‘ನಮ್ಮ ತಂದೆ ಬಿಟ್ಟರೆ ನಾವು ನೋಡಿದ ಇನ್ನೊಬ್ಬ ಶಿಸ್ತಿನ ಮನುಷ್ಯರೆಂದರೆ ಅದು ನಮ್ಮ ಮಾ,. ಅವರ ಶಿಸ್ತು ಎಲ್ಲರಿಗೂ ಮಾದರಿ …’ -ನಟ ರಾಘವೇಂದ್ರ ರಾಜಕುಮಾರ್ ಹೀಗೆ ಹೇಳಿದ್ದು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಬಗ್ಗೆ. ಡಾ. ರಾಜಕುಮಾರ್ ಅವರೊಂದಿಗಿನ ಒಡನಾಟ, ಜೇಮ್್ಸ ಬಾಂಡ್ ಶೈಲಿಯ ಚಿತ್ರಗಳನ್ನು ಕನ್ನಡಕ್ಕೆ ತಂದ ಅವರ ಸಾಹಸ …ಇದೆಲ್ಲದರ ಜತೆಗೆ ಭಗವಾನ್ ಕುರಿತು ಹೇಳಬೇಕಾದ ಇನ್ನೊಂದು ವಿಷಯವೆಂದರೆ ಅದು ಶಿಸ್ತು.
ಭಗವಾನ್ ಒಂದೇ ಚಿತ್ರಕ್ಕೆ ನಿರ್ದೇಶಕರಾಗಲಿಲ್ಲ, ಹಂತಹಂತವಾಗಿ ಬೆಳೆದವರು. ಹಲವು ಹಿಟ್ ಚಿತ್ರಗಳನ್ನು ನೀಡಿದರೂ ಬೀಗಲಿಲ್ಲ. 50ರ ದಶಕದಲ್ಲಿ ಭಗವಾನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಚಿತ್ರರಂಗ ಚೆನ್ನೈನಲ್ಲಿ ನೆಲೆಗೊಂಡಿತ್ತು. ಬೆಂಗಳೂರಿನಿಂದ ಅಲ್ಲಿಗೆ ಹೋಗಿ, ಉದಯಕುಮಾರ್ ಅಭಿನಯದ ‘ಭಾಗ್ಯೋದಯ’ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ ಅವರಿಗೆ ಕ್ರಮೇಣ ಛಾಯಾಗ್ರಾಹಕ ದೊರೈರಾಜ್ ಪರಿಚಯವಾಯಿತು. ದೊರೈ ಛಾಯಾಗ್ರಾಹಕರಾಗಿದ್ದ ‘ಜಗಜ್ಯೋತಿ ಬಸವೇಶ್ವರ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾದರು ಭಗವಾನ್. ಆ ನಂತರ ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ‘ಭೂದಾನ’, ‘ಕರುಣೆಯೇ ಕುಟುಂಬದ ಕಣ್ಣು’, ‘ಮಂತ್ರಾಲಯ ಮಹಾತ್ಮೆ’ ಚಿತ್ರಗಳಿಗೆ ದೊರೈ ಛಾಯಾಗ್ರಾಹಕರಾದರೆ, ಭಗವಾನ್ ಸಹನಿರ್ದೇಶಕರಾಗಿದ್ದರು.
ಭಗವಾನ್, ಎ.ಸಿ. ನರಸಿಂಹಮೂರ್ತಿ ಜತೆಗೆ ಸೇರಿ ‘ಸಂಧ್ಯಾರಾಗ’ ನಿರ್ದೇಶಿಸಿದರು. ಮುಂದೆ ಇದೇ ಜೋಡಿ ‘ರಾಜದುರ್ಗದ ರಹಸ್ಯ’ ಚಿತ್ರವನ್ನು ನಿರ್ದೇಶಿಸಿತು. ಅಲ್ಲಿಯವರೆಗೆ ಒಂದೇ ಚಿತ್ರದಲ್ಲಿ ಬೇರೆಬೇರೆ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಸಂಪಾದಿಸಿದ ದೊರೈ ಮತ್ತು ಭಗವಾನ್, ಕನ್ನಡದ ಮೊದಲ ಬಾಂಡ್ ಚಿತ್ರವಾದ ‘ಜೇಡರ ಬಲೆ’ಗೆ ಒಂದಾಯಿತು. ಈ ಜೋಡಿ ನಂತರ ಹಿಂದಿರುಗಿ ನೋಡಲಿಲ್ಲ. ‘ಗೋವಾದಲ್ಲಿ ಸಿಐಡಿ 999’, ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಾಳಿ ಮಾತು’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಹೊಸ ಬೆಳಕು’, ‘ಗಿರಿ ಕನ್ಯೆ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ನೀನು ನಕ್ಕರೆ ಹಾಲು ಸಕ್ಕರೆ, ‘ಜೀವನ ಚೈತ್ರ’, ‘ಒಡಹುಟ್ಟಿದವರು’ ಮುಂತಾದ ಯಶಸ್ವಿ ಚಿತ್ರಗಳ ಹಿಂದೆ ಅವರ ಶ್ರಮ ಇತ್ತು. ಭಗವಾನ್ ಅವರು ಒಬ್ಬರೇ ನಿರ್ದೇಶಿಸಿದ ಚಿತ್ರ ‘ಮಾಂಗಲ್ಯ ಬಂಧನ’ ಮತ್ತು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಆಡುವ ಗೊಂಬೆ’ ಮಾತ್ರ.
ಚಿತ್ರಜೀವನದಲ್ಲಿ ರಾಜಕುಮಾರ್ ಜತೆಗೆ ಹೆಚ್ಚು ಕೆಲಸ ಮಾಡಿದ ಭಗವಾನ್, ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಷ್, ಶಂಕರ್ ನಾಗ್, ಲಕ್ಷ್ಮೀ ಮುಂತಾದವರನ್ನು ನಿರ್ದೇಶನ ಮಾಡಿದರು. 1995ರಲ್ಲಿ ‘ಬಾಳೊಂದು ಚದುರಂಗ’ ಚಿತ್ರದ ನಂತರ ನಿರ್ದೇಶನದಿಂದ ದೂರವಿದ್ದ ಭಗವಾನ್ ಹಲವು ವರ್ಷಗಳ ಕಾಲ ಆದರ್ಶ ಫಿಲಂ ಇನ್​ಸ್ಟಿಟ್ಯೂಟ್​ನ ಪ್ರಾಂಶುಪಾಲರಾಗಿದ್ದರು. ಭಗವಾನ್ ನಿರ್ದೇಶನದ ‘ಮುನಿಯನ ಮಾದರಿ’ ಮತ್ತು ‘ಜೀವನ ಚೈತ್ರ’ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಗುವುದರ ಜತೆಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯೂ ಸಿಕ್ಕಿದೆ.
ಬಹುಮುಖ್ಯವಾಗಿ ಸಿನಿಮಾ ಸಂಸ್ಕೃತಿಗೆ ಭಗವಾನ್ ಕೊಡುಗೆ ಅಪೂರ್ವವಾದುದು. ಅವರು ಚಿತ್ರರಂಗದಲ್ಲಿ ಸದಭಿರುಚಿಯ ಸಾರ್ಥಕ ಸಂಕೇತವಾಗಿದ್ದು, ಅನೇಕ ಜನಪ್ರಿಯ ಕಾದಂಬರಿಗಳನ್ನು ಅಚ್ಚುಕಟ್ಟಾದ ಜನಪ್ರಿಯ ಸಿನಿಮಾಗಳಾಗಿ ರೂಪಾಂತರಿಸಿದ ಅವರು ಸಾಹಿತ್ಯ ಮತ್ತು ಸಿನಿಮಾದ ಸೇತುಬಂಧವಾಗಿದ್ದರು. ಡಾ. ರಾಜಕುಮಾರ್ ಅವರ ನಿಕಟವರ್ತಿಯಾಗಿದ್ದ ಭಗವಾನ್ ಅವರು ರಾಜ್ ಅವರನ್ನು ನಾಯಕ ಪಾತ್ರದಲ್ಲಿ ತೊಡಗಿಸಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಎಲ್ಲಾ ವರ್ಗದ, ವಯೋಮಾನದ ಪ್ರೇಕ್ಷಕರು ನೋಡುವಂತಹ ಸಿನಿಮಾಗಳನ್ನು ನಿರ್ವಿುಸಿ, ನಿರ್ದೇಶಿಸಿದ ಭಗವಾನ್ ಸ್ವಯಂ ಸ್ವತಂತ್ರ ಮಾದರಿಯಾಗಿದ್ದಾರೆ.
|ಬರಗೂರು ರಾಮಚಂದ್ರಪ್ಪಹಿರಿಯ ಸಾಹಿತಿ
ನನ್ನ ಮೊದಲ ಚಿತ್ರ ‘ಸಂಸಾರದ ಕಣ್ಣು’. ಎರಡನೇ ಸಿನಿಮಾ ‘ಬಯಲು ದಾರಿ’. ಅದಕ್ಕೆ ದೊರೈ – ಭಗವಾನ್ ಅವರೇ ನಿರ್ದೇಶಕರು. ನಂತರ ಅವರ ಯಾವ ಸಿನಿಮಾನೂ ಮಾಡಲಿಲ್ಲ. ಭಗವಾನ್ ಕಾದಂಬರಿಗಳನ್ನು ಓದಿ, ಅದನ್ನು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಅವರ ಅನುಭವಗಳನ್ನು ಚಿತ್ರರಂಗ ಪಡೆದುಕೊಳ್ಳಲಿಲ್ಲ. ಹಾಲಿವುಡ್, ಬಾಲಿವುಡ್ ರೀತಿಯಲ್ಲೇ ಕನ್ನಡ ಚಿತ್ರರಂಗ ಸಹ ವ್ಯವಸ್ಥಿತ ಉದ್ಯಮವಾಗಬಹುದಿತ್ತು. ವಾಣಿಜ್ಯ ಮಂಡಳಿ, ನಿರ್ವಪಕರ ಸಂಘದವರು ಭಗವಾನ್​ರ ಮಾರ್ಗದರ್ಶನ ಪಡೆಯಬಹುದಿತ್ತು. ಈಗ ಭಗವಾನ್ ಇಲ್ಲದಿರುವ ಶೂನ್ಯ ನಮ್ಮನ್ನು ಕಾಡುತ್ತದೆ.
|ಅಶೋಕ್ಹಿರಿಯ ನಟ
ಭಗವಾನ್ ನಿರ್ದೇಶನದ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ‘ವಸಂತಗೀತ’, ‘ಹೊಸಬೆಳಕು’ ಎರಡು ಚಿತ್ರಗಳಲ್ಲೂ ಡಾ. ರಾಜಕುಮಾರ್ ಜತೆ ಅಭಿನಯಿಸಿದ್ದೆ. ನಂತರ ಬೇರೆ ಚಿತ್ರಗಳಲ್ಲಿ ನಟಿಸಿಲ್ಲ. ಆದರೂ ನನ್ನ ಅವರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿತು. ಭಗವಾನ್ ಸಿನಿಮಾರಂಗದ ವಿಶ್ವಕೋಶ. ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಭೇಟಿಯಾಗಿದ್ದೆ. ‘ಮೂರ್ತಿ ಬಂದೆಯಾ …’ ಅಂತ ಲವಲವಿಕೆಯಿಂದ ಮಾತನಾಡಿಸಿದರು. ಅಲ್ಲಿದ್ದ ನರ್ಸ್​ಗಳು, ‘ಎರಡು ದಿನಗಳಿಂದ ಡಲ್ ಆಗಿದ್ದರು. ನಿಮ್ಮನ್ನು ನೋಡಿಯೇ ಇಷ್ಟು ಮಾತನಾಡಿದ್ದು’ ಎಂದರು. ಆಗ ಅವರು, ‘ರಾಜಕುಮಾರ್ ಅವರನ್ನು ಎಷ್ಟು ಪ್ರೀತಿಸುತ್ತಿದ್ದೆನೋ, ಅಷ್ಟೇ ಶ್ರೀನಿವಾಸಮೂರ್ತಿಯನ್ನು ಗೌರವಿಸುತ್ತೇನೆ’ ಎಂದರು. ದೊರೈ ನಿಧನದ ನಾಲ್ಕೈದು ವರ್ಷ ಡಲ್ ಆಗಿಬಿಟ್ಟಿದ್ದರು ಭಗವಾನ್. ಚಿತ್ರರಂಗಕ್ಕೆ ಒಳ್ಳೆಯ ಬುನಾದಿ ಹಾಕಿಕೊಟ್ಟಿದ್ದರು.
|ಶ್ರೀನಿವಾಸಮೂರ್ತಿಹಿರಿಯ ನಟ
ಭಗವಾನ್ ಅವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ಹಾಗೂ ಕನ್ನಡ ನಾಡಿಗೆ ತುಂಬಲಾರದ ನಷ್ಟ. ಅವರ ಅಗಲಿಕೆಯಿಂದ ಉಂಟಾದ ನಿರ್ವಾತ ತುಂಬುವುದು ಕಷ್ಟಸಾಧ್ಯ.
|ನಾಡೋಜ ಮಹೇಶ್ ಜೋಷಿಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಕಾದಂಬರಿ ಆಸಕ್ತಿ:ಭಗವಾನ್ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕರುಣೆಯೇ ಕುಟುಂಬದ ಕಣ್ಣು’ ಚಿತ್ರಕ್ಕೂ ಕೆಲಸ ಮಾಡಿದ್ದರು. ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ಗಾಳಿ ಮಾತು’, ‘ಮುನಿಯನ ಮಾದರಿ’, ‘ಹೊಸ ಬೆಳಕು’, ‘ಬೆಂಕಿಯ ಬಲೆ’, ‘ಸಮಯದ ಗೊಂಬೆ’, ‘ಬಿಡುಗಡೆಯ ಬೇಡಿ’, ‘ಸೇಡಿನ ಹಕ್ಕಿ’, ‘ಗಗನ’ ಮತ್ತು ‘ಜೀವನ ಚೈತ್ರ’ ಸೇರಿ ಹಲವು ಕಾದಂಬರಿ ಆಧಾರಿತ ಚಿತ್ರ ನಿರ್ದೇಶಿಸಿದ್ದಾರೆ.
ಭಾರತದ ಅತಿ ಹಿರಿಯ ನಿರ್ದೇಶಕ:ಯಾವುದೇ ದಾಖಲೆ ಪುಸ್ತಕದಲ್ಲಿ ದಾಖಲಾಗದಿದ್ದರೂ, ಭಾರತದ ಅತೀ ಹಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಭಗವಾನ್ ಪಾತ್ರರಾಗಿದ್ದಾರೆ. ಅವರು 87ನೇ ವಯಸ್ಸಿನಲ್ಲಿ ಅನಂತ್ ನಾಗ್ ಮತ್ತು ಸಂಚಾರಿ ವಿಜಯ್ ಅಭಿನಯದ ‘ಆಡುವ ಗೊಂಬೆ’ ಚಿತ್ರ ನಿರ್ದೇಶಿಸಿದ್ದರು. ಭಾರತೀಯ ಚಿತ್ರರಂಗದಲ್ಲೇ 87ನೇ ವಯಸ್ಸಿನಲ್ಲಿ ಯಾರೂ ಚಿತ್ರ ನಿರ್ದೇಶಿಸಿದ ಉದಾಹರಣೆಯಿಲ್ಲ.
ರಾಜ್​ಕುಮಾರ್ ಕುಟುಂಬದ ಆಪ್ತ:ಭಗವಾನ್ ಅವರು ರಾಜಕುಮಾರ್ ಅವರನ್ನು ‘ಜೇಡರ ಬಲೆ’, ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಜೀವನ ಚೈತ್ರ’, ‘ಹೊಸ ಬೆಳಕು’ ಸೇರಿದಂತೆ 15 ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ, ಅವರ ಕುಟುಂಬದ ಆಪ್ತರಾಗಿದ್ದರು. ಅಷ್ಟೇ ಅಲ್ಲ, ಅವರ ಜತೆಗೆ ಹೆಚ್ಚಾಗಿ ಇರುತ್ತಿದ್ದರು. ‘ನಾವು ಚಿತ್ರ ಮಾಡಿದರೆ ಅದು ರಾಜ್ ಜತೆಗೆ ಮಾತ್ರ ಅಂದುಕೊಂಡಿದ್ದೆವು. ಅವರು ಬಿಜಿಯಾಗಿದ್ದಾಗ ನೀವು ಸುಮ್ಮನೆ ಇರಬೇಡಿ, ಏನಾದರೂ ಮಾಡುತ್ತಿರಿ ಎಂದು ಪಾರ್ವತಮ್ಮ ಹೇಳಿದ್ದರಿಂದ, ಅನಂತ್ ನಾಗ್ ಜತೆಗೆ ‘ಬಯಲು ದಾರಿ’ ಚಿತ್ರ ಮಾಡಿದೆವು. ಆ ನಂತರ ಬೇರೆಯವರ ಜತೆಗೂ ಚಿತ್ರಗಳನ್ನು ಮಾಡಿದೆವು’ ಎಂದು ಭಗವಾನ್ ಹಿಂದೊಮ್ಮೆ ಹೇಳಿಕೊಂಡಿದ್ದರು.
ಅನುಪಮ ಜೋಡಿ:ದೊರೈ-ಭಗವಾನ್ ಅವರದ್ದು ಭಾರತೀಯ ಚಿತ್ರರಂಗದಲ್ಲೇ ಒಂದು ಅನುಪಮ ಜೋಡಿ. 50ರ ದಶಕದಲ್ಲಿ ಶುರುವಾದ ಗೆಳೆತನ, 90ರ ದಶಕದಲ್ಲಿ ದೊರೈ ನಿಧನರಾಗುವವರೆಗೂ ಮುಂದುವರಿಯಿತು. ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಭಗವಾನ್ ಒಮ್ಮೆ ಹಸಿದಿದ್ದಾಗ, ದೊರೈ ಹಣ ಕೊಟ್ಟು ಹೊಟ್ಟೆ ತುಂಬಿಸಿದ್ದರಂತೆ. ಅವರ ನಿಷ್ಕಲ್ಮಶ ಪ್ರೀತಿಯೇ, ತಮ್ಮ ಸ್ನೇಹಕ್ಕೆ ಬುನಾದಿ ಎಂದು ಭಗವಾನ್ ಹೇಳಿದ್ದರು. ನಿರ್ದೇಶನದ ಜತೆಗೆ ಅನುಪಂ ಮೂವೀಸ್​ನಡಿ ಹಲವು ಜನಪ್ರಿಯ ಚಿತ್ರಗಳನ್ನು ನಿರ್ವಿುಸಿದರು. ಎಷ್ಟೇ ಯಶಸ್ಸು, ಹಣ ಬಂದರೂ ಸ್ನೇಹಕ್ಕೆ ಕುಂದು ಬರಲಿಲ್ಲ. ದೊರೈ ಅವರು 1990ರಲ್ಲಿ ನಿಧನರಾದರು.
ಮೇಲ್ಮನೆಯಲ್ಲಿ ಒಂದು ನಿಮಿಷ ಮೌನಾಚರಣೆ:ಖ್ಯಾತ ಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ನಿಧನಕ್ಕೆ ಮೇಲ್ಮನೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ವ್ಯಕ್ತಪಡಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಾ.ಅಶ್ವತ್ಥನಾರಾಯಣ ಮತ್ತು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿದರು.
296 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದ ದಂಪತಿ-ಮಗ; ಭೂಕಂಪದ 12 ದಿನಗಳ ಬಳಿಕ ಜೀವಂತ ರಕ್ಷಣೆ

ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
