ಕಾಶಿಯ ಜ್ಞಾನವಾಪಿ ಹಲವು ಐತಿಹಾಸಿಕ ಸತ್ಯಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಈ ಬಗ್ಗೆ ಸಂಶೋಧನಾತ್ಮಕ ಬೆಳಕು ಚೆಲ್ಲಿ, ವಾಸ್ತವಗಳನ್ನು ಹೆಕ್ಕಿದ ಖ್ಯಾತ ಇತಿಹಾಸಕಾರ ಡಾ.ವಿಕ್ರಮ್ ಸಂಪತ್ ‘ಗಚಜಿಠಿಜ್ಞಿಜ ್ಛ್ಟ ಖಜಜಿಡಚ: ಖ್ಞಿಛಿಚ್ಟಠಿಜಜ್ಞಿಜ ಠಿಜಛಿ ಖ್ಟ್ಠಜ ಟ್ಛ ಓಚಠಜಜಿ’ಠ ಎಢಚ್ಞ ್ಖಟಜಿ’ ಎಂಬ ಮಹತ್ವದ ಕೃತಿಯನ್ನು ರಚಿಸಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದೆ. ‘ಶಿವನಿಗಾಗಿ ಕಾಯುತ್ತ… ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ’ ಪುಸ್ತಕ ಇಂದು ಲೋಕಾರ್ಪಣೆಗೊಳ್ಳುತ್ತಿದ್ದು, ತನ್ನಿಮಿತ್ತ ಈ ಪುಸ್ತಕದ ಅಧ್ಯಾಯದ ಒಂದು ಭಾಗವನ್ನು ಇಲ್ಲಿ ನೀಡಲಾಗಿದೆ.

ಪವಿತ್ರ ಸ್ಥಳವನ್ನು ಗುರುತಿಸುತ್ತ…ಭಾರತದ ಸಾಂಸ್ಕೃತಿಕ ಹಾಗೂ ಧಾರ್ವಿುಕ ಅಸ್ತಿತ್ವದ ಜೀವಸೆಲೆಯಾಗಿರುವ ಭವ್ಯವಾದ ಗಂಗಾನದಿಯು ಉತ್ತರ ದಿಕ್ಕಿಗೆ ತಿರುಗುವ ಸ್ಥಳದಲ್ಲಿ, ಅದರ ಪಶ್ಚಿಮ ದಡದುದ್ದಕ್ಕೂ ಹರಡಿರುವ ಪ್ರಾಚೀನ ನಗರವು ಅದೆಷ್ಟು ಪ್ರಾಚೀನವಾದದ್ದೆಂದರೆ, ಅದು ಈ ನೆಲದ ನಾಗರೀಕತೆಯ ಆತ್ಮವೆಂಬ ಹಿರಿಮೆಯನ್ನು ಗಳಿಸಿದೆ. ಕಾಶಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ನಗರವು ತನ್ನ ಸುದೀರ್ಘ ಇತಿಹಾಸದುದ್ದಕ್ಕೂ ಅನೇಕ ಹೆಸರುಗಳಿಂದ ಗುರುತಿಸಲ್ಪಟ್ಟಿದೆ.
ಕಾಶಿ ಎಂಬ ಹೆಸರು ಸಂಸ್ಕೃತದ ‘ಕಾಶ್’ ಧಾತುವಿನಿಂದ ಹುಟ್ಟಿದ್ದು, ಬೆಳಗುವ, ಹೊಳೆಯುವ, ಪ್ರಕಾಶಿಸುವ, ಪ್ರಖ್ಯಾತವಾದ, ಮುಂತಾದ ಅರ್ಥಗಳನ್ನು ಹೊಂದಿದೆ. ವಿಶಾಲವಾಗಿ ಹರಿಯುವ ಪವಿತ್ರವಾದ ಗಂಗಾನದಿಯ ಮೇಲೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದಂತೆ, ಹೊಳೆಯಲಾರಂಭಿಸುವ ಗಂಗೆಯು ಸುತ್ತಲೂ ದಿವ್ಯವಾದ ಅಲೌಕಿಕ ಪ್ರಭೆಯನ್ನು ಸೂಸುತ್ತದೆ. ಈ ವಿಶೇಷಣವೇ ನಗರದ ಹೆಸರಲ್ಲೂ ಸೇರಿಹೋಗಿರುವುದು ಸಹಜವೇ ಆಗಿದೆ. ಕಾಶಿ (ಕಾಶಿಕಾ ಎಂದೂ ಕರೆಯಲಾಗುತ್ತದೆ) ಎಂಬ ಹೆಸರಿನ ಉತ್ಪತ್ತಿಯ ಕುರಿತು ಅನೇಕ ಸಿದ್ಧಾಂತಗಳೂ ಇವೆ. ಜಗತ್ತಿಗೆ ಮೊದಲ ಕಾನೂನನ್ನು ನೀಡಿದ ಮನುವಿನ ಮೊಮ್ಮಗನೂ, ಪುರೂರವನ ವಂಶದಲ್ಲಿ ಏಳನೆಯ ತಲೆಮಾರಿನವನೂ ಆದ ಕಾಶ ಎಂಬ ರಾಜನಿಂದ ಕಾಶಿ ಎಂಬ ಹೆಸರು ಬಂದಿತೆಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು, ಗಂಗಾನದಿಯ ದಡದಲ್ಲಿ ಬೆಳೆಯುವ ಬೆಳ್ಳಿಯ ಬಣ್ಣದ ಹೂವು ಬಿಡುವ ಉದ್ದನೆಯ ಕಾಶಿ ಎಂಬ ಹುಲ್ಲಿನಿಂದಾಗಿ ಈ ಹೆಸರು ಬಂದಿತೆಂದು ಹೇಳುತ್ತಾರೆ.
ಅರ್ವಾಚೀನ ಕಾಲದಲ್ಲಿ ಕಾಶಿ ಎಂಬ ಹೆಸರಿಗೆ ಪರ್ಯಾಯವಾಗಿ ಬಳಕೆಗೆ ಬಂದಿರುವ ಮತ್ತೊಂದು ಹೆಸರು ವಾರಣಾಸಿ (ಬೆನಾರೆಸ್ ಎಂಬುದು ಅದರ ಅಪಭ್ರಂಶ). ಕಳೆದ ಹಲವು ಶತಮಾನಗಳಿಂದ ಈ ಎರಡೂ ಹೆಸರುಗಳನ್ನು ಒಂದಕ್ಕೊಂದು ಪರ್ಯಾಯ ಪದವೆಂಬಂತೆ ಬಳಸಲಾಗುತ್ತಿದೆ. ಆದರೆ, ಬಹಳ ಹಿಂದೆ ಇವೆರಡೂ ವಿಭಿನ್ನವಾದ ಅಸ್ತಿತ್ವವನ್ನು ಹೊಂದಿದ್ದವು. ಕಾಶಿಯು ಸಾಮ್ರಾಜ್ಯವಾಗಿದ್ದರೆ, ವಾರಣಾಸಿ ಅದರ ರಾಜಧಾನಿಯಾಗಿತ್ತು. ವೈದಿಕ, ಪೌರಾಣಿಕ ಹಾಗೂ ಬೌದ್ಧ ಜಾತಕ ಬರಹಗಳು ವಾರಣಾಸಿಯನ್ನು, ಉತ್ತರದಲ್ಲಿ ಗಂಗೆಯನ್ನು ಸೇರುವ ವಾರಣ ನದಿ ಹಾಗೂ ದಕ್ಷಿಣದಲ್ಲಿ ಅದೇ ಬೃಹತ್ ಗಂಗೆಯಲ್ಲಿ ವಿಲೀನಗೊಳ್ಳುವ ಅಸಿ ನದಿಗಳಿಂದ ಆವೃತವಾಗಿರುವ ಪ್ರದೇಶವೆಂದು ಬಣ್ಣಿಸಿವೆ. ಹೀಗೆ ವಾರಣಾಸಿಯು ಎರಡು ಧಾರೆಗಳ ನಡುವೆ ನೆಮ್ಮದಿಯಿಂದ ಚಾಚಿ ಕುಳಿತಿರುವ ಪ್ರದೇಶವಾಗಿದೆ. ಕೆಲವು ಬರಹಗಳು ಅಸಿ ನದಿಯನ್ನು ‘ಶುಷ್ಕ ನದಿ’ ಅಥವಾ ಒಣಗಿ ಹೋಗಿರುವ ನದಿ ಎಂದು ಕರೆದಿವೆ.
ಕಾಶಿಯು ಮೂರು ಶಿಖರಗಳ ಮೇಲಿರುವ ಸ್ಥಳವೆಂದು ಪದ್ಮ ಪುರಾಣದಲ್ಲಿರುವ ವರ್ಣನೆಯು, ಕಾಶಿಯು ಪ್ರಾಪಂಚಿಕವಾದ ಭೂಮಟ್ಟದಲ್ಲಿಲ್ಲ; ಬದಲಿಗೆ ಅದಿರುವುದು ಭಗವಾನ್ ಶಿವನ ತ್ರಿಶೂಲದ ಮೂರು ತುದಿಗಳ ಮೇಲೆ, ಎನ್ನುವ ಪ್ರಸಿದ್ಧ ನಂಬಿಕೆಗೆ ಅನುಗುಣವಾಗಿದೆ. ಇತಿಹಾಸದುದ್ದಕ್ಕೂ ಅನೇಕ ಏರಿಳಿತಗಳಿಗೆ ಸಾಕ್ಷಿಯಾಗಿರುವ ಕಾಶಿಯು, ಕೆಲವೊಮ್ಮೆ ಅವುಗಳಲ್ಲಿ ಭಾಗಿಯೂ ಆಗಿದೆ. ಅನೇಕ ರಾಜ್ಯಗಳ ಹಾಗೂ ರಾಜರುಗಳು ಏಳು-ಬೀಳುಗಳನ್ನು ಅದು ಕಂಡಿದೆ. ಹೀಗೆ ಕಾಶಿಯು ಈ ಉಪಖಂಡದ ಇತಿಹಾಸದ ಪ್ರತೀಕವೇ ಆಗಿಬಿಟ್ಟಿದೆ. ಅಮೆರಿಕದ ಸುಪ್ರಸಿದ್ಧ ಬರಹಗಾರ ಮಾರ್ಕ್ ಟ್ವೈನ್ ಅವರು, ಕಾಶಿಯ ಕುರಿತು ಹೀಗೆ ದಾಖಲಿಸಿದ್ದಾರೆ: ‘ಬೆನಾರೆಸ್ ನಗರವು ಇತಿಹಾಸಕ್ಕಿಂತ ಹಳೆಯದು, ಪರಂಪರೆಗಿಂತ ಹಳೆಯದು, ದಂತಕಥೆಗಿಂತ ಹಳೆಯದಾಗಿದ್ದು, ಪ್ರಾಯಶಃ ಅವೆಲ್ಲವನ್ನೂ ಸೇರಿಸಿದರೂ ಅದರ ದುಪ್ಪಟ್ಟು ಹಿಂದಿನದು’.
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅನೇಕ ವರ್ಷಗಳ ಕಾಲವನ್ನು ಇಲ್ಲಿ ಕಳೆದ ಬ್ರಿಟಿಷ್ ಪ್ರಾಟೆಸ್ಟೆಂಟ್ ಮತ ಪ್ರಚಾರಕ ಹಾಗೂ ಭಾರತಶಾಸ್ತ್ರ ತಜ್ಞ ಮ್ಯಾಥ್ಯೂ ಆಟ್ಮೋರ್ ಶೆರ್ರಿಂಗ್, ಆ ಪ್ರದೇಶಕ್ಕೆ ಜೀವಕಳೆಯನ್ನು ತುಂಬುವ ಅಲ್ಲಿನ ದೃಶ್ಯಗಳನ್ನು, ಶಬ್ದಗಳನ್ನು ಮತ್ತು ಕಾರ್ಯಗಳನ್ನು ಕಂಡು ಮೂಕವಿಸ್ಮಿತರಾಗಿ, ಹೀಗೆ ಹೇಳುತ್ತಾರೆ:
‘ಕೆಲವೊಮ್ಮೆ, ಒಂದು ರಾಷ್ಟ್ರದ ಇತಿಹಾಸವು ಅಲ್ಲಿನ ಕೆಲವೇ ಕೆಲವು ಪ್ರಮುಖ ನಗರಗಳ ಇತಿಹಾಸಗಳಲ್ಲಿಯೇ ಅಡಕವಾಗಿರುತ್ತದೆ. ಪ್ಯಾರಿಸ್ ನಗರವು ಫ್ರಾನ್ಸ್ ದೇಶದ ರಾಜಕೀಯ ಭಾವನೆಗಳನ್ನು ಪ್ರತಿನಿಧಿಸುವಂತೆ, ಬೆನಾರಸ್ ನಗರವು ಭಾರತದ ಧಾರ್ವಿುಕತೆ ಮತ್ತು ಪ್ರಜ್ಞಾವಂತಿಕೆಗಳ ಪ್ರತಿನಿಧಿಯಾಗಿದೆ. ಇದರಷ್ಟು ಪ್ರಾಚೀನ ನಗರಗಳು ಜಗತ್ತಿನಲ್ಲಿ ಸಿಗುವುದು ಕಷ್ಟ. ಅದರಲ್ಲೂ, ಈ ನಗರವು ತನ್ನ ಪ್ರಸಿದ್ಧಿ ಮತ್ತು ವೈಶಿಷ್ಟ್ಯಗಳನ್ನು ಅಂದಿನಿಂದ ಇಂದಿನವರೆಗೂ ಸತತವಾಗಿ ಉಳಿಸಿಕೊಂಡು ಬಂದಿರುವಂತೆ ಮತ್ತಾವ ನಗರವೂ ಉಳಿಸಿಕೊಂಡಿಲ್ಲ. ಬೆನಾರಸ್ ನಗರದಲ್ಲಿ ಮೊದಲಿಗೆ ಬೌದ್ಧಮತವು ಪ್ರಚಾರದಲ್ಲಿತ್ತು; ಬೆನಾರಸ್​ನಲ್ಲಿ ಹಿಂದೂಧರ್ಮವು ತನ್ನ ಅನುಯಾಯಿಗಳ ಹೃದಯದಲ್ಲಿತ್ತು. ಹೀಗಾಗಿ ಈ ನಗರವು ಇಂದಿಗೂ ಅರ್ಧ ಜಗತ್ತನ್ನು ಆಳುತ್ತಿರುವ ಈ ಎರಡು ಧರ್ಮಗಳಿಗೆ ಚೈತನ್ಯವನ್ನು ಮತ್ತು ಪ್ರೇರಣೆಯನ್ನು ನೀಡಿದೆ’.
ಹತ್ತೊಂಬತ್ತನೇ ಶತಮಾನದಲ್ಲಿದ್ದ ಬ್ರಿಟಿಷ್ ಭಾರತಶಾಸ್ತ್ರ ತಜ್ಞ ಮತ್ತು ಪ್ರಾಚೀನಾನ್ವೇಷಕ ಜೇಮ್್ಸ ಪ್ರಿನ್ಸೆಪ್ ಅವರು ಕಾಶಿಯ ಕುರಿತು ಹೀಗೆ ಹೇಳುತ್ತಾರೆ: ‘ಬ್ರಹ್ಮನ ಒಂದು ದಿನ 4320 ಮಿಲಿಯನ್ ವರ್ಷಗಳಿಗೆ ಸಮಾನ. ಅದು (ಕಾಶಿ) ಒಂದು ನೂರು ಬ್ರಹ್ಮರ ಆಯುಷ್ಯವನ್ನೂ ಮೀರಿಸಿದಷ್ಟು ಪ್ರಾಚೀನವಾಗಿದ್ದು, ಭೂಮಿಗಿಂತ ಪ್ರತ್ಯೇಕವಾಗಿದ್ದು, ಮಹಾದೇವನ (ಶಿವ) ತ್ರಿಶೂಲವನ್ನು ಆಧರಿಸಿದೆ. ಈ ನಗರವನ್ನು ಭೂಕಂಪವೂ ಬಾಧಿಸಲಾರದು. ಹಿಂದೊಮ್ಮೆ ಇದು ಸುವರ್ಣದಿಂದ ನಿರ್ವಣವಾಗಿದ್ದ ನಗರವಾಗಿತ್ತು. ಆದರೆ ನಂತರದ ಕಾಲದಲ್ಲಿ, ಮಾನವ ಮೌಲ್ಯವು ವೇಗವಾಗಿ ಕುಸಿಯುವುದರ ಜೊತೆಗೆ, ಈ ನಗರವೂ ಕಲ್ಲು ಹಾಗೂ ಇಟ್ಟಿಗೆಗಳನ್ನು ಆಧರಿಸಬೇಕಾಯಿತು’.
ಈ ಪ್ರಾಚೀನ ನಗರವು ಪ್ರವಾಸಿಗರನ್ನು, ಅನ್ವೇಷಕರನ್ನು ಮತ್ತು ತತ್ವಜ್ಞಾನಿಗಳನ್ನು ಆಕರ್ಷಿಸಿದೆ. ದುರದೃಷ್ಟವಶಾತ್, ಅದು ವಿಗ್ರಹಭಂಜಕರನ್ನೂ ಆಕರ್ಷಿಸಿದೆ ಮತ್ತು ಅವರು ಅನೇಕ ಬಾರಿ ಅಲ್ಲಿನ ಮಂದಿರವನ್ನು ಉಧ್ವಸ್ಥಗೊಳಿಸಿದ್ದಾರೆ. ಸಾ.ಯು.ಪೂರ್ವದ ಎಂಟನೇ ಶತಮಾನದಿಂದ ಪ್ರಸ್ತುತ ಯುಗದ ಏಳನೇ ಶತಮಾನದವರೆಗಿನ ಅವಧಿಯಲ್ಲಿ ವಾರಣಾಸಿಯ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು, ಆ ನಗರದ ಉತ್ತರ ಭಾಗದಲ್ಲಿರುವ ಹಳೆಯ ರಾಜಘಾಟ್ ಪ್ರಸ್ಥಭೂಮಿಯಲ್ಲಿ ನಡೆದ ಉತ್ಖನನಗಳು ಬಯಲುಗೊಳಿಸಿವೆ. ಕಾಶಿಯ ಇತಿಹಾಸವು ಅಸ್ಪಷ್ಟವಾಗಿದ್ದರೂ, ಅದರ ಪ್ರಾಚೀನತೆಯು ಭಾರತದ ವೇದಕಾಲೀನ ಇತಿಹಾಸಕ್ಕೆ ಮತ್ತು ಇತಿಹಾಸಪೂರ್ವ ಕಾಲಕ್ಕೆ ನಮ್ಮನ್ನೊಯ್ಯುತ್ತದೆ ಎನ್ನುವುದು ಸ್ಪಷ್ಟವಾಗಿದೆ.
ಕಾಶಿಯು ಭಗವಾನ್ ಶಿವನು ನೆಲೆಸಿರುವ ನಾಡೆಂದು ಗುರುತಿಸಲ್ಪಟ್ಟಿದ್ದರೂ, ಅದು ಅನೇಕ ಸಿದ್ಧಾಂತಗಳಿಗೂ ಹಾಗೂ ಮತೀಯ ನಂಬಿಕೆಗಳಿಗೂ ತನ್ನಲ್ಲಿ ಸ್ಥಾನ ನೀಡಿದೆ. ವೈಷ್ಣವ, ಶಾಕ್ತ, ಬೌದ್ಧ ಮತ್ತು ಜೈನ ಪರಂಪರೆಗಳು ಶೈವ ಪರಂಪರೆಯೊಂದಿಗೆ ಸಹಬಾಳ್ವೆ ನಡೆಸಿರುವ ಮತ್ತು ಪ್ರವರ್ಧಮಾನಕ್ಕೆ ಬಂದಿರುವ ಸಮ್ಮಿಳನಸ್ಥಾನ ಎಂದು ಕಾಶಿ ಸುಪ್ರಸಿದ್ಧವಾಗಿದೆ. ಪೌರಾಣಿಕ ಸಾಹಿತ್ಯವು, ಕಾಶಿಯು ಶೈವರ ಭದ್ರಕೋಟೆಯಾಗುವುದಕ್ಕೆ ಮುಂಚೆ ವೈಷ್ಣವರ ಪವಿತ್ರ ಕ್ಷೇತ್ರವಾಗಿತ್ತು ಎಂದು ತಿಳಿಸುತ್ತವೆ. ಹೀಗಾಗಿ ಇಲ್ಲಿ ಭಗವಾನ್ ಶಿವ ಮತ್ತು ಭಗವಾನ್ ವಿಷ್ಣು ಇಬ್ಬರನ್ನೂ ಪೂಜಿಸುವ ಅಗತ್ಯವಿದೆ ಎಂದು ನಂಬಲಾಗಿದೆ. ವಿಶ್ವೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಪ್ರಧಾನ ವಿಗ್ರಹವನ್ನು ಪೂಜಿಸುವುದಕ್ಕೆ ಮುಂಚೆ, ಅಲ್ಲಿನ ಮುಕ್ತಿ ಮಂಟಪದಲ್ಲಿರುವ ವಿಷ್ಣುವನ್ನು ಮೊದಲು ಪೂಜಿಸುವುದು ವಾಡಿಕೆ.
ಕಾಶಿಯು ಪ್ರಾಚೀನ ನಗರ ಮಾತ್ರವಲ್ಲ, ಅದರ ಪಾವಿತ್ರ್ಯ ಮತ್ತು ಪೂಜ್ಯತೆಗಳು ಅನೇಕ ಶತಮಾನಗಳಿಂದ ಭಾರತೀಯರ ಅಂತಃಪ್ರಜ್ಞೆಯಲ್ಲಿ ಬಲವಾಗಿ ಅಚ್ಚೊತ್ತಿದೆ. ಅದಕ್ಕಿರುವ ಪ್ರಾಚೀನತೆ ಮತ್ತು ಪಾವಿತ್ರ್ಯಗಳ ನಿಷ್ಕಳಂಕ ಪ್ರತಿಮೆಯು, ಆ ನಗರವನ್ನು ಇಂದಿನವರೆಗೂ ಜೀವಂತವಾಗಿಟ್ಟಿದೆ ಮತ್ತು ಅನೇಕ ಕಲೆ ಹಾಗೂ ಸಾಹಿತ್ಯಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ವರ್ಧಿಸುತ್ತ ಬಂದಿದೆ. ಯಾವ ರೀತಿ ಶ್ರದ್ಧಾವಂತ ಮುಸಲ್ಮಾನನು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಹೋಗಬೇಕೆಂದು ಬಯಸುತ್ತಾನೋ, ಅಥವಾ ಶ್ರದ್ಧಾವಂತ ಕ್ರೈಸ್ತನು ಜೆರುಸಲೇಮ್ ನಗರದಲ್ಲಿ ಒಮ್ಮೆಯಾದರೂ ಕಾಲಿಡಬೇಕೆಂದು ಇಚ್ಛಿಸುತ್ತಾನೋ, ಅದೇ ರೀತಿ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಕಾಶಿಯನ್ನು ದರ್ಶಿಸಬೇಕೆಂದು ಸಂಕಲ್ಪಿಸುವುದು ಅನೇಕ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ.
ಕಾಶಿಯನ್ನು ಸಂದರ್ಶಿಸಬೇಕೆಂಬ ಬಲವಾದ ಇಚ್ಛೆ ಮತ್ತು ಸಾಧ್ಯವಾದರೆ ಅಲ್ಲಿಯೇ ಪ್ರಾಣ ಬಿಡಬೇಕೆಂದು ಇಚ್ಛಿಸುವುದಕ್ಕೆ ಕಾರಣವೆಂದರೆ, ಕಾಶಿಯನ್ನು ದರ್ಶಿಸುವುದರಿಂದ ಹಾಗೂ ಅಲ್ಲಿ ಪ್ರಾಣ ಬಿಡುವುದರಿಂದ ಮೋಕ್ಷ (ಜನನ-ಮರಣಗಳ ಚಕ್ರದಿಂದ ಬಿಡುಗಡೆ) ಸಿಗುವುದು ನಿಶ್ಚಿತ ಎಂದು ಧಾರ್ವಿುಕ ಗ್ರಂಥಗಳು ಪ್ರಮಾಣೀಕರಿಸಿವೆ. ಸಾ.ಯು.ದ ಐದು ಮತ್ತು ಹತ್ತನೇ ಶತಮಾನದ ನಡುವಣ ಅವಧಿಯಲ್ಲಿ ರಚಿಸಲ್ಪಟ್ಟಿದೆ ಎಂದು ಹೇಳಲ್ಪಡುವ ಲಿಂಗ ಪುರಾಣದಲ್ಲಿ, ಭಗವಾನ್ ಶಿವನು ತನ್ನ ಪತ್ನಿಯಾದ ದೇವಿ ಪಾರ್ವತಿಗೆ ಈ ‘ಪವಿತ್ರ ಕೇಂದ್ರ’ದ ಕುರಿತು ಹೀಗೆ ತಿಳಿಸುತ್ತಾನೆ:
‘‘ನನ್ನಲ್ಲೇ ಮನಸ್ಸನ್ನಿಟ್ಟು, ನನಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಮತ್ತು ತಾನು ಮಾಡುವ ಎಲ್ಲ ಪವಿತ್ರ ವಿಧಿಗಳನ್ನೆಲ್ಲ ನನಗೆ ಅರ್ಪಿಸುವ ವ್ಯಕ್ತಿಯು, ಇಲ್ಲಿ ಮುಕ್ತನಾಗುವ ರೀತಿಯಲ್ಲಿ ಬೇರೆಲ್ಲೂ ಆಗುವುದಿಲ್ಲ. ಓ ಸುಂದರೀ! ಇಲ್ಲಿ ಪ್ರಾಣ ತ್ಯಜಿಸುವ ಯಾವುದೇ ಜೀವಿಯು ಮುಕ್ತಿಯನ್ನು ಪಡೆಯಲು ಅರ್ಹತೆಯನ್ನು ಪಡೆಯುತ್ತದೆ. ಈ ಪವಿತ್ರ ಕೇಂದ್ರವನ್ನು ನಾನೆಂದಿಗೂ ತ್ಯಜಿಸುವುದಿಲ್ಲ ಮತ್ತು ಕಬಳಿಸಲೂ ನಾನು ಪ್ರಯತ್ನಿಸಿಲ್ಲ. ಹೀಗಾಗಿ ಈ ಪವಿತ್ರ ಕ್ಷೇತ್ರವನ್ನು ‘ಅವಿಮುಕ್ತ ಕ್ಷೇತ್ರ’ವೆಂದು ಕರೆಯಲಾಗುತ್ತದೆ…’ ಈ ‘ಅವಿಮುಕ್ತ ಕ್ಷೇತ್ರ’ವು, ಪವಿತ್ರಕ್ಷೇತ್ರಗಳಲ್ಲೆಲ್ಲ ಅಗ್ರಗಣ್ಯವೆಂದು ಪ್ರಸಿದ್ಧವಾಗಿರುವ ಪ್ರಯಾಗ ಕ್ಷೇತ್ರಕ್ಕಿಂತಲೂ ಹೆಚ್ಚು ಪವಿತ್ರವಾಗಿವೆ’.
ಇಂದು ಕೃತಿ ಲೋಕಾರ್ಪಣೆ:ಖ್ಯಾತ ಇತಿಹಾಸಕಾರ ಡಾ.ವಿಕ್ರಮ್ ಸಂಪತ್ ರಚಿಸಿರುವ ‘ವೇಟಿಂಗ್ ಫಾರ್ ಶಿವ’ ಕೃತಿಯ ಕನ್ನಡ ಅನುವಾದ ಪುಸ್ತಕ ‘ಶಿವನಿಗಾಗಿ ಕಾಯುತ್ತ, ಕಾಶಿ ಜ್ಞಾನವ್ಯಾಪಿಯ ಸತ್ಯದ ಅನಾವರಣ’ದ ಲೋಕಾರ್ಪಣೆಯ ಸಮಾರಂಭ ಇಂದು (ಆಗಸ್ಟ್ 31) ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪತ್ರಕರ್ತ ಅಜಿತ್ ಹನುಮಕ್ಕನವರ್ ಲೇಖಕ ಡಾ.ವಿಕ್ರಮ್ ಸಂಪತ್ ಅವರೊಂದಿಗಿನ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವ ಡಾ.ಜಿ.ಎಲ್.ಶೇಖರ್ ಹಾಗೂ ಎಸ್.ಎಸ್.ನರೇಂದ್ರಕುಮಾರ್ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಶಾಂಕ್ ಪರಾಶರ ಹಾಗೂ ಗೌರಿ ಎಸ್.ಜೋಶಿ ಉಪಸ್ಥಿತರಿರಲಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ ಹಾಗೂ ಎಂ.ಎಸ್.ಋತ್ವಿಕ್ ತಿಳಿಸಿದ್ದಾರೆ.

ಕಾಶಿ- ನನಗೆ ಮೊದಲಿಂದಲೂ ತುಂಬ ಕುತೂಹಲ ಹುಟ್ಟಿಸುವ ನಗರ. ಅದರ ಪ್ರಾಚೀನತೆ, ಆಧ್ಯಾತ್ಮಿಕತೆ, ದೇವರ ಮೂರ್ತ-ಅಮೂರ್ತ ಕಲ್ಪನೆಗಳನ್ನು ತಿಳಿಸುವ ಪರಿ, ಇತಿಹಾಸ ಎಲ್ಲವೂ ನನ್ನ ಕುತೂಹಲಕ್ಕೆ ಮೂಲ. ನನ್ನ ‘ಆವರಣ’ ಕಾದಂಬರಿಗೂ ಆ ಕುತೂಹಲವೇ ಮೂಲವಾಯಿತೇ? ಸಾವಿರಾರು ವರ್ಷಗಳ ಜನಸಾಮಾನ್ಯರ ನಂಬಿಕೆ, ಶತಮಾನಗಳ ಹಿಂದಿನ ದೌರ್ಜನ್ಯ, ಯಾವುದೂ ನಮ್ಮ ಮರೆವಿಗೆ ಸರಿಯದೆ ಉಳಿದ ಪ್ರವಾಹವನ್ನು ತಮ್ಮ ಎಂದಿನ ನಿಖರತೆ ಮತ್ತು ಪ್ರಕ್ಷಿಪ್ತತೆಯ ಮೊನಚಿನಿಂದ ಬರಹಕ್ಕಿಳಿಸಿದವರು ವಿಕ್ರಮ್ ಸಂಪತ್. ಈ ಪುಸ್ತಕವನ್ನು ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಎಲ್ಲರೂ ಓದಬೇಕು.
| ಎಸ್.ಎಲ್.ಭೈರಪ್ಪ ಖ್ಯಾತ ಸಾಹಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
