ಬೆಂಗಳೂರು: ತಮಿಳು‌ನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆ? ಬೇಡವೇ? ಎಂಬುದನ್ನು ಕಾನೂನು ತಂಡದ ಜತೆ ಚರ್ಚೆ ಮಾಡಿ‌ ನಿರ್ಧರಿಸಲು ಸರ್ಕಾರ ನಿರ್ಧರಿಸಿದೆ.
ಸರ್ವಪಕ್ಷ ಸಭೆಯ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮತ್ತೆ ಐದು ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶವಾಗಿದೆ. ಹೀಗಾಗಿ ಸರ್ವಪಕ್ಷ ಸಭೆ ಕರೆಯಲಾಯಿತು. ಇಲ್ಲಿ ಚರ್ಚೆಯಾದಂತೆ ಮತ್ತೆ ನಾವು ಕಾವೇರಿ ನಿರ್ವಹಣಾ ಸಮಿತಿ‌ ಮುಂದೆ ಅರ್ಜಿ ಹಾಕುತ್ತೇವೆ. ಸುಪ್ರಿಂಗೂ ಅರ್ಜಿ ಹಾಕುತ್ತೇವೆ. ಅಲ್ಲೂ ಕೂಡ ನಮ್ಮ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಪ್ರಧಾನಿಗೂ ಪತ್ರ ಬರೆದು ಅವರ ಭೇಟಿಗೆ ಅವಕಾಶ ಕೇಳುತ್ತೇವೆ. ಸಂಸದರೂ ಒತ್ತಡ ಹಾಕುತ್ತೇವೆಂದು ಹೇಳಿದ್ದಾರೆ. 18ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು ಆ ವೇಳೆಗೆ ನಾವೂ ದೆಹಲಿಗೆ ತೆರಳುತ್ತೇವೆ ಎಂದು ತಿಳಿಸಿದರು.
ಆಗಸ್ಟ್‌ನಲ್ಲಿ 123 ವರ್ಷದ ದಾಖಲೆಯ ಕೊರತೆಯ ಮಳೆಯಾಗಿದೆ. ಹಾಗಾಗಿ ಜಲಾಶಯಗಳಲ್ಲಿ ನೀರಿಲ್ಲ. ಹೀಗಾಗಿ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ಈ ವರ್ಷ ನೀರಿಲ್ಲದಿರುವುದರಿಂದ ಸೆ. 11ರವರೆಗೆ 37.7 ಟಿಎಂಸಿ ಬಿಟ್ಟಿದ್ದೇವೆ. 99 ಟಿಎಂಸಿ ಬಿಡಬೇಕಾಗಿತ್ತು ಎಂದರು.
ನಮ್ಮ ಬೆಳೆಗಳಿಗೆ ನೀರು ಕೊಡಲು ಆಗುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ಬೇಕಾಗುತ್ತದೆ. ಕುಡಿಯುವ ನೀರಿಗೆ 33 ಟಿಎಂಸಿ, ಕೈಗಾರಿಕೆಗೆ ಮೂರು ಟಿಎಂಸಿ ಬೇಕು. ನಮ್ಮಲ್ಲಿರುವುದು 53 ಟಿಎಂಸಿ ಮಾತ್ರ. ಹೀಗಾಗಿ ಸುಪ್ರಿಂ ತೀರ್ಪಿನಂತೆ ನೀರು ಹರಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದು ವಿವರಿಸಿದರು.
‌ನಮ್ಮ ಬಳಿ ನೀರಿಲ್ಲ‌ ಎಂದು ಮನವರಿಕೆ ಮಾಡಿಕೊಡುತ್ತೇವೆ. ಈ ನಡುವೆ ಈಗ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕಾ? ಬೇಡವಾ ಎಂದು ಕಾನೂನು ತಂಡದ ಜತೆ ಜಲಸಂಪನ್ಮೂಲ ಸಚಿವರು ಚರ್ಚೆ ಮಾಡುತ್ತಾರೆಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ಸಭೆಯಲ್ಲಿ ವಸ್ತು ಸ್ಥಿತಿ ವಿವರಿಸಲಾಯಿತು.‌ ನಮ್ಮ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿನ ಇಂದಿನ ಒಟ್ಟಾರೆ ಲೈವ್ ಸ್ಟೋರೇಜ್ 53.287 ಟಿಎಂಸಿ ಇದ್ದು, ಹಿಂದಿನ ವರ್ಷ ಇದೇ ದಿನದಂದು ಲೈವ್ ಸ್ಟೋರೇಜ್ 103.348 ಟಿಎಂಸಿ ಆಗಿತ್ತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದಲ್ಲಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಕೊರತೆ ಶೇ.54 ಆಗಿರುತ್ತದೆ.ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ ಜೂ.1ರಿಂದ ಸೆ. 11ರವರೆಗೆ ಒಟ್ಟು 37.718 ಟಿಎಂಸಿ ನೀರು ಹರಿದಿರುತ್ತದೆ. ಸಾಮಾನ್ಯ ವರ್ಷದಲ್ಲಿ ಆದೇಶದನ್ವಯ ಇದೇ ಅವಧಿಯಲ್ಲಿ 99.860 ಟಿಎಂಸಿ ನೀರನ್ನು ಬಿಡಬೇಕಾಗಿತ್ತು ಎಂದರು.
ಸಂಸತ್ತಿನಲ್ಲೂ ನಾವೆಲ್ಲ ಒಟ್ಟಾಗಿ ಹೋಗುತ್ತೇವೆಂದು ಸಭೆಯಲ್ಲಿ ಪಾಲ್ಗೊಂಡ ಸಂಸದರು ಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆಯಿದ್ದು, ಮೇ-2024ರವರೆಗೆ ನಮ್ಮ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಾಗಿದ್ದು, ಈಗಾಗಲೇ ಮಾಮ್ಸೂನ್ ಮುಗಿಯುವ ಹಂತದಲ್ಲಿದ್ದು, ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣವು ಕ್ಷೀಣಿಸುತ್ತಿದೆ. ಈಗಿನ ಸಂಗ್ರಹಣೆಯನ್ನು ನಮ್ಮ ಅಗತ್ಯತೆಗಳಿಗೆ ಕಾಯ್ದಿರಿಸಬೇಕಾಗಿದೆ ಎಂದು ವಿವರಿಸಿದರು.
ರಾಜ್ಯದ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನ ಮಾಡಲು ದಿಲ್ಲಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ ಎಂದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಹಕಾರ ಸಚಿವ ರಾಜಣ್ಣ, ಪಶುಪಾಲನೆ ಸಚಿವ ವೆಂಕಟೇಶ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಹಿತಿ ತಂತ್ರಜ್ಞಾನ ಸಚಿವ ಬೊಸರಾಜು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಂಸದ ಪ್ರತಾಪ್ ಸಿಂಹ, ಸುಮಲತಾ ಸೇರಿ ಒಂಬತ್ತು ಸಂಸದರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 3 =
Remember me
