ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ. ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಚಿಂತನೆ ನಡೆಸಿವೆ. ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿವೆ.
ವಿಧಾನಸೌಧ ಮುತ್ತಿಗೆ ವಿಫಲ ಯತ್ನಬೆಂಗಳೂರಿನಲ್ಲೂ ಕಾವೇರಿ ನದಿ ನೀರಿನ ಕಿಚ್ಚು ತೀವ್ರಗೊಂಡಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ಗುರುವಾರ ವಿಧಾನಸೌಧ ಮುತ್ತಿಗೆ ವಿಫಲ ಯತ್ನ ನಡೆಸಿದರು. ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಸುಪ್ರೀಂಕೋರ್ಟ್ ಆದೇಶ ಹಾಗೂ ಸೆ. ೨೮ರವರೆಗೆ ತಮಿಳುನಾಡಿಗೆ ೫ ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ವಿರೋಧಿಸಿ ಹಾಗೂ ರಾಜ್ಯ ಸರ್ಕಾರ ನೀರು ಹರಿಸುವ ಕ್ರಮದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಗಾಂಧಿನಗರದಿಂದ ಮೆರವಣಿಗೆ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಗಾಂಧಿನಗರದ ಕರವೇ ಕೇಂದ್ರ ಕಚೇರಿಯಲ್ಲಿ ಜಮಾವಣೆಗೊಂಡ ಕರವೇ ಕಾರ್ಯಕರ್ತರು, ಮೌರ್ಯ ವೃತ್ತ ತಲುಪುವ ವೇಳೆಗೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಪೊಲೀಸರ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸುಗ್ರೀವಾಜ್ಞೆ ಹೊರಡಿಸಲು ಆಗ್ರಹ:ಕಾವೇರಿ ನಮ್ಮದು, ನೀರು ನಮ್ಮ ಹಕ್ಕು ಘೋಷಣೆಗಳನ್ನು ಪ್ರತಿಭಟನೆ ನಡೆಸಿ ಕಾರ್ಯಕರ್ತರು. ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಈ ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸುಗ್ರೀವಾಜ್ಞೆ ಮೂಲಕ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸದಂತೆ ತಡೆದಂತೆ ಈಗಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಂಸದರ ವಿರುದ್ಧವೂ ಆಕ್ರೋಶಪ್ರತಿಭಟನೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸೇರಿ ಸಂಬಂಧಪಟ್ಟ ಸಮಿತಿ, ಪ್ರಾಧಿಕಾರದ ಎದುರು ಸಮರ್ಥವಾಗಿ ವಾದ ಮಂಡಿಸಲು ಹಾಗೂ ಕಾವೇರಿ ನದಿ ನೀರಿನ ವಸ್ತುಸ್ಥಿತಿಯನ್ನು ವಿವರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅದರ ಜತೆಗೆ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶವನ್ನು ತಡೆಯಲು ವಿಫಲವಾಗಿದ್ದಾರೆ. ಅಲ್ಲದೆ, ಸುಪ್ರೀಂಕೋರ್ಟ್ ಕೂಡ ರಾಜ್ಯಕ್ಕೆ ಅನ್ಯಾಯವಾಗುವಂತಹ ತೀರ್ಪು ನೀಡಿದ ಎಂದು ಬೇಸರ ವ್ಯಕ್ತಪಡಿಸಿದರು.ಇದೇ ವೇಳೆ ಕನ್ನಡ ಚಲನಚಿತ್ರ ನಟರ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರತಿಯೊಂದಕ್ಕೂ ಮಾತನಾಡುವ ಚಲನಚಿತ್ರ ನಟರು ಕಾವೇರಿ ವಿಚಾರವಾಗಿ ಮೌನವಾಗಿರುವುದು ಅಸಹನೀಯ. ಡಾ.ರಾಜ್‌ಕುಮಾರ್ ಮಾದರಿಯಲ್ಲಿ ಎಲ್ಲ ನಟರು ಕಾವೇರಿ ನದಿ ನೀರಿನ ವಿಚಾರವಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ:ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ಕಾವೇರಿ ವಿಚಾರವಾಗಿ ನೀಡಲಾಗಿರುವ ತೀರ್ಪುಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದು ಕರ್ನಾಟಕದ ಪಾಲಿಕೆ ಕರಾಳ ದಿನವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇತ್ತು. ಆದರೆ, ಅಲ್ಲೂ ನ್ಯಾಯ ದೊರಕಲಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುವುದು ಮಾತ್ರ ನಮಗೆ ಉಳಿದಿರುವ ದಾರಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢ ನಿರ್ಧಾರಕ್ಕೆ ಬರಬೇಕು. ಕಾವೇರಿ ವಿಚಾರವಾಗಿ ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಸಿಎಂ ಕೂಡ ಇದೇ ರೀತಿಯ ನಿಲುವು ತಳೆಯಬೇಕು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸುಗ್ರೀವಾಜ್ಞೆ ತಂದು ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿದ್ದರು. ಅದೇ ದಾರಿಯನ್ನು ಸಿದ್ದರಾಮಯ್ಯ ಅವರು ಅನುಸರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಬಂದ್ ಮಾಡುವ ಚಿಂತನೆಕಾವೇರಿ ನದಿ ನೀರಿನ ವಿಚಾರವಾಗಿ ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾವೇರಿ ವಿಚಾರವಾಗಿ ಹೋರಾಟಗಳು ನಡೆಯಬೇಕು ಹಾಗೂ ಅದರ ಜತೆಗೆ ಕರ್ನಾಟಕ ಬಂದ್ ಮಾಡಬೇಕು ಎಂಬ ಬಗ್ಗೆ ಕರವೇ ಪದಾಧಿಕಾರಿಗಳು ಚರ್ಚೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ಪ್ರತಿಭಟನೆ ಹಿನ್ನೆಲೆಯಲ್ಲಿ ಆನಂದರಾವ್ ವೃತ್ತದಿಂದ ಫ್ರೀಡಂಪಾರ್ಕ್ ಸೇರಿ ಸುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ೧ ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಮೌರ್ಯ ವೃತ್ತದ ಬಳಿಯಲ್ಲಿಯೇ ೬೦೦ಕ್ಕೂ ಹೆಚ್ಚಿನ ಪೊಲೀಸರನ್ನು ನೇಮಿಸಲಾಗಿತ್ತು. ಪ್ರತಿಭಟನಾಕಾರರು ಮೌರ್ಯ ವೃತ್ತಕ್ಕೆ ಬರುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದ ಪೊಲೀಸರು ಬಿಎಂಟಿಸಿ ಬಸ್‌ಗಳ ಮೂಲಕ ಕರೆದೊಯ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
