| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ಈಗ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಶಿಕ್ಷಣ ನೀತಿ(ಕೆಇಪಿ)ಗೆ ಪೂರಕವಾಗಿ ಜ್ಞಾನ ಆಯೋಗವನ್ನು ಪುನಾರಚನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕೆಇಪಿ ಯಾವ ರೀತಿಯಲ್ಲಿರಬೇಕು ಎಂಬುದಕ್ಕೆ ಚೌಕಟ್ಟು ರೂಪಿಸುವ ಕಾರ್ಯ ಒಂದು ವಾರದಲ್ಲಿ ಆಗಲಿದೆ. ನೀತಿ ರೂಪಿಸುವ ತಂಡ ಹೇಗಿರಬೇಕು, ತಂಡಕ್ಕೆ ಯಾವ್ಯಾವ ಮಾನದಂಡಗಳನ್ನು ನಿಗದಿ ಮಾಡಬೇಕು ಎಂಬ ಬಗ್ಗೆಯೂ ಸರ್ಕಾರದಲ್ಲಿ ಚರ್ಚೆ ಬಹುತೇಕ ಅಂತಿಮವಾಗುವ ಹಂತದಲ್ಲಿದೆ. ತಜ್ಞರ ನೇತೃತ್ವದ ತಂಡ ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಗುಣಮಟ್ಟವನ್ನು ಸ್ಥಳೀಯ ಅಸ್ಮಿತೆಯೊಂದಿಗೆ ಜಾಗತಿಕ ಮಟ್ಟದ ಶಿಕ್ಷಣಕ್ಕೆ ರಾಜ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನೀತಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ರೂಪಿಸಿದಾಗ ಅದನ್ನು ಮೊದಲು ರಾಜ್ಯದಲ್ಲಿಯೇ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಇದನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೆಇಪಿ ಜಾರಿಗೆ ಬರಬೇಕಾಗಿದೆ. ಆದ್ದರಿಂದಲೇ ಸಮಿತಿ ರಚನೆಯ ತರಾತುರಿಯಲ್ಲಿ ಸರ್ಕಾರ ಇದೆ.
ಆಯೋಗ ಏಕೆ?:ಕೇವಲ ಕೆಇಪಿ ರೂಪಿಸಿ ಬಿಟ್ಟುಬಿಡುವುದು ಸರ್ಕಾರದ ಉದ್ದೇಶವಲ್ಲ. ಅದಕ್ಕೆ ಪೂರಕವಾಗಿ ಸಶಕ್ತ ಜ್ಞಾನ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ವಿವಿಗಳಲ್ಲಿ ಶೈಕ್ಷಣಿಕ, ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಬೇಕಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಮುಂದಿನ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ, ಶಿಫಾರಸು ನೀಡಬೇಕಾಗುತ್ತದೆ. ಸಾಂಸ್ಥಿಕ ಮಾದರಿಗಳನ್ನು ಅನ್ವೇಷಣೆ ಮಾಡಿಕೊಡಬೇಕಾಗಿದೆ. ಒಟ್ಟಾರೆ ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಉದ್ಯಮಗಳ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ.
ವಿವಿಗಳಿಗೆ ಉತ್ತರದಾಯಿತ್ವ:ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಉತ್ತರದಾಯಿತ್ವ ನಿಗದಿ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದ ಗೌರವ ಉಳಿಸುವ ಕಡೆಗೂ ಸರ್ಕಾರ ಚಿಂತನೆ ಆರಂಭಿಸಿದೆ. ಬಹುತೇಕ ವಿವಿಗಳಲ್ಲಿ ಆಡಳಿತ ಕುಸಿದಿದ್ದರೆ, ನೇಮಕಾತಿ ಹಾಗೂ ಖರೀದಿಯ ಅಕ್ರಮಗಳಾಗುತ್ತಿವೆ. ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಅದಕ್ಕಾಗಿಯೇ ಉತ್ತರದಾಯಿತ್ವ ನಿಗದಿಯ ಮೂಲಕ ಜನರ ನಿರೀಕ್ಷೆಗೆ ತಕ್ಕಂತೆ ಸಜ್ಜುಗೊಳಿಸಲು ಸರ್ಕಾರ ತೀರ್ವನಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿ ತರುತ್ತಿರುವುದರಿಂದ ಅಧ್ಯಯನಕ್ಕಾಗಿ ಜ್ಞಾನ ಆಯೋಗವನ್ನು ರಚನೆ ಮಾಡಲಾಗುತ್ತದೆ. ಹಿಂದೆ ರಾಜ್ಯದಲ್ಲಿದ್ದ ಜ್ಞಾನ ಆಯೋಗ ನಂತರ ರದ್ದಾಗಿತ್ತು. ಈಗ ಮತ್ತೆ ರಚನೆ ಮಾಡುವ ಕಡೆ ಸರ್ಕಾರ ಗಮನ ಹರಿಸಿದೆ. ಹೊಸ ಶಿಕ್ಷಣ ನೀತಿಗೆ ಸಹಾಯಕವಾಗಿ ಆಯೋಗ ಕೆಲಸ ಮಾಡಲಿದೆ. ಶಿಕ್ಷಣ ನೀತಿ ರಚನೆಯಲ್ಲಿ ಹಾಗೂ ಆ ನಂತರ ಅದರ ಅನುಷ್ಠಾನಕ್ಕೆ ಪೂರಕವಾಗಿ ಜ್ಞಾನ ಆಯೋಗ ಶಿಕ್ಷಣ ಇಲಾಖೆಗೆ ಸಲಹೆಗಳನ್ನು ನೀಡಲಿದೆ. ನೀತಿಯಲ್ಲಿರುವ ಅಂಶಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಕೊಡಬೇಕಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಹಿಂದೆ ಡಾ. ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ರಚನೆಯಾಗಿದ್ದ ಜ್ಞಾನ ಆಯೋಗ 2016ರಲ್ಲಿ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ನೀಡಿತ್ತು. ವಿವಿಧ ಕಾರ್ಯಪಡೆಗಳನ್ನು ರಚನೆ ಮಾಡಿಕೊಂಡು ವಿಸõತವಾದ ವರದಿಯನ್ನೇ ನೀಡಿತ್ತು. ಆದರೆ ಬಹುತೇಕ ಶಿಫಾರಸುಗಳು ನೆನಗುದಿಗೆ ಬಿದ್ದಿವೆ. ಅದಕ್ಕೆ ಸಮಿತಿಯಲ್ಲಿ ಇದ್ದವರು ಯಾರು ಎಂಬುದು ಸೇರಿದಂತೆ ಬೇರೆ ಬೇರೆ ಕಾರಣಗಳು ಇವೆ.
ನೀತಿಯಲ್ಲಿ ಏನಿರಲಿದೆ?:ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವಂತಹ ಶಿಕ್ಷಣವನ್ನು ಸರ್ಕಾರ ಎದುರು ನೋಡುತ್ತಿದೆ. ಈಗ ಶಿಕ್ಷಣಕ್ಕೂ ಉದ್ಯೋಗಕ್ಕೂ ಸಂಬಂಧವೇ ಇಲ್ಲವೆಂಬ ಪರಿಸ್ಥಿತಿ ಇದೆ. ಉದ್ಯೋಗದ ಯಾವ ಗ್ಯಾರಂಟಿಯೂ ಇಲ್ಲ. ಆದರೆ ಇನ್ಮುಂದೆ ಆ ರೀತಿಯಾಗದೇ ಸಮಾಜದಲ್ಲಿ ಆರ್ಥಿಕ ಬದಲಾವಣೆ, ಸಾಮಾಜಿಕ ಸಬಲೀಕರಣವನ್ನು ತರುವಂತಹ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರವನ್ನು ಮರು ಸಂಘಟಿಸಲು ಕರ್ನಾಟಕ ಶಿಕ್ಷಣ ನೀತಿಯ ಮೂಲಕ ಪ್ರಯತ್ನ ಮಾಡುವುದು ಸರ್ಕಾರದ ಆದ್ಯತೆಯಾಗಿರಲಿದೆ.
ರಚನಾತ್ಮಕ, ಪ್ರಯೋಗಾತ್ಮಕ, ನಾವಿನ್ಯಯುತ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವ ಆಶಯವನ್ನು ಕರ್ನಾಟಕ ಶಿಕ್ಷಣ ನೀತಿ ಹೊಂದಿರಲಿದೆ. ಇದಕ್ಕೆ ತಕ್ಕಂತೆ ಶಿಕ್ಷಕರ ಸಾಮರ್ಥ್ಯ ವೃದ್ಧಿಸುವುದು ಸಹ ಉದ್ದೇಶವಾಗಿದೆ.
ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸುವ ಸಲುವಾಗಿ ತಜ್ಞರ ಸಮಿತಿ ರಚನೆಗೆ ಪೂರಕವಾಗಿ ನಿಯಮ ಮತ್ತು ಷರತ್ತು ಗಳನ್ನು ಒಂದು ವಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಶಿಕ್ಷಣದ ಸಮಗ್ರ ಬದಲಾವಣೆ ನಮ್ಮ ಉದ್ದೇಶವಾಗಿದೆ. ಸಮಾಜದ ಎಲ್ಲ ಸ್ಥರದ ಜನರನ್ನು ಒಳಗೊಳ್ಳುವಂತಹ ಶಿಕ್ಷಣ ನೀತಿ ಬರಬೇಕಾಗಿದೆ. ಆದ್ದರಿಂದಲೇ ಪ್ರಜಾಪ್ರಭುತ್ವ ವಿರೋಧಿಯಾಗಿದ್ದ ಶಿಕ್ಷಣ ನೀತಿಯನ್ನು ತಿರಸ್ಕರಿಸಲಾಗಿದೆ.
| ಡಾ. ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಹೊಸ ನೀತಿ ರೂಪಿಸಲು ರಚನೆ ಆಗುತ್ತಿರುವ ಸಮಿತಿಗೆ ಕೆಲವೊಂದು ನಿಯಮ ಮತ್ತು ಷರತ್ತುಗಳನ್ನು ಅಂತಿಮಗೊಳಿಸುವ ಕಾರ್ಯ ನಡೆದಿದೆ. ಪ್ರಾಥಮಿಕ ಶಿಕ್ಷಣಕ್ಕೆ ಬಂದರೆ ಮಕ್ಕಳ ಶಾರೀರಿಕ ಬೆಳವಣಿಗೆ, ಜ್ಞಾನ ಹಾಗೂ ಮನೋವಿಕಾಸ, ಕಲಿಕೆಯ ಹಂತದಲ್ಲಿರುವ ನ್ಯೂನತೆಗಳನ್ನು ಗುರುತಿಸುವುದು, ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಕಲಿಸುವುದು, ಜಾನಪದದ ಬಗ್ಗೆ ಆಸಕ್ತಿ ಮೂಡಿಸುವುದು ಹೀಗೆ ವಿವಿಧ ಆಯಾಯಗಳನ್ನು ಹೊಂದಿರಬೇಕೆಂದು ಷರತ್ತು ವಿಧಿಸಲಾಗುತ್ತದೆ.
ಉನ್ನತ ಶಿಕ್ಷಣದಲ್ಲಿ ಉದ್ಯೋಗಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ಇರಬೇಕು, ವಿವಿಗಳ ಗೌರವ ಉಳಿಯುವಂತೆ ಮಾಡುವುದು, ಕೈಗಾರಿಕೆಗಳನ್ನು ಶಿಕ್ಷಣ ಸಂಸ್ಥೆಗಳೊಂದಿಗೆ ಬೆಸೆಯುವುದು ಹೇಗೆ? ಒಟ್ಟಾರೆ ವ್ಯವಸ್ಥೆಯಲ್ಲಿ ಏನೇನು ಬದಲಾವಣೆಗಳನ್ನು ತರಬೇಕು? ಆರ್ಥಿಕ ಸ್ಥಿತಿಯಲ್ಲಿ ಬಲ ತುಂಬುವುದು ಹೇಗೆ? ತುಳಿತಕ್ಕೆ ಒಳಗಾದ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯುವುದು ಹೇಗೆ? ಸಮಾನ ಅವಕಾಶಗಳ ಸೃಷ್ಟಿ ಹೇಗೆ ಆಗಬೇಕು? ಜಾಗತಿಕ ಮಟ್ಟದ ಜ್ಞಾನವನ್ನು ಇಲ್ಲಿನ ಪಠ್ಯದಲ್ಲಿ ಅಳವಡಿಕೆ ಮಾಡುವುದು ಹೇಗೆ? ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯವುದು ಯಾವ ರೀತಿ? ಎಂಬ ಬಗ್ಗೆ ತಜ್ಞರ ಸಮಿತಿ ಅಧ್ಯಯನ ಮಾಡಿ ತನ್ನ ವರದಿಯನ್ನು ನೀಡಬೇಕಾಗುತ್ತದೆ. ಆ ವರದಿಯ ಆಧಾರದಲ್ಲಿ ಕರ್ನಾಟಕ ಶಿಕ್ಷಣ ನೀತಿ ಇರಲಿದೆ ಎಂದು ಮೂಲಗಳು ಹೇಳುತ್ತವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
