ಬೆಂಗಳೂರು:ಸಾಕಷ್ಟು ವಾದ-ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿದ್ದ ಅನೇಕ ತಪು್ಪ, ಅವಾಂತರಗಳನ್ನು ನಾವು ಸರಿಪಡಿಸಿದ್ದೇವೆ ಎಂದು ವಿರೋಧಿಗಳಿಗೆ ದಾಖಲೆಸಹಿತ ತಿರುಗೇಟು ನೀಡಿದೆ.
ಪಠ್ಯಪರಿಷ್ಕರಣೆ ವಿಚಾರದಲ್ಲಿ ಉದ್ಭವಿಸಿದ್ದ ಎಲ್ಲ ಅನುಮಾನ, ಪ್ರಶ್ನೆ, ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಗುರುವಾರ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್, ಅಶೋಕ್, ರೋಹಿತ್ ಚಕ್ರತೀರ್ಥ ಸಮಿತಿಯಿಂದ ನಡೆದ ಪಠ್ಯ ಪರಿಷ್ಕರಣೆಯಲ್ಲೂ 7-8 ದೋಷಗಳಾಗಿವೆ. ಅವುಗಳನ್ನು ತಕ್ಷಣವೇ ಸರಿಪಡಿಸಿ, ಶಾಲೆಗಳಲ್ಲಿ ಸರಿಯಾದ ರೀತಿಯಲ್ಲಿ ಕಲಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. 2014-15, 2017-18 ಹಾಗೂ 2022-23ನೇ ಸಾಲಿನ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ವಿಷಯಗಳಿಗೆ ಸಂಬಂಧಿಸಿದಂತೆ, ಹಿಂದಿನ ಪರಿಷ್ಕರಣೆಯಲ್ಲಿ ಯಾವ ಯಾವ ಲೋಪಗಳಾಗಿದ್ದವು. ಅವುಗಳನ್ನು ನಾವು ಹೇಗೆ ಸರಿಪಡಿಸಿದ್ದೇವೆ ಎಂದು ವಿವರಿಸುವ ಹೋಲಿಕೆ, ವ್ಯತ್ಯಾಸಗಳ ಮಾಹಿತಿಯನ್ನೊಳಗೊಂಡ 200 ಪುಟಗಳ ಹೊತ್ತಗೆಯನ್ನು ಅವರು ಬಿಡುಗಡೆಗೊಳಿಸಿದರು.
ಗೌಡರ ಆಕ್ಷೇಪಕ್ಕೆ ಸಿಎಂ ಉತ್ತರ:ಪಠ್ಯ ಪುಸ್ತಕ ಸಮಿತಿಯ ರೋಹಿತ್ ಚಕ್ರತೀರ್ಥ ಕುರಿತು ದೇವೇಗೌಡರ ಆಕ್ಷೇಪಕ್ಕೆ ಸಿಎಂ ಸ್ಪಷ್ಟನೆ ಕೊಡುತ್ತಾರೆ ಎಂದು ಸಚಿವ ಅಶೋಕ್ ತಿಳಿಸಿದರು. ನಾಡಗೀತೆ ತಿರುಚಿದ ಪೋಸ್ಟ್ ವಿಷಯ ದಲ್ಲಿ ಸಿದ್ದರಾಮಯ್ಯ ಸರ್ಕಾರ ಕಡೆ ಗಣಿಸಿತು. ನಮ್ಮ ಸರ್ಕಾರ ಆ ಪೋಸ್ಟ್ ರಚಿಸಿದವರ ವಿರುದ್ಧ ಎಫ್​ಐ ಆರ್ ದಾಖಲಿಸಿದೆ. ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವಾಗ ಆ ಪಂಥ, ಈ ಪಂಥ ಎಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.
1. ಮಹಾತ್ಮ ಗಾಂಧಿಯವರು ಭಾರತ- ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೊಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಪ್ರಯೋಗಿಸಿದ್ದಲ್ಲದೇ ಮತೀಯ ಯುದ್ಧಗಳ ಕುರಿತಾದ ಅಂಶಗಳನ್ನು ತೆಗೆದುಹಾಕಲಾಗಿದೆ.
2. ವೀರ ಶಿವಾಜಿಯನ್ನು ಕಡೆಗಣಿಸಲಾಯಿತು. ರಜಪೂತರ ಪಾಠವನ್ನೂ ಕೈಬಿಟ್ಟರು. ಪೃಥ್ವಿರಾಜ್ ಚೌಹಾಣ್ ಪಠ್ಯದಲ್ಲಿ ನಮ್ಮ ರಾಜರ ಔದಾರ್ಯ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂಬಂತೆ ಪರಿಷ್ಕರಣೆ.
3. ರಾಷ್ಟ್ರಧ್ವಜ ಕುರಿತು ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ, ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು… ಗೀತೆ ತೆಗೆದಿದ್ದರು.
4. ಮೈಸೂರು ನಗರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹರಡಿದೆ, ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಿ ಮೈಸೂರು ಮನೆತನದ ಅಧಿದೇವತೆ ಎಂಬ ಪ್ರಮುಖ ಅಂಶ ಕೈಬಿಡಲಾಗಿದೆ.
5. ದೇವಾಲಯ ಚಿತ್ರಗಳನ್ನು ಕೈಬಿಟ್ಟಿರುವುದು, ಮಥುರಾ ಶ್ರೀಕೃಷ್ಣ ಮಂದಿರ ಮತ್ತು ಸೋಮನಾಥ ದೇವಾಲಯದ ಅಂಶ ಕೈಬಿಟ್ಟಿರುವುದು.
6. ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿಹಾಕಲಾಗಿತ್ತು. ವಿಜಯನಗರ ಸಾಮ್ರಾಜ್ಯವು ಉದಯಗೊಂಡು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಣೆ ಮಾಡಿದರು. ಸಾಮ್ರಾಜ್ಯವು ಮೂರು ಶತಮಾನಗಳ ಕಾಲ ವೈಭವದಿಂದ ಮೆರೆಯಿತು ಎಂಬ ಸಾಲುಗಳಿಗೆ ಕತ್ತರಿ ಪ್ರಯೋಗ.
7. ಭಾರತದ ಮಹಾರಾಜರ ಕಡೆಗಣನೆ, ದಿಲ್ಲಿ ಸುಲ್ತಾನರ ಕಾಲದ ಖಿಲ್ಜಿ ಅವಧಿಯ ಗುಲಾಮಗಿರಿ ಅಂಶ ಎಗರಿಸಿದರು. ಇನ್ನು ರಜಪೂತರ ಗುಣ ಧರ್ಮಗಳನ್ನು ಕೈಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.
8. ಸರ್ವಾಧಿಕಾರದಿಂದ ರಾಷ್ಟ್ರಪ್ರೀತಿ ಹೆಚ್ಚುತ್ತದೆ ಎಂಬ ಅಂಶವನ್ನು ಸಮಾಜ ವಿಜ್ಞಾನ ಪಾಠದಲ್ಲಿ ಸೇರಿಸಲಾಗಿದೆ. ಹಳೆಯ ಪಠ್ಯದ ಬಹಳಷ್ಟು ಪುಟಗಳಲ್ಲಿದ್ದ ಹಿಂದು ಪದ ಕೈಬಿಡಲಾಗಿದೆ. ಹಿಂದೂ ಮಹಾ ಸಾಗರ ಇರಬಾರದು ಎಂದು ಇಂಡಿಯನ್ ಓಷನ್ ಎಂದು ಬದಲಿಸಿದ್ದರು.
9. ದೆಹಲಿ ಸುಲ್ತಾನರ ಪಾಠದಲ್ಲಿ ದ್ವಂಸ ಮಾಡಿದ್ದರು ಎಂದಿತ್ತು, ದಾಳಿಯನ್ನು ಕಡೆಗಣಿಸಿ ಒಳ್ಳೆದಾಗಿದೆ ಎಂದು ಬಿಂಬಿಸಿದರು.
10. 10ನೇ ತರಗತಿ ಕನ್ನಡ ಭಾಷೆ ಪುಸ್ತಕದಲ್ಲಿದ್ದ ಆದಿಕವಿ ಪಂಪ ಬರೆದಿರುವ ಎಮ್ಮನುಡಿಗೇಳ್ ಪಾಠವನ್ನು ಮಹಾಭಾರತದ ಕಥೆ ಎಂಬ ಕಾರಣಕ್ಕೆ ಕೈಬಿಡಲಾಗಿತ್ತು.
ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಜತೆ ಸುದ್ದಿಗೋಷ್ಠಿ ನಡೆಸಿದ ಅಶೋಕ್, ಕೆಲವು ಸಾಹಿತಿಗಳು ಹಾಗೂ ರಾಜಕೀಯ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಇದು ನಮ್ಮ ಉತ್ತರ ಎಂದರು. ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಇಲ್ಲದ ಲೋಪದೋಷಗಳ ಬಗ್ಗೆ ಈಗ ಮಾತನಾಡುತ್ತಿರುವವರು ಈ ಹಿಂದೆ ಮಾಡಿದ ಅವಾಂತರದ ಬಗ್ಗೆಯೂ ಸ್ವಲ್ಪ ಮಾತನಾಡಬೇಕೆಂದು ಸವಾಲು ಹಾಕಿದ ಅಶೋಕ್, 2014-15ರಲ್ಲಿ ಉತ್ತಮವಾಗಿ ರೂಪಿಸಲ್ಪಟ್ಟ ನೂತನ ಪಠ್ಯಪುಸ್ತಕಗಳನ್ನು ಕೇವಲ ಎರಡು ವರ್ಷಗಳಲ್ಲಿ ಅನಗತ್ಯವಾಗಿ ಪರಿಷ್ಕರಿಸಲು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿ 2017-18ರಲ್ಲಿ ಪರಿಷ್ಕೃತ ಪಠ್ಯಪುಸ್ತಕ ಜಾರಿಗೊಳಿಸಲಾಯಿತು ಎಂದರು. ಪ
ಠ್ಯಪುಸ್ತಕಗಳು ಕೇಸರೀಕರಣವಾಗಿವೆ ಎಂಬ ನೆಪವೊಡ್ಡಿ ಸಿದ್ದರಾಮಯ್ಯ ಸರ್ಕಾರ ಪರಿಷ್ಕರಿಸಿತ್ತು. ಆ ಸಂದರ್ಭದಲ್ಲಿ ಹಿಂದು, ಭಾರತೀಯತೆಗಳಿಗೆ ಸಂಬಂಧಿಸಿದ ಅಂಶಗಳನ್ನು ತೆಗೆದು, ಅನೇಕರ ಭಾವನೆಗಳಿಗೆ ನೋವುಂಟು ಮಾಡಲಾಗಿತ್ತು. ಇದಕ್ಕಾಗಿ ನಮ್ಮ ಸರ್ಕಾರವು ಪಠ್ಯಪುಸ್ತಕ ಪರಿಶೀಲನಾ ಸಮಿತಿ ರಚಿಸಿ 1ರಿಂದ 10ನೇ ತರಗತಿ ಕನ್ನಡ ಭಾಷಾ ವಿಷಯ ಹಾಗೂ 6ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ ಎಂದರು. ಪಠ್ಯಪುಸ್ತಕದಲ್ಲಿ ಮೈಸೂರು ಒಡೆಯರ್​ರನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣ, ಹಿಂದುಗಳ ಕಡೆಗಣನೆ, ಮುಸ್ಲಿಮರ ಓಲೈಕೆ, ರಾಷ್ಟ್ರಪ್ರೇಮದ ಕಡೆಗಣನೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಚಾಟಿ ಬೀಸಿದರು.
ಕಳ್ಳರನ್ನು ಹಿಡಿದ ಗ್ರಾಮಸ್ಥರಿಗೆ ಉದ್ಧಟತನ ಹೇಳಿಕೆ; ಬಿಜಿ ಇದ್ದೀವಿ ಎಂದು ಬೆಲೆ ತೆತ್ತ ಕಾನ್ಸ್‌ಟೇಬಲ್

ಸಾಕು ನಾಯಿಗೆ ಸೀಮಂತ ಮಾಡಿದ ರಂಗಭೂಮಿ ಕಲಾವಿದೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:6 + four =
Remember me
