ಹೈದರಾಬಾದ್:ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ಪುತ್ರಿ, ಎಂಎಲ್​ಸಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಉರುಳಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅದಕ್ಕಾಗಿ ಬಿಆರ್​ಎಸ್ ಶಾಸಕರಿಗೆ ಆಮಿಷ ಒಡ್ಡಿದ್ದ ಪ್ರಕರಣವನ್ನು ಅಸ್ತ್ರವಾಗಿ ಬಳಸಿ ಬಿಜೆಪಿಯಿಂದ ಪ್ರಯೋಜನ ಪಡೆಯಲು ಕೆಸಿಆರ್ ಯತ್ನಿಸಿದ್ದೂ ಕೂಡ ಬಹಿರಂಗಗೊಂಡಿದೆ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ತಪ್ಪೊಪ್ಪಿಗೆಯಿಂದ ಈ ಎಲ್ಲ ಸಂಗತಿಗಳು ಬೆಳಕಿಗೆ ಬಂದಿವೆ.
ಮಾಜಿ ಉಪ ಪೊಲೀಸ್ ಆಯುಕ್ತ ಪಿ.ರಾಧಾಕಿಶನ್ ರಾವ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಎಲ್ಲ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಬಿಆರ್​ಎಸ್ ಶಾಸಕರ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಕೆಸಿಆರ್ ಪ್ರಯತ್ನಿಸಿದ್ದರು ಎಂಬುದು ತಪ್ಪೊಪ್ಪಿಗೆಯಲ್ಲಿ ಉಲ್ಲೇಖಿಸಲಾಗಿದೆ. ‘ಹಿರಿಯರು’ ಎಂದು ಕೆಸಿಆರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಈ ಮಾಹಿತಿ ತಿಳಿಸಿದ್ದಾರೆ.
ಅಂದುಕೊಂಡಂತೆ ನಡೆಯದ ಯೋಜನೆ:ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸಿದ್ದ ಕೆಸಿಆರ್, ಪ್ರಕರಣವನ್ನು ಕಠಿಣವಾಗಿಸುವ ಸಲುವಾಗಿ ಸಂತೋಷ್ ಅವರನ್ನು ಬಂಧಿಸಲು ಯತ್ನಿಸಿದ್ದರು. ಆ ಮೂಲಕ ಬಿಜೆಪಿಯಿಂದ ಪ್ರಯೋಜನ ಪಡೆಯಲು ಯೋಜಿಸಿದ್ದರು. ಕೇಸ್ ಬಿಗಿಯಾದಾಗ ಬಿಜೆಪಿ ರಾಜಿಗೆ ಬರುತ್ತದೆ. ಆಗ ಅದಕ್ಕೆ ಪ್ರತಿಯಾಗಿ ಪುತ್ರಿಯನ್ನು ಇ.ಡಿ. ಪ್ರಕರಣದಿಂದ ಪಾರಾಗಿಸಬಹುದು ಎಂಬ ಉಪಾಯ ಕೆಸಿಆರ್ ಅವರದ್ದಾಗಿತ್ತು. ಆದರೆ ಕೆಲವು ಅಧಿಕಾರಿಗಳ ಸಮರ್ಥತೆಯಿಂದಾಗಿ ಸಂತೋಷ್ ಬಂಧನ ತಪ್ಪಿಹೋಗಿದ್ದು, ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ಬಂಧಿಸದಂತೆ ಹೈಕೋರ್ಟ್ ಆದೇಶಿಸಿತ್ತು. ನಂತರ ಪ್ರಕರಣ ಎಸ್​ಐಟಿಯಿಂದ ಸಿಬಿಐಗೆ ಹಸ್ತಾಂತರವಾಯಿತು. ಯೋಜಿಸಿದಂತೆ ಕೆಲಸ ಆಗದ್ದಕ್ಕೆ ಕೆಸಿಆರ್ ಭಾರಿ ಸಿಟ್ಟಾಗಿದ್ದರು ಎಂಬುದು ತಪ್ಪೊಪ್ಪಿಗೆ ಹೇಳಿಕೆಯಿಂದ ಬಹಿರಂಗಗೊಂಡಿದೆ.
ವ್ಯವಸ್ಥಿತ ಸಂಚು:ಹಿಂದಿನ ಬಿಆರ್​ಎಸ್ ನೇತೃತ್ವದ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್, ಕೆಲವು ಕಂಪ್ಯೂಟರ್ ಸಿಸ್ಟಮ್ಳು ಮತ್ತು ಕಚೇರಿ ಡೇಟಾಗಳನ್ನು ನಾಶಪಡಿಸಿದ್ದ ಪ್ರಕರಣದಲ್ಲಿ ಈ ವರ್ಷ ಮಾರ್ಚ್​ನಲ್ಲಿ ರಾಧಾಕಿಶನ್ ರಾವ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಕೆಲವರ ಆಜ್ಞೆಯ ಮೇರೆಗೆ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ಪೆಷಲ್ ಇನ್​ವೆಸ್ಟಿಗೇಷನ್ ಬ್ಯೂರೋ(ಎಸ್​ಐಬಿ)ದಿಂದ ಅಮಾನತಾದ ಡಿಎಸ್​ಪಿ ಡಿ.ಪ್ರಣೀತ್ ಕುಮಾರ್ (ಪ್ರಣೀತ್ ರಾವ್) ಮತ್ತಿತರ ಕೆಲವು ಅಧಿಕಾರಿಗಳೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳ ವಿವರವನ್ನು ಅನಧಿಕೃತವಾಗಿ ಸಂಗ್ರಹಿಸಿದ್ದ ಆರೋಪ ರಾಧಾಕಿಶನ್ ರಾವ್ ಮೇಲಿದೆ. ಕೆಸಿಆರ್ ಮತ್ತು ಅವರ ಕುಟುಂಬದವರ ಸಿವಿಲ್ ವ್ಯಾಜ್ಯಗಳ ಇತ್ಯರ್ಥ, ಬಿಆರ್​ಎಸ್ ಮತ್ತು ಕೆಸಿಆರ್ ಹಾಗೂ ಅವರ ಕುಟುಂಬದವರಿಗೆ ತೊಂದರೆ ಕೊಡುವವರ ಕೈಕಟ್ಟಿ ಹಾಕುವಂಥ ಎಲ್ಲ ಮುಖ್ಯ ಗೌಪ್ಯ ಕೆಲಸಗಳನ್ನು ತಾವು ನಿಭಾಯಿಸುತ್ತಿದ್ದುದಾಗಿ ರಾಧಾಕಿಶನ್ ರಾವ್ ಹೇಳಿಕೊಂಡಿದ್ದಾರೆ.
ಎಸ್​ಐಬಿ ಮೂಲಕ ನಿಗಾ:ಕೆಸಿಆರ್ ಮತ್ತು ಬಿಆರ್​ಎಸ್​ಗೆ ತೊಂದರೆ ನೀಡುತ್ತಿದ್ದ ವಿರೋಧಪಕ್ಷಗಳ ನಾಯಕರು ಮತ್ತವರ ಸಹವರ್ತಿಗಳ ಮೇಲೆ ನಿಗಾ ಇಡುವ ಕೆಲಸವನ್ನು ಎಸ್​ಐಬಿ ಮುಖ್ಯಸ್ಥ ಪ್ರಭಾಕರ್ ರಾವ್ ಅವರು ಪ್ರಣೀತ್ ರಾವ್ ಉಸ್ತುವಾರಿಯ ತಂಡದ ಮೂಲಕ ಮಾಡುತ್ತಿದ್ದರು ಎಂದು ರಾಧಾಕಿಶನ್ ಮಾಹಿತಿ ನೀಡಿದ್ದಾರೆ. ವಿಪಕ್ಷಗಳಿಗೆ ಸಂಬಂಧಿತ ಹಣ ವಶ, ಬಿಆರ್​ಎಸ್​ಗೆ ದೇಣಿಗೆದಾರರಿಂದ ಬರುವ ಹಣ ಸಾಗಾಟಕ್ಕೆ ನೆರವು ಹಾಗೂ ಕೆಸಿಆರ್-ಬಿಆರ್​ಎಸ್​ಗೆ ಸಂಬಂಧಿತ ಇತರ ಗೌಪ್ಯ ಮಾಹಿತಿಯ ಕೆಲಸಗಳಿಗೆ ಪ್ರಣೀತ್ ರಾವ್ ಜತೆ ಸಹಕರಿಸುವಂತೆ ಪ್ರಭಾಕರ್ ರಾವ್ ಹೇಳಿದ್ದರು ಎಂಬುದಾಗಿಯೂ ರಾಧಾಕಿಶನ್ ಹೇಳಿಕೊಂಡಿದ್ದಾರೆ. ಇಂಥ ಚಟುವಟಿಕೆ 2018ರಲ್ಲಿ ಆರಂಭವಾಗಿದ್ದು, 2019ರ ಲೋಕಸಭಾ ಚುನಾವಣೆ ಹಾಗೂ ಇತರ ಕೆಲವು ಉಪ ಚುನಾವಣೆಗಳ ಸಂದರ್ಭದವರೆಗೂ ಮುಂದುವರಿದಿತ್ತು ಎಂದೂ ರಾವ್ ತಿಳಿಸಿದ್ದಾರೆ. ವಿಪಕ್ಷಗಳ ನಾಯಕರು, ಅವರ ಬೆಂಬಲಿಗರು, ಕುಟುಂಬ ಸದಸ್ಯರು, ಬಿಆರ್​ಎಸ್ ಪಕ್ಷದೊಳಗಿನ ಸಂಶಯಾಸ್ಪದ ವ್ಯಕ್ತಿಗಳು, ಕೆಸಿಆರ್-ಬಿಆರ್​ಎಸ್ ವಿರುದ್ಧ ಟೀಕಿಸುತ್ತ ವಿಪಕ್ಷಗಳಿಗೆ ಹತ್ತಿರವಾಗಲು ಬಯಸುತ್ತಿದ್ದ ವ್ಯಕ್ತಿಗಳ ಪ್ರೊಫೈಲ್ ರಚಿಸಿಕೊಡುವಂತೆ ಪ್ರಣೀತ್ ರಾವ್​ಗೆ ಪ್ರಭಾಕರ್ ರಾವ್ ಸೂಚಿಸುತ್ತಿದ್ದರು. ಅದರಂತೆ ಪ್ರಣೀತ್ ರಾವ್ ಫೋನ್ ಟ್ಯಾಪಿಂಗ್ ಇತ್ಯಾದಿ ನಡೆಸಿ ಮಾಹಿತಿ ಸಂಗ್ರಹಿಸಿ ಕೊಡುತ್ತಿದ್ದರು. ಅದನ್ನಾಧರಿಸಿ ಕೆಸಿಆರ್ ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು ಎಂಬುವುದು ಕೂಡ ತಪ್ಪೊಪ್ಪಿಗೆಯಲ್ಲಿದೆ.
ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಕೆಸಿಆರ್:ಮೊಯಿನಾಬಾದ್ ಫಾಮ್ರ್ ಹೌಸ್​ನಲ್ಲಿ 2022ರ ಅಕ್ಟೋಬರ್​ನಲ್ಲಿ ಶಾಸಕರ ಕಳ್ಳಬೇಟೆ ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಿದ್ದು ಈ ತಂಡ ನಡೆಸಿದ್ದ ಬಹುಮುಖ್ಯ ಕೆಲಸವಾಗಿತ್ತು. ಮುನುಗೋಡ್ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಕಾಂಗ್ರೆಸ್ ಶಾಸಕ ಕೆ.ರಾಜಗೋಪಾಲ ರೆಡ್ಡಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕೆಸಿಆರ್, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಣತೊಟ್ಟಿದ್ದರು. ಆಗ ಬಿಆರ್​ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಜತೆ ಬಿಜೆಪಿಯ ಪ್ರಭಾವಿ ವ್ಯಕ್ತಿ ಸಂಪರ್ಕದಲ್ಲಿದ್ದು, ಪಕ್ಷವನ್ನು ತೊರೆದು ಒಂದಷ್ಟು ಶಾಸಕರೊಂದಿಗೆ ಬಿಜೆಪಿಗೆ ಸೇರಲು ಆಮಿಷವೊಡ್ಡಿದ್ದಾರೆ ಎಂಬ ಮಾಹಿತಿಯನ್ನು ಕೆಸಿಆರ್​ಗೆ ಪ್ರಭಾಕರ್ ರಾವ್ ನೀಡಿದ್ದರು. ಆಗ ಇದನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ಕೆಸಿಆರ್ ಯೋಜನೆ ಹಾಕಿದ್ದರು.
ಕೆ-ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟ: 41 ವಿಷಯಗಳಲ್ಲಿ 6,675 ಮಂದಿ ಅರ್ಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
