| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕಬ್ಬು ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಎಥೆನಾಲ್ ನೀತಿ ರೂಪಿಸುತ್ತಿರುವ ಬೆನ್ನಲ್ಲೇ, ಉದ್ಯಮಿಗಳಲ್ಲಿ ಉತ್ಸಾಹ ಕಾಣಿಸಿದ್ದು ಕಳೆದ ಒಂದು ವರ್ಷದಲ್ಲಿ 18 ಹೂಡಿಕೆದಾರರು ಉದ್ಯಮ ಆರಂಭಿಸಲು ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 2021 ಏಪ್ರಿಲ್​ನಿಂದ 2022 ಜುಲೈವರೆಗೆ ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದ 18 ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿದೆ. ಈ ಹೂಡಿಕೆಗಳ ಪ್ರಸ್ತಾವನೆಯಲ್ಲಿ ವಿವರಿಸುವಷ್ಟು ಎಥೆನಾಲ್ ಉತ್ಪಾದನೆ ಶುರುವಾದರೆ ದೇಶದಲ್ಲಿ ಕರ್ನಾಟಕವೇ ಅಗ್ರಗಣ್ಯ ಎನಿಸಿಕೊಳ್ಳಲಿದೆ. ಪೆಟ್ರೊಲ್ ಬೆಲೆ ವಿಪರೀತ ಏರಿದ ಸಂದರ್ಭದಲ್ಲಿ ಪರ್ಯಾಯ ಮೂಲಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಈಗಾಗಲೇ ಹಂತಹಂತ ವಾಗಿ ಎಥೆನಾಲ್ ಬಳಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಲಹೆ ಮಾಡಿದ್ದು, 2022ರಲ್ಲಿ ಶೇ.10 ಹಾಗೂ 2025ರಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣಕ್ಕೆ ಅವಕಾಶ ದೊರೆ ಯುತ್ತದೆ. ಪೆಟ್ರೊಲ್- ಡಿಸೇಲ್​ನಲ್ಲಿ ಸುಮಾರು ಶೇ.35ರಷ್ಟು ಎಥನಾಲ್ ಬೆರೆಸುವುದರಿಂದ ಕಚ್ಚಾ ತೈಲದ ಆಮದು ಅವಲಂಬನೆ ಕಡಿಮೆಯಾಗುವುದು. ಇದರಿಂದ ದೇಶದ ಅರ್ಥಿಕತೆಗೂ ಲಾಭವಾಗುವುದು. ಹಾಗೆಯೇ ದೇಶೀಯ ಬಳಕೆಯ ನಂತರ ಉಳಿಯುವ ಹೆಚ್ಚುವರಿ ಎಥೆನಾಲ್ ವಿದೇಶಕ್ಕೆ ರಫ್ತು ಮಾಡುವುದಕ್ಕೂ ಅವಕಾಶವಿದೆ. ಇನ್ನು ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲನ್ನು ಸರ್ಕಾರವೇ ಖರೀದಿಸಿ ಪೆಟ್ರೋಲಿಯಂ ಕಂಪನಿಗಳಿಗೆ ಮಾರಾಟ ಮಾಡುವ ಚಿಂತನೆಯೂ ಇದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಪರ್ಯಾಯ ಇಂಧನವಾಗಿ ಎಥೆನಾಲ್ ಬಳಕೆಯಾಗುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾಗುವುದಿಲ್ಲ ಎನ್ನುವ ಕಾರಣದಿಂದಾಗಿ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸಲು ಆಸಕ್ತಿ ತಾಳಿವೆ. ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನಷ್ಟೆ ಉತ್ಪಾದಿಸುವುದರಿಂದ ಹೆಚ್ಚು ಲಾಭ ಬರುವುದಿಲ್ಲ. ಅಲ್ಲದೇ, ಸಕ್ಕರೆ ಉತ್ಪಾದಿಸಿದ ಬಳಿಕ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಅದನ್ನು ಶೇಖರಿಸಿಡಬೇಕು.
ದಾಸ್ತಾನಾಗಿದ್ದ ಸಕ್ಕರೆ ವಾತಾವರಣ ವ್ಯತ್ಯಾಸದಿಂದ ಹಾಳಾದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಸಕ್ಕರೆ ಶೇಖರಿಸುವ ಸಂದರ್ಭ ಬಂದಾಗ ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲೂ ಸಮಸ್ಯೆಯಾಗುತ್ತದೆ. ಇದರ ಬದಲಿಗೆ ಎಥೆನಾಲ್ ಉತ್ಪಾದಿಸಿದರೆ ಸಕ್ಕರೆ ಕಾರ್ಖಾನೆಗಳ ಆದಾಯ ಹೆಚ್ಚುವುದು. ರೈತರಿಗೂ ಅನುಕೂಲ ಎಂಬ ವಾದವಿದೆ.
ಬ್ರೆಜಿಲ್ ದೇಶದಲ್ಲಿ ಒಂದು ವರ್ಷ ಸಕ್ಕರೆ ಉತ್ಪಾದನೆಗೆ ಕಬ್ಬು ಅರೆದರೆ ಮತ್ತೊಂದು ವರ್ಷ ಎಥೆನಾಲ್​ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಆ ಮಟ್ಟಿಗೆ ಕಬ್ಬಿನ ಬೆಳೆ ಅಲ್ಲಿದೆ. ಕಬ್ಬು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, ಎಥೆನಾಲ್​ಗೆ ಹೆಚ್ಚೆಚ್ಚು ಹೊರಳಿದಷ್ಟು ರೈತರು ಲಾಭದಾಯಕ ಕಬ್ಬು ಬೆಳೆಗೆ ಗಮನ ಕೊಡಲು ಸಾಧ್ಯವಿದೆ ಎಂಬ ಅಭಿಪ್ರಾಯ ಅಧಿಕಾರಿಗಳಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಶೇಷ ರಿಯಾಯಿತಿ ದೊರೆತಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ಪಾದನೆ ಗಣನೀಯರಾಜ್ಯದಲ್ಲಿ ಸ್ಥಾಪನೆಯಾಗುವ 18 ಉತ್ಪಾದನಾ ಘಟಕಗಳಲ್ಲಿ 5,185 ಕೆಎಲ್​ಪಿಡಿ (ಪ್ರತಿದಿನ ಉತ್ಪಾದನೆ ಆಗುವ ಕಿ.ಲೀ) ಎಥೆನಾಲ್ ಉತ್ಪಾದನೆ ಆಗಲಿದೆ. ಈ 18 ಯೋಜನೆಗಳ ಪೈಕಿ ಕಬ್ಬಿನಿಂದ ಮಾತ್ರವಲ್ಲದೇ, ಭತ್ತ, ಜೋಳ ಹಾಗೂ ಗೋಧಿ ಹೊಟ್ಟಿನಿಂದ ಎಥೆನಾಲ್ ಉತ್ಪಾದನೆ ಮಾಡಲು 5 ಕಂಪನಿಗಳು ಅನುಮೋದನೆ ಪಡೆದಿವೆ. ಇದೇ ರೀತಿ ಕಬ್ಬು ಹೊರತುಪಡಿಸಿ ಉಳಿದ ಮೂಲಗಳಿಂದಲೂ ಎಥೆನಾಲ್ ಉತ್ಪಾದಿಸುವ ಇನ್ನಷ್ಟು ಘಟಕದ ನಿರೀಕ್ಷೆಯಲ್ಲಿ ಸರ್ಕಾರವಿದೆ.
ಎಥೆನಾಲ್ ಉತ್ಪಾದಿಸುವ ಘಟಕ
4 ಸಾವಿರ ಜನರಿಗೆ ಉದ್ಯೋಗಕಳೆದ ಒಂದು ವರ್ಷದಲ್ಲಿ 18 ಯೋಜನೆಗಳಿಗೆ ಅನುಮೋದನೆ ಸಿಕ್ಕಿದ್ದು, 5,850.18 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಅಲ್ಲದೇ ಎಥೆನಾಲ್ ಘಟಕ ಸ್ಥಾಪನೆಯಿಂದ 4,565 ಜನರಿಗೆ ಉದ್ಯೋಗ ಅವಕಾಶ ಲಭ್ಯವಾಗಲಿದೆ.
ವರ್ಷ ಪೂರ್ತಿ ಕೆಲಸ ಸಚಿವ ನಿರಾಣಿ ಸಂತಸಮೋದಿ ನೇತೃತ್ವದ ಸರ್ಕಾರವು ಪೆಟ್ರೋಲ್, ಡಿಸೇಲ್​ನೊಂದಿಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡಲು ಒತ್ತು ನೀಡಿರುವ ಬೆನ್ನಲ್ಲೇ ಎಥೆನಾಲ್ ಉತ್ಪಾದನೆ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರು ಹೆಚ್ಚಿನ ಒಲವು ತೋರಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 5, 850 ಕೋಟಿ ರೂ. ಹೂಡಿಕೆ ಆಗಿದೆ. ದೇಶದಲ್ಲೇ ಹೆಚ್ಚು ಎಥೆನಾಲ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದಾಗಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದರು. ಸಕ್ಕರೆ ಕಾರ್ಖಾನೆಗಳಲ್ಲಿ ವರ್ಷಕ್ಕೆ 4-5 ತಿಂಗಳಷ್ಟೇ ಕೆಲಸ ಇರುತ್ತದೆ, ಎಥೆನಾಲ್ ಉತ್ಪಾದನೆ ಆರಂಭಿಸಿದರೆ ನೌಕರರಿಗೆ ವರ್ಷವಿಡೀ ಕೆಲಸದ ಜತೆಗೆ ಪಗಾರ ದೊರೆಯುತ್ತದೆ. ಕಾರ್ಖಾನೆ ಮಾಲೀಕರಿಗೆ ನಷ್ಟ ಇರುವುದಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
