ಬೆಂಗಳೂರು :ಘಟಾನುಘಟಿ ರಾಜಕೀಯ ನಾಯಕರು ಅನುಭವವನ್ನು ಧಾರೆ ಎರೆದ ಮೇಲ್ಮನೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದ್ದ ವಿಧಾನಪರಿತ್ ಮಂಗಳವಾರ ಸದಸ್ಯರ ಅತಿರೇಕದ ವರ್ತನೆಗೆ ಸಾಕ್ಷಿಯಾಯಿತಲ್ಲದೇ, ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು. ಸಭಾಪತಿ ವಿರುದ್ಧದ ಅವಿಶ್ವಾಸ ಮಂಡನೆ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪ್ರತಿಷ್ಠೆ ಫಲವಾಗಿ ನ್ಯಾಯಾಂಗದಷ್ಟೇ ಸರಿಸಮಾನವಾದ ಗೌರವದಿಂದ ಕಾಣುವ ಸಭಾಪತಿ ಪೀಠ ಕಿತ್ತಾಟದ ವಸ್ತುವಾಯಿತು. ತಾವು ಜನ ಪ್ರತಿನಿಧಿ ಎಂಬುದನ್ನೂ ಮರೆತವರಂತೆ ಕೈಕೈ ಮಿಲಾಯಿಸಿದರು. ಸಂವಿಧಾನ ಬದ್ಧ ಸ್ಥಾನ ಹೊಂದಿದ ಉಪ ಸಭಾಪತಿ ಅವರ ಕುತ್ತಿಗೆಗೆ ಕೈ ಹಾಕಿ ಅವರನ್ನು ಎಳೆದಾಡಿ, ಅನಾಮತ್ತಾಗಿ ಕೆಳಗೆ ನೂಕಿದರು.
ಕಳಂಕದ ಹೆಜ್ಜೆ
* ಸೋಮವಾರ ಅಜೆಂಡಾ ಪ್ರಕಟಗೊಂಡಾಕ್ಷಣ ಸರ್ಕಾರದಿಂದ ಆಕ್ಷೇಪಣೆ.* ನಿಯಮದ ಪ್ರಕಾರ ಅವಿಶ್ವಾಸ ಮಂಡನೆ ವಿಚಾರ ಅಜೆಂಡಾದಲ್ಲಿ ಸೇರಿಸಿ ಎಂದು ವಾದ.* ವಾದಕ್ಕೆ ಸೊಪು್ಪ ಹಾಕದ ಸಭಾಪತಿ. ಸರ್ಕಾರದ ವಾದ ತಿರಸ್ಕಾರ* ಮಂಗಳವಾರ ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.* ಅವಿಶ್ವಾಸ ವಿಚಾರ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರಿಗೆ ಅವಕಾಶಕೊಡಬಾರದೆಂದು ನಿರ್ಧಾರ* 11 ಗಂಟೆಗೆ ಕಲಾಪಕ್ಕೆ ಆಗಮಿಸಿ ಪಕ್ಷದ ನಿಲುವು ಸ್ಪಷ್ಟಪಡಿಸಿದ ಸಚಿವ ಮಾಧುಸ್ವಾಮಿ* 11.10ಕ್ಕೆ ಕಲಾಪದ ಬೆಲ್ ರಿಂಗ್, 11.15ಕ್ಕೆ ಅಚಾನಕ್ ಬೆಳವಣಿಗೆ ಶುರು.* ಉಪಸಭಾಪತಿ ಬಿ.ಎಲ್.ಧಮೇಗೌಡರನ್ನು ಆಡಳಿತ ಪಕ್ಷ ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸಿತು.* ಕಸಿವಿಸಿಗೊಂಡ ಕಾಂಗ್ರೆಸ್​ನ ಹರಿಪ್ರಸಾದ್, ಆಕ್ಷೇಪ ಎತ್ತಿ ಪೀಠದ ಮುಂದೆ ಆಗಮಿಸಿದರು.* ಉಳಿದ ಕಾಂಗ್ರೆಸ್ ಸದಸ್ಯರು ಪೀಠದಿಂದ ಕೆಳಗಿಳಿಯುವಂತೆ ಪಟ್ಟುಹಿಡಿದರು* 11.17ಕ್ಕೆ ಬಿಜೆಪಿಯ ಸದಸ್ಯರು ಉಪಸಭಾಪತಿ ರಕ್ಷಣೆಗೆ ವೇದಿಕೆ ಸುತ್ತುವರಿದರು* ಸಭಾಪತಿ ಪೀಠದಲ್ಲಿ ಚಂದ್ರಶೇಖರ ಪಾಟೀಲರನ್ನು ಕೂರಿಸಿ ಸುತ್ತುವರಿದ ಕೈ ಸದಸ್ಯರು* ಚಂದ್ರಶೇಖರ ಪಾಟೀಲರನ್ನು ಕೆಳಕ್ಕೆ ಕಳಿಸಲು ಬಿಜೆಪಿ ಸದಸ್ಯರ ಪ್ರಯತ್ನ* ಪುನಃ ಮಾತಿನ ಚಕಮಕಿ, ಕಿತ್ತಾಟ, ಕೈ ಕೈ ಮಿಲಾವಣೆ, ನೆಲಕ್ಕುರುಳಿದ ಶಾಸಕರು* 11.35ಕ್ಕೆ ಏಕಾಏಕಿ ಸಭಾಪತಿ ಆಗಮನ, ಪೀಠದಲ್ಲಿ ಕುಳಿತುಕೊಳ್ಳದೇ ಮಾಹಿತಿ ಪ್ರಕಟಣೆ.* ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾಗಿ ಹೇಳಿ ವಾಪಸ್ ಕೊಠಡಿಗೆ* 12.15ಕ್ಕೆ ಬಿಜೆಪಿ- ಜೆಡಿಎಸ್ ಸದಸ್ಯರಿಂದ ಪ್ರತ್ಯೇಕ ಸಭೆ* 12.30ಕ್ಕೆ ಸಿಎಂ ನೇತೃತ್ವದಲ್ಲಿ ಹಿರಿಯ ಸದಸ್ಯರ ಸಭೆ, ರಾಜಭವನಕ್ಕೆ ತೆರಳಲು ನಿರ್ಧಾರ.
ಹೇಗಾಯಿತು ಇದೆಲ್ಲ? :ವಿಧಾನ ಪರಿಷತ್ ಕಲಾಪ ಆರಂಭಕ್ಕೂ ಮೊದಲೇ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರು ಸಭಾಪತಿ ಪೀಠದ ಸುತ್ತಲೂ ಕಿತ್ತಾಟ ನಡೆಸಿದರು. ಸದನದ ಬೆಲ್ ರಿಂಗಳಿಸಿದ ಕೆಲವೇ ಹೊತ್ತಲ್ಲಿ ಉಪಸಭಾಪತಿ ಧಮೇಗೌಡರನ್ನು ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸುವಲ್ಲಿ ಆಡಳಿತ ಪಕ್ಷದವರು ಸಫಲರಾದರು. ಇದರ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ಷೇಪ ಎತ್ತಿ, ಅವರನ್ನು ಕೆಳಗಿಳಿಯುವಂತೆ ಪಟ್ಟುಹಿಡಿದರು ವೇದಿಕೆ ಮೇಲೆರಲು ಮುಂದಾದರು.
ಇದನ್ನೂ ಓದಿ:ಇದೇನು ಬನಾನ ರಿಪಬ್ಲಿಕಾ? – ಬಿಜೆಪಿ ಶಾಸಕರು ಗೂಂಡಾಗಳು | ಸಿದ್ದರಾಮಯ್ಯ ಟೀಕಾಪ್ರಹಾರ
ಇದನ್ನು ಕಂಡ ಬಿಜೆಪಿ ಸದಸ್ಯರು ಉಪ ಸಭಾಪತಿಯವರ ರಕ್ಷಣೆಗೆ ಧಾವಿಸಿ ಸುತ್ತುವರಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ವೇದಿಕೆ ಮೇಲೇರಿ ಉಪ ಸಭಾಪತಿಯವರ ಕೈ ಹಿಡಿದು ಕೆಳಗೆಳೆಯಲು ಯತ್ನಿಸಿದರು. ಕಾಂಗ್ರೆಸ್​ನ ನಾರಾಯಣ ಸ್ವಾಮಿ ಮತ್ತು ನಸೀರ್ ಅಹ್ಮದ್ ಈ ಪ್ರಯತ್ನ ನಡೆಸಿದರೆ, ಪ್ರತಿಯಾಗಿ ಬಿಜೆಪಿಯಿಂದ ವೈ ನಾರಾಯಣ ಸ್ವಾಮಿ, ಪುಟ್ಟಣ್ಣ ಮತ್ತಿತರರು ಸಭಾಪತಿಯವರ ರಕ್ಷಣೆಗೆ ಮುಂದಾದರು. ಆದರೂ, ನಾರಾಯಣ ಸ್ವಾಮಿ, ನಸೀರ್ ಅಹ್ಮದ್ ಉಪಸಭಾಪತಿಯವರನ್ನು ಎಳೆದು ಕೆಳಗೆ ತರುವಲ್ಲಿ ಸಫಲರಾದರು. ಕೊರಳಪಟ್ಟಿಗೆ ಕೈ ಹಾಕಿ ದರನೆ ಎಳೆದು ತಂದು ಕೆಳಗೆ ಬಿಟ್ಟರು. ಅಷ್ಟೇ ಅಲ್ಲದೇ ಅಲ್ಲೇ ಇದ್ದ ಚಂದ್ರಶೇಖರ್ ಪಾಟೀಲ್ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿ ರಕ್ಷಣೆಗೆ ನಿಂತರು.
ಇದನ್ನೂ ಓದಿ:ಗೋಹತ್ಯೆ ನಿಷೇಧಿಸಿದ್ರೆ ಸಮಾಜದಲ್ಲಿ ಅಶಾಂತಿ, ಜನರ ಬಾಳು ಅಲ್ಲೋಲ-ಕಲ್ಲೋಲ: ಎಚ್​.ಡಿ.ದೇವೇಗೌಡ
ಈ ವೇಳೆ ಚಂದ್ರಶೇಖರ ಪಾಟೀಲ್ ಅವರನ್ನು ಕೆಳಗಿಳಿಸಲು ಆಯನೂರು ಮಂಜುನಾಥ್, ವೈ,ನಾರಾಯಣ ಸ್ವಾಮಿ ಮತ್ತಿತರರು ಪ್ರಯತ್ನಕ್ಕೆ ಕಾಂಗ್ರೆಸ್​ನ ನಾರಾಯಣ ಸ್ವಾಮಿ ಅವಕಾಶಕೊಡಲಿಲ್ಲ. ಎಲ್ಲರನ್ನು ತಳ್ಳಿ ಕೆಳಗೆ ಮುಗ್ಗರಿಸುವಂತೆ ಬಲ ಪ್ರಯೋಗ ಮಾಡಿದರು. ಈ ವೇಳೆ ಆಡಳಿತ ಪಕ್ಷದ ಹಲವು ಸದಸ್ಯರ ಕೈಗಳಿಗೆ ತರಚಿದ ಗಾಯವಾಯಿತು. ಇತ್ತ ಪೀಠದ ಹಿಂಭಾಗ ಸಭಾಪತಿ ಪ್ರವೇಶ ದ್ವಾರದ ಬಾಗಿಲು ಮುಚ್ಚಲು ಅರುಣ್ ಶಹಾಪುರ ಮತ್ತು ಎನ್.ರವಿಕುಮಾರ್ ಯತ್ನಿಸಿದರು. ಆದರೆ, ನಸೀರ್ ಅಹ್ಮದ್ ಮತ್ತಿತರರು ಬಾಗಿಲಗೆ ದಡದಡನೆ ಒದ್ದು ಬಾಗಿಲು ತೆರೆಸಿದರು. ಅಷ್ಟೇ ಅಲ್ಲದೇ ಅಲ್ಲೊಂದು ಮುಷ್ಟಿಯುದ್ಧವೂ ನಡೆದು ಶಾಸಕರು ನೆಲಕ್ಕುರಳಿದ ಪ್ರಸಂಗ ನಡೆಯಿತು.
ಇದನ್ನೂ ಓದಿ:ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ…
ಸಭಾಪತಿ ಆಗಮಿಸುವ ಮುನ್ನ ಪೀಠದ ಮುಂಭಾಗದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಅಳವಡಿಸಿದ್ದ ಗಾಜಿನ ಕವಚನ್ನು ಎಳೆದು ಹಾಕಿದರು. ಬಿಜೆಪಿಗೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರೆ, ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಘೊಷಣೆ ಕೂಗಿದರು. ಅಂತಿಮವಾಗಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಆಗಮಿಸಿ ಪೀಠದಲ್ಲಿ ಕುಳಿತುಕೊಳ್ಳದೇ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ತಮ್ಮ ಕೊಠಡಿಗೆ ತೆರಳಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನನ್ನ ಶರ್ಟ್​ ಗುಂಡಿ ಕಿತ್ತು ಹೋಗಿ ಮುಜುಗರ ಅನುಭವಿಸಿದೆ- ಆಯನೂರು ಮಂಜುನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
