಡುವುದು ಸೇರಿ ಎಲ್ಲ ರೀತಿಯ ಕೋಮುವಾದ ವಿರೋಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ತಮ್ಮ ನಿರ್ಣಯ-ಕಾರ್ಯಯೋಜನೆಗೆ ಕರ್ನಾಟಕ ಡಿಕ್ಲರೇಷನ್ ಎಂದು ಹೆಸರು ಕೊಟ್ಟಿದ್ದು, ಶೀಘ್ರವೇ ನಾಡಿನ ಗಮನಕ್ಕೆ ತರಲು ಕಾಂಗ್ರೆಸ್ ಉದ್ದೇಶಿಸಿದೆ. ಅಂದಹಾಗೆ, ಪಕ್ಷ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಲ್ಲಿ ಎಐಸಿಸಿ ನಿರ್ದೇಶನದಂತೆ ನಡೆದ ಶಿಬಿರದಲ್ಲಿ ಮುಂದಿನ ಸರ್ಕಾರ ನಮ್ಮದೇ, ಅಲ್ಲಿ ಯಾವೆಲ್ಲ ಕಾರ್ಯಕ್ರಮ ಅನುಷ್ಠಾನ ಮಾಡಬೇಕೆಂದು ಚರ್ಚೆ ನಡೆಸಿ, ಅದನ್ನು ಈಗಲೇ ಜನರ ಮುಂದಿಡಲು ನಿರ್ಧರಿಸಿರುವುದು ಅಚ್ಚರಿ ತಂದಿದೆ.
ಸಭೆ ಬಳಿಕ ಪಕ್ಷದ ಪ್ರಮುಖ ನಾಯಕರನ್ನೆಲ್ಲ ಒಟ್ಟಿಗೆ ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಸ್ತಾನದ ಉದಯಪುರ ಶಿಬಿರದ ರೀತಿ ರಾಜ್ಯದಲ್ಲಿ ಕೂಡ ಶಿಬಿರ ನಡೆಸಿದೆವು. ಆರು ತಂಡ ರಚಿಸಿದ್ದೆವು. ರೈತ, ಬೆಲೆ ಏರಿಕೆ, ಉದ್ಯೋಗ, ಆರ್ಥಿಕ, ಸಾಮಾಜಿಕ ನ್ಯಾಯ, ಮಹಿಳೆ ಉದ್ಯೋಗ, ಪಕ್ಷ ಸಂಘಟನೆ, ರಾಜಕೀಯ ವಿಚಾರವಾಗಿ ಸಮಿತಿ ರಚಿಸಿ ಚರ್ಚೆ ಮಾಡಲಾಯಿತು ಎಂದರು. ಆರು ನೂರು ಆಹ್ವಾನಿತರನ್ನು ಶಿಬಿರಕ್ಕೆ ಆಹ್ವಾನಿಸಿದ್ದೆವು. ಶಾಸಕರು, ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ವಿವಿಧ ಘಟಕಗಳ ಮುಖ್ಯಸ್ಥರು ಸೇರಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಮುಂಬರುವ ಚುನಾವಣೆ ಪ್ರಣಾಳಿಕೆಗೂ ಸಲಹೆ ಬಂದಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರದಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಎಲ್ಲ ವರ್ಗದ ಜನರಿಗೆ ರಕ್ಷಣೆ ಕೊಡಲು ನಾವು ಬದ್ಧ. ಕೋಮು ವಿಚಾರದಲ್ಲಿ ಧ್ರುವೀಕರಣ, ಭ್ರಷ್ಟಾಚಾರದಿಂದ ರಾಜ್ಯದ ಹೆಸರು ಹಾಳಾಗುತ್ತಿದೆ. ರಾಜ್ಯದ ಹೆಸರು ಉಳಿಸಲು ಕಾರ್ಯಕ್ರಮ ರೂಪಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಸಂಘಟನೆ ವಿಚಾರದಲ್ಲಿ ಆಲೋಚನೆ ಮಾಡಿದ್ದೇವೆ. ತಿಂಗಳೊಳಗೆ ಪಕ್ಷದ ಖಾಲಿ ಹುದ್ದೆಯನ್ನು ಭರ್ತಿ ಮಾಡುತ್ತೇವೆ. ಅನೇಕ ಕಡೆ ಬದಲಾವಣೆ ಮಾಡುತ್ತೇವೆ. ಜೂ.25ರ ಬಳಿಕ ಸ್ಥಳೀಯ ಘಟಕಗಳ ಚುನಾವಣೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕೊಡಲಾಗುತ್ತದೆ. ಎಲ್ಲ ವರ್ಗದವರಿಗೂ ಅವಕಾಶ ಕೊಡಲಾಗುತ್ತದೆ ಎಂದು ವಿವರಿಸಿದರು. ಹೊಸದಾಗಿ ವಾರ್ಡ್ ಹಾಗೂ ಪಂಚಾಯಿತಿ ಘಟಕ ರಚಿಸಲಾಗುತ್ತದೆ. ಜಾತಿಗೆ ಅನುಗುಣವಾಗಿ ಪಕ್ಷದಲ್ಲಿ ಮೀಸಲು ಕೊಡುತ್ತೇವೆ. ಅದೇ ರೀತಿ ರಾಜ್ಯ ಮಟ್ಟದಲ್ಲೂ ಗಮನ ಕೊಡುತ್ತೇವೆ ಎಂದರು.
ಪ್ರತ್ಯೇಕ ಪ್ರಣಾಳಿಕೆ:ಚುನಾವಣೆಗೆ ಕರಾವಳಿ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬಯಲು ಸೀಮೆ, ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತೇವೆ. ವಲಸೆ ಹೋಗುವುದನ್ನು ತಡೆಯಲು ಗೋವಾ, ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಕಾರ್ಯಕ್ರಮ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಎಸ್ಸಿಪಿ ಟಿಎಸ್ಪಿ ಕಾಯ್ದೆ ವಿಚಾರದಲ್ಲಿ ಈ ಸರ್ಕಾರ ಕೆಲವು ಬದಲಾವಣೆ ತಂದಿದ್ದಾರೆ. ಅದನ್ನು ಖಂಡಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಜನಸಂಖ್ಯೆ ಆಧಾರದದಲ್ಲಿ ಹಣ ಕೊಡುತ್ತೇವೆ ಎಂದು ತಿಳಿಸಿದರು.
ಪಿಎಫ್​ಐ, ಎಸ್​ಡಿಪಿಐ ಬಗ್ಗೆ ಕಳವಳ:ಪಿಎಫ್​ಐ ಮತ್ತು ಎಸ್​ಡಿಪಿಐ ಸಂಘಟನೆ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಶಿಬಿರದಲ್ಲಿ ಗಮನಾರ್ಹ ಚರ್ಚೆಯಾಗಿದೆ. ಈ ಸಂಘಟನೆಯೊಂದಿಗೆ ಅಂತರ ಕಾಯ್ದುಕೊಳ್ಳಬೇಕು, ಈ ಸಂಘಟನೆಗಳ ಕುರಿತು ನಿಷೇಧದ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ದೂರ ಉಳಿಯಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಜಾಬ್ ವಿಚಾರದಲ್ಲಿ ಪಕ್ಷ ಗಟ್ಟಿಯಾದ ನಿಲುವು ತೆಗೆದುಕೊಳ್ಳಲಿಲ್ಲ. ಇದರಿಂದ ಎಸ್​ಡಿಪಿಐ ಮೇಲುಗೈ ಸಾಧಿಸಿತು ಮತ್ತು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಅಲ್ಪಸಂಖ್ಯಾತರ ವಿಷಯ ಬಂದಾಗ ಪಕ್ಷ ಗಟ್ಟಿ ನಿಲುವು ತೆಗೆದುಕೊಳ್ಳಬೇಕೆಂಬ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಖಾಸಗಿಯಲ್ಲೂ ಮೀಸಲು:ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರುತ್ತೇವೆ. ರಾಷ್ಟ್ರ ಮಟ್ಟದಲ್ಲೂ ಈ ವಿಚಾರವನ್ನು ಪಕ್ಷ ಹೇಳಿದೆ. ರಾಜ್ಯದಲ್ಲೂ ತರುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಹೊರ ಗುತ್ತಿಗೆಯಲ್ಲೂ ಮೀಸಲು ತರಲು ಪ್ರಯತ್ನ ಮಾಡುತ್ತೇವೆ, ಮುಂದೆ ಹೊರ ಗುತ್ತಿಗೆ ಬದಲು ನೇಮಕ ಮಾಡುತ್ತೇವೆ. ಈ ಸರ್ಕಾರ ಬ್ಯಾಕ್​ಲಾಗ್ ಹುದ್ಧೆ ಭರ್ತಿ ಮಾಡುತ್ತಿಲ್ಲ. ನಮ್ಮ ಸರ್ಕಾರ ಬಂದಮೇಲೆ ಆದ್ಯತೆ ಮೇಲೆ ನೇಮಕ ಮಾಡುತ್ತೇವೆ ಎಂದರು. ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ದ ಕಾಂಗ್ರೆಸ್ ಹೋರಾಡಲಿದೆ. ಮುಸ್ಲಿಮರು, ಕ್ರೖೆಸ್ತರ ಮೇಲೆ ಸುಳ್ಳು ಕೇಸು ಹಾಕುವುದು, ದೌರ್ಜನ್ಯ ಮಾಡುವುದನ್ನು ಖಂಡಿಸುತ್ತೇವೆ ಎಂದ ಸಿದ್ದರಾಮಯ್ಯ, ಬೆಲೆ ಏರಿಕೆ ನಿಯಂತ್ರಣ, ಜಿಎಸ್​ಟಿ ನಷ್ಟ ಪರಿಹಾರ ಇನ್ನು ಐದು ವರ್ಷ ವಿಸ್ತರಿಸಬೇಕೆಂಬುದು ನಮ್ಮ ಆಗ್ರಹ ಎಂದರು.
ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಕ್ಷಾ ರಾಮಯ್ಯ ಅವರನ್ನು ಅರ್ಧದಲ್ಲಿಯೇ ತೆಗೆಯಲಾಯಿತು. ಆದ್ದರಿಂದ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಾ ರಾಮಯ್ಯ, ಪಕ್ಷ ನೀಡಿರುವ ಜವಾಬ್ದಾರಿಯನ್ನು ವಿನಮ್ರವಾಗಿ ಸ್ವೀಕರಿಸಿ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಉದಯಪುರ ಕಾಂಗ್ರೆಸ್ ಚಿಂತನ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ. ರಾಷ್ಟ್ಟಮಟ್ಟದಲ್ಲಿ ಯುವ ಕಾಂಗ್ರೆಸ್ ಮತ್ತು ಯುವ ಸಮೂಹದ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಅಮೇರಿಕದಂತಹ ದೇಶಗಳಿಗೆ ಆರ್ಥಿಕತೆಯನ್ನು ನಿಭಾಯಿಸುವುದು ಹೇಗೆ ಎಂದು ಹೇಳಿಕೊಟ್ಟು ಮಾದರಿಯಾಗಿದ್ದ ಮನಮೋಹನ ಸಿಂಗ್ ರೂಪಿಸಿ ತಲೆ ಎತ್ತಿ ನಿಲ್ಲವಂತೆ ಮಾಡಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿ ದುರಾಡಳಿತವು ನೆಲ ಕಚ್ಚುವಂತೆ ಮಾಡಿದೆ. ಇದೇ ಅವರ ಎಂಟು ವರ್ಷಗಳ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶಕ್ಕೆ ಮುಂದೆ ಇನ್ನೂ ಕರಾಳ ದಿನಗಳು ಕಾದಿವೆ ಎಂದು ಎಚ್ಚರಿಸಿದ್ದಾರೆ. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಸರ್ಕಾರದ ದಾಖಲೆಗಳ ಪ್ರಕಾರ 2014ರ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ಮಾಡಿರುವ ಸಾಲ 53.11 ಲಕ್ಷ ಕೋಟಿ ರೂ.ಗಳಷ್ಟಿತ್ತು. ಈ ಸಾಲವು 2019-20ರ ವೇಳೆಗೆ 106.45 ಲಕ್ಷ ಕೋಟಿಗೆ ಏರಿಕೆಯಾಯಿತು. 2022ರ ಮಾರ್ಚ್31ರ ವೇಳೆಗೆ 139.57 ಲಕ್ಷ ಕೋಟಿಗಳಿಗೆ ತಲುಪಿದೆ. 2023ರ ಮಾರ್ಚ್ ಅಂತ್ಯದ ವೇಳೆಗೆ 155 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 2013-14ರಲ್ಲಿ ಎಲ್ಲ ರಾಜ್ಯಗಳ ಒಟ್ಟು ಸಾಲ 22.12 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅದು ಇದೇ ಮಾರ್ಚ್ ಅಂತ್ಯಕ್ಕೆ 70 ಲಕ್ಷ ಕೋಟಿ ರೂ.ಗಳಿಗೆ ಮುಟ್ಟಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದು 80 ಲಕ್ಷ ಕೋಟಿ ರೂ.ಗೆ ತಲುಪುತ್ತಿದೆ. ಇದರಿಂದಾಗಿ ದೇಶದ ಒಟ್ಟಾರೆ ಸಾಲ 235 ಲಕ್ಷ ಕೋಟಿಗಳಾಗಬಹುದು. ಇದು 2014ರ ಮಾರ್ಚ್ 31ರಂದು 75.23 ಲಕ್ಷ ಕೋಟಿಗಳಷ್ಟಿತ್ತು. ಇದರಿಂದಾಗಿ ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ 1,70,290 ರೂ. ಸಾಲ ಹೇರಿದಂತಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 7 =
Remember me
