ಬೆಂಗಳೂರು:ದಿ ಕಶ್ಮೀರ್ ಫೈಲ್ಸ್ ಸಿನಿಮಾ ಮೇಲ್ಮನೆಯಲ್ಲಿ ಗದ್ದಲಕ್ಕೆ ಕಾರಣವಾಗಿ, ಸದನ ಕೆಲ ಕಾಲ ಮುಂದೂಡಲ್ಪಟ್ಟ ಘಟನೆ ನಡೆಯಿತು. ಸದನ ಪ್ರಾರಂಭವಾಗುತ್ತಿದ್ದಂತೆಯೇ ಸಿನಿಮಾ ವೀಕ್ಷಣೆ ಮಾಡಲು ಸರ್ಕಾರ ಶಾಸಕರಿಗೆ ಆಮಂತ್ರಣ ನೀಡಿರುವ ಪ್ರಕಟಣೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಗದ್ದಲ ಎಬ್ಬಿಸಿತು. ಸಿನಿಮಾ ವೀಕ್ಷಣೆ ವಿಚಾರ ಪ್ರಕಟಣೆಯನ್ನು ವಾಪಸ್ ಪಡೆಯಬೇಕು. ಈ ಸಿನಿಮಾ ತೋರಿಸುವುದಾದರೆ, ಫರ್ಜಾನಾ ಮತ್ತು ವಾಟರ್ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು. ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಕಾಂಗ್ರೆಸ್​ನ ಸಲೀಂ ಅಹಮದ್ ಪ್ರಶ್ನಿಸಿದರು. ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ರೆ ನೋಡಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರೆ, ನಾವೇನು ಪಾಕಿಸ್ಥಾನದ ಸಿನಿಮಾ ತೋರಿಸುತ್ತಿಲ್ಲ ಎಂದು ಬಿಜೆಪಿಯ ಎನ್.ರವಿಕುಮಾರ್ ವಾದಿಸಿದರು. ಬಾಬೂ ಭಜರಂಗಿ ಅಂತ ಸಿನಿಮಾ ತೋರಿಸಿ ಎಂಬ ವಾದ ಒಂದೆಡೆಯಾದರೆ, ದೇಶದಲ್ಲಿ ದ್ವೇಷ, ಅಸೂಯೆ ಮೂಡಿಸುವುದಕ್ಕೆ ಕಾರಣವಾದ ಗುಜರಾತ್ ಫೈಲೂ ತೋರಿಸಲಿ ಎಂದು ಕಾಂಗ್ರೆಸ್ ಸವಾಲು ಎಸೆಯಿತು. ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಹಾಗಾದ್ರೆ ನಾವು ಬ್ಲೂ ಫಿಲಂ ನೋಡಬೇಕಾ? ಸರ್ಕಾರ ಇರೋದು ಪಿಚ್ಚರ್ ತೋರಿಸೋದಕ್ಕಾ? ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ? ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನಕ್ಕೆ ಬರ್ತ್ ಡೇ ಮಾಡಲು ಹೋಗೋ ಪ್ರಧಾನಿ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕೇಳಿದರು. ಸದಸ್ಯರ ಆಕ್ಷೇಪಣೆಗೆ ಉತ್ತರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರ ಕಳಿಸಿದ ಪ್ರಕಟಣೆಯನ್ನು ನಾನು ಓದಿದ್ದೇನೆ, ಇಷ್ಟ ಇದ್ದವರು ಹೋಗಿ ಇಲ್ಲದವರು ಬಿಡಿ ಎಂದರು. ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ಕೆ.ಜಿ.ಬೋಪಯ್ಯ ಮಾರ್ಚ್ 5ರ ವಿಜಯವಾಣಿ ಮುಖಪುಟದ ಪ್ರಮುಖ ಅಂಶಗಳನ್ನು ಸದನದಲ್ಲಿ ವಾಚಿಸಿದರು. ‘ಸರ್ವರಿಗೂ ಬೊಮ್ಮಾಯಿ ಮಿಠಾಯಿ’ ತಲೆ ಬರಹವನ್ನೂ ಉಲ್ಲೇಖಿಸಿದ ಅವರು, ಉಪ ಶೀರ್ಷಿಕೆಗಳನ್ನೂ ಸಹ ಓದಿದರು. ಸಂಪಾದಕೀಯದಲ್ಲಿನ ಕೆಲವು ಅಂಶಗಳನ್ನೂ ಸಹ ಪ್ರಸ್ತಾಪಿಸಿದರು. ಬಜೆಟ್​ನಲ್ಲಿ ಏನೂ ಇಲ್ಲ ಎಂದು ಪ್ರತಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ. ಬೊಮ್ಮಾಯಿಯವರ ಬಜೆಟ್ ನವಕರ್ನಾಟಕ ನಿರ್ಮಾಣಕ್ಕೆ ಸೂಕ್ತ ವಾಗಿದೆ ಎಂದು ಆರ್ಥಿಕ ತಜ್ಞರೂ ಸ್ವಾಗತ ಮಾಡಿದ್ದಾರೆ ಎಂದ ಅವರು ಕೊಡಗಿಗೆ 10 ಕೋಟಿ ವಿಶೇಷ ಅನುದಾನದ ಕೊಟ್ಟಿರುವ ಜತೆಗೆ ನಿಗಮ ಮಾಡಬೇಕೆಂಬ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಹಕಾರ ಸಂಘಗಳು ಅಧಿಕ ಬಡ್ಡಿ ದರದ ಆಮಿಷವೊಡ್ಡಿ ಸಾರ್ವಜನಿಕರು ಇಲ್ಲವೇ ಸದಸ್ಯರಿಂದ ಠೇವಣಿ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಏಕರೂಪತೆ ತರುವುದಕ್ಕಾಗಿ ಸಮಿತಿ ರಚಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ವಿಧಾನ ಪರಿಷತ್​ನಲ್ಲಿ ಶೂನ್ಯ ವೇಳೆಯಡಿ ಕಾಂಗ್ರೆಸ್​ನ ಸಲೀಂ ಅಹಮದ್ ಪ್ರಸ್ತಾಪಿಸಿದ ಸಹಕಾರ ಸಂಘಗಳಿಂದ ವಂಚನೆ ವಿಷಯಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಕೆಲವು ಸಹಕಾರ ಬ್ಯಾಂಕ್ ಅಥವಾ ಸಂಘಗಳು ಮಾತ್ರ ಈ ಅವಕಾಶ ದುರುಪಯೋಗ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದಿದ್ದಾರೆ. ಕಾನೂನು ಉಲ್ಲಂಘಿಸಿ ಸದಸ್ಯರು ಅಥವಾ ಸಾರ್ವಜನಿಕರಿಗೆ ಯಾವುದೇ ಸಹಕಾರ ಸಂಘವು ವಂಚನೆ ಮಾಡಿದಲ್ಲಿ ಅಂತಹ ಸಂಘದ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೋಮಶೇಖರ್ ಭರವಸೆ ನೀಡಿದ್ದಾರೆ.
ಆರ್​ಬಿಐಗೆ ಪತ್ರ:ಪ್ರಸ್ತುತ ಪಟ್ಟಣ ಸಹಕಾರ ಬ್ಯಾಂಕ್​ಗಳು ಸಂಗ್ರಹಿಸುವ ಠೇವಣಿ, ಸಾಲ ಮತ್ತು ಮುಂಗಡಗಳ ಮೇಲೆ ಬಡ್ಡಿ ದರ ವಿಧಿಸುವ ಅಧಿಕಾರಹೊಂದಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಈ ಅವಕಾಶ ಕಲ್ಪಿಸಿದೆ. ಸಹಕಾರ ಸಂಘಗಳ ಠೇವಣಿ, ಸಾಲಗಳ ಮೇಲಿನ ಬಡ್ಡಿ ದರವನ್ನು ಕೂಡ ಸಮಾನ ರೀತಿಯಲ್ಲಿ ನಿಗದಿಪಡಿಸಲು ಕೋರಿ ಆರ್​ಬಿಐಗೆ ಸಹಕಾರ ಸಂಘಗಳ ನಿಬಂಧಕರು ಈಗಾಗಲೇ ಪತ್ರ ಬರೆದಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮಾನದಂಡ ಇಳಿಕೆ ಪ್ರಸ್ತಾಪವಿಲ್ಲ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸ್ಥಾಪನೆಗೆ ಇದ್ದ ಮಾನದಂಡವನ್ನು ಕಡಿಮೆ ಮಾಡಲಾಗಿದ್ದು, ಅದಕ್ಕಿಂತ ಕಡಿಮೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸೋಮಶೇಖರ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ಬಿಜೆಪಿಯ ನಿರಾಣಿ ಹಣಮಂತ ರುದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮೊದಲು ಕನಿಷ್ಠ 5 ಸಾವಿರ ಎಕರೆ ಸಾಗುವಳಿ ಇದ್ದದ್ದು ಈಗ 4 ಸಾವಿರಕ್ಕೆ, 8 ಕಿ.ಮೀ. ಇದ್ದ ಕಾರ್ಯ ಕ್ಷೇತ್ರ ವ್ಯಾಪ್ತಿಯನ್ನು 5 ಕಿ.ಮೀ.ಗೆ ಇಳಿಕೆ ಮಾಡಲಾಗಿದೆ ಎಂದರು.
3 ಸಾವಿರ ಕೆರೆ ಸರ್ವೆ, ಸಂರಕ್ಷಣೆ:ಸರ್ಕಾರ ಪ್ರಸಕ್ತ ಸಾಲಿನಲ್ಲಿ 3 ಸಾವಿರ ಕೆರೆ ಸರ್ವೆ ನಡೆಸಿ ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಎಂ.ವಿ. ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಸಣ್ಣ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಈ ವರ್ಷದ ಬಜೆಟ್​ನಲ್ಲಿ ಇಲಾಖೆಗೆ 200 ಕೋಟಿ ರೂ. ಮೀಸಲಿರಿಸಲಾಗಿದೆ. 3000 ಕೆರೆಗಳನ್ನು ಸರ್ವೆಯರ್​ಗಳ ಮೂಲಕ ಸರ್ವೆ ನಡೆಸಿ ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.
ಬೆಂಗಳೂರು ಎರಡೂವರೆ ವರ್ಷದ ಹಿಂದೆ ಮಿತ್ರ ಪಕ್ಷವಾಗಿದ್ದ ಜೆಡಿಎಸ್ ವರ್ತನೆ ಸಂಪೂರ್ಣ ಬದಲಾಗಿದ್ದು, ಅದು ಆಡಳಿತ ಪಕ್ಷದೊಂದಿಗೆ ಸೇರಿ ನಡೆಸುತ್ತಿರುವ ದಾಳಿಯನ್ನು ಸಂಘಟಿತವಾಗಿ ಎದುರಿಸಲು ಕಾಂಗ್ರೆಸ್ ನಾಯಕರು ಒಟ್ಟಾಗಿ ಚರ್ಚೆ ನಡೆಸಿದ್ದಾರೆ. ಮಂಗಳವಾರ ವಿಧಾನಸಭೆ ಕಲಾಪದ ಬಳಿಕ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಎದುರಿಸುವ ಕುರಿತಂತೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಆಡಳಿತಾರೂಢ ಬಿಜೆಪಿ, ಜೆಡಿಎಸ್ ಮೂಲಕ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದೆ. ಜೆಡಿಎಸ್ ನಾಯಕರು, ಬಿಜೆಪಿ ಬಗ್ಗೆ ಸಾಫ್ಟ್​ಕಾರ್ನರ್ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವೆರೆಡೂ ಪಕ್ಷಗಳು ಒಟ್ಟಾಗಿ ಹೆಜ್ಜೆ ಹಾಕುವುದು ಸ್ಪಷ್ಟವಾಗಿದೆ. ಸದನದೊಳಗೆ ಜೆಡಿಎಸ್ ಸರ್ಕಾರದ ವಿರುದ್ಧ ಸೆಟೆದು ನಿಲ್ಲುವ ಬದಲು ಕಾಂಗ್ರೆಸ್ ವಿರುದ್ಧ ದಾಳಿ ಮಾಡಿ ನಮ್ಮ ಪಕ್ಷವನ್ನು ಇಕ್ಕಟ್ಟಿಗೆ ಒಳಗಾಗುವಂತೆ ಸೃಷ್ಟಿಸುತ್ತಿದೆ ಎಂದು ಪಕ್ಷದ ನಾಯಕರು ಅಭಿಪ್ರಾಯಪಟ್ಟರು. ಜೆಡಿಎಸ್​ನ ನಡೆಯಿಂದ ಆಡಳಿತ ಪಕ್ಷದ ವಿರುದ್ಧದ ನಮ್ಮ ಹೋರಾಟಕ್ಕೆ ಹೆಚ್ಚು ಮಹತ್ವ ಸಿಗುತ್ತಿಲ್ಲ. ಮುಂದೆ ಹೀಗೇ ಬಿಟ್ಟರೆ ಅವರಿಬ್ಬರ ಜಂಟಿ ಆಟ ನಮಗೆ ಮುಳುವಾಗಬಹುದು, ಹೀಗಾಗಿ ಜನತಾದಳವನ್ನು ಎಕ್ಸ್​ಪೋಸ್ ಮಾಡುವ ಬಗ್ಗೆ ಗಮನ ಕೊಡುವುದೊಳಿತೆಂದು ಹಿರಿಯ ನಾಯಕರು ಸಲಹೆ ನೀಡಿದ್ದಾರೆ.
ಶಾಸಕ ಕ್ಷೇತ್ರಾಭಿವೃದ್ಧಿ ನಿಧಿ ಹೆಚ್ಚಿಸಬೇಕೆಂಬ ಕೂಗು ವಿಧಾನಸಭೆಯಲ್ಲಿ ಬಲಗೊಳ್ಳುತ್ತಿದೆ. ಎರಡು ದಿನಗಳ ಹಿಂದೆ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಅವರು ಶಾಸಕರ ಅನುದಾನ 5 ಕೋಟಿ ರೂ. ಕೊಡುವಂತೆ ಆಗ್ರಹಿದ್ದರು. ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು. ಮಂಗಳವಾರ ಜೆಡಿಎಸ್​ನ ಬಂಡೆಪ್ಪ ಖಾಶೆಂಪುರ ಇದೇ ಆಗ್ರಹ ಮಾಡಿದಾಗ ಆಡಳಿತ ಪಕ್ಷದ ಶಾಸಕರು ದನಿ ಗೂಡಿಸಿದರು. ನಮ್ಮ ಕ್ಷೇತ್ರಗಳಿಗೆ ಹೆಚ್ಚಿಗೆ ಅನುದಾನ ಬರುತ್ತಿಲ್ಲ, ಜನರ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸಲು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು 2 ರಿಂದ 4 ಕೋಟಿ ರೂ.ಗೆ ಏರಿಸಬೇಕು ಅಲ್ಲವೇ ಎಂದು ಬಂಡೆಪ್ಪ ಹೇಳಿದಾಗ, ನಾಲ್ಕಲ್ಲ 5 ಕೋಟಿ ರೂ. ಎಂದು ಆಡಳಿತ ಪಕ್ಷದ ಹಲವು ಶಾಸಕರು ಕುಳಿತಲ್ಲಿಂದಲೇ ಕೂಗಿದರು. ಕೋವಿಡ್ ಬಂತೆಂದು ಕಳೆದ ವರ್ಷ ಒಂದು ಕೋಟಿ ರೂ. ಅನುದಾನ ವಾಪಸ್ ಪಡೆದುಕೊಳ್ಳಲಾಗಿದೆ. ಇದರೊಟ್ಟಿಗೆ 2018-19ರ ಶಾಸಕರ ನಿಧಿ ಖರ್ಚಾಗಿಲ್ಲ ಎಂದು ಉಳಿಕೆಯಾದ ಹಣವನ್ನು ವಾಪಸ್ ಪಡೆದುಕೊಂಡಿರುವುದು ಸರಿಯಲ್ಲ ಎಂದು ಅವರು ವಾದಿಸಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಈ ಸೂಚನೆ ಹಿಂಪಡೆದು ಅನುದಾನ ವಾಪಸ್ ಮಾಡಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಏಕರೂಪ ಆಸ್ತಿ ತೆರಿಗೆ ಪ್ರಸ್ತಾವನೆಯಿಲ್ಲ:ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕಾ ಆಸ್ತಿಗಳಿಗೆ ವಾಣಿಜ್ಯ ಕಟ್ಟಡಗಳಿಗಿಂತ ಕಡಿಮೆ ಆಸ್ತಿ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಿದ್ದು, ಏಕರೂಪ ಆಸ್ತಿ ತೆರಿಗೆ ದರ ವಿಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಬಿಜೆಪಿಯ ತುಳಸಿ ಮುನಿರಾಜುಗೌಡ ಪ್ರಶ್ನೆಗೆ ಅವರು ಉತ್ತರಿಸಿದರು.
3 ನಿಗಮಗಳ ವಿಲೀನಕ್ಕೆ ಶಿಫಾರಸು:ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕಾವೇರಿ ಹ್ಯಾಂಡ್​ಲೂಮ್ಸ್​ಗಳನ್ನು ವಿಲೀನಗೊಳಿಸಲು ಸಾರ್ವಜನಿಕ ಉದ್ದಿಮೆಗಳ ಸಮಿತಿ ಶಿಫಾರಸು ಮಾಡಿದೆ ಎಂದು ಪರಿಷತ್​ಗೆ ಸಚಿವ ಎಂಟಿಬಿ ನಾಗರಾಜ್ ಮಾಹಿತಿ ನೀಡಿದರು.
ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್; ಮತ್ತೊಬ್ಬರ ಸಾವು, ಸತ್ತವರ ಸಂಖ್ಯೆ ಮೂರಕ್ಕೇರಿಕೆ..

ಕಾರುಗಳು ಪರಸ್ಪರ ಡಿಕ್ಕಿ, ಸಂಪೂರ್ಣ ಜಖಂ; ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
