ಬೆಂಗಳೂರು:ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಶಾಲೆಗಳ ದುಸ್ಥಿತಿ ನಿಜಕ್ಕೂ ಆಘಾತ ಉಂಟು ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹಗಳ ಸೌಕರ್ಯಗಳಿಲ್ಲದ ಶಾಲೆಗಳಿಗೆ ಯಾವ ಪಾಲಕರು ತಾನೇ ಮಕ್ಕಳನ್ನು ಕಳುಹಿಸುತ್ತಾರೆ, ಇಂತಹ ಸರ್ಕಾರಿ ಶಾಲೆಗಳಿಂದ ಯಾವ ರೀತಿಯ ಸಮಾಜ ನಿರ್ಮಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದೆ.
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ 2013ರಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಪೀಠ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿತು.
ಇದನ್ನೂ ಓದಿ:ಸಾಮೂಹಿಕವಾಗಿ ಯುವತಿ ಮೇಲೆ ಪೈಶಾಚಿಕ ಕೃತ್ಯ; ಪೊಲೀಸ್ ಪೇದೆಗಳಿಬ್ಬರ ಬಂಧನ
ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದ ವರದಿಯನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ಪೀಠ, ಸರ್ಕಾರಿ ಶಾಲೆಯೊಂದರಲ್ಲಿ ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರುತ್ತಿರುವುದು ಹಾಗೂ ಮತ್ತೊಂದು ಶಾಲೆಯಲ್ಲಿ ಶೌಚಗೃಹದ ಸುತ್ತ ಗಿಡಗಂಟಿಗಳು ಬೆಳೆದಿರುವ ಫೋಟೋಗಳನ್ನು ಗಮನಿಸಿ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದುಸ್ಥಿತಿಗೆ ಇದೊಂದು ನಿದರ್ಶನವಾಗಿದೆ. ಈ ಫೋಟೋಗಳು ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ. ಮನಸ್ಸನ್ನು ಘಾಸಿಗೊಳಿಸಿವೆ. ಶೌಚಗೃಹಗಳು ಗಂಡು ಮಕ್ಕಳದ್ದೋ ಅಥವಾ ಹೆಣ್ಣು ಮಕ್ಕಳದ್ದೋ ಎನ್ನುವುದೂ ತಿಳಿಯುತ್ತಿಲ್ಲ. ತೀರಾ ದುಸ್ಥಿತಿಯಲ್ಲಿರುವ ಶೌಚಗೃಹಗಳಲ್ಲಿ ಗಿಡಬಳ್ಳಿಗಳು ಬೆಳೆದಿವೆ. ಬಾಗಿಲುಗಳಿಗೆ ಇತ್ತೀಚೆಗಷ್ಟೇ ಬಣ್ಣ ಬಳಿದಿರುವ ಹಾಗಿದೆ. ಸುಮ್ಮನೆ ನಾಲ್ಕು ಗೋಡೆಗಳನ್ನು ನಿರ್ಮಿಸಿ ಬಾಗಿಲು ಅಳವಡಿಸಲಾಗಿದ್ದು, ನೀರಿನ ವ್ಯವಸ್ಥೆ ಇಲ್ಲ. ಇಂತಹ ಶೌಚಗೃಹವನ್ನು ನಾಮ್ಕೇವಾಸ್ತೆ ಸೌಲಭ್ಯ ಎಂದಷ್ಟೇ ಕರೆಯಬಹುದು. ಮೂಲಸೌಕರ್ಯಗಳಿಲ್ಲದ ಸರ್ಕಾರಿ ಶಾಲೆಗಳಿಂದ ನಾವು ಎಂತಹ ಸಮಾಜ ಕಟ್ಟುತ್ತಿದ್ದೇವೆ ಎಂದು ಆತಂಕದಿಂದ ನುಡಿಯಿತು.
ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ನಿವಾರಿಸುವ ಸರ್ಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಸೌಕರ್ಯವಿರದ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಯಾವ ಪಾಲಕರು ಒಪ್ಪುತ್ತಾರೆ, ಸರ್ಕಾರಿ ಅಧಿಕಾರಿಗಳ ಮನೆಯ ಶೌಚಗೃಹಗಳೂ ಹೀಗೆಯೇ ಇರುತ್ತವೆಯೇ, ಇಂತಹ ಶಾಲೆಗಳಿಗೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಳಿಸಲು ಮುಂದಾಗುತ್ತಾರೆಯೇ, ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಾಣುವ ಕನಸುಗಳು ಸರ್ಕಾರಿ ಶಾಲೆಗಳಿಂದ ನನಸಾಗಲು ಸಾಧ್ಯವೇ? ಪ್ರತಿಭಾವಂತ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯ ಕೊಡದಿದ್ದರೆ ದೇಶದ ಅಭಿವೃದ್ಧಿಯಲ್ಲಿ ಅವರು ಪಾಲುದಾರರಾಗುವ ಅವಕಾಶ ತಡೆಹಿಡಿದಂತಾಗುತ್ತದೆ. ಇದು ರಾಷ್ಟ್ರೀಯ ನಷ್ಟವೂ ಆಗಲಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ಶಾಲೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದ ಈ ಪಿಐಎಲ್ 2013ರಲ್ಲಿ ದಾಖಲಾಗಿದೆ. ಕಳೆದ 10 ವರ್ಷಗಳಲಿ 3 ಸರ್ಕಾರಗಳು ಬಂದಿವೆ. ಸರ್ಕಾರಗಳು ಬದಲಾದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ನಾಡಿನ ಭವಿಷ್ಯ ಇರುವುದು ಶಾಲೆಗಳಲ್ಲಿ. ಆದರೆ, ಮೂಸೌಕರ್ಯಗಳಿಲ್ಲದ ಇಂತಹ ಶಾಲೆಗಳಿಂದ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ, ಸರ್ಕಾರ ಇಷ್ಟೊಂದು ಉದಾಸೀನವಾಗದೆ ಸ್ವಲ್ಪವಾದರೂ ಕಾಳಜಿ, ಗಂಭೀರತೆ ಪ್ರದರ್ಶಿಸಬೇಕು. ಕೋರ್ಟ್ ಆದೇಶ ಪಾಲನೆ ಮಾಡದೆ ಇಂತಹ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು, ಇದಕ್ಕೆಲ್ಲ ಯಾರು ಹೊಣೆ, ಯಾರು ಉತ್ತರದಾಯಿ, ‘ಚಲ್ತಾ ಹೈ’ ಎಂಬ ಭಾವನೆ ಸರ್ಕಾರಿ ಅಧಿಕಾರಿಗಳಿಗೆ ಬಂದು ಬಿಟ್ಟಿದೆಯೇ? ಇಂತಹ ಮನಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.
ಅನುದಾನದ ಲಭ್ಯತೆಯ ಮೇರೆಗೆ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂಬ ಸರ್ಕಾರದ ಪರ ವಕೀಲರು ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಪೀಠ, ಈ ರೀತಿಯ ಹೇಳಿಕೆ ಸರಿಯಲ್ಲ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು. ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಐ) ಮಾನದಂಡಗಳ ಪ್ರಕಾರ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ ನಿರ್ದಿಷ್ಟ ಅನುದಾನ ಮೀಸಲಿಡಬೇಕು. ಪ್ರತ್ಯೇಕ ಅನುದಾನ ಮೀಸಲಿಡದ ಹೊರತು ಉದ್ದೇಶ ಲಪ್ರದವಾಗುವುದಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಆದ್ದರಿಂದ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ಆ ಹಣವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿನಿಯೋಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕುರಿತು ಹೊಸದಾಗಿ ಸಮೀಕ್ಷೆ ನಡೆಸಿ ಮುಂದಿನ ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು. ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳನ್ನೂ ಸಮೀಕ್ಷೆಯಲ್ಲಿ ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕು. ಮುಂದಿನ ವಿಚಾರಣೆ ವೇಳೆ ಸರ್ಕಾರ ಸಲ್ಲಿಸುವ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಗಳ ಸಹಿ ಕಡ್ಡಾಯವಾಗಿರಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ 2 ವಾರಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ವರದಿಗೆ ಕಾಯದೆ ಸಮಸ್ಯೆಗಳು ಗಮನಕ್ಕೆ ಬಂದ ತಕ್ಷಣ ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ ಪೀಠ, ನ್ಯಾಯಾಲಯದ ಈ ಆದೇಶ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೂ ರವಾನಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
