ಬೆಂಗಳೂರು:ಬೆಂಗಳೂರಿನಲ್ಲಿ ನೀರಿನ ಅಭಾವವಾಗಿರುವ ಬೆಳವಣಿಗೆ ಮುಂದಿಟ್ಟುಕೊಂಡು ರಾಜ್ಯದ ಕೈಗಾರಿಕೆಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ ಕೇರಳ ಸರ್ಕಾರಕ್ಕೆ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಬಿಸಿಮುಟ್ಟಿಸಿದ್ದಾರೆ. ಜತೆಗೆ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಪ್ರಯತ್ನದ ಬಗ್ಗೆಯೂ ಹೇಳಿಕೊಂಡಿದ್ದಾರೆ.ಬರಗಾಲ, ಬೇಸಿಗೆ ಎರಡೂ ಸೇರಿಕೊಂಡು ನಮ್ಮ ದೇಶವೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ನೀರಿನ ಕೊರತೆ ಉಂಟಾಗಿರುವುದು ನಿಸರ್ಗ ಸಹಜ ವಿದ್ಯಮಾನದ ಪರಿಣಾಮವಾಗಿದೆ. ಇದಕ್ಕೆ ಕೇರಳವೂ ಹೊರತಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಕೈಗಾರಿಕಾ ಸಚಿವರು ಬೆಂಗಳೂರಿನಲ್ಲಿ ನೀರಿಲ್ಲವೆಂದು ತಮ್ಮ ರಾಜ್ಯಕ್ಕೆ ಬರುವಂತೆ ಇಲ್ಲಿನ ಐಟಿ ಕಂಪನಿಗಳಿಗೆ ಆಹ್ವಾನ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ತ್ವಕ್ಕೆ ವಿರುದ್ಧವಾದುದು. ಕೇರಳ ಸಚಿವ ಈ ನಡವಳಿಕೆ ಆರೋಗ್ಯಕರವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕದ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಸಮೀಪದ ನದಿ ಮೂಲಗಳಿಂದ ನೀರು ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು ಈ ಕುರಿತು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಹಾಗೆಯೇ ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿಯಿಂದ ನೀರು ತರುವ ಪ್ರತ್ಯೇಕ ಯೋಜನೆ ಜಾರಿ ಸಂಬಂಧ ಹಲವು ಸಭೆಗಳನ್ನು ನಡೆಸಿ, ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ,ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಬೆಂಗಳೂರನ್ನು ಬಿಟ್ಟು ತಮ್ಮ ರಾಜ್ಯಕ್ಕೆ ಬಂದು ನೆಲೆಯೂರುವಂತೆ ಐಟಿ ಕಂಪನಿಗಳಿಗೆ ಆಹ್ವಾನಿಸಿರುವ ಸಂಗತಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದು ಒಂದು ರೀತಿ ಕುಚೋದ್ಯದ ನಡೆ ಎಂದು ಟೀಕಿಸಿದ್ದಾರೆ.ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅಂದಮೇಲೆ, ಪರಸ್ಪರ ಕೊಡು-ಕೊಳ್ಳುವಿಕೆ ಇರಬೇಕೇ ವಿನಾ ಪರಿಸ್ಥಿತಿಯ ದುರ್ಲಾಭ ಪಡೆಯಲು ನೋಡಬಾರದು. ಇದರಿಂದ ಕೊನೆಗೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಈ ಪ್ರಾಥಮಿಕ ಸತ್ಯವನ್ನು ಕೇರಳದ ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಐ.ಟಿ. ಕಂಪನಿಗಳು ನೆಲೆಯೂರಿರುವ ಪ್ರದೇಶಗಳಲ್ಲಿ ಕೂಡ ಗಂಭೀರ ಸ್ವರೂಪದಲ್ಲೇನೂ ನೀರಿನ ಕೊರತೆ ಕಾಣಿಸಿಕೊಂಡಿಲ್ಲ. ಜತೆಗೆ ನಮ್ಮಲ್ಲಿ ಕೇರಳ ಮೂಲದ ಲಕ್ಷಾಂತರ ಯುವಕ- ಯುವತಿಯರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಮರೆಯಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಜತೆಗೆ ಕೇರಳ ಒಂದು ರಾಜ್ಯವಾಗಿ ಎಷ್ಟು ಬೇಕಾದರೂ ಬಂಡವಾಳ ಆಕರ್ಷಿಸಲಿ. ಆ ಸ್ವಾತಂತ್ರ್ಯ ಅವರಿಗಿದೆ. ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಸರಿಯಲ್ಲ ಎಂದು ಪಾಟೀಲ ಟೀಕಿಸಿದ್ದಾರೆ.ಐಟಿ ವರಮಾನ ಮತ್ತು ರಫ್ತು ವಹಿವಾಟಿನಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನದಲ್ಲಿದ್ದು, ನಮ್ಮಲ್ಲಿ ಕೈಗಾರಿಕಾಸ್ನೇಹಿ ನೀತಿಗಳಿವೆ. ಇಲ್ಲಿರುವಷ್ಟು ಜಾಗತಿಕ ಮಟ್ಟದ ಕಂಪನಿಗಳು ಬೇರೆಲ್ಲೂ ಇಲ್ಲ. ಹೀಗಾಗಿ ಬೆಂಗಳೂರು ಕಳೆದ ಎರಡೂವರೆ ದಶಕಗಳಲ್ಲಿ ದೇಶದ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಕೇರಳಕ್ಕೆ ಇಂತಹ ಸಾಧನೆ ಸಾಧ್ಯವಾಗಿಲ್ಲ. ನೀರಿನ ಕೊರತೆಯನ್ನೇ ಮುಂದಿಟ್ಟುಕೊಂಡು ಇನ್ನೊಬ್ಬರ ಅವಕಾಶಗಳನ್ನು ಕಸಿದುಕೊಳ್ಳುತ್ತೇವೆ ಎನ್ನುವ ಚಿಂತನೆ ಅತ್ಯಂತ ಅಪಾಯಕಾರಿಯಾದುದು ಎಂದು ಉತ್ತರಿಸಿದ್ದಾರೆ.ಕೇರಳದಲ್ಲಿ 40 ನದಿಗಳಿವೆ ಎಂದು ಅಲ್ಲಿನ ಸಚಿವರು ಹೇಳಿದ್ದಾರೆ. ಆದರೆ ಅಲ್ಲಿ ಎಷ್ಟು ಅಣೆಕಟ್ಟುಗಳಿವೆ? ಎಷ್ಟರಲ್ಲಿ ಈಗ ನೀರಿದೆ? ಮುಂತಾದ ಪ್ರಶ್ನೆಗಳು ಇಲ್ಲಿ ಏಳುತ್ತವೆ. ಕೇವಲ ನದಿಗಳಿದ್ದ ಮಾತ್ರಕ್ಕೆ ಕಂಪನಿಗಳನ್ನು ಕಟ್ಟುವುದು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರುಪೂರ್ವ ಮಳೆ ಬರಲಿದ್ದು, ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ಪರಿಸ್ಥಿತಿ ಸುಧಾರಿಸಲಿದೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + five =
Remember me
