| ಬಾಬುರಾವ ಯಡ್ರಾಮಿ ಕಲಬುರಗಿ
ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಸಮಾರಂಭ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಯಿತು. ಸೇಡಂ ತಾಲೂಕಿನ ಮಳಖೇಡ (ಮಾನ್ಯಖೇಟ)ದಲ್ಲಿ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ 341 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೊಷಣೆ ಮಾಡುವ ಜತೆಗೆ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರಗಳನ್ನು ವಿತರಿಸಿದರು. ಈ ಮೂಲಕ ಗಿನ್ನೆಸ್ ದಾಖಲೆ ಕಾರ್ಯಕ್ರಮಕ್ಕೆ ಪ್ರಧಾನಿ ಸಾಕ್ಷಿಯಾದರು.
ದೇಶದ ಇತಿಹಾಸದಲ್ಲಿಯೇ ಏಕಕಾಲಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ತಾಂಡಾ ವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಿದ್ದು ದಾಖಲೆ. ಈ ಜನವಸತಿ ಪ್ರದೇಶಗಳಿಗೆ ವಿದ್ಯುತ್, ರಸ್ತೆ, ಶೌಚಾಲಯ, ಕುಡಿಯುವ ನೀರು, ಅಡುಗೆ ಅನಿಲ ಸಂಪರ್ಕ ಇತರ ಮೂಲಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವುದು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗುಡಿಸಲು ವಾಸಿಗಳಿಗೆ ಪಕ್ಕಾ ಮನೆ ನಿರ್ವಿುಸಿಕೊಡಲಾಗುವುದು ಎಂದು ಮೋದಿ ಘೊಷಿಸಿದರು. ದೇಶದೆಲ್ಲ್ಲೆಡೆ ಇರುವ ಬಂಜಾರ, ಆದಿವಾಸಿ, ಬುಡಕಟ್ಟು ಇತರ ಸಮುದಾಯದವರ ಅಭಿವೃದ್ಧಿಗೆ 65 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಬಂಜಾರ ಸಮುದಾಯದವರು ಇನ್ಮುಂದೆ ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ್ ಇತರರಿದ್ದರು.
ಲಂಬಾಣಿ, ಕನ್ನಡದಲ್ಲಿ ಭಾಷಣ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರು ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದರು. ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ-ಬಿಯಾ, ನಾಯ್ಕ, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್ ಜೈ ಸೇವಾಲಾಲ್ ಮಹಾರಾಜ್ ಎನ್ನುತ್ತಿದ್ದಂತೆ ನೆರೆದಿದ್ದ ಲಂಬಾಣಿ ಸಮುದಾಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಮೋದಿ..ಮೋದಿ…ಎಂದು ಜೈಘೊಷಗಳನ್ನು ಕೂಗಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ, ಕಲಬುರಗಿಯ ಶ್ರೀ ಶರಣಬಸವೇಶ್ವರ ಮತ್ತು ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ಅವರಿಗೆ ನಮನಗಳು ಎಂದರು. ಐತಿಹಾಸಿಕ ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನರಿಗೆ ನಮಸ್ಕಾರಗಳು ಎಂದು ಹೇಳುತ್ತಿದ್ದಂತೆಯೇ ಹಷೋದ್ಗಾರ ಮುಗಿಲು ಮುಟ್ಟಿತು.
ಮೋದಿಗೆ ಹರಸಿದ ಲಂಬಾಣಿ ಮಹಿಳೆ: ಮೋದಿ ಅವರಿಂದ ಪ್ರಥಮವಾಗಿ ಸೇಡಂ ತಾಲೂಕಿನ ಉಡಗಿ ತಾಂಡಾದ ರತ್ನಾಬಾಯಿ ಮತ್ತು ದೇವಲಾ ಜಾಧವ್ ದಂಪತಿ ಹಕ್ಕು ಪತ್ರ ಸ್ವೀಕರಿಸಿದರು. ಈ ವೇಳೆ ರತ್ನಾಬಾಯಿ ಹಕ್ಕುಪತ್ರ ಪಡೆದ ಬಳಿಕ ಮೋದಿ ಅವರೊಂದಿಗೆ ಕುಲೋಪರಿ ವಿಚಾರಿಸಿ, ಐತಿಹಾಸಿಕ ಕೆಲಸ ಮಾಡಿದ್ದಿರಿ, ನಿಮ್ಮಿಂದ ಸಾವಿರಾರು ಲಂಬಾಣಿಗರು ನೆಮ್ಮದಿಯಾಗಿ ಇರುವಂತೆ ಆಗಲಿದೆ ಎಂದು ಮೋದಿ ಅವರ ತಲೆ ಮೇಲೆ ಕೈ ಇಟ್ಟು ಹಾರೈಸಿದರು. ಈ ವೇಳೆ ಮೋದಿ ಸಹ ವಿನಮ್ರವಾಗಿ ತಲೆ ಬಾಗಿ ನಮಸ್ಕರಿಸಿದರು.
ಡಬಲ್ ಇಂಜಿನ್ ಸರ್ಕಾರದ ಎಲ್ಲ ಯೋಜನೆಗಳ ನೇರ ಲಾಭ ಇನ್ಮುಂದೆ ಕಂದಾಯ ಗ್ರಾಮಗಳಾಗಿರುವ ತಾಂಡಾದವರಿಗೆ ಸಹ ಲಭಿಸಲಿವೆ. ಕೇಂದ್ರ ಸರ್ಕಾರ 90ಕ್ಕೂ ಹೆಚ್ಚು ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿದ್ದು, ಈಗ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ ನಿವಾಸಿಗಳಿಗೂ ಇದರ ಲಾಭ ಸಿಗಲಿದೆ. ಎಲ್ಲ ಹಿಂದುಳಿದ ಭಾಗದ ಸಮಗ್ರ ವಿಕಾಸದಲ್ಲೇ ದೇಶದ ಅಭಿವೃದ್ಧಿ ಅಡಗಿದೆ.
| ನರೇಂದ್ರ ಮೋದಿ ಪ್ರಧಾನಿ
ಇದೊಂದು ಮಹಾ ಪರ್ವದ ಸಂಭ್ರಮ. ತಾಂಡಾಗಳ ತಾಯಂದಿರು ತಮ್ಮದೇ ಸಾಂಪ್ರದಾಯಿಕ ಉಡುಗೆ ಧರಿಸಿಕೊಂಡು ಬರುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದಾರೆ. ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದು, ಖುಷಿ ಇಮ್ಮಡಿಗೊಳಿಸಿದ್ದಾರೆ. ಈ ಗಿನ್ನ್ನೆಸ್ ದಾಖಲೆ ನಂತರ ಮುಂದಿನ ತಿಂಗಳು ದಾವಣಗೆರೆ ಜಿಲ್ಲೆಯಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ಉಳಿದವರಿಗೆ ಹಕ್ಕು ಪತ್ರ ವಿತರಿಸಲಾಗುವುದು.
| ಆರ್.ಅಶೋಕ್ ಸಚಿವ
ಸಾಮಾಜಿಕ ನ್ಯಾಯ ಬಿಜೆಪಿಯಿಂದ ಸಾಕಾರ
ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಶ್ರೇಷ್ಠ ಕಾರ್ಯ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಕಾರ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಳಖೇಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದ ಸರಕಾಗಿಸಿ, ಯಾವುದೇ ಸಮಾಜ ಪರಿವರ್ತನೆಯನ್ನೂ ಹಿಂದಿನವರು ಮಾಡಲಿಲ್ಲ. ಈ ಜನಾಂಗಗಳನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡು ಹಲವರು ಅಭಿವೃದ್ಧಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಜತೆಗೆ ಸಾಮಾಜಿಕ ಭದ್ರತೆ, ಸಾಮಾಜಿಕ ಪರಿವರ್ತನೆಯನ್ನು ಮಾಡುತ್ತಿದೆ. ಪ್ರಧಾನಿ ಮೋದಿ ಅವರಿಂದ ಹಕ್ಕುಪತ್ರಗಳನ್ನು ಪಡೆಯುತ್ತಿರುವುದು ಈ ಜನಾಂಗದವರಿಗೆ ಗೌರವ ತಂದುಕೊಟ್ಟಿದೆ ಎಂದರು. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ. ಭಾರತದಲ್ಲಿ ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ ಒದಗಿಸಿ, ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯಾಗುತ್ತಿದೆ. ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗಗಳ ಶಿಕ್ಷಣ, ಉದ್ಯೋಗ, ಸಬಲೀಕರಣ ಸಾಧಿಸುವುದು ಸರ್ಕಾರದ ಬದ್ಧತೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೋ›ತ್ಸಾಹಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಪೋ›ತ್ಸಾಹಿಸಲಾಗುತ್ತಿದೆ.
ವಿಕಾಸ್ ವಿಕಾಸ್ ಔರ್ ವಿಕಾಸ್
| ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಕಲ್ಯಾಣ ಕರ್ನಾಟಕದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಅಭಿವೃದ್ಧಿ ಪರ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಾಂದಿ ಹಾಡಿದರು. ಹುಣಸಗಿ ತಾಲೂಕಿನ ಕಾಲಜ್ಞಾನಿಯ ನೆಲ ಕೊಡೇಕಲ್​ನಲ್ಲಿ ಬಸವಸಾಗರ ಜಲಾಶಯದ ನಾರಾಯಣಪುರ ಎಡದಂಡೆ ಕಾಲುವೆಗೆ ಅಳವಡಿಸಿರುವ ಸ್ಕಾಡಾ ತಂತ್ರಜ್ಞಾನ ಗೇಟ್ ಲೋಕಾರ್ಪಣೆ, 2004 ಕೋಟಿ ರೂ. ವೆಚ್ಚದ ಜಲಧಾರೆ ಯೋಜನೆ ಹಾಗೂ ಸೂರತ್-ಚೆನ್ನೈ ಎಕ್ಸ್​ಪ್ರೆಸ್ ಗ್ರೀನ್ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಹನಿ ನೀರಾವರಿ ಪದ್ಧತಿಯಿಂದ ಅನ್ನದಾತರು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು. ಕರ್ನಾಟಕದ ವಿಕಾಸಕ್ಕಾಗಿ 10 ಸಾವಿರ ಕೋಟಿ ರೂ.ಗೂ ಅಧಿಕ ಯೋಜನೆಗಳಿಗೆ ಶಿಲಾನ್ಯಾಸ , ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದೇನೆ. ಈ ಯೋಜನೆಗಳಿಂದ ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಜತೆಗೆ ಕುಡಿಯುವ ನೀರಿಗೂ ಸಾಕಷ್ಟು ಉಪಯೋಗವಾಗಲಿದೆ. ಜನರ ಜೀವನಮಟ್ಟ ಸುಧಾರಿಸಲಿದೆ. ಉದ್ಯೋಗ ಪ್ರಮಾಣ ಹೆಚ್ಚಾಗಲಿದೆ. ಒಟ್ಟಾರೆ ಜಿಲ್ಲೆಗಳ ವಿಕಾಸವಾಗಲಿದೆ ಎಂದು ಪ್ರಧಾನಿ ಹೇಳಿದರು. ಭಾರತ ಇಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಸಮಯ ಕಾಣಲಿದೆ. ಕರ್ನಾಟಕದ ಕೊಡುಗೆಯೂ ಅದರಲ್ಲಿ ಸಾಕಷ್ಟು ಇರಲಿದೆ. ಇದಕ್ಕೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದ ಅವರು, ನೀರನ್ನು ಭವಿಷ್ಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ನಾರಾಯಣಪುರ ಎಡದಂಡೆ ಕಾಲುವೆಗೆ ನಿರ್ವಿುಸಿದ ಸ್ಕಾಡಾ ತಂತ್ರಜ್ಞಾನದ ಗೇಟ್​ಗಳು ನೀರು ಪೋಲಾಗದಂತೆ ನಜರ್ ಇಡಲಿವೆ. ಪರ್ ಡ್ರಾಪ್-ಮೋರ್ ಕ್ರಾಪ್​ಗೆ ಹೆಚ್ಚು ಒತ್ತು ಕೊಡಿ. ದೇಶದಲ್ಲಿ ನಮ್ಮ ಸರ್ಕಾರ 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ (ಕಿರು) ನೀರಾವರಿ ಮಾಡಿದ್ದು, ಕರ್ನಾಟಕದ ಐದು ಲಕ್ಷ ಹೆಕ್ಟೇರ್​ನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಭಾಷಣದ ಆರಂಭದಲ್ಲೇ ಡಬಲ್ ಇಂಜಿನ್ ಸರ್ಕಾರದ ಸಾಧನೆ ಬಣ್ಣಿಸಿದ ಪ್ರಧಾನಿ ನಮೋ, ನಾವು ಜನರನ್ನು ಮತಬ್ಯಾಂಕ್ ಆಗಿ ನೋಡುತ್ತಿಲ್ಲ. ನಮ್ಮ ಗುರಿ ಏನಿದ್ದರೂ ವಿಕಾಸ್, ವಿಕಾಸ್ ಔರ್ ವಿಕಾಸ್. ಯಾದಗಿರಿಯನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೊಷಿಸಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇಲ್ಲಿನ ಮಕ್ಕಳಿಗೆ ಕಾಡುತ್ತಿರುವ ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಡಿಜಟಲೀಕರಣ, ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯ ಕಲ್ಪಿಸಿದ್ದು, ಟಾಪ್ 10 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಯಾದಗಿರಿ ಮೊದಲ ಸ್ಥಾನದಲ್ಲಿ ಬಂದಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು.
ನೀರಾವರಿ ದಶಕ ಸಂಕಲ್ಪಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹನಿ ನೀರಿಗೆ ಅತಿ ಹೆಚ್ಚು ನೀರಾವರಿ ಮಾಡಬೇಕು ಎಂಬುದು ಪ್ರಧಾನಿ ಮೋದಿ ಕನಸು. ಅದರಂತೆ 2011ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಾವು ಸಂಕಲ್ಪ ಮಾಡಿ ರಾಜ್ಯದಲ್ಲಿ ಈ ಯೋಜನೆ ಆರಂಭಗೊಳಿಸಿದ್ದೇವು. ಆದರೆ ಅಂದಿನ ಯುಪಿಎ ಸರ್ಕಾರ ಈ ಯೋಜನೆಯತ್ತ ಅಷ್ಟೊಂದು ಗಮನಹರಿಸಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಸಂಕಲ್ಪಕ್ಕೆ ನೀರೆರೆಯಲಾಗಿದೆ ಎಂದು ಹೇಳಿದರು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ 4.50 ಲಕ್ಷ ಹೆಕ್ಟೇರ್​ಗೆ ಸಂಪೂರ್ಣ ನೀರು ಕಲ್ಪಿಸಬೇಕು ಎಂಬ ಸದುದ್ದೇಶ ಸರ್ಕಾರದ್ದು. ಇದರೊಂದಿಗೆ ಕಾಲುವೆಯಲ್ಲಿ ಶೇ.20 ನೀರು ಹೆಚ್ಚಿಸಬೇಕು ಎಂಬ ಕನಸಿದೆ. ಸ್ಕಾಡಾ ಯೋಜನೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ಸಿಗಲಿದ್ದು, ನಾರಾಯಣಪುರದ ಬಸವಸಾಗರ ಜಲಾಶಯ ‘ವಿಶ್ವದಲ್ಲೇ ಅತಿ ದೊಡ್ಡ ಸ್ಕಾಡಾ ಯೋಜನೆ’ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ನಮ್ಮ ಸರ್ಕಾರ ಮುಂದಿನ 10 ವರ್ಷ ನೀರಾವರಿ ದಶಕ ಎಂದು ಪರಿಗಣಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದು ಘೊಷಿಸಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಗೋವಿಂದ ಕಾರಜೋಳ, ಶಾಸಕರಾದ ನರಸಿಂಹ ನಾಯಕ (ರಾಜುಗೌಡ), ವೆಂಕಟರಡ್ಡಿ ಮುದ್ನಾಳ್, ಎ.ಎಸ್. ಪಾಟೀಲ್ ನಡಹಳ್ಳಿ ಇದ್ದರು.
ವೆಂಕಟಪ್ಪ ನಾಯಕ ಸ್ಮರಿಸಿದ ನಮೋಯಾದಗಿರಿ ಜಿಲ್ಲೆಯ ಇತಿಹಾಸ ಅತ್ಯಂತ ಸಂಪತ್ಭರಿತವಾಗಿದ್ದು, ಪೂರ್ವಜರ ಸಾಮರ್ಥ್ಯದ ಪ್ರತೀಕವಾಗಿದೆ. ಇಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಇದೆ. 1857ರ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿದ್ದ ಸುರಪುರ ಸಂಸ್ಥಾನದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಅರಸು ಮನೆತನದ ಬಗ್ಗೆ ಗುಣಗಾನ ಮಾಡಿದರು. ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಹೃದಯಪೂರ್ವಕ ಧನ್ಯವಾದ ಎಂದು ಕನ್ನಡದಲ್ಲಿ ಮಾತು ಆರಂಭಿಸಿ 29 ನಿಮಿಷ ಭಾಷಣ ಮಾಡಿದ್ದು ವಿಶೇಷವೆನಿಸಿತು.
ಮುಗಿಲು ಮುಟ್ಟಿದ ಹಷೋದ್ಗಾರಕಲಬುರಗಿಯಿಂದ ಕೊಡೇಕಲ್​ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಕಂಡ ಲಕ್ಷಾಂತರ ಜನ ಮೋದಿ ಮೋದಿ ಎಂದು ಹಷೋದ್ಗಾರ ಕೂಗಿದರು. ವೇದಿಕೆ ಮುಂಭಾಗದಲ್ಲಿ ಆಗಮಿಸಿ ಜನರತ್ತ ಕೈಬೀಸಿ ಆಸೀನರಾದರು. ಕಾರ್ಯಕ್ರಮದಲ್ಲಿ ಬರೋಬ್ಬರಿ 3.5 ಲಕ್ಷ ಜನ ಭಾಗಿಯಾಗಿದ್ದರು. ಸುಮಾರು 50 ಸಾವಿರ ಜನ ಒಳಗಡೆ ಬರಲಾಗದೆ ಬಿಸಿಲಿನಲ್ಲಿ ನಿಂತೇ ಮೋದಿ ಭಾಷಣ ಆಲಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 6 =
Remember me
