| ಬಾಬುರಾವ ಯಡ್ರಾಮಿ ಕಲಬುರಗಿನಿಗಮ- ಮಂಡಳಿಗಳ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮದ ಸಂಭಾವ್ಯತೆ ಮಾಹಿತಿ ಇದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ವಿಚಾರ ಬೆಳಕಿಗೆ ಬಂದಿದೆ. ಏತನ್ಮಧ್ಯೆ, ರಾಜ್ಯದ ಬಹುತೇಕ ಕೇಂದ್ರಗಳಲ್ಲಿ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ. 250ಕ್ಕೂ ಹೆಚ್ಚು ಅಭ್ಯರ್ಥಿಗಳು ದುಡ್ಡು ಕೊಟ್ಟು ಡೀಲ್ ಕುದುರಿಸಿಕೊಂಡಿದ್ದರೆಂಬ ವಿಚಾರವೂ ಮುನ್ನೆಲೆಗೆ ಬಂದಿದೆ.
ಎಸ್​ಡಿಎ, ಎಫ್​ಡಿಎ ಪರೀಕ್ಷೆ ಜತೆಗೆ ಲೆಕ್ಕ ಸಹಾಯಕರ, ಆಹಾರ ನಿರೀಕ್ಷಕರ ಮತ್ತು ಮುಂದೂಡಿದ ಪೊಲೀಸ್ ಪೇದೆ ನೇಮಕ ಪರೀಕ್ಷೆಯಲ್ಲೂ ಅಕ್ರಮ ನಡೆಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗಿದೆ. ಯಾದಗಿರಿಯಲ್ಲಿ ಪತ್ತೆಯಾಗಿರುವ ಅಕ್ರಮ ರಾಜ್ಯದ ಹಲವು ಜಿಲ್ಲೆಗಳಿಗೂ ವಿಸ್ತರಿಸಿರುವ ಶಂಕೆ ಇದೆ. ಕೆಇಎ ಪರೀಕ್ಷೆಯ ತಲಾ ಹುದ್ದೆಗೆ 5 ರಿಂದ 25 ಲಕ್ಷ ರೂ. ವರೆಗೆ ಡೀಲ್ ಕುದುರಿಸಿರುವ ಮಾಹಿತಿ ಸಿಕ್ಕಿದೆ.
ಕೆಇಎ ಪರೀಕ್ಷೆಯಲ್ಲಿ ದುರ್ವ್ಯವಹಾರಕ್ಕೆ ಸಂಚು ನಡೆದಿದ್ದು, ಅದರಲ್ಲಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಮೊದಲೇ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದಂತೆ ಈ ಎಕ್ಸಾಮ್ಲ್ಲೂ ಕಲಬುರಗಿಯೇ ವ್ಯವಹಾರ ಕುದುರಿಸುವ ಕೇಂದ್ರಸ್ಥಾನವಾಗಿದೆ.
ಕೆಇಎ ನಡೆಸುತ್ತಿರುವ 720 ಹುದ್ದೆಗಳ ನೇಮಕ ಪರೀಕ್ಷೆಯಲ್ಲಿ ಪಿಎಸ್​ಐ ಹಗರಣದ ಕಿಂಗ್​ಪಿನ್ ಆರ್.ಡಿ. ಪಾಟೀಲ್ ಅಂದಾಜು 253 ಅಭ್ಯರ್ಥಿಗಳ ಜತೆ ವ್ಯವಹಾರ ಕುದುರಿಸಿದ್ದ ಎಂದು ಹೇಳಲಾಗುತ್ತಿದೆ. ಆರ್.ಡಿ. ಪಾಟೀಲ್ ಮತ್ತು ಗ್ಯಾಂಗ್ ಕೆಪಿಎಸ್ಸಿ ನಡೆಸುವ ಎಸ್​ಡಿಎ, ಎಫ್​ಡಿಎ, ಲೋಕೋಪಯೋಗಿ ಇಲಾಖೆಯ ಎಇ ಮತ್ತು ಜೆಇ ಪರೀಕ್ಷೆಗಳು ಹಾಗೂ ಪೊಲೀಸ್ ಕಾನ್​ಸ್ಟೆಬಲ್ ಪರೀಕ್ಷೆಗಳಲ್ಲೂ ಡೀಲ್ ನಡೆಸಿರುವುದು ಪಿಎಸ್​ಐ ಅಕ್ರಮದ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಪಿಎಸ್​ಐ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರ್.ಡಿ. ಪಾಟೀಲ್ ಹಾಗೂ ಆತನ ಸಹಚರರ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಗಾವಲಿರಿಸಿದ್ದರೆ ಪರೀಕ್ಷಾ ಅಕ್ರಮ ಪುನರಾವರ್ತನೆಯಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಬ್ ಇನ್​ಸ್ಪೆಕ್ಟರ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ತಲಾ 40 ರಿಂದ 80 ಲಕ್ಷ ರೂ. ವರೆಗೆ ವಸೂಲಿ ಮಾಡಲಾಗಿತ್ತು. ಈಗ ನಿಗಮ ಮಂಡಳಿಗಳ ಹುದ್ದೆಗೆ ತಲಾ ಅಭ್ಯರ್ಥಿಗೆ 25 ಲಕ್ಷ ರೂ.ಗೆ ಡೀಲ್ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆ ಹಗರಣದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಹಿರಿಯ- ಕಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಪರ್ಸೆಂಟೇಜ್ ರೂಪದಲ್ಲಿ ಹಣ ಪಡೆದುಕೊಂಡಿದ್ದರು. ಪಿಎಸ್​ಐ ಹಗರಣ ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಶಾಲೆಯ ಪರೀಕ್ಷಾ ಕೇಂದ್ರದಿಂದ ಶುರುವಾಗಿ ಬೆಂಗಳೂರಿನವರೆಗೂ ವ್ಯಾಪಿಸಿತ್ತು. ಈಗಿನ ಕೆಇಎ ಪರೀಕ್ಷಾ ಅಕ್ರಮವೂ ಬೇರೆಬೇರೆ ಪರೀಕ್ಷಾ ಕೇಂದ್ರಗಳಿಗೂ ವ್ಯಾಪಿಸಿರುವ ಲಕ್ಷಣಗಳು ಗೋಚರಿಸಿವೆ.
ಪಿಎಸ್​ಐ ಪರೀಕ್ಷೆ ಮಾದರಿಯಲ್ಲೇ ಅಕ್ರಮ:ಆರ್.ಡಿ. ಪಾಟೀಲ್ ತಂಡ, ಪಿಎಸ್​ಐ ಹಗರಣದಲ್ಲಿ ಎರಡು ರೀತಿಯಲ್ಲಿ ಅಕ್ರಮ ಎಸಗಿತ್ತು. ಮೊದಲನೆಯದು ಅಭ್ಯರ್ಥಿಗೆ ಬ್ಲೂಟೂತ್ ಕೊಟ್ಟು, ದೂರದಲ್ಲಿ ಕುಳಿತು ಉತ್ತರ ಹೇಳಿ ಬರೆಸಿದ್ದರು. ಎರಡನೆಯದು ಅಭ್ಯರ್ಥಿ ಬರೆದ ಓಎಂಆರ್ ಶೀಟ್​ಗಳನ್ನು ಪಾಸ್ ಆಗುವಷ್ಟು ಅಂಕಕ್ಕೆ ತಿದ್ದಲಾಗಿತ್ತು. ಕೆಇಎ ಪರೀಕ್ಷೆಯಲ್ಲಿ ಬ್ಲೂ ಟೂತ್ ಮೂಲಕ ಉತ್ತರ ಹೇಳಿಸಿರುವುದು ಬೆಳಕಿಗೆ ಬಂದಿದೆ. ಒಎಂಆರ್ ಶೀಟ್ ತಿದ್ದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ಕೊಂಚ ಹೈಟೆಕ್ ಆಗಿದ್ದು, ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಬ್ಲೂಟೂತ್ ಡಿವೈಸ್ ಬಳಸಿದ್ದಾರೆ.
ಅಕ್ರಮಕ್ಕೆ ಹೊಸ ಪಡೆ:ಆರ್.ಡಿ. ಪಾಟೀಲ್ ತನ್ನ ಹಳೆಯ ಸಹಚರರ ಜತೆಗೆ ಹೊಸ ಯುವಕರ ಪಡೆಯೊಂದನ್ನು ಕಟ್ಟಿಕೊಂಡು ಕೆಲಸ ಮಾಡಿದ್ದ ಎನ್ನಲಾಗಿದೆ. ಆರ್.ಡಿ. ಪಾಟೀಲ್ ಡೀಲ್ ಮುಗಿಸಿ ಪರೀಕ್ಷೆಗೆ ಎರಡು ದಿನ ಮೊದಲೇ ಕಲಬುರಗಿಯಿಂದ ಅಜ್ಞಾತ ಸ್ಥಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾನೆ. ಪತ್ತೆಗೆ ಮೂರು ವಿಶೇಷ ತಂಡ ರಚಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ಬಂಧನದ ಬಳಿಕ ಇನ್ನಷ್ಟು ಸ್ಪೋಟಕ ಮಾಹಿತಿ ಹೊರಬರಲಿದೆ.
ಮೇಲ್ವಿಚಾರಣೆಗೆ ಸರ್ಕಾರಿ ಶಿಕ್ಷಕರ ನಿಯೋಜಿಸಿ:ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗೆ ಖಾಸಗಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಅವರು ಹಣದಾಸೆಗೆ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆಂಬ ಆರೋಪ ಮೊದಲಿನಿಂದಲೂ ಇದೆ. ಆದ್ದರಿಂದ ಸರ್ಕಾರಿ ಶಿಕ್ಷಕರನ್ನು ನಿಯೋಜಿಸಿದರೆ ಉತ್ತಮ. ಅಕ್ರಮದಲ್ಲಿ ಸಿಕ್ಕಿಬಿದ್ದರೆ ಕೆಲಸ ಕಳೆದುಕೊಳ್ಳುವ, ಶಿಕ್ಷೆಯಾಗುವ ಭಯ ಅವರಿಗೆ ಇರುತ್ತದೆ. ಖಾಸಗಿಯವರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂಬುದು ಅಧಿಕಾರಿಗಳ ಸಲಹೆ.
ಕಲಬುರಗಿಯಲ್ಲಿ ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮದ ಮಾಹಿತಿ ಸಿಗುತ್ತಲೇ ಭಾಗಿಯಾದವರನ್ನು ಬಂಧಿಸಲಾಗಿದೆ. ಅಕ್ರಮ ನಡೆಸಿದವರು ಮತ್ತು ಕುಮ್ಮಕ್ಕು ನೀಡಿದವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿದ್ದರಿಂದಲೇ ಅಕ್ರಮ ಬೆಳಕಿಗೆ ಬಂದಿದೆ. ಯಾವುದೇ ನಿರ್ಲಕ್ಷ್ಯ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಾಡಿಲ್ಲ. ವಿಜಯಪುರ, ಯಾದಗಿರಿಗಳಲ್ಲಿ ಅಕ್ರಮ ನಡೆಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಪರೀಕ್ಷೆಯಲ್ಲಿ ಅಕ್ರಮಕ್ಕೆ ಒಪ್ಪಿಕೊಂಡಿದ್ದ ಅಭ್ಯರ್ಥಿಗಳ ಪೈಕಿ ಪೊಲೀಸರಿಗೆ ಸಿಕ್ಕಿಬಿದ್ದವರೆಲ್ಲರೂ ಆರ್.ಡಿ. ಪಾಟೀಲ್ ಗ್ಯಾಂಗ್ ನೀಡುವ ತರಬೇತಿಗೆ ಹೋಗದವರು ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಗಳು ಮತ್ತು ಅವರ ಸಹಾಯಕರು ಹಾಗೂ ಉತ್ತರ ಹೇಳುವವರಿಗೆ ಬ್ಲೂಟೂತ್ ಡಿವೈಸ್ ಹೇಗೆ ಬಳಸಬೇಕು ಎಂಬುದರ ಬಗ್ಗೆ ಗ್ಯಾಂಗ್ ತರಬೇತಿ ನೀಡಿತ್ತು. ಆದರೆ, ಕೆಲವರು ತರಬೇತಿಗೆ ಹೋಗಿರಲಿಲ್ಲ. ಅಂತಹವರು ಸಿಕ್ಕಿಬಿದ್ದಿದ್ದಾರೆ. ತರಬೇತಿ ಪಡೆದವರು ಬ್ಲೂಟೂತ್ ನೆರವಿನಿಂದ ಯಶಸ್ವಿಯಾಗಿ ಉತ್ತರ ಬರೆದು ಬಂದಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್​ಐ ಪರೀಕ್ಷೆಯಂತೆ ಕೆಇಎ ಪರೀಕ್ಷೆಗಳಲ್ಲೂ ಬ್ಲೂಟೂತ್ ಡಿವೈಎಸ್ ಬಳಸಿ ಅಕ್ರಮ ನಡೆಯಲಿದೆ ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದ ಮುಖಂಡ ರವಿಶಂಕರ್ ಮಾಲಿಪಾಟೀಲ್ ಅ.13ರಂದೇ ಸಚಿವ ಪ್ರಿಯಾಂಕ್ ಖರ್ಗೆಗೆ ದೂರು ಕೊಟ್ಟಿದ್ದರು. ಪಿಎಸ್​ಐ ಪರೀಕ್ಷೆ ಅಕ್ರಮದಂತೆ ಉತ್ತರಗಳ ಜಾಗ ಖಾಲಿ ಬಿಟ್ಟು ನಂತರ ತುಂಬಿಸುವ ಸಂಚು ನಡೆಯುತ್ತಿದೆ. ಅಭ್ಯರ್ಥಿಗಳೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು ಒಎಂಆರ್ ಪ್ರತಿಗಳನ್ನು ಖಾಲಿ ಬಿಡುವಂತೆ ಹೇಳಿದ್ದಾರೆ. ಪರೀಕ್ಷೆ ಮುಗಿಯುತ್ತಲೆ ಉನ್ನತ ಅಧಿಕಾರಿಗಳೇ ಉತ್ತರ ಪತ್ರಿಕೆ ತುಂಬುತ್ತಾರೆ ಎಂದು ಎಚ್ಚರಿಸಿದ್ದರು. ಆದರೆ, ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
