ಮನಮೋಹನ್ ಭುವನೇಶ್ವರದ ಒಬ್ಬ ಮಧ್ಯಮ ಶ್ರೀಮಂತ ವರ್ಗದ ಗುತ್ತಿಗೆದಾರ. ಪತ್ನಿ ಶೋಭಾ, ಮಕ್ಕಳಾದ ಪ್ರೀತಿ ಮತ್ತು ಸುಖೇಶ್ ಜತೆ ಸ್ವಂತ ಬಂಗಲೆಯಲ್ಲಿ ವಾಸಿಸುತ್ತಿದ್ದ. 16 ವರ್ಷದ ಪ್ರೀತಿ ಖಾಸಗಿ ಶಾಲೆಯಲ್ಲಿ ಹತ್ತನೆಯ ತರಗತಿ ಓದುತ್ತಿದ್ದಳು. ಉತ್ತಮ ಅಂಕಗಳನ್ನು ಗಳಿಸುತ್ತಿದ್ದ ಕಾರಣ ಅವಳನ್ನು ಕಂಡರೆ ಮನಮೋಹನ್​ನಿಗೆ ಎಲ್ಲಿಲ್ಲದ ಪ್ರೀತಿ.
ಒಂದು ದಿನ ಪ್ರೀತಿ ತಂದೆಯನ್ನುದ್ದೇಶಿಸಿ, ‘ಅಪ್ಪಾ, ಶಾಲೆಯಲ್ಲಿ ಪ್ರಾಜೆಕ್ಟ್ ಕೆಲಸ ಕೊಟ್ಟಿದ್ದಾರೆ. ಅದನ್ನು ಮಾಡಲು ಸ್ಮಾರ್ಟ್​ಫೋನ್ ಬೇಕಾಗಿದೆ’ ಎಂದಳು. ಮನಮೋಹನ್ ಫೋನನ್ನು ಕೂಡಲೇ ಕೊಡಿಸಲು ತಯಾರಾದಾಗ ಶೋಭಾ, ‘ನಮ್ಮ ಮಕ್ಕಳು ಕಾಲೇಜಿಗೆ ಬರುವವರೆಗೆ ನಾವು ಅವರಿಗೆ ಮೊಬೈಲ್ ಕೊಡಿಸಬಾರದೆಂದು ನಿರ್ಧರಿಸಿಲ್ಲವೇ? ಪ್ರಾಜೆಕ್ಟ್ ಕೆಲಸ ಮಾಡಲು ಅವಳಿಗೆ ಡೆಸ್ಕ್​ಟಾಪ್ ಕಂಪ್ಯೂಟರ್ ಕೊಡಿಸಿ, ಸ್ಮಾರ್ಟ್ ಫೋನ್ ಮಾತ್ರ ಬೇಡ’ ಎಂದಳು. ಪತ್ನಿಯ ಮಾತನ್ನು ಕೇಳದ ಮನಮೋಹನ್ ಮಗಳಿಗೆ 40 ಸಾವಿರ ರೂ.ಗಳ ಸ್ಮಾರ್ಟ್​ಫೋನ್ ಕೊಡಿಸಿದ.
ಹೊಸ ಫೋನೇನೋ ಬಂದಿತು. ಆದರೆ ಅದನ್ನು ಹೇಗೆ ಉಪಯೋಗಿಸಬೇಕೆಂದು ಪ್ರೀತಿಗೆ ಗೊತ್ತಿರಲಿಲ್ಲ. ಆಕೆ ಅದನ್ನು ಗೆಳತಿ ಶುಭ್ರಾಳ ಮನೆಗೆ ತೆಗೆದುಕೊಂಡು ಹೋದಳು. ಶುಭ್ರಾ ಪ್ರೀತಿಗೆ ಆ ಫೋನನ್ನು ಹೇಗೆ ಬಳಸುವುದೆಂದು ಕಲಿಸಿಕೊಟ್ಟು ತನಗೆ ಇಷ್ಟವೆನಿಸಿದ ಎಲ್ಲ ಆಪ್​ಗಳನ್ನೂ ಅದರಲ್ಲಿ ಹಾಕಿಕೊಟ್ಟಳು. ಪ್ರೀತಿಯನ್ನು ಇನ್ಸ್​ಟಾಗ್ರಾಂ ಮತ್ತು ಫೇಸ್​ಬುಕ್​ಗಳ ಸದಸ್ಯೆಯನ್ನಾಗಿಯೂ ಮಾಡಿದಳು.
ಪ್ರೀತಿಗೆ ಇನ್ಸ್​ಟಾಗ್ರಾಂ ಇಷ್ಟವಾಯಿತು. ಅದರಲ್ಲಿಯೂ ಆಕೆಗೆ ರೀಲ್ಸ್​ಗಳು ಹಿಡಿಸಿದವು. ತಾನೂ ಬಹಳಷ್ಟು ರೀಲ್ಸ್ ಗಳನ್ನು ಮಾಡಿ ನೂರಾರು ಫಾಲೋವರ್ಸ್​ಗಳನ್ನು ಹೊಂದಿದ್ದೇನೆಂದು ಹೇಳಿದ ಶುಭ್ರಾ ಅವನ್ನು ಪ್ರೀತಿಗೆ ತೋರಿಸಿದಳು. ಸಾಲದೆಂಬಂತೆ ರೀಲ್ಸ್ ಹಿರೋಗಳು ಮತ್ತು ಹೀರೋಯಿನ್​ಗಳು ಎಂದು ಕರೆಸಿಕೊಳ್ಳುವವರ ವಿಡಿಯೋಗಳನ್ನೂ ತೋರಿಸಿದಳು. ಆನಂತರ ಅಲ್ಲಿಯೇ ಪ್ರೀತಿಯ ವಿವಿಧ ಭಂಗಿಗಳ ಫೋಟೋಗಳನ್ನು ತೆಗೆದ ಶುಭ್ರಾ, ಅವನ್ನು ಇನ್ಸ್​ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದಳು. ಕೆಲವು ಫೋಟೋಗಳು ಅಪ್​ಲೋಡ್ ಆಗುತ್ತಿದ್ದಂತೆ ಅವುಗಳ ಬಗ್ಗೆ ಲೈಕ್​ಗಳು ಬರಲೂ ಶುರುವಾದದ್ದು ಪ್ರೀತಿಗೆ ಅಚ್ಚರಿ ಮೂಡಿಸಿತ್ತು.
ಮುಂದೆ ಪ್ರೀತಿ ತನ್ನ ಫೇಸ್​ಬುಕ್ ಹಾಗೂ ಇನ್​ಸ್ಟಾ ಅಕೌಂಟ್​ಗಳನ್ನು ಲಿಂಕ್ ಮಾಡಿದಳು. ಕೆಲವೇ ದಿನಗಳಲ್ಲಿ ಆಕೆ ಇನ್ಸ್​ಟಾಗ್ರಾಂ ಬಳಕೆಯಲ್ಲಿ ನಿಷ್ಣಾತಳಾದಳು. ಆದರೆ ಆಕೆಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯಿದ್ದ ಕಾರಣ ಅವಳು ದಿನಕ್ಕೆ ಒಂದು ಗಂಟೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಳು. ಹೀಗಿರುವಾಗ ಒಂದು ಭಾನುವಾರ ಆಕೆ ತಾನು ಕಥಕ್ ನರ್ತನ ಮಾಡಿದ ಎರಡು ರೀಲುಗಳನ್ನು ಜಾಲತಾಣದಲ್ಲಿ ಹಾಕಿದಳು. ಕೆಲವೇ ಕ್ಷಣಗಳಲ್ಲಿ ಆಕೆಗೆ ಲೈಕ್​ಗಳ ಮಹಾಪೂರವೇ ಹರಿದುಬಂದಿತು. ಇದರಿಂದ ಸಂತಸಗೊಂಡ ಪ್ರೀತಿ ಉತ್ತಮ ಆಭರಣಗಳನ್ನು ಧರಿಸಿ ವಿವಿಧ ನೃತ್ಯಭಂಗಿಗಳ ಫೋಟೋ ಹಾಕಿದಳು. ಆಗ ಅವಳ ಫಾಲೋವರ್ಸ್​ಗಳ ಸಂಖ್ಯೆ ಇನ್ನೂ ಹೆಚ್ಚಾಯಿತು. ಇದರಿಂದ ಉತ್ತೇಜನಗೊಂಡ ಆಕೆ ತಾನು ಜಿಮ್ೆ ಹೋಗಿ ವ್ಯಾಯಾಮ ಮಾಡುವುದು, ಸಿನಿಮಾ ಹಾಡುಗಳಿಗೆ ಡಾನ್ಸ್ ಮಾಡುವುದು ಮುಂತಾದ ವಿಡಿಯೋಗಳನ್ನೂ ಹಾಕಲಾರಂಭಿಸಿದಳು.
ಕೆಲ ದಿನಗಳ ನಂತರ ತಾನು ಹಾಕಿದ್ದ ಎಲ್ಲ ಪೋಸ್ಟ್​ಗಳನ್ನೂ ಪ್ರೇಮ್ ಎನ್ನುವವನು ಲೈಕ್ ಮಾಡುತ್ತಿದುದನ್ನು ಪ್ರೀತಿ ಗಮನಿಸಿದಳು. ಅವನು ಯಾರು ಎಂದು ಅರಿಯಲು ಅವನ ಪೊ›ಫೈಲ್ ನೊಡಿದಳು. ಆತ ತಾನು 23 ವರ್ಷದವನಾಗಿದ್ದು, ಬಿ.ಇ ಪದವೀಧರನೆಂದು ಹೇಳಿಕೊಂಡಿದ್ದ. ಉದ್ಯಮಿ ಎಂದು ತಿಳಿಸಿದ್ದ. ಮುಂದಿನ ವಾರವೇ ಪ್ರೇಮ್ ಫೇಸ್​ಬುಕ್ ಮೆಸೆಂಜರ್ ಮೂಲಕ ಪ್ರೀತಿಗೆ ಹಾಯ್ ಎಂದು ಮೆಸೇಜ್ ಕಳುಹಿಸಿದ. ಪ್ರೀತಿ ಪ್ರತಿಕ್ರಿಯಿಸಿದಾಗ ಅವಳೊಡನೆ ಲೋಕಾಭಿರಾಮವಾಗಿ ಚಾಟ್ ಮಾಡಿದ. ಹೀಗೆ ಪ್ರತಿದಿನ ಅವರಿಬ್ಬರೂ ಚಾಟ್ ಮಾಡತೊಡಗಿದರು.
ಒಂದು ದಿನ ಪ್ರೇಮ್ ‘ನಾವಿಬ್ಬರೂ ಸಾಮಾಜಿಕ ಜಾಲತಾಣದಲ್ಲೇ ಫ್ರೆಂಡ್ಸ್ ಆಗಿದ್ದೇವೆ, ಇಬ್ಬರೂ ಮುಖತಃ ಭೇಟಿಯಾಗೋಣ’ ಎಂಬ ಸಂದೇಶ ಕಳಿಸಿದ. ಪ್ರೀತಿ ಗಾಬರಿಯಾಗಿ ಶುಭ್ರಾಳನ್ನು ಸಂರ್ಪಸಿದಳು. ‘ಭೇಟಿಯಾಗಲು ನೀನು ಸಮ್ಮತಿಸು. ನಾನೂ ನಿನ್ನೊಡನೆ ಬರುತ್ತೇನೆ. ಮುಂದೇನಾಗುತ್ತದೋ ನೋಡೋಣ, ಥ್ರಿಲ್ ಸಿಗುತ್ತದೆ’ ಎಂದಳು ಶುಭ್ರಾ. ಅದರಂತೆ ಪ್ರೇಮ್ನ್ನು ಭೇಟಿಯಾಗಲು ಪ್ರೀತಿ ಒಪ್ಪಿದಾಗ ಆತ ನಗರದ ಮಾಲ್​ವೊಂದರಲ್ಲಿ ಭೇಟಿಯಾಗಲು ಅವಳಿಗೆ ತಿಳಿಸಿದ. ಪ್ರೀತಿ ಆ ದಿನ ಶಾಲೆಗೆ ಅರ್ಧದಿನ ಹಾಜರಾಗದೆ ಶುಭ್ರಾಳ ಜತೆ ಮಾಲ್​ಗೆ ಹೋದಳು. ಮಾಲ್​ನ ಕಾಫಿಷಾಪ್​ನಲ್ಲಿದ್ದ ಪ್ರೇಮ್ ಇಬ್ಬರನ್ನೂ ಪರಿಚಯಿಸಿಕೊಂಡ. ಮೂರು ಜನರೂ ಜ್ಯೂಸ್ ಸೇವಿಸುತ್ತ ಹರಟೆ ಹೊಡೆದರು. ಆನಂತರ ತಂತಮ್ಮ ಮೊಬೈಲ್ ನಂಬರ್​ಗಳನ್ನು ಹಂಚಿಕೊಂಡು ಭೇಟಿಯನ್ನು ಮುಗಿಸಿದರು.
ಪ್ರೀತಿ ಬೆಲೆ ಬಾಳುವ ಆಭರಣಗಳನ್ನು ಹೊಂದಿದ್ದನ್ನು ಪ್ರೇಮ್ ಅವಳ ಫೇಸ್​ಬುಕ್ ಫೋಟೋಗಳ ಮೂಲಕವೇ ಗಮನಿಸಿದ್ದ. ತಮ್ಮ ಭೇಟಿಯಲ್ಲಿ ಅವಳು ಉತ್ತಮ ಸ್ಮಾರ್ಟ್​ಫೋನ್ ಹಾಗೂ ವಾಚ್​ಗಳನ್ನು ಹೊಂದಿದ್ದನ್ನು ನೋಡಿ ಆಕೆ ಶ್ರೀಮಂತ ಮನೆತನದವಳೆಂದು ಮನಗಂಡ. ಕೆಲವು ದಿನಗಳ ನಂತರ ಆತ ಅವಳನ್ನು ಫೋನ್ ಮೂಲಕ ಸಂರ್ಪಸಿ, ‘ನಾನು ದೊಡ್ಡ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದೇನೆ. ನನಗೆ 25 ಸಾವಿರ ರೂಪಾಯಿ ಜರೂರಾಗಿ ಬೇಕಾಗಿದೆ. ಎರಡೇ ದಿನಗಳಲ್ಲಿ ಹಿಂದಿರುಗಿಸುವೆ ನೀನು ಕೊಡಬಲ್ಲೆಯಾ?’ ಎಂದು ಕೇಳಿದ. ಪ್ರೀತಿ ಒಪ್ಪಿದಾಗ ಆತ ಅವಳನ್ನು ಅದೇ ಮಾಲ್​ಗೆ ಬರಹೇಳಿದ. ತನ್ನ ತಂದೆ ತಿಜೋರಿಯಲ್ಲಿಟ್ಟಿದ್ದ ನಗದು ಹಣದಲ್ಲಿ 25 ಸಾವಿರ ರೂ.ಗಳನ್ನು ಯಾರಿಗೂ ತಿಳಿಯದಂತೆ ತೆಗೆದ ಪ್ರೀತಿ ಅದನ್ನು ಪ್ರೇಮ್​ಗೆ ಕೊಟ್ಟಳು.
ಆಕೆ ಹಣವನ್ನು ಕೊಟ್ಟಕೂಡಲೇ ಸಂತೋಷದಿಂದ ಅವಳನ್ನಪ್ಪಿಕೊಂಡ ಪ್ರೇಮ್ ತನ್ನ ಫೋನಿನಲ್ಲಿ ಆ ಕ್ಷಣವನ್ನು ಸೆರೆಹಿಡಿದ. ಇದು ಪ್ರೀತಿಗೆ ತೀರಾ ಮುಜುಗರ ತರಿಸಿದರೂ ಆಕೆ ಏನೂ ಮಾತನಾಡಲಿಲ್ಲ. ಒಂದು ವಾರದ ನಂತರ ಪ್ರೀತಿ ಅವನನ್ನು ಸಂರ್ಪಸಿ ತನ್ನ ಹಣವನ್ನು ಮರಳಿಸಲು ಕೇಳಿದಳು. ಆಗ ಪ್ರೇಮ್ ಅಂದೇ ಹಣ ಹಿಂದಿರುಗಿಸುವೆನೆಂದು ಹೇಳಿ ಅವಳನ್ನು ಅದೇ ಮಾಲ್​ಗೆ ಕರೆದ. ಆಗವನು ಕಳೆದ ಬಾರಿ ತೆಗೆದಿದ್ದ ತಮ್ಮಿಬ್ಬರ ಫೋಟೋವನ್ನು ಅವಳಿಗೆ ತೋರಿಸಿ, ‘ನೀನು ಹಣ ಹಿಂದಿರುಗಿಸಲು ಪೀಡಿಸಿದರೆ ನಾನು ಈ ಫೋಟೋವಲ್ಲದೆ ನಿನ್ನ ಜತೆಯಿರುವ ವಿಡಿಯೋಗಳನ್ನು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟು ನಿನ್ನ ಮಾನ ಕಳೆಯುತ್ತೇನೆ’ ಎಂದ.
ಪ್ರೀತಿಗೆ ನೆಲವೇ ಕುಸಿಯುತ್ತಿರುವಂತೆ ಭಾಸವಾಯಿತು. ‘ಪ್ಲೀಸ್, ಹಾಗೆ ಮಾಡಬೇಡ’ ಎಂದಾಕೆ ಗೋಗರೆದಾಗ ಪ್ರೇಮ್ ‘ಹಾಗಾದರೆ ನನ್ನ ಜತೆ ಬಾ’, ಎನ್ನುತ್ತ ಅವಳನ್ನು ಲಾಡ್ಜ್ ಒಂದಕ್ಕೆ ಕರೆದೊಯ್ದು ಅವಳ ಮೇಲೆ ಬಲಾತ್ಕಾರ ಮಾಡಿದ. ಆಗ ಅವಳ ವಿಡಿಯೋಗಳನ್ನೂ ತೆಗೆದ.
ಒಂದು ವಾರದ ನಂತರ ಮತ್ತೆ ಪ್ರೀತಿಯನ್ನು ಸಂರ್ಪಸಿದ ಪ್ರೇಮ್ ‘ಇನ್ನೆರಡು ದಿನಗಳಲ್ಲಿ ನನಗೆ ಒಂದು ಲಕ್ಷ ರೂ. ತಂದುಕೊಡದಿದ್ದರೆ ನಮ್ಮ ಖಾಸಗಿ ಫೋಟೋಗಳನ್ನು ನಿನ್ನ ತಂದೆಗೆ ಕಳಿಸುವೆ’ ಎಂದ. ಆತಂಕಗೊಂಡ ಪ್ರೀತಿ ಮಾರನೆಯ ಬೆಳಗ್ಗೆಯೇ ತನ್ನ ತಂದೆಯ ತಿಜೋರಿಯಿಂದ ಒಂದು ಲಕ್ಷ ರೂ. ಹಣ ತೆಗೆದುಕೊಂಡು ಪ್ರೇಮ್​ಗೆ ಕೊಟ್ಟಳು. ಅಷ್ಟಕ್ಕೆ ಸುಮ್ಮನಾಗದ ಆತ ತನ್ನ ಕೊರಳಿನಲ್ಲಿ ಪ್ರೀತಿ ಧರಿಸಿದ್ದ ಚಿನ್ನದ ಸರವನ್ನೂ ತನಗೆ ಕೊಡಲು ಹೇಳಿ, ‘ಇನ್ನು ಮುಂದೆ ನಿನ್ನನ್ನು ಕಾಡುವುದಿಲ್ಲ’ ಎಂದ. ಪ್ರೀತಿ ಸರವನ್ನೂ ಕೊಟ್ಟು ಪೆಚ್ಚುಮುಖ ಮಾಡಿಕೊಂಡು ಮನೆಗೆ ಮರಳಿದಳು.
ಅದೇ ಸಂಜೆ ಮನಮೋಹನ್ ತನ್ನ ತಿಜೋರಿಯಲ್ಲಿದ್ದ ಹಣ ಕಾಣೆಯಾಗಿದ್ದನ್ನು ಗಮನಿಸಿ ಎಲ್ಲರನ್ನೂ ವಿಚಾರಿಸತೊಡಗಿದ. ಅದೇ ಸಮಯಕ್ಕೆ ಶೋಭಾ ತನ್ನ ಮಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವೂ ಮಾಯವಾಗಿರುವುದನ್ನು ಗಮನಿಸಿದಳು. ತಂದೆ-ತಾಯಿಯರಿಬ್ಬರೂ ಪ್ರೀತಿಯನ್ನು ಕೂಲಂಕಶವಾಗಿ ವಿಚಾರಿಸಿದಾಗ ಸತ್ಯ ಹೊರಬಿತ್ತು. ಕೂಡಲೇ ಮನಮೋಹನ್ ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ. ಕುಟುಂಬದ ಮಾನಕ್ಕೆ ಹೆದರಿ ಪ್ರೀತಿಯ ಮೇಲೆ ಅತ್ಯಾಚಾರವಾದ ವಿಷಯವನ್ನು ಅವರಿಂದ ಮುಚ್ಚಿಟ್ಟ. ಪೊಲೀಸರಿಗೆ ಪ್ರೇಮ್ ಫೋಟೋ ತೋರಿಸಿದ ಪ್ರೀತಿ ಅವನ ಮೊಬೈಲ್ ನಂಬರ್ ಸಹಾ ಕೊಟ್ಟಳು. ಮಾರನೆಯ ದಿನವೇ ಪೊಲೀಸರು ಪ್ರೇಮ್ನ್ನು ಬಂಧಿಸಿ ಅವನ ವಶದಲ್ಲಿದ್ದ ಪ್ರೀತಿಯ ಸರ ಮತ್ತು 50 ಸಾವಿರ ರೂ.ಗಳನ್ನು ಮರಳಿ ಪಡೆದರು. ಪ್ರೀತಿಯಲ್ಲದೆ ಹಲವಾರು ಯುವತಿಯರನ್ನು ಪ್ರೇಮ್ ಇದೇ ರೀತಿ ಬ್ಲಾಕ್​ವೆುೕಲ್ ಮಾಡಿದ್ದನ್ನು ಪತ್ತೆಮಾಡಿದರು. ಆ ಯುವತಿಯರು ದೂರನ್ನೇ ಕೊಟ್ಟಿರಲಿಲ್ಲ. ಮೂರು ಬೇರೆ ಬೇರೆ ಬ್ಲಾಕ್​ವೆುೕಲ್ ಪ್ರಕರಣಗಳಲ್ಲಿ ಪೊಲೀಸರು ಪ್ರೇಮ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯ ಅವನಿಗೆ ಪ್ರೀತಿಯ ಪ್ರಕರಣದಲ್ಲಿ ಮೂರು ವರ್ಷಗಳ ಕಠಿಣ ಜೈಲುವಾಸ ನೀಡಿತು.
ಹದಿಹರಯದ ಸಮಯದಲ್ಲಿ ಮಕ್ಕಳು ಹಲವಾರು ಅಚಾತುರ್ಯ ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕಾದರೆ ನಮ್ಮ ಮಕ್ಕಳಿಗೆ ಫೋನನ್ನೇ ಕೊಡಿಸದಿರುವುದು ಉಪಾಯವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗ ಯಾವ ಬಗೆಯ ಅಪಾಯಗಳು ಎದುರಾಗುತ್ತವೆ ಮತ್ತು ಅವುಗಳನ್ನು ತಪ್ಪಿಸಿಕೊಳ್ಳಲು ಯಾವ ರೀತಿಯ ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದನ್ನು ಅವರಿಗೆ ಕಲಿಸಬೇಕು. ಯಾರಾದರೂ ಬ್ಲಾಕ್​ವೆುೕಲ್ ಮಾಡಿದರೆ ಅವರ ಬೆದರಿಕೆಗಳಿಗೆ ಹೆದರದೆ ನಡೆದ ವಿಷಯ ತಮಗೆ ತಿಳಿಸಬೇಕೆಂಬ ತಿಳಿವಳಿಕೆಯನ್ನೂ ನೀಡಬೇಕು. ಯಾವುದೇ ಕಾರಣಕ್ಕೂ ಯಾರೊಡನೆಯೂ ಖಾಸಗಿ ಜಾಗಗಳಿಗೆ ಹೋಗಬಾರದೆಂದು ಎಚ್ಚರಿಸಬೇಕು. ಮಕ್ಕಳು ಸಂಭಾಷಣೆಗಾಗಿ ಫೋನನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೋ ಇಲ್ಲವೇ ಮನರಂಜನೆಗಾಗಿಯೋ ಎನ್ನುವುದನ್ನು ಗಮನಿಸುತ್ತಲೇ ಇರಬೇಕಾದ್ದು ತಂದೆ-ತಾಯಿಗೆ ಅನಿವಾರ್ಯ.
ಟೀನೇಜ್ ಮಕ್ಕಳೇನಾದರೂ ತೊಂದರೆಗೆ ಸಿಕ್ಕಿಹಾಕಿಕೊಂಡಾಗ ಸೂಕ್ಷ್ಮಸಂವೇದನೆಯಿಟ್ಟು ಅವರೊಂದಿಗೆ ಸ್ನೇಹಿತರಂತೆ ವ್ಯವಹರಿಸಬೇಕು. ಮಕ್ಕಳನ್ನು ಬೈಯ್ಯುವುದು, ದಂಡಿಸುವುದು ಇಲ್ಲವೇ ಅವರಿಗೆ ಫೋನನ್ನೇ ಕೊಡಿಸದಿರುವುದು ಸಮಸ್ಯೆಯ ಪರಿಹಾರವಲ್ಲ. ಯಾವ ರೀತಿ ನಮ್ಮ ಮನ ಮತ್ತು ಮಕ್ಕಳೊಡನೆ ನಡೆದುಕೊಳ್ಳಬೇಕೆಂದು ಡಿ.ವಿ.ಜಿ.ಯವರು ಬಹಳ ಸುಂದರವಾಗಿ ಈ ಕಗ್ಗದಲ್ಲಿ ಬಣ್ಣಿಸಿದ್ದಾರೆ: ‘ಮನವನಾಳ್ವುದು ಹಟದ ಮಗುವನಾಳುವ ನಯದೆ, ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ; ಅನುಕೂಲಿಸದು ಬರಿಯ ಕೂಗುಬಡಿತಳಿದನು, ಇನಿತಿತ್ತು ಮರಸಿನಿತ ಮಂಕುತಿಮ್ಮ’.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್​ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್​, ಸೆ…ಸಿಡಿಗಳು ವಶಕ್ಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
