|ಆರ್. ಕೃಷ್ಣಮೈಸೂರು
ಕೋವಿಡ್ ನಂತರ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಸಂಖ್ಯೆ ಏರಿಕೆಯಾಗಿರುವುದಲ್ಲದೆ, ಶಾಲೆಯಿಂದ ಹೊರಗುಳಿದವರ (ಡ್ರಾಪ್​ಔಟ್) ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಲ್ಲಿ ಕಲಿಕಾ ಮಟ್ಟ ಕುಸಿದಿರುವುದು ಕಳವಳಕಾರಿಯಾಗಿದೆ. ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯಲ್ಲಿ (ಆಸರ್) ಈ ಅಂಶ ಬಹಿರಂಗಗೊಂಡಿದೆ. ಹೆಣ್ಣು ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಇದಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಮುಂತಾದ ಕಾರ್ಯಕ್ರಮಗಳ ಸಹಯೋಗ ಮತ್ತು ಪರಿಣಾಮಕಾರಿ ಜಾರಿಯೂ ಕಾರಣವಾಗಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಕಳೆದ ಸೆಪ್ಟೆಂಬರ್​ನಿಂದ ನವೆಂಬರ್​ವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳ 900 ಹಳ್ಳಿಗಳಲ್ಲಿ 3 ರಿಂದ 16 ವರ್ಷದೊಳಗಿನ 17,814 ಕುಟುಂಬಗಳ 31,854 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ರಾಷ್ಟ್ರೀಯ ಸರಾಸರಿಯಲ್ಲಿ 6 ರಿಂದ 14 ವಯೋಮಾನದವರ ದಾಖಲಾತಿ ಪ್ರಮಾಣ ಶೇ. 95ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳ ಬಂದ್ ನಡುವೆಯೂ ಒಟ್ಟಾರೆ ದಾಖಲಾತಿ ಅಂಕಿ-ಅಂಶ ಏರಿಕೆ ಕಾಣುತ್ತಲೇ ಇದೆ. 2018ರಲ್ಲಿ ಶೇ.99.3 ಇದ್ದ ಮಕ್ಕಳ ದಾಖಲಾತಿ ಪ್ರಮಾಣ 2022ರಲ್ಲಿ ಶೇ.99.8 ಆಗಿದೆ. ಅದರಲ್ಲೂ ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ (6 ರಿಂದ 14 ವರ್ಷ) ಪ್ರಮಾಣ 2018ರಲ್ಲಿ ಶೇ.69.9 ಇದ್ದರೆ, 2022ರಲ್ಲಿ ಶೇ.72.6ಕ್ಕೆ ಏರಿಕೆಯಾಗಿದೆ.
ಬಾಲಕಿಯರೇ ಮೇಲುಗೈ:2006ರಲ್ಲಿ ಶಾಲೆಯಿಂದ ಹೊರಗುಳಿದ 11-14 ವಯಸ್ಸಿನ ಬಾಲಕಿಯರ ಶೇಕಡವಾರು ಪ್ರಮಾಣ ಶೇ.8.0 ಇತ್ತು. 2018ರಲ್ಲಿ ಈ ಪ್ರಮಾಣ ಶೇ.1.2ಕ್ಕೆ ಇಳಿದರೆ, 2022ರಲ್ಲಿ ಈ ಪ್ರಮಾಣ ಶೇ.0.4 ಆಗಿದೆ. ಈ ಮೂಲಕ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸಬೇಕು ಎನ್ನುವ ಜಾಗೃತಿ ಮೂಡಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ.
ಅಂಗನವಾಡಿಗೂ ರಷ್:ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳಿಗೂ ಮಕ್ಕಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿ ಶೇ.78.3 ದಾಖಲಾತಿ ಇದ್ದರೆ, ಕರ್ನಾಟಕದಲ್ಲಿ ಇದರ ಪ್ರಮಾಣ ಶೇ.94.3 ಇದೆ. 3 ವರ್ಷದ ಮಕ್ಕಳ ಅಂಗನವಾಡಿ ದಾಖಲಾತಿ ಪ್ರಮಾಣ 2018ರಲ್ಲಿ ಶೇ. 79.7 ಇದ್ದರೆ, 2022ರಲ್ಲಿ ಈ ಪ್ರಮಾಣ ಶೇ.88.3 ಆಗಿದೆ.
ಕಲಿಕಾ ಮಟ್ಟ ಇಳಿಕೆ:ಎರಡನೇ ತರಗತಿ ಪಠ್ಯವನ್ನು ಮೂರನೇ ತರಗತಿಯ ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಮಕ್ಕಳಿಗೆ ಓದುವಂತೆ ಹೇಳಿದಾಗ ತಡವರಿಸಿದ ಮಕ್ಕಳ ಸಂಖ್ಯೆಯೇ ಹೆಚ್ಚು. ಲೆಕ್ಕವನ್ನು ಬಲ್ಲ ಮೂರನೇ ತರಗತಿಯ ಮಕ್ಕಳ ಪ್ರಮಾಣ 2018ರಲ್ಲಿ 26.4 ರಿಂದ, 2022ರಲ್ಲಿ ಶೇ. 22.2ಕ್ಕೆ ಇಳಿಕೆಯಾಗಿದೆ. ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲ 2ನೇ ತರಗತಿ ಮಕ್ಕಳ ಶೇಕಡವಾರು ಪ್ರಮಾಣ 2022ರಲ್ಲಿ ಶೇ.19.7 ಇದ್ದರೆ, 3ನೇ ತರಗತಿಯಲ್ಲಿರುವ ಮಕ್ಕಳ ಪ್ರಮಾಣ ಶೇ.48 ಇದೆ. ಇದು ಅಖಿಲ ಭಾರತ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ 3ನೇ ತರಗತಿಯಲ್ಲಿರುವ ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲ ಮಕ್ಕಳ ಶೇಕಡವಾರು ಪ್ರಮಾಣ ಉತ್ತಮವಾಗಿದೆ ಎಂದು ವರದಿ ತಿಳಿಸಿದೆ.
ಮೂಲ ಸೌಲಭ್ಯ ಸುಧಾರಣೆ:ರಾಜ್ಯದ 812 ಸರ್ಕಾರಿ ಕಿರಿಯ ಪ್ರಾಥಮಿಕ ತರಗತಿಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. 139 ಕಿರಿಯ ಪ್ರಾಥಮಿಕ, 673 ಹಿರಿಯ ಪ್ರಾಥಮಿಕ ಶಾಲೆಗಳು ಇದರಲ್ಲಿ ಸೇರಿವೆ. ಶಾಲೆಗಳಲ್ಲಿ ಮೂಲಸೌಲಭ್ಯ ಸುಧಾರಣೆ ಕಂಡಿದ್ದು, ಬಳಕೆ ಯೋಗ್ಯವಾದ ಹುಡುಗಿಯರ ಶೌಚಗೃಹ ಹೊಂದಿರುವ ಶಾಲೆಗಳ ಪ್ರಮಾಣದಲ್ಲಿಯೂ ಏರಿಕೆ ಕಂಡಿದೆ. ವಿದ್ಯಾರ್ಥಿಗಳು ಬಳಸುತ್ತಿರುವ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಇತರ ಪುಸ್ತಕಗಳನ್ನು ಹೊಂದಿರುವ ಶಾಲೆಗಳ ಪ್ರಮಾಣ 2018ರಲ್ಲಿ ಶೇ.36.1ರಿಂದ 2022 ರಲ್ಲಿ ಶೇ. 51.9ಕ್ಕೆ ಏರಿಕೆಯಾಗಿದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುವ ಶಾಲೆಗಳ ಪ್ರಮಾಣ 2018ರಲ್ಲಿ ಶೇ. 76.8ರಿಂದ 2022 ರಲ್ಲಿ ಶೇ. 67.8ಕ್ಕೆ ಇಳಿಕೆ ಕಂಡಿದೆ. ಆಟದ ಮೈದಾನ ಹೊಂದಿರುವ ಶಾಲೆಗಳಲ್ಲಿ ಅಲ್ಪಮಟ್ಟದ ಸುಧಾರಣೆ ಆಗಿದೆ. ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ವಿತರಣೆ, ಅಗತ್ಯ ಶಿಕ್ಷಕರನ್ನು ಹೊಂದಿರುವ ಶಾಲೆಗಳಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.
ರಾಜ್ಯದಲ್ಲಿ ಮಕ್ಕಳ ಹಾಜರಾತಿ ಏರಿಕೆ, ಶಾಲೆ ಬಿಡುವವರ ಸಂಖ್ಯೆ ಇಳಿಕೆ ಆಗಿದ್ದರೂ ಕಲಿಕಾ ಮಟ್ಟ ಸುಧಾರಣೆ ಕಾಣಬೇಕಿರುವುದು ವರದಿಯಿಂದ ತಿಳಿದುಬಂದಿದೆ. ಎನ್​ಇಪಿ ಪ್ರಕಾರ 2025ರ ವೇಳೆಗೆ ಮೂರನೇ ತರಗತಿ ಮಕ್ಕಳು ಅಕ್ಷರ ಹಾಗೂ ಅಂಕಿ ಜ್ಞಾನ ಹೊಂದಿರಬೇಕು. ಈ ಗುರಿ ತಲುಪಲು ಎಲ್ಲರೂ ಶ್ರಮಿಸಬೇಕಿದೆ.
|ಜೆ. ನಟರಾಜ, ಸಂಶೋಧನಾ ವ್ಯವಸ್ಥಾಪಕ, ಪ್ರಥಮ್ ಎಜುಕೇಷನ್ ಫೌಂಡೇಷನ್
ಟ್ಯೂಷನ್​ಗೆ ಹೋಗೋರ ಸಂಖ್ಯೆ ಇಳಿಕೆ:ಅಖಿಲ ಭಾರತ ಮಟ್ಟದಲ್ಲಿ 1ರಿಂದ 8ನೇ ತರಗತಿ ವರೆಗೆ 2018ರಲ್ಲಿ ಶೇ.26.4 ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದು, ಈ ಪ್ರಮಾಣ 2022ರ ವೇಳೆಗೆ ಶೇ.30.5ಕ್ಕೆ ಏರಿಕೆಯಾಗಿದೆ. ಆದರೆ, ರಾಜ್ಯದಲ್ಲಿ ಈ ಪ್ರಮಾಣ 2018ರಲ್ಲಿ ಶೇ.11.3 ಇದ್ದರೆ, 2022ರಲ್ಲಿ ಶೇ.9.2ಕ್ಕೆ ಇಳಿದಿದೆ.
ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
