| ಎನ್.ಡಿ. ಶಾಂತಕುಮಾರ ಶಿವಮೊಗ್ಗ
ವಿದ್ಯುತ್ ಸರಬರಾಜು ಕಂಪನಿಗಳು 21,963.09 ಕೋಟಿ ರೂ. ಬಾಕಿ ಉಳಿಸಿಕೊಂಡ ಪರಿಣಾಮ ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿ) ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಬಿಕ್ಕಟ್ಟಿಗೆ ಸಿಲುಕಿದ್ದು, ಉದ್ಯೋಗಿಗಳ ಸಂಬಳ ಮತ್ತು ಪಿಂಚಣಿ ಪಾವತಿ ಮಾಡಲಾಗದ ಸ್ಥಿತಿ ತಲುಪಿದೆ.
ವಿದ್ಯುತ್ ಸರಬರಾಜು ಕಂಪನಿಗಳ ಸಾವಿರಾರು ಕೋಟಿ ರೂ. ಬಾಕಿಯಿಂದಾಗಿ ಶರಾವತಿ ಪಂಪ್ಡ್ ಸ್ಟೋರೇಜ್ (2,500 ಮೆಗಾ ವಾಟ್ ಸಾಮರ್ಥ್ಯ) ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ (2000 ಮೆಗಾವಾಟ್ ಸಾಮರ್ಥ್ಯ) ಅನುಷ್ಠಾನಕ್ಕೂ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸರಬರಾಜು ಕಂಪನಿಗಳು ನಿಗಮದಿಂದ ಖರೀದಿ ಮಾಡುತ್ತಿರುವ ವಿದ್ಯುತ್​ಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡುತ್ತಿಲ್ಲ. ಈ ಕಾರಣಕ್ಕೆ ನಿಗಮವು ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಸೇರಿ ನೌಕರರ ವೇತನ, ಸೇವಾ ಭತ್ಯೆಗಳಿಗೆ ಸಾಲದ ಮೊರೆ ಹೋಗುತ್ತಿದ್ದು, ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವಿವಿಧ ಮೂಲಗಳಿಂದ ಕೆಪಿಸಿ ಸುಮಾರು 48,000 ಕೋಟಿ ರೂ. ಸಾಲ ಪಡೆದಿದೆ. ಸದ್ಯದ ಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡುವ ವಿಷಯ ಇರಲಿ, ಸಾಲದ ಮೇಲಿನ ಬಡ್ಡಿ ಪಾವತಿಗೆ ಪ್ರತಿ ವರ್ಷ 4000 ಕೋಟಿ ರೂ. ಹೊರೆ ಬೀಳುತ್ತಿದೆ.
ರಾಜ್ಯದ ಒಟ್ಟು ಬೇಡಿಕೆಯ ವಿದ್ಯುತ್​ನಲ್ಲಿ ಪ್ರತಿಶತ 70 ವಿದ್ಯುತ್ತನ್ನು ಕೆಪಿಸಿ ಪೂರೈಕೆ ಮಾಡುತ್ತಿದ್ದು, ಬಾಕಿ ವಿದ್ಯುತ್ತನ್ನು ಇತರ ಮೂಲಗಳಿಂದ ಪಡೆಯಲಾಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಿಗಮವನ್ನು ಉಳಿಸುವ ಪ್ರಯತ್ನ ಮಾಡದಿದ್ದರೆ ಭವಿಷ್ಯದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಆತಂಕ ಎದುರಾಗಿದೆ.
ರಾಜ್ಯ ಸರ್ಕಾರದ ಹೊಸ ಹೊಸ ಯೋಜನೆಗಳಾದ ಬಳ್ಳಾರಿ ಶಾಖೋತ್ಪನ್ನ ಕೇಂದ್ರ, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಯಲಹಂಕ ಅನಿಲ ಆಧಾರಿದ ವಿದ್ಯುತ್ ಉತ್ಪಾದನಾ ಕೇಂದ್ರಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬ್ಯಾಂಕುಗಳಿಂದ 40,341.02 ಕೋಟಿ ರೂ. ಸಾಲ ಪಡೆಯಲಾಗಿದೆ. ಸಾಲ ಪಡೆದು ಘಟಕ ಸ್ಥಾಪಿಸಿ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಜಾಲಕ್ಕೆ ಒದಗಿಸಿದರೂ ವಿವಿಧ ವಿದ್ಯುತ್ ಕಂಪನಿಗಳಿಂದ ಪೂರ್ಣ ಪ್ರಮಾಣದಲ್ಲಿ ಹಣ ಬಾರದೇ ಹೋದರೆ ಸಾರ್ವಜನಿಕ ವಲಯದ ಸಂಸ್ಥೆ ಉಳಿಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.
1970ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವಿದ್ಯುತ್ ನಿಗಮ 746 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಿಂದ ಆರಂಭಗೊಂಡು ಹಂತ ಹಂತವಾಗಿ ಎಲ್ಲ ರೂಪದ ವಿದ್ಯುತ್ ಯೋಜನೆಗಳಿಂದ ಒಟ್ಟು 8,738.3 ಮೆಗಾವಾಟ್ ವಿದ್ಯುತ್ತನ್ನು ರಾಜ್ಯದ ಜಾಲಕ್ಕೆ ನೀಡುತ್ತಿದೆ. ಯಲಹಂಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರ (370 ಮೆಗಾವಾಟ್) ಮತ್ತು ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಕೇಂದ್ರ (115 ಮೆಗಾವಾಟ್) ಇನ್ನೂ ಕಾರ್ಯಾರಂಭ ಮಾಡಬೇಕಿದೆ. ಕಳೆದ 53 ವರ್ಷಗಳಿಂದ ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ ಸುಮಾರು ಪ್ರತಿಶತ 40 ವಿದ್ಯುತ್ತನ್ನು ಕಡಿಮೆ ದರದಲ್ಲಿ ನೀಡುತ್ತಿದೆ.
ರಾಜ್ಯ ಸರ್ಕಾರಕ್ಕೆ ಒಕ್ಕೂಟ ಸಲಹೆ:ನಷ್ಟದಿಂದ ಹೊರಬರಲು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದು, ಅನುಷ್ಠಾನಕ್ಕೆ ತಂದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ತಿಳಿಸಿದೆ. ಜಲವಿದ್ಯುತ್ ಸೇರಿ ಯಾವುದೇ ಮೂಲಗಳಿಂದ ರಾಜ್ಯದ ಜಾಲಕ್ಕೆ ಪೂರೈಕೆ ಮಾಡಿದರೂ ಎಲ್ಲ ಮೂಲದ ವಿದ್ಯುತ್​ಗೆ ಏಕರೂಪದ ದರ ನಿಗದಿಪಡಿಸುವ ನಿಯಮ ರೂಪಿಸಲು ಕೆಇಆರ್​ಸಿಗೆ ನಿರ್ದೇಶನ ನೀಡಬೇಕು. ಜಲವಿದ್ಯುತ್ ಉತ್ಪಾದನೆಯ ಪ್ರತಿ ಯೂನಿಟ್​ಗೆ ದಶಕಗಳ ಕಾಲದಿಂದ ದರ ಪರಿಷ್ಕರಣೆ ಮಾಡಿಲ್ಲ. ಈಗಲೂ ಸರಬರಾಜು ಕಂಪನಿಗಳು ಪ್ರತಿ ಯೂನಿಟ್​ಗೆ 80 ಪೈಸೆ ನೀಡುತ್ತಿವೆ. ಶಾಖೋತ್ಪನ್ನ, ಜಲವಿದ್ಯುತ್, ಸೌರವಿದ್ಯುತ್, ಪವನ ವಿದ್ಯುತ್, ಅನಿಲ ಆಧಾರಿತ, ತ್ಯಾಜ್ಯದಿಂದ ಉತ್ಪಾದನೆ ಸೇರಿ ಯಾವುದೇ ಮೂಲದಿಂದ ಉತ್ಪಾದನೆ ಮಾಡುವ ವಿದ್ಯುತ್​ಗೆ ಏಕರೂಪದ ದರ ನಿಗದಿಪಡಿಸಬೇಕು ಒಕ್ಕೂಟ ಸಲಹೆ ಮಾಡಿದೆ.
ನಿಗಮದ ವಿವಿಧ ಯೋಜನಾ ಪ್ರದೇಶಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಾದ ಪವನಶಕ್ತಿ ಮತ್ತು ಸೌರಶಕ್ತಿ ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಳವಡಿಸುವ ಬಗ್ಗೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಲವು ತಜ್ಞ ಇಂಜಿನಿಯರ್​ಗಳ ತಂಡದೊಂದಿಗೆ ನೀಲಿ ನಕ್ಷೆ ಸಿದ್ದಪಡಿಸಿದ್ದರು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಹಕಾರ ನೀಡಬೇಕು. ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಗುತ್ತಿಗೆ ರದ್ದುಪಡಿಸಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮಾದರಿಯಲ್ಲಿ ನಿಗಮದ ಉದ್ಯೋಗಿಗಳಿಂದಲೇ ಘಟಕಗಳ ಚಾಲನೆ ಮತ್ತು ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದೆ.
ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಎನ್​ಟಿಪಿಸಿ, ಎನ್​ಪಿಸಿಐಎಲ್ ಮತ್ತು ಖಾಸಗಿ ವಿದ್ಯುತ್ ಕಂಪನಿಗಳಿಂದ ವಿದ್ಯುತ್ ಖರೀದಿಯ ಬಿಲ್ಲುಗಳನ್ನು ಪ್ರತಿ ತಿಂಗಳು ಬ್ಯಾಂಕುಗಳಿಗೆ ಲೆಟರ್ ಆಫ್ ಕ್ರೆಡಿಟ್ ಮೂಲಕ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ವಿದ್ಯುತ್ ಖರೀದಿಯ ಬಿಲ್ಲಿಂಗ್​ಗೆ ಲೆಟರ್ ಆಫ್ ಕ್ರೆಡಿಟ್ ನೀಡಲು ಸಂಬಂಧಪಟ್ಟ ವಿದ್ಯುತ್ ಕಂಪನಿಗಳಿಗೆ ನಿರ್ದೇಶನ ನೀಡಬೇಕು. ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಾದ ಪವನಶಕ್ತಿ ಮತ್ತು ಸೌರಶಕ್ತಿ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ರಾಜ್ಯದಲ್ಲಿ ಮೊದಲ ಬಾರಿಗೆ ನಮ್ಮ ನಿಗಮದಿಂದಲೇ ನಿರ್ವಹಿಸಲಾಗಿದೆ. ಈಚಿನ ದಿನಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಿಂದ ನಿಗಮ ಅವಕಾಶವಂಚಿತವಾಗಿದೆ. ಆದ್ದರಿಂದ ಆದ್ಯತೆ ಮೇರೆಗೆ ನಿಗಮಕ್ಕೆ ಕನಿಷ್ಠ ಪ್ರತಿಶತ 50 ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಲಾಗಿದೆ.
ಕೆಪಿಸಿ ಆರ್ಥಿಕ ಸಂಕಷ್ಟದಲ್ಲಿದೆ. ವಿದ್ಯುತ್ ಖರೀದಿ ಮಾಡಿರುವ ವಿವಿಧ ಕಂಪನಿಗಳಿಂದ ದೊಡ್ಡ ಮೊತ್ತದ ಬಾಕಿ ನಿಗಮಕ್ಕೆ ಬರಬೇಕಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ. ವಸ್ತುಸ್ಥಿತಿ ವಿವರಿಸಿ ಕೆಲ ಸುಧಾರಣಾ ಕ್ರಮಗಳಿಗೆ ಕೆಪಿಸಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
| ಸುಬ್ರಮಣಿ ಜೆ., ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯುತ್ ನಿಗಮ ನಿಯಮತಿ ಸಂಘಗಳ ಒಕ್ಕೂಟ
ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − twelve =
Remember me
