ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿರುವ ಮುಖಂಡರ ಬಾಯಿಗೆ ಬೀಗ ಹಾಕುವ ಪ್ರಯತ್ನವನ್ನು ಬಿಜೆಪಿ ರಾಜ್ಯ ಮುಖಂಡರು ಮಾಡಿದ್ದಾರೆ.
ಪರಸ್ಪರ ಟೀಕಾರೋಪದಲ್ಲಿ ತೊಡಗಿರುವ ಮುಖಂಡರಿಗೆ ಎಚ್ಚರಿಕೆ ನೀಡುವುದು, ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆ ಹಾಗೂ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಸಮಾಲೋಚಿಸಲು ಬಿಜೆಪಿ ಮುಖಂಡರು ಸಭೆ ಸೇರಿದ್ದರು.
ವಿವಿಧೆಡೆ ನಡೆದ ಪಕ್ಷದ ಸಭೆಗಳಲ್ಲಿ ಗುಂಪುಗಾರಿಕೆ ಇರುವುದು ಬಹಿರಂಗವಾಗಿದ್ದರಿಂದ ವರಿಷ್ಠರು ಎಲ್ಲರನ್ನೂ ಮೌನವಾಗಿರಿಸುವಂತೆ ರಾಜ್ಯ ಮುಖಂಡರಿಗೆ ಸೂಚನೆ ನೀಡಿದ್ದರು. ಪರಸ್ಪರ ಟೀಕೆಗಳನ್ನು ಮಾಡುತ್ತಿದ್ದ, ಪಕ್ಷದ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದ 12 ಜನರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಕ್ಷದ ಮುಖಂಡರ ವಿರುದ್ಧ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದರಾದ ರಮೇಶ್ ಜಿಗಜಿಣಗಿ, ಪ್ರತಾಪ ಸಿಂಹ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಸ್. ಮುನಿರಾಜ್, ಮಾಜಿ ಸಚಿವರಾದ ಮುರುಗೇಶ ಆರ್. ನಿರಾಣಿ, ಎಂ.ಪಿ. ರೇಣುಕಾಚಾರ್ಯ, ಪ್ರಭು ಚವ್ಹಾಣ್, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ಪರಾಜಿತ ಅಭ್ಯರ್ಥಿ ತಮ್ಮೇಶ್​ಗೌಡ, ಬೀದರ್ ಜಿಲ್ಲೆಯ ಈಶ್ವರಸಿಂಗ್ ಠಾಕೂರ್ ಅವರಿಗೆ ಸಭೆಗೆ ಬಂದು ಸಮಜಾಯಿಷಿ ನೀಡುವಂತೆ ಸೂಚನೆ ನೀಡಲಾಗಿತ್ತು.
ಸಭೆಯಲ್ಲಿ ಉಪಸ್ಥಿತರು:ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಘಟನಾ ಕಾರ್ಯದರ್ಶಿ ರಾಜೇಶ್, ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಆರು ಸದಸ್ಯರು, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಭಾಗವಹಿಸಿದ್ದರು
ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡುತ್ತಿರುವ 12 ಜನರಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ ಕೆಲವರು ಬಂದು ಹೇಳಿಕೆ ಕೊಟ್ಟಿದ್ದಾರೆ. ಮತ್ತೆ ಆ ರೀತಿಯ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ.| ಬಿಜೆಪಿ ರಾಜ್ಯಾಧ್ಯಕ್ಷ
ಶಿಸ್ತುಕ್ರಮದ ಎಚ್ಚರಿಕೆ:ಪಕ್ಷದ ವಿರುದ್ಧ ಯಾರೂ ಹೇಳಿಕೆ ನೀಡಬಾರದು. ಪಕ್ಷ ಈಗ ಸೋತಿದ್ದು, ಇದಕ್ಕೆ ಎಲ್ಲರೂ ಜವಾಬ್ದಾರರು. ಯಾರನ್ನೋ ಗುರಿ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ, ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಅಂತಹ ಸಂದರ್ಭದಲ್ಲಿ ನಮ್ಮ ನಮ್ಮಲ್ಲಿಯೇ ಟೀಕೆ-ಪ್ರತಿಟೀಕೆಗಳನ್ನು ಮಾಡುತ್ತ ಕೂರಬಾರದು. ಸಂಘಟನೆಯತ್ತ ತೊಡಗಿ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಪಕ್ಷದ ಸೂಚನೆ ಕಡೆಗಣಿಸಿ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು.
ಐವರು ಗೈರು: ಮುರುಗೇಶ ನಿರಾಣಿ, ಈಶ್ವರಸಿಂಗ್ ಠಾಕೂರ್, ಪ್ರಭು ಚವ್ಹಾಣ್, ರಮೇಶ್ ಜಿಗಜಿಣಗಿ ಹಾಗೂ ರೇಣುಕಾಚಾರ್ಯ ಸಭೆಗೆ ಬಂದಿರಲಿಲ್ಲ. ಉಳಿದವರು ಹಾಜರಾಗಿ ವಿವರಣೆ ನೀಡಿದರು.
ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಗಳನ್ನು ನೀಡಿದವರ ಜತೆ ರ್ಚಚಿಸಿ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ. ಸೂಚನೆಯನ್ನು ಮೀರಿ ಅದೇ ರೀತಿಯಲ್ಲಿ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳುವ ತೀರ್ಮಾನ ಮಾಡಿದ್ದೇವೆ.| ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಒಟ್ಟು 12 ಜನರನ್ನು ನಾವು ಕರೆದಿದ್ದೆವು. ಆ ಪೈಕಿ 5 ಜನ ಬಂದಿಲ್ಲ. ಯಾರು ಬಂದಿಲ್ಲವೋ ಅವರೊಂದಿಗೆ ಮಾತನಾಡುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಭೆ ಅಧಿಕಾರ ನೀಡಿದೆ.| ಎನ್. ರವಿಕುಮಾರ್, ಮೇಲ್ಮನೆ ಸದಸ್ಯ
ಮತ್ತೆ ಟೀಕಿಸಿದ ರೇಣುಕಾಚಾರ್ಯ: ಪಕ್ಷದ ಮುಖಂಡರ ಸಭೆಗೆ ಹಾಜರಾಗಿ ಸಮಜಾಯಿಷಿ ನೀಡುವುದರಿಂದ ತಪ್ಪಿಸಿಕೊಂಡ ಮಾಜಿ ಸಚಿವ ರೇಣುಕಾಚಾರ್ಯ ಮತ್ತೆ ಟೀಕೆ ಮುಂದುವರಿಸಿದ್ದಾರೆ. ಪಕ್ಷದ ನೋಟಿಸ್​ಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದಲ್ಲಿ ಶಿಸ್ತು ಸಮಿತಿ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದೇ ಗುರುವಾರ ಮಧ್ಯಾಹ್ನ’ ಎಂದು ಹೇಳಿದರು.
ಪಕ್ಷದ ಶಿಸ್ತಿಗೆ ಬದ್ಧರಾಗಿ ಇರಬೇಕೆಂದು ಹೇಳಿದ್ದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಪಕ್ಷದ ಸಂವಿಧಾನದಂತೆ ರಾಜ್ಯ ಪದಾಧಿಕಾರಿಗಳಿಗೆ ಹಾಗೂ ಮಾಜಿ ಶಾಸಕರಿಗೆ ಮಾತ್ರ ನೋಟಿಸ್ ಕೊಡಲು ನಮ್ಮ ಸಮಿತಿಗೆ ಅಧಿಕಾರ ಇದೆ. ಶಾಸಕರು, ಸಚಿವರು, ಸಂಸದರನ್ನು ಕೇಂದ್ರ ಶಿಸ್ತು ಸಮಿತಿಯವರು ನೋಟಿಸ್ ಕೊಡುತ್ತಾರೆ.| ಲಿಂಗರಾಜ ಪಾಟೀಲ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ
ಬಿಎಸ್​ವೈಗೆ ಅಧಿಕಾರ: ಸಭೆಗೆ ಗೈರಾದ ಐದು ಜನರನ್ನು ಕರೆದು ಎಚ್ಚರಿಕೆ ನೀಡುವಂತೆ ಸಭೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿತು. ಪ್ರತಿಯೊಬ್ಬರನ್ನು ತಕ್ಷಣವೇ ಕರೆದು ಚರ್ಚೆ ನಡೆಸುವುದಾಗಿ ಯಡಿಯೂರಪ್ಪ ತಿಳಿಸಿದರು.
ನಾಳೆ ಶಾಸಕಾಂಗ ಸಭೆ: ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರು, ಉಪ ನಾಯಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರ ಆಯ್ಕೆಗೆ ಸಂಬಂಧಿಸಿದಂತೆ ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಆಯ್ಕೆ ನಡೆಯಬೇಕು ಎಂಬುದು ಪಕ್ಷದ ನಿಯಮವಾಗಿದೆ. ಆದ್ದರಿಂದ ಅಂದು ಪಕ್ಷದ ಕಚೇರಿಯಲ್ಲಿಯೇ ಸಭೆ ಕರೆದು ಪ್ರಕಟಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಅಷ್ಟರೊಳಗೆ ಆಯ್ಕೆ ಮಾಡಲಾಗುತ್ತದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಲು ಪಕ್ಷದ ಯಾವ ಶಾಸಕರೂ ಸಿದ್ಧರಿಲ್ಲವೆಂದು ಮೂಲಗಳು ಹೇಳಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸುನೀಲ್​ಕುಮಾರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಚಾಲ್ತಿಯಲ್ಲಿವೆ. ಶಾಸಕಾಂಗ ಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬುದರ ಆಧಾರದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 14 =
Remember me
