ಪ್ರಮೋದ ಪೈಠಣ ಉಮದಿ (ಮಹಾರಾಷ್ಟ್ರ)
ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ ಮೊದಲಾದ ಪ್ರದೇಶಗಳು ತನಗೆ ಸೇರಬೇಕು ಎಂದು ಪದೇಪದೇ ಕ್ಯಾತೆ ತೆಗೆದು ಪುಂಡಾಟಿಕೆ ನಡೆಸುತ್ತಿರುವ ಮಹಾರಾಷ್ಟ್ರಕ್ಕೆ ಈಗ ದೊಡ್ಡ ಮುಜುಗರ ಉಂಟಾಗಿದೆ. ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 42 ಗ್ರಾಮಗಳ ಜನರು ‘ನಮಗೆ ನೀರು ಕೊಡಿ ಅಥವಾ ಕರ್ನಾಟಕಕ್ಕೆ ಸೇರಲು ಬಿಡಿ’ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ಉಮದಿ ಗ್ರಾಮದಲ್ಲಿ ನೀರಾವರಿ ಹೋರಾಟ ಸಮಿತಿ ಸದಸ್ಯರು ಸಭೆ ಸೇರಿ ‘ಕರ್ನಾಟಕದ ಮುಖ್ಯಮಂತ್ರಿಗಳಿಗೆ ಜಯವಾಗಲಿ’ ಎನ್ನುವ ಮೂಲಕ ಸಭೆ ಪ್ರಾರಂಭಿಸಿದರು. ‘ನಮಗೆ ನೀರು ಕೊಡಿ, ಇಲ್ಲದಿದ್ದರೆ ಎನ್​ಒಸಿ ಕೊಡಿ’ ಎಂದು ಘೊಷಣೆ ಕೂಗುತ್ತಾ ಮಹಾರಾಷ್ಟ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಮಹಾರಾಷ್ಟ್ರ ಸರ್ಕಾರ ನೀರು ಕೊಟ್ಟರೆ ಮಾತ್ರ ಇಲ್ಲಿ ಉಳಿದುಕೊಳ್ಳುತ್ತೇವೆ. ಇಲ್ಲದಿದ್ದರೆ ಕರ್ನಾಟಕಕ್ಕೆ ಸೇರಲು ಬಯಸುತ್ತೇವೆ ಎನ್ನುವ ಘೊಷಣೆಗಳು ಮೊಳಗಿದವು.
ಸಭೆಯಲ್ಲಿ ನೀರಾವರಿ ಹೋರಾಟ ಸಮಿತಿ ಮುಖಂಡ ಸುನೀಲ್ ಪೋತದಾರ್ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ನಮಗೆ ಹಲವು ದಶಕಗಳಿಂದ ಅನ್ಯಾಯ ಮಾಡಿದೆ. ನೀರು ಕೊಡುವ ಭರವಸೆ ಮಾತ್ರ ನೀಡುತ್ತಿದೆ. ಮುಂದಿನ ಎಂಟು ದಿನಗಳಲ್ಲಿ ಮುಖ್ಯಮಂತ್ರಿ ಏಕಾನಾಥ ಶಿಂಧೆ, ಜಲ ಸಂಪನ್ಮೂಲ ಸಚಿವ ಸೇರಿ ಸಂಬಂಧಿಸಿದ ಅಧಿಕಾರಿಗಳು ಉಮದಿಗೆ ಬರಬೇಕು. ನಮ್ಮ ಜತೆ ಚರ್ಚೆ ಮಾಡಬೇಕು. ಜತ್ತ ತಾಲೂಕಿನ 42 ಹಳ್ಳಿಗಳಿಗೆ ಯಾವ ರೀತಿ ಯೋಜನೆ ರೂಪಿಸಲಾಗಿದೆ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದರೆ ನಾವು ಕರ್ನಾಟಕ ಮುಖ್ಯಮಂತ್ರಿಗಳನ್ನು ಇಲ್ಲಿಗೆ ಆಗಮಿಸುವಂತೆ ಮನವಿ ಮಾಡುತ್ತೇವೆ. ಅವರ ಸಮ್ಮುಖದಲ್ಲಿ ಮತ್ತೊಮ್ಮೆ ನೀರು, ಆರೋಗ್ಯ ಹಾಗೂ ಶಿಕ್ಷಣ, ರಸ್ತೆ ಬಗ್ಗೆ ಇಲ್ಲಿನ ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು. ಈಗಾಗಲೆ ಕರ್ನಾಟಕ ಸರ್ಕಾರದ ಕೃಷ್ಣಾ ನದಿಯ ನೀರು ಮಹಾರಾಷ್ಟ್ರದ ಜತ್ತ ತಾಲೂಕಿನ ಕೆಲ ಗ್ರಾಮಗಳಿಗೆ ನೈಸರ್ಗಿಕವಾಗಿ ಹರಿದು ಬರುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಅವರು ಹೇಳಿದರು. ಮಾಜಿ ಜಿ.ಪಂ. ಸದಸ್ಯ ಚನ್ನಪ್ಪಾ ಹೊರ್ತಿ ಮಾತನಾಡಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ 42 ಗ್ರಾಮಗಳಿಗೆ ನೀರು ಕೊಡುವುದಾಗಿ ಹೇಳಿದ್ದಾರೆಯೇ ಹೊರತು ಅದು ಅನುಷ್ಠಾನಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರು ಹೋರಾಟ ಸಮಿತಿ ಸದಸ್ಯ ಅನೀಲ ಶಿಂಧೆ ಮಾತನಾಡಿ, ನಮ್ಮ ಬೇಡಿಕೆ ಈಡೇರದಿದ್ದರೆ ನಾವು ಕರ್ನಾಟಕಕ್ಕೆ ಸೇರಲು ಸಿದ್ಧರಿರುವುದಾಗಿ ಘೊಷಿಸಿದರು.
ರಾಜ್ಯದ ಬೇಡಿಕೆ ಹಾಗೂ ನಿಲುವುಗಳನ್ನು ಸುಪ್ರೀಂ
ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಮಂಡಿಸಲಾಗು ವುದು. ಮುಂದಿನ ವಾರ ಸರ್ವಪಕ್ಷಗಳ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದು, ಕೂಲಂಕಷವಾಗಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮಹಾರಾಷ್ಟ್ರದ ಜತ್ತ ಭಾಗದ ಜನರು ಕರ್ನಾಟಕದಲ್ಲಿ ವಿಲೀನವಾಗಲು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ.
| ಬಸವರಾಜ ಬೊಮ್ಮಾಯಿ ಸಿಎಂ
ಗಡಿಯಲ್ಲಿ ಖಾಕಿ ಕಟ್ಟೆಚ್ಚರ
ಕರ್ನಾಟಕ ಗಡಿ ಕಾಗವಾಡದಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಕಾಗವಾಡ ಗಡಿಯಲ್ಲಿ ಕೆಎಸ್​ಆರ್​ಪಿ ಹಾಗೂ ಡಿಆರ್ ತುಕಡಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ರಾಜ್ಯಗಳ ನಡುವಿನ ಸರ್ಕಾರಿ ಸಾರಿಗೆ ಬಸ್​ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಬಸ್ ಮೇಲೆ ಕಲ್ಲೆಸೆತ
ಪುಣೆಯಿಂದ-ಅಥಣಿ ಕಡೆಗೆ ಬರುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ಬಸ್ ಮೇಲೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ್ ನಗರದ ಹೊರವಲಯದಲ್ಲಿ ಪುಂಡರು ಕಲ್ಲು ತೂರಿದ್ದಾರೆ. ಬಸ್​ನ ಮುಂದಿನ ಗಾಜು ಪುಡಿಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಕಾಗವಾಡ ಗಡಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಬಸ್ ಸಂಚಾರ ಬಂದ್ ಮಾಡಿದ್ದರಿಂದ ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಪರಿಸ್ಥಿತಿಯ ಲಾಭ ಪಡೆದು ಖಾಸಗಿ ವಾಹನ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್​ಗಳು ಗಡಿಭಾಗದ ಕಾಗವಾಡ ಪಟ್ಟಣಕ್ಕೆ ಆಗಮಿಸಿ ಅಲ್ಲಿಂದಲೇ ಮರಳುತ್ತಿವೆ. ಮಿರಜ್ ಹಾಗೂ ಸಾಂಗಲಿ ನಗರಕ್ಕೆ ವಿವಿಧ ಉದ್ದೇಶಕ್ಕೆ ತೆರಳುವ ರೋಗಿಗಳು, ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + thirteen =
Remember me
