| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು:ಲಡಾಖ್ ಲಡಾಯಿ ಬಳಿಕ ಚೀನಾಕ್ಕೆ ಪಾಠ ಕಲಿಸಲು ಆ ದೇಶದ ವಸ್ತುಗಳನ್ನು ನಿಷೇಧಿಸಬೇಕೆಂಬ ಕೂಗು ದೇಶಾದ್ಯಂತ ಬಲಪಡೆದುಕೊಂಡಿರುವಂತೆಯೇ ಇತ್ತ ರಾಜ್ಯದಲ್ಲಿ ಚೀನಾಕ್ಕೆ ಸ್ಪರ್ಧೆ ನೀಡುವುದಕ್ಕಾಗಿ ಸದ್ದಿಲ್ಲದೆ ಸಿದ್ಧತೆ ಶುರುವಾಗಿದೆ.
ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ‘ಚೀನಾದೊಂದಿಗೆ ಸ್ಪರ್ಧೆ’ ಯೋಜನೆ ರೂಪಿಸಲಾಗಿತ್ತು. ಕುಮಾರಸ್ವಾಮಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೆ ವೇಗವಾಗಿ ಮುನ್ನಡೆಯುತ್ತಿದ್ದ ಯೋಜನೆ ಬಳಿಕ ನಿಧಾನಗತಿಗೆ ಹೊರಳಿತು. ಇದೀಗ ಲಾಕ್​ಡೌನ್ ನಿಯಮ ಸಡಿಲಗೊಂಡ ಬಳಿಕ ಮತ್ತೆ ಚಾಲನೆ ಪಡೆದುಕೊಂಡಿದೆ.
ಹೊಸ ಹೂಡಿಕೆ ಕಷ್ಟ: ಆರ್ಥಿಕ ಕುಸಿತ ಹಾಗೂ ಕರೊನಾ ತಂದೊಡ್ಡಿರುವ ಸಮಸ್ಯೆಗಳಿಂದಾಗಿ ಹೊಸ ಹೂಡಿಕೆ ನಿರೀಕ್ಷಿಸುವುದೇ ಕಷ್ಟವಾಗಿದೆ. ಆದ್ದರಿಂದ ಕ್ಲಸ್ಟರ್​ಗಳಲ್ಲಿ ಈ ಹಿಂದೆ ಕಂಡುಬಂದಿದ್ದ ಆಸಕ್ತಿಯನ್ನು ಲಾಭವನ್ನಾಗಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಎರಡು ಕ್ಲಸ್ಟರ್ ಗುರಿ:ಹಿಂದಿನ ಸರ್ಕಾರ ರೂಪಿಸಿದ್ದ ಒಂಬತ್ತು ಕ್ಲಸ್ಟರ್​ಗಳ ಜತೆಗೆ ಸಿಎಂ ಯಡಿಯೂರಪ್ಪ ಬಜೆಟ್ ನಲ್ಲಿ ಮತ್ತೆರಡು ಕ್ಲಸ್ಟರ್ ಘೋಷಿಸಿದ್ದರು. ಒಟ್ಟು 11 ಕ್ಲಸ್ಟರ್​ಗಳ ಪೈಕಿ ಒಂಬತ್ತರಲ್ಲಿ ಚಟುವಟಿಕೆ ನಡೆದಿವೆ. ಹಿಂದಿನ ಸರ್ಕಾರ 2018ರ ಡಿಸೆಂಬರ್​ನಲ್ಲಿಯೇ ಕೊಪ್ಪಳದ ಆಟಿಕೆಗಳ ಕ್ಲಸ್ಟರ್ ಹಾಗೂ ಬಳ್ಳಾರಿಯ ಸಿದ್ಧ ಉಡುಪುಗಳ ಕ್ಲಸ್ಟರ್ ಉದ್ಘಾಟಿಸುವ ಉದ್ದೇಶ ಹೊಂದಿತ್ತು. ಇದೀಗ ಮುಂದಿನ ಆರು ತಿಂಗಳೊಳಗೆ ಈ ಕ್ಲಸ್ಟರ್​ಗಳ ಕಾರ್ಯ ಆರಂಭಿಸುವ ಉದ್ದೇಶ ಹೊಂದಲಾಗಿದೆ.
ಹೊಸ ಕ್ಲಸ್ಟರ್ ಯಾವುವು:ಶಿವಮೊಗ್ಗದಲ್ಲಿ ಬಯೋಫಾರ್ಮ ಮತ್ತು ವೆಲ್​ನೆಸ್ ಹಾಗೂ ಧಾರವಾಡದಲ್ಲಿ ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್​ಎಂಸಿಜಿ) ಕ್ಲಸ್ಟರ್​ಗಳನ್ನು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ವಿಷನ್ ಗ್ರೂಪ್​ನಂತೆ ಸಿದ್ಧತೆ:ತಜ್ಞರನ್ನೊಳಗೊಂಡ ವಿಷನ್ ಗ್ರೂಪ್​ಗಳು ಸಿದ್ಧಪಡಿಸಿಕೊಟ್ಟ ವರದಿಯಂತೆ ಮೂಲ ಸೌಕರ್ಯ ಹಾಗೂ ಹೂಡಿಕೆದಾರರ ಜತೆ ಮಾತುಕತೆಗಳು ನಡೆದಿವೆ. ಪ್ರತಿಯೊಂದು ಕ್ಲಸ್ಟರ್​ಗೂ ಹೂಡಿಕೆದಾರರು ಆಸಕ್ತಿ ತೋರಿಸಿರುವುದು ವಿಶೇಷ. ವಿಷನ್ ಗ್ರೂಪ್​ಗಳು ಒಟ್ಟಾರೆ 70ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ.
ಯಾವ ಕ್ಲಸ್ಟರ್​ನಲ್ಲಿ ಏನಾಗಿದೆ?:* ಕೊಪ್ಪಳ (ಆಟಿಕೆ: ವಿಷನ್ ಗ್ರೂಪ್ 3 ಸಭೆ ನಡೆಸಿದೆ. ಹೂಡಿಕೆದಾರರ ಜತೆ 4 ಸಭೆ ನಡೆದಿವೆ. 255 ಎಕರೆ ಭೂಮಿ ಸಿದ್ಧವಿದ್ದು, ಅದರಲ್ಲಿ ಏಕ್ವಿಸ್ ಸಂಸ್ಥೆ 128 ಎಕರೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಿದೆ. ಕೆಎಸ್​ಎಸ್​ಐಡಿಸಿಯ 104 ಎಕರೆ ಜಾಗ ಬಳಸಲಾಗುತ್ತದೆ. ಸರ್ಕಾರ ವಿಶೇಷ ಪ್ಯಾಕೇಜ್ ಸಹ ಘೋಷಿಸಿದೆ. ಏಕ್ವಿಸ್ ಸಂಸ್ಥೆ 1500 ಕೋಟಿ ರೂ.ಹೂಡಿಕೆ ಮಾಡಿ 20 ಸಾವಿರ ಉದ್ಯೋಗ ಒದಗಿಸಲು ಒಡಂಬಡಿಕೆ ಮಾಡಿಕೊಂಡಿದೆ. ಇನ್ನೂ 8 ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರಿಸಿವೆ. 41 ಕಂಪನಿಗಳನ್ನು ಸಂರ್ಪಸಲಾಗಿದೆ.
* ಬಳ್ಳಾರಿ (ಟೆಕ್ಸ್​ಟೈಲ್): ವಿಷನ್ ಗ್ರೂಪ್ 5 ಸಭೆ ನಡೆಸಿದೆ. ಹೂಡಿಕೆದಾರರ ಜತೆ 14 ಸಭೆ ನಡೆದಿವೆ. ಅಮರಾಪುರ ಎಂಬಲ್ಲಿ 147 ಎಕರೆ ಜಾಗ ಸಿದ್ಧವಿದೆ. ಮುಂಡರಗಿ ಬಳಿ 40 ಎಕರೆ ಸರ್ಕಾರಿ ಜಾಗ ಇದೆ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಆಕಾಂಕ್ಷ ಫೌಂಡೇಶನ್ 30 ಕೋಟಿ ರೂ. ಹೂಡಿಕೆ, 2 ಸಾವಿರ ಉದ್ಯೋಗ ನೀಡುವ ಯೋಜನೆಗೆ ಸರ್ಕಾರ ಒಪ್ಪಿದೆ. ಸಾಹಿ ಎಕ್ಸ್​ಪೋರ್ಟ್​ನ 320 ಕೋಟಿ ರೂ. ಹೂಡಿಕೆ 16 ಸಾವಿರ ಉದ್ಯೋಗ, ಗೋಕುಲ್​ದಾಸ್​ನ 80 ಕೋಟಿ ರೂ. ಹೂಡಿಕೆಯ 5 ಸಾವಿರ ಉದ್ಯೋಗ, ಬಿನಾರಿ ಟೆಕ್ಸ್​ಟೈಲ್​ನ 100 ಕೋಟಿ ರೂ. ಹೂಡಿಕೆ 5 ಸಾವಿರ ಉದ್ಯೋಗ, ನಫೀಜಾ ಗಾರ್ವೆಂಟ್ಸ್​ನ 8 ಕೋಟಿ ರೂ. ಹೂಡಿಕೆ, 400 ಉದ್ಯೋಗದ ಯೋಜನೆಗಳಿಗೆ ಒಡಂಬಡಿಕೆ ಆಗಿದೆ. ಇನ್ನೂ ನಾಲ್ಕು ಕಂಪನಿಗಳ ಜತೆ ಚರ್ಚೆ ನಡೆದಿದೆ.
* ಚಿಕ್ಕಬಳ್ಳಾಪುರ (ಮೊಬೈಲ್ ಪೋನ್): ವಿಷನ್ ಗ್ರೂಪ್ 6 ಸಭೆಗಳನ್ನು ನಡೆಸಿದೆ. ಹೂಡಿಕೆದಾರರ ಜತೆ 13 ಸಭೆ ನಡೆದಿವೆ. ಚಿಂತಾಮಣಿ ತಾಲೂಕಿನ ಮಾಸ್ತೇನಹಳ್ಳಿ ಬಳಿ 516 ಎಕರೆ ಕೆಐಎಡಿಬಿ ಜಾಗ ಗುರುತಿಸಲಾಗಿದೆ. ಒಪ್ಪೊ, ಸ್ಮೈಲ್, ಲೊಜಿಕಲ್, ಎಕ್ಸ್​ಮಿ, ಹೈಪಿ, ಹೈಲಾ ಸಂಸ್ಥೆಗಳ ಜತೆ ಚರ್ಚೆ ನಡೆದಿದೆ. ಇನ್ನೂ 26 ಕಂಪನಿಗಳನ್ನು ಗುರುತಿಸಲಾಗಿದೆ.
* ಮೈಸೂರು (ಪಿಸಿಬಿ ಮತ್ತು ಐಸಿಬಿ: ವಿಷನ್ ಗ್ರೂಪ್ ಐದು ಸಭೆ ನಡೆಸಿದೆ. ಹೂಡಿಕೆದಾರರ ಜತೆ 3 ಸಭೆ ನಡೆದಿವೆ. ನಂಜನಗೂಡು ತಾಲೂಕಿನ ಹಿಮ್ಮಾವು ಎಂಬಲ್ಲಿ 500 ಎಕರೆ ಜಾಗ ಗುರುತಿಸಲಾಗಿದೆ. 55 ಕೋಟಿ ರೂ. ಹೂಡಿಕೆ ಮಾಡಿ 225 ಉದ್ಯೋಗ ನೀಡುವ ಕ್ಯಾನೆಸ್ ಹಾಗೂ 5 ಕೋಟಿ ರೂ. ಹೂಡಿಕೆ ಮಾಡಿ 25 ಉದ್ಯೋಗ ನೀಡುವ ಥಮೋಸೇನ್ ಟೆಕ್ನಾಲಜೀಸ್​ಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು 49 ಹೂಡಿಕೆದಾರರ ಜತೆ ಮಾತುಕತೆ ನಡೆದಿದೆ. ಅದರಲ್ಲಿ ನಾಲ್ಕು ಆಸಕ್ತಿ ತೋರಿಸಿವೆ.
* ಹಾಸನ (ಟೈಲ್ಸ್): ಹಾಸನದಲ್ಲಿ ಸ್ವಂತ ಜಾಗ ಇದೆ. ಕಚ್ಚಾವಸ್ತು ಲಭ್ಯತೆ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಲಾಗಿದೆ. ಏನಿದು ಯೋಜನೆ?
ಚೀನಾದಿಂದ ಬರುವ ವಸ್ತುಗಳನ್ನು ನಮ್ಮ ರಾಜ್ಯದಲ್ಲೇ ಉತ್ಪಾದಿಸುವ ಮೂಲಕ ಆ ದೇಶಕ್ಕೆ ಸೆಡ್ಡು ಹೊಡೆಯಬೇಕೆಂಬುದು ಯೋಜನೆಯ ತಿರುಳು. ಚೀನಾ ವಸ್ತುಗಳಿಂದಾಗಿ ರಾಜ್ಯದಲ್ಲಿ ಮುಚ್ಚಿ ಹೋಗಿರುವ ಸಣ್ಣ ಕೈಗಾರಿಕೆಗಳಿಗೆ ಜೀವ ತುಂಬುವುದು, ಆ ಮೂಲಕ ಬಂಡವಾಳ ಆಕರ್ಷಣೆ, ನಿರುದ್ಯೋಗ ನಿವಾರಿಸುವುದು ಯೋಜನೆಯ ಪ್ರಮುಖ ಆಶಯ.
ಕ್ಲಸ್ಟರ್​ಗಳಲ್ಲಿ ಏನಾಗಿದೆ?:ಎರಡು ಹೊಸ ಕ್ಲಸ್ಟರ್​ಗೂ ವಿಷನ್ ಗ್ರೂಪ್ ರಚನೆಯಾಗಿದೆ. ಧಾರವಾಡದ ಎಫ್​ಎಂಸಿಜಿ ಕ್ಲಸ್ಟರ್​ಗೆ ಸಂಬಂಧಿಸಿದಂತೆ ಮಮ್ಮಿಗಟ್ಟಿ ಬಳಿ 500 ಎಕರೆ ಜಾಗ ಸಿದ್ಧವಿದೆ. ಜ್ಯೋತಿ ಲ್ಯಾಬ್ ಆಸಕ್ತಿ ತೋರಿಸಿದೆ. ಶಿವಮೊಗ್ಗದ ವೆಲ್​ನೆಸ್ ಕ್ಲಸ್ಟರ್​ನ್ನು ಪ್ರವಾಸಿ ತಾಣವಾಗಿಯೇ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಆ ಬಗ್ಗೆ ಅಧ್ಯಯನ ನಡೆದಿದೆ.
ವಿಶೇಷ ಪ್ಯಾಕೇಜ್:ಎಲೆಕ್ಟ್ರಾನಿಕ್ಸ್ ಉದ್ದಿಮೆಗಳಿಗೆ ಸಂಬಂಧಿಸಿದ ಚಿತ್ರದುರ್ಗ, ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ ಕ್ಲಸ್ಟರ್​ಗಳನ್ನು ಒಂದೇ ಎಂದು ಗುರುತಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ.
ಈಕ್ವಿಟಿ ಇಲ್ಲ
ಯೋಜನೆ ರೂಪು ಗೊಂಡಾಗ ಸರ್ಕಾರದಿಂದ ಪ್ರತಿಯೊಂದು ಕ್ಲಸ್ಟರ್​ಗೆ 2000 ಕೋಟಿ ರೂ. ಈಕ್ವಿಟಿ ರೂಪದಲ್ಲಿ ನೀಡುವ ಉದ್ದೇಶ ಹೊಂದಲಾಗಿತ್ತು ಅದನ್ನು ಕೈ ಬಿಡಲಾಗಿದೆ.
ಚೀನಾದೊಂದಿಗೆ ಸ್ಪರ್ಧೆ ಅಂತ ಹೆಸರಿಟ್ಟರು. ಆದರೆ ಏನೂ ಬೆಳವಣಿಗೆ ಯಾಗಿರಲಿಲ್ಲ. ಈಗ ಹೊಸದಾಗಿ ಎರಡು ಕ್ಲಸ್ಟರ್​ಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗಿ, ನಿರುದ್ಯೋಗ ನಿವಾರಣೆ ಆಗಬೇಕು ಎಂಬುದು ಸರ್ಕಾರದ ಉದ್ದೇಶ.
| ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
