ಬಹಳ ಹಿಂದೆ ನಾವು ಕಾಲೇಜಿನಲ್ಲಿದ್ದಾಗ ನಮಗೆ ಶ್ರೀಚಂದ್ ಎಂಬ ಉಪನ್ಯಾಸಕರಿದ್ದರು. ತಾನು ಉಪನ್ಯಾಸಕ ಎಂಬ ಗತ್ತು, ಗೈರತ್ತುಗಳಿಲ್ಲದ ವ್ಯಕ್ತಿ! ವಿದ್ಯಾರ್ಥಿಗಳೊಂದಿಗೆ ಸರಾಗವಾಗಿ ಬೆರೆಯುತ್ತಿದ್ದರು. ಅವರು ಆಗಾಗ್ಗೆ ತಾವು ಬೋಧಿಸುತ್ತಿದ್ದ ಸಿವಿಲ್ ಇಂಜಿನಿಯರಿಂಗ್ ಅಲ್ಲದೆ ಬದುಕಿನ ಇಂಜಿನಿಯರಿಂಗ್ ಬಗ್ಗೆಯೂ ಮಾತನಾಡುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಅವರು ಓMಖMಎಂಬ ಪದವನ್ನು ಬಳಸಿದ್ದರು. ಈ ಓMಖM ಎಂಬುದರ ಬಗ್ಗೆ ನಮಗೆಲ್ಲ ಕುತೂಹಲ. ಅದನ್ನು ಬಿಡಿಸಿ ಹೇಳಬೇಕೆಂದು ಕೇಳಿಕೊಂಡಾಗ, ಅವರು ‘ಅದು ಬಹಳ ಸಿಂಪಲ್ ಕಣ್ರೋ, ತಲೆ ಕೆಡಿಸಿಕೊಳ್ಳುವಂತಹ ಸೂತ್ರವೇನು ಅಲ್ಲ. ಓM ಅಂದರೆ ಕೊಟ್ಟದ್ದನ್ನು ಮರೆಯಬೇಕು. ಮತ್ತು ಖM ಅಂದರೆ ತೆಗೆದುಕೊಂಡದ್ದನ್ನು ಮರೆಯಬಾರದು. ಅಂದರೆ ಬದುಕಿನಲ್ಲಿ ನಾವು ಯಾರಿಗಾದರೂ ಸಹಾಯ ಹಸ್ತ ನೀಡಿದ್ದರೆ, ಅಂದರೆ ಏನಾದರೂ ಸಹಾಯ ಮಾಡಿದ್ದರೆ, ಅದನ್ನು ಮರೆತುಬಿಡಬೇಕು. ಹಾಗೆಯೇ ನಾವು ಯಾರಿಂದಲಾದರೂ ಸಹಾಯ ತೆಗೆದುಕೊಂಡಿದ್ದರೆ, ಅದನ್ನು ಮರೆಯಬಾರದು. ಈ ಓMಖM ಎಂಬ ಸರಳ ಸೂತ್ರ ನಮ್ಮ ಬಾಳನ್ನು ನಿರಾಳಗೊಳಿಸುತ್ತದೆ’ ಎಂದು ವಿವರಿಸಿದ್ದರು.
ಇದೀಗ ಈ KMTM ಸೂತ್ರ ಜ್ಞಾಪಕಕ್ಕೆ ಬರಲು ಕಾರಣ ಒಂದು ಪುಟ್ಟ ವಿನೋದಕರ ಕತೆ. ಅದು ಹೀಗಿದೆ. ಮುಲ್ಲಾ ನಸ್ರುದ್ದೀನ್ ಅವರ ಹೆಸರು ಕೇಳದವರು ಯಾರು? ಸಣ್ಣಪುಟ್ಟ ನಗೆಹನಿಗಳಲ್ಲಿ, ದೊಡ್ಡ ದೊಡ್ಡ ಅರ್ಥಪೂರ್ಣ ಸಂದೇಶಗಳನ್ನು ಕೊಡುವುದರಲ್ಲಿ ಅವರು ಪ್ರಖ್ಯಾತರು.
ಒಮ್ಮೆ ಮುಲ್ಲಾ ನಸ್ರುದ್ದೀನ್ ಅವರನ್ನು ಭೇಟಿಯಾಗಲು ಅವರ ಹಳೆಯ ಸಹಪಾಠಿಯೊಬ್ಬ ಬಂದರಂತೆ. ಅದು ಕಾರು, ಬಸ್ಸುಗಳು ಇಲ್ಲದ ಕಾಲ. ಪ್ರಯಾಣ ಮಾಡಲು ಕತ್ತೆಗಳನ್ನೇ ಬಳಸುತ್ತಿದ್ದ ಕಾಲ. ಸಹಪಾಠಿ ಕಡು ಬಿಸಿಲಿನಲ್ಲಿ ಕತ್ತೆಯನ್ನೇರಿ, ದೂರ ಪ್ರಯಾಣ ಮಾಡಿ ಬಂದಿದ್ದರು. ಅವರು ತೊಟ್ಟಿದ್ದ ಬಟ್ಟೆಗಳೆಲ್ಲ ಧೂಳಿನಿಂದ ಮುಚ್ಚಿ ಹೋಗಿದ್ದವು. ನಸ್ರುದ್ದೀನರು ಸಹಪಾಠಿಯನ್ನು ನೋಡಿ ಸಂತೋಷಪಟ್ಟರು. ‘ಬಾರಯ್ಯ ಬಾ. ಬಹಳ ದಿನಗಳ ನಂತರ ಬಂದಿದ್ದೀಯ. ಒಳ್ಳೆಯ ಸಮಯಕ್ಕೇ ಬಂದಿದ್ದೀಯ. ಆದರೆ ಈ ಊರಿನ ನಾಲ್ಕು ಜನ ಶ್ರೀಮಂತ ವ್ಯಕ್ತಿಗಳು ನಮ್ಮನ್ನು ಅವರ ಮನೆಗೆ ಕರೆದಿದ್ದಾರೆ. ನಾನೀಗ ಅಲ್ಲಿಗೆ ಹೋಗುವವನಿದ್ದೇನೆ. ನೀನೂ ನನ್ನೊಂದಿಗೆ ಬರಬಹುದು’ ಎಂದರು.

ತಕ್ಷಣ ಸಹಪಾಠಿಯು ‘ನಾನು ಹೇಗೆ ಬರಲಯ್ಯ, ಗೆಳೆಯ! ಪ್ರಯಾಣದಿಂದಾಗಿ ನನ್ನ ಬಟ್ಟೆಗಳೆಲ್ಲ ಕೊಳೆಯಾಗಿವೆ. ಧೂಳಿನಿಂದ ಮುಚ್ಚಿ ಹೋಗಿವೆ’ ಎಂದರು. ನಸ್ರುದ್ದೀನರು ‘ಅದಕ್ಕೆ ಏಕೆ ಚಿಂತೆ ಮಾಡುತ್ತೀಯ. ನನ್ನದೇ ಒಂದು ನಿಲುವಂಗಿ ಕೋಟನ್ನು ಕೊಡುತ್ತೇನೆ. ಅದನ್ನು ಹಾಕಿಕೊ’ ಎಂದು ಹೇಳಿ, ಮನೆಯ ಒಳಗೆ ಹೋಗಿ ಒಂದು ಬಣ್ಣ-ಬಣ್ಣದ ಅಂಗಿಯನ್ನು ತಂದು ಸಹಪಾಠಿಗೆ ಕೊಟ್ಟರು. ಸಹಪಾಠಿಯೂ ಅದನ್ನು ತೊಟ್ಟುಕೊಂಡರು. ಅದನ್ನು ತೊಟ್ಟುಕೊಂಡ ಮೇಲೆ ಆ ನಿಲುವಂಗಿ ಕೋಟು ನಸ್ರುದ್ದೀನರು ತೊಟ್ಟುಕೊಂಡ ನಿಲುವಂಗಿಗಿಂತ ಭವ್ಯವಾಗಿ ಕಾಣಿಸುತ್ತಿತ್ತು. ಅದನ್ನು ನೋಡಿ ನಸ್ರುದ್ದೀನ್ ಅವರಿಗೆ ಪೆಚ್ಚು ಎನಿಸಿತು. ಆದರೆ ನಿಲುವಂಗಿ ಕೊಟ್ಟಾಗಿತ್ತು.
ಮೊದಲನೆಯ ಶ್ರೀಮಂತರ ಮನೆಯಲ್ಲಿ ನಸ್ರುದ್ದೀನರಿಗೂ ಅವರ ಸಹಪಾಠಿಗೂ ಒಳ್ಳೆಯ ಅತಿಥಿ ಸತ್ಕಾರ ಮಾಡಲಾಯಿತು. ಆನಂತರ ನಸ್ರುದ್ದೀನರು ‘ಇವ ನನ್ನ ಹಳೆಯ ಸಹಪಾಠಿ, ಆದರೆ ಅವನು ತೊಟ್ಟಿರುವ ಅಂಗಿ ನನ್ನದು’ ಎಂದುಬಿಟ್ಟರು. ಆ ಮನೆಯವರು ಸಹಪಾಠಿಯನ್ನು ತಿರಸ್ಕಾರದ ದೃಷ್ಟಿಯಲ್ಲಿ ನೋಡಿದರು.
ಎರಡನೆಯ ಮನೆಗೆ ಹೋಗುವ ಮುಂಚೆ ಸಹಪಾಠಿ ಕೇಳಿದ, ‘ನಸ್ರುದ್ದೀನ್, ಏನಿದು ವಿಚಿತ್ರ? ಈ ನಿಲುವಂಗಿ ನಿನ್ನದೇ! ನಾನೇನು ತೆಗೆದುಕೊಂಡು ಹೋಗುತ್ತೇನೆಯೇ? ನಾನು ಹಿಂತಿರುಗಿ ಹೋಗುವಾಗ ಅದನ್ನು ನಿನಗೆ ಕೊಟ್ಟು ಹೋಗುತ್ತೇನೆ. ದಯವಿಟ್ಟು ಹಾಗೆಲ್ಲ ಹೇಳಬೇಡ’ ಎಂದರು. ನಸ್ರುದ್ದೀನರು ನಕ್ಕು ಸುಮ್ಮನಾದರು. ಆದರೆ ಅವರ ಸಂಕಟ ಮಾತ್ರ ಹಾಗೆಯೇ ಉಳಿದಿತ್ತು.
ಮುಂದಿನ ಮನೆಯಲ್ಲಿ ಅತಿಥಿ ಸತ್ಕಾರ ಸ್ವೀಕರಿಸಿದ ನಂತರ ನಸ್ರುದ್ದೀನರು ‘ಇವ ನನ್ನ ಹಳೆಯ ಸಹಪಾಠಿ. ನನ್ನೊಂದಿಗೆ ಬಂದಿದ್ದಾನೆ. ಆದರೆ ಅವನು ತೊಟ್ಟಿರುವ ನಿಲುವಂಗಿ ಅವನದ್ದೇ’ ಎಂದರು. ಆ ಮನೆಯವರು ಸಹಪಾಠಿಯನ್ನು ವಿಚಿತ್ರ ಎಂಬಂತೆ ನೋಡಿದರು. ಆ ಮನೆಯಿಂದ ಹೊರಗಡೆ ಬಂದ ನಂತರ ಸಹಪಾಠಿ ‘ಏನಯ್ಯ ನಿನ್ನ ವಿಚಿತ್ರ ಮಾತುಕತೆ? ನಾನಾಗಲೇ ಹೇಳಿದ್ದೇನೆ. ಈ ನಿಲುವಂಗಿ ನಿನ್ನದೇ. ಆದರೆ ಅದನ್ನು ಮನೆಯವರಿಗೆಲ್ಲ ‘ಅವರದ್ದಲ್ಲ, ಅವರದ್ದೇ’ ಎಂದೆಲ್ಲ ಹೇಳುವ ಅವಶ್ಯಕತೆ ಏನಿದೆ? ಅದರ ಬಗ್ಗೆ ಮಾತನಾಡದೆ ಸುಮ್ಮನಿರಬಾರದೇ?’ ಎಂದರು.
ಮೂರನೆಯ ಮನೆಯಲ್ಲಿ ಅತಿಥಿ ಸತ್ಕಾರದ ನಂತರ ನಸ್ರುದ್ದೀನರು ‘ಈತ ನನ್ನ ಹಳೆಯ ಸಹಪಾಠಿ. ಆತ ತೊಟ್ಟಿರುವ ನಿಲುವಂಗಿಯ ಬಗ್ಗೆ ನಾನೇನೂ ಮಾತನಾಡಬಾರದೆಂದು ಅವನು ಹೇಳಿದ್ದಾನೆ. ಅದು ಅವನದ್ದಲ್ಲ, ಅದು ಅವನದ್ದು… ಇತ್ಯಾದಿಯಾಗಿ ನಾನೇನೂ ಹೇಳುವುದಿಲ್ಲ’ ಎಂದರು. ಆ ಮನೆಯವರು ಸಹಪಾಠಿಯ ನಿಲುವಂಗಿಯನ್ನು ಮತ್ತೆ ಮತ್ತೆ ಕುತೂಹಲದಿಂದ ನೋಡಿದರು. ನಕ್ಕರು.
ಕೊಟ್ಟದ್ದನ್ನು ಮರೆಯಲಾಗದ, ತೆಗೆದುಕೊಂಡದ್ದನ್ನು ಮರೆತುಬಿಡಲು ಪ್ರಯತ್ನಿಸುವ ಮನುಷ್ಯರ ಮನಸ್ಥಿತಿಯ ಬಗ್ಗೆ ಮುಲ್ಲಾ ನಸ್ರುದ್ದೀನರು ಬಹಳ ಮನೋಜ್ಞವಾಗಿ ತಿಳಿಸಿ ಕೊಟ್ಟಿದ್ದಾರಲ್ಲವೇ? ಹಾಗೆಯೇ ಸಾಮಾನ್ಯ ಮನುಷ್ಯರ ಮತ್ತೊಂದು ಸ್ವಭಾವದ ಬಗ್ಗೆಯೂ ಮುಲ್ಲಾರವರು ನಗೆಹನಿಯ ಮೂಲಕ ತಿಳಿಸಿದ್ದಾರೆ. ಆ ಸ್ವಭಾವ ಏನೆಂದರೆ, ಮನುಷ್ಯರು ತಮ್ಮ ಕಿರೀಟಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರೊಟ್ಟಿಗೆ ತಮ್ಮ ಸಾಧನ-ಸಲಕರಣೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆ ನಗೆಹನಿ ಹೀಗಿದೆ.

ಅಂದು ಮಾರುಕಟ್ಟೆಯಲ್ಲಿ ಸಂತೆ ನಡೆದಿತ್ತು. ಎಲ್ಲಿ ನೋಡಿದರೂ ಜನವೋ ಜನ. ಮಾರಲು ಬಂದವರ, ಕೊಳ್ಳಲು ಬಂದವರ ಜನಜಂಗುಳಿ. ಆಗ ಇದ್ದಕ್ಕಿದ್ದಂತೆ ಕತ್ತೆಯೊಂದು ಶರವೇಗದಲ್ಲಿ ಓಡಿ ಬರುತ್ತಿತ್ತು. ಅದು ಮುಲ್ಲಾ ನಸ್ರುದ್ದೀನರ ಕತ್ತೆ. ಅದರ ಮೇಲೆ ಮುಲ್ಲಾ ಕುಳಿತಿದ್ದಾರೆ. ಒಂದು ಕೈಯಲ್ಲಿ ಕತ್ತೆಯನ್ನು ಬಿಗಿಯಾಗಿ ತಬ್ಬಿಕೊಂಡು ಕುಳಿತಿದ್ದಾರೆ. ಮುಖದ ಮೇಲೆ ಗಾಬರಿ ಎದ್ದು ತೋರುತ್ತಿತ್ತು. ಮತ್ತೊಂದು ಕೈಯಲ್ಲಿ ತಮ್ಮ ಪೇಟಾವನ್ನು ಬಿದ್ದು ಹೋಗದಂತೆ ಹಿಡಿದುಕೊಂಡಿದ್ದಾರೆ. ಶರವೇಗದಲ್ಲಿ ಬರುತ್ತಿದ್ದ ಕತ್ತೆಯನ್ನು, ಅದರ ಮೇಲೆ ಗಾಬರಿಯಿಂದ ಕುಳಿತಿದ್ದ ಮುಲ್ಲಾರವರನ್ನೂ ನೋಡಿ ಅವರ ಸ್ನೇಹಿತನೊಬ್ಬ ‘ಹೇ ನಸ್ರುದ್ದೀನ್, ಇಷ್ಟೊಂದು ಅವಸರದಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕಿರುಚಿದ.
ನಸ್ರುದ್ದೀನರು ‘ನನ್ನನ್ನೇಕೆ ಕೇಳುತ್ತೀಯಾ? ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದೆ ಎಂಬುದನ್ನು, ಆ ಕತ್ತೆಗೇ ಕೇಳು’ ಎಂದರು. ಆಗ ಸ್ನೇಹಿತ ‘ಪೇಟಾವನ್ನು ಒಂದು ಕೈಯಿಂದ ಏಕೆ ಹಿಡಿದಿದ್ದೀಯಾ?’ ಎಂದು ಕೇಳಿದ. ನಸ್ರುದ್ದೀನರು ‘ನನ್ನ ಪೇಟಾ ಕೆಳಗೆ ಬಿದ್ದು ಹೋದರೆ ನನ್ನ ಮಾನ ಕಡಿಮೆ ಆಗುವುದಿಲ್ಲವೇ?’ ಎಂದರು. ಅದಕ್ಕೆ ಸ್ನೇಹಿತ ‘ಹೀಗೆ ಸಿಕ್ಕಾಪಟ್ಟೆ ವೇಗದಲ್ಲಿ ಓಡುತ್ತಿರುವ ಕತ್ತೆ ನಿನ್ನನ್ನು ಎಲ್ಲಿಯಾದರೂ ಕೆಡವಿ ಬಿಟ್ಟೀತು. ಅದನ್ನು ತಬ್ಬಿ ಹಿಡಿದಿರುವ ನೀನು ಅದನ್ನು ಬಿಟ್ಟುಬಿಡು’ ಎಂದರು. ಆಗ ನಸ್ರುದ್ದೀನರು ‘ವಾರೆವ್ಹಾ ನಾನು ಸಾಕಿಕೊಂಡಿರುವ ಬೆಲೆಬಾಳುವ ಈ ಕತ್ತೆಯನ್ನು ಬಿಟ್ಟುಬಿಡಲೇ?’ ಎಂದು ಕೇಳಿದರು. ನಮ್ಮೆಲ್ಲರ ಮನಸ್ಥಿತಿಯೂ ಇದೇ ಅಲ್ಲವೇ? ನಮಗೆ ಮಾನ ತರುತ್ತದೆ ಎಂದು ಭಾವಿಸುವ ಪೇಟಾವನ್ನು ಬಿಡಲು ನಾವು ಸಿದ್ಧರಿಲ್ಲ, ನಮ್ಮನ್ನು ಕೆಡವಿ ಬಿಸಾಡುವ ಕತ್ತೆಯನ್ನೂ ಬಿಡಲು ಸಿದ್ಧರಿಲ್ಲ!
ಮನುಷ್ಯರ ಸ್ವಭಾವದ ಬಗ್ಗೆ ವ್ಯಂಗ್ಯವಾಗಿ ವಿವರಿಸುವ ನಸ್ರುದ್ದೀನರು ಮತ್ತೊಂದು ಕಡೆ ಇನ್ನೂ ವಿನೋದಮಯವಾಗಿ ಮಾತನಾಡಿದ್ದಾರೆ. ಒಮ್ಮೆ ನಸ್ರುದ್ದೀನರ ಸ್ನೇಹಿತರೊಬ್ಬರು ಬಂದು ‘ನಾನು ಬೇಟೆಗೆ ಹೋಗಬೇಕಾಗಿದೆ, ನಿನ್ನ ಕತ್ತೆಯನ್ನು ಕೊಡುತ್ತೀಯಾ? ಸಂಜೆಯ ಹೊತ್ತಿಗೆ ಅದನ್ನು ಹಿಂದಿರುಗಿಸುತ್ತೇನೆ’ ಎಂದು ಕೇಳಿಕೊಂಡರು. ನಸ್ರುದ್ದೀನರಿಗೆ ತಮ್ಮ ಕತ್ತೆಯನ್ನು ಸ್ನೇಹಿತನಿಗೆ ಕೊಡಲು ಇಷ್ಟವಿರಲಿಲ್ಲ. ಕೊಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಲೂ ಸಿದ್ಧರಿರಲಿಲ್ಲ. ಹಾಗಾಗಿ ಅವರು ‘ಗೆಳೆಯಾ, ನನ್ನನ್ನು ಕ್ಷಮಿಸಿಬಿಡು. ನನ್ನ ಕತ್ತೆ ನನ್ನ ಬಳಿ ಇಲ್ಲ. ಈ ನಾಡಿನ ಪಾಳೇಗಾರರು ನನ್ನ ಕತ್ತೆಯನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದುಬಿಟ್ಟರು. ಆದರೆ ಅವರ ಕತ್ತೆ ಅವರ ಹಿತ್ತಲಲ್ಲಿ ಇತ್ತು. ಇದೇ ಸಮಯಕ್ಕೆ ಆ ಕತ್ತೆ ಗಟ್ಟಿಯಾಗಿ ಕಿರುಚಲು ಆರಂಭಿಸಿತು. ಆಗ ಸ್ನೇಹಿತ ‘ಏನಯ್ಯಾ ನಸ್ರುದ್ದೀನ್, ನಿನ್ನ ಕತ್ತೆಯನ್ನು ಪಾಳೇಗಾರರು ತೆಗೆದುಕೊಂಡು ಹೋಗಿದ್ದಾರೆಂದು ಹೇಳುತ್ತೀಯಾ. ಆದರೆ ನಿನ್ನ ಕತ್ತೆ ನಿನ್ನ ಹಿತ್ತಲಲ್ಲೇ ಇದೆ. ಅದು ಗಟ್ಟಿಯಾಗಿ ಕಿರುಚುತ್ತಿದೆ’ ಎಂದರು. ಅದಕ್ಕೆ ನಸ್ರುದ್ದೀನರು ‘ನೀನು ನನ್ನ ಆತ್ಮೀಯ ಸ್ನೇಹಿತ. ನೀನು ನನ್ನನ್ನು ನಂಬುತ್ತಿಯೋ ಅಥವಾ ನನ್ನ ಕತ್ತೆಯನ್ನು ನಂಬುತ್ತೀಯೋ? ನನ್ನ ಕತ್ತೆ ಇಲ್ಲಿಲ್ಲ’ ಎಂದು ಹೇಳಿ ಕಳುಹಿಸಿದರು.
ಇಂತಹ ಸಂದಿಗ್ಧ ಪರಿಸ್ಥಿತಿಗಳಿಗೆ ನಾವು ಒಳಗಾಗಿರಬಹುದು, ಅಲ್ಲವೇ? ಅಂತಹ ಸಂದರ್ಭದಲ್ಲಿ ನಾವು ಹೇಗೆ ಪಾರಾದೆವು ಎಂದು ಚಿಂತಿಸಬಹುದಲ್ಲವೇ?
ಇಲ್ಲಿ ಮತ್ತೊಂದು ವಿಶೇಷ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಅದೇನೆಂದರೆ ಕಳೆದ ಶತಮಾನದಲ್ಲಿ ಆಗಿ ಹೋದ ಮಹಾನ್ ತತ್ವಜ್ಞಾನಿ ಓಶೋ (ಭಗವಾನ್ ರಜನೀಶ್) ಅವರು ಕೂಡ ನಸ್ರುದ್ದೀನರ ಹೆಸರನ್ನು, ಅವರ ಪುಟ್ಟಪುಟ್ಟ ಕತೆಗಳನ್ನು ತಮ್ಮ ಉಪನ್ಯಾಸಗಳಲ್ಲಿ ಬಳಸಿಕೊಳ್ಳುತ್ತಿದ್ದರು. ಅವುಗಳಿಗೆ ಸಂದರ್ಭಾನುಸಾರ ವ್ಯಾಖ್ಯಾನವನ್ನು ಮಾಡುತ್ತಿದ್ದರು. ಅವುಗಳ ಕೆಲವು ಉದಾಹರಣೆಗಳು ಇಲ್ಲಿವೆ.
ಒಮ್ಮೆ ಮುಲ್ಲಾ ನಸ್ರುದ್ದೀನರನ್ನು ಯಾವುದೋ ಸಂಸ್ಥೆಯವರು ಉಪನ್ಯಾಸ ನೀಡಲು ಕರೆಸಿದ್ದರು. ನಸ್ರುದ್ದೀನರು ಉತ್ಸಾಹದಿಂದ ಹೋಗಿ ಉಪನ್ಯಾಸವನ್ನು ನೀಡಿ ಬಂದರು. ಅವರು ಮನೆಗೆ ಹಿಂತಿರುಗಿ ಬಂದಾಗ, ಅವರು ನೀಡಿದ ಭಾಷಣದ ಬಗ್ಗೆ ಅವರ ಹೆಂಡತಿ ‘ನಿಮ್ಮ ಭಾಷಣ ಹೇಗಿತ್ತು?’ ಎಂದು ಕೇಳುವುದು ವಾಡಿಕೆ. ಆದರೆ ಅಂದು ಅವರ ಹೆಂಡತಿ ಏನನ್ನಾದರೂ ಕೇಳುವ ಮುಂಚೆಯೇ, ನಸ್ರುದ್ದೀನರು ‘ಇಂದು ನಾನು ಮಾಡಿದ ಮೂರನೆಯ ಭಾಷಣ ತುಂಬಾ ಶಕ್ತಿಯುತವಾಗಿತ್ತು!’ ಎಂದರು. ಆಗ ಅವರ ಹೆಂಡತಿ ‘ನೀವು ಮೂರು ಭಾಷಣ ಎಲ್ಲಿ ಮಾಡಿದಿರಿ? ನೀವು ಮಾಡಿದ್ದು ಒಂದೇ ಭಾಷಣ! ಅಲ್ಲವೇ?’ ಎಂದು ಕೇಳಿದರು.
ನಸ್ರುದ್ದೀನರು ‘ಹೌದು, ನಾನು ಮಾಡಿದ್ದು ಒಂದೇ ಭಾಷಣ. ಆದರೆ ನನ್ನ ಮೂರನೆಯ ಭಾಷಣ ತುಂಬಾ ಶಕ್ತಿಯುತವಾಗಿತ್ತು!’ ಎಂದರು. ಆಗ ಅವರ ಹೆಂಡತಿ ‘ನಿಮ್ಮ ಮಾತೇ ಅರ್ಥವಾಗುತ್ತಿಲ್ಲ. ನೀವು ಅಲ್ಲಿ ಮಾಡಿದ್ದು ಒಂದೇ ಭಾಷಣ. ಆದರೆ ಮೂರನೇ ಭಾಷಣವೆಂದು ಹೇಳುತ್ತಿದ್ದೀರಿ, ಏನಿದರ ಅರ್ಥ?’ ಎಂದಾಗ, ನಸ್ರುದ್ದೀನರು ‘ಅವಸರ ಪಡಬೇಡ. ನಾನು ನಿನಗೆ ಈಗ ಹೇಳುವುದನ್ನು ಗಮನ ಕೊಟ್ಟು ಕೇಳು. ನಾನು ಅಲ್ಲಿ ಏನು ಭಾಷಣ ಮಾಡಬೇಕು ಎಂಬುದನ್ನು ಯೋಚಿಸಿ, ಸಿದ್ಧಪಡಿಸಿಕೊಂಡು ಹೋದೆ. ಆದರೆ ಅಲ್ಲಿ ನಾನು ಮಾತನಾಡಿದ್ದು ಬೇರೆಯೇ ಆಗಿತ್ತು. ಅದು ನನ್ನ ಎರಡನೆಯ ಭಾಷಣ! ಆದರೆ ಆ ಸಭೆಯ ನಂತರ, ಹಿಂತಿರುಗುವಾಗ ನಾನು ಇನ್ನೇನನ್ನಾದರೂ ಮಾತನಾಡಬಹುದಿತ್ತು ಎಂದು ಮನಸ್ಸಿನಲ್ಲಿ ಯೋಚಿಸಿ ಭಾಷಣದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡೆ. ಅದು ನನ್ನ ಮೂರನೆಯ ಭಾಷಣ! ಆ ಭಾಷಣವನ್ನು ನಾನು ಮಾಡಿದ್ದರೆ, ಅದು ಎಲ್ಲಕ್ಕಿಂತ ಶಕ್ತಿಶಾಲಿಯಾಗಿರುತ್ತಿತ್ತು. ಜನರ ಮೆಚ್ಚುಗೆಯನ್ನು ಗಳಿಸುತ್ತಿತ್ತು ಎನಿಸುತ್ತದೆ. ಹಾಗಾಗಿ ನನ್ನ ಮೂರನೆಯ ಭಾಷಣವನ್ನು ಪ್ರಶಂಸಿಸಿಕೊಳ್ಳುತ್ತಿದ್ದೇನೆ’ ಎಂದರು. ನಸ್ರುದ್ದೀನರ ಹೆಂಡತಿ ಕಣ್ಣಗಲಿಸಿ, ಬಾಯ್ತೆರೆದು ನಸ್ರುದ್ದೀನರ ಮಾತುಗಳನ್ನು ಕೇಳಿಸಿಕೊಂಡರು. ನಗುವುದೋ, ಅಳುವುದೋ ತಿಳಿಯದೆ ಕುಳಿತುಕೊಂಡರು.
ಓಶೋ ಅವರು ಈ ಘಟನೆಯನ್ನು ಹೇಳಿ ‘ನಸ್ರುದ್ದೀನರಿಗೆ ಆದ ಅನುಭವ ನಮ್ಮೆಲ್ಲರಿಗೂ ಆಗಿರುತ್ತದೆ. ನಾವು ಭಾಷಣ ಮಾಡಲು ಹೋಗಿಲ್ಲದಿರಬಹುದು, ಆದರೆ ಯಾರೊಂದಿಗೋ ರ್ಚಚಿಸಲು ಹೋದಾಗಲೂ ನಮಗೂ ಹೀಗೆಯೇ ಅನಿಸುತ್ತದೆ. ಅಲ್ಲವೇ? ನಾವು ಹೇಳಲು ಹೋಗಿದ್ದು ಒಂದು ವಿಷಯವಾದರೆ, ಹೇಳಿದ್ದು ಮತ್ತೊಂದು ವಿಷಯ. ಅಲ್ಲಿಂದ ಮರಳಿ ಬರುವಾಗ ನಾನು ಹೀಗೆ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ? ಎಂದು ಅನೇಕ ಬಾರಿ ಅನಿಸಿರಬೇಕಲ್ಲವೇ?’ ಎಂದು ಹೇಳಿದ್ದರು.
ಮತ್ತೊಂದು ಕುತೂಹಲಕಾರಿಯಾದ ಪ್ರಸಂಗವನ್ನು ನೋಡೋಣ. ಇಲ್ಲಿಯೂ ನಸ್ರುದ್ದೀನರೇ ಕೇಂದ್ರ ವ್ಯಕ್ತಿ! ಒಮ್ಮೆ ಅವರು ಪ್ರಯಾಣ ಮಾಡುತ್ತಿದ್ದರಂತೆ. ಒಳ್ಳೆಯ ಉಡುಪು ಧರಿಸಿದ್ದರು. ಉತ್ಸಾಹದಿಂದ ಕುಳಿತಿದ್ದರು. ಆಗ ಟಿಕೆಟ್ ಪರೀಕ್ಷಕರು ನಸ್ರುದ್ದೀನರ ಬಳಿ ಬಂದು ‘ನಿಮ್ಮ ಟಿಕೆಟ್ ತೋರಿಸಿ?’ ಎಂದು ಕೇಳಿದರು. ನಸ್ರುದ್ದೀನರು ತಮ್ಮ ಅಂಗಿಯ ಜೇಬಿನಲ್ಲಿ ನೋಡಿದರು. ಟಿಕೆಟ್ ಇರಲಿಲ್ಲ. ಕೋಟಿನ ಜೇಬುಗಳಲ್ಲಿಯೂ ನೋಡಿದರು. ಅಲ್ಲಿಯೂ ಟಿಕೆಟ್ ಸಿಗಲಿಲ್ಲ. ಪೈಜಾಮದ ಜೇಬುಗಳಲ್ಲಿಯೂ ನೋಡಿದರು. ಅಲ್ಲಿಯೂ ಟಿಕೆಟ್ ಸಿಗಲಿಲ್ಲ. ನಸ್ರುದ್ದೀನರು ಸಹಜವಾಗಿಯೇ ಗಾಬರಿಗೊಂಡರು. ಇವರು ಧರಿಸಿದ ಒಳ್ಳೆಯ ಬೆಲೆಬಾಳುವ ಉಡುಪುಗಳನ್ನು ನೋಡಿದ ಪರೀಕ್ಷಕರು ‘ಸರ್, ಚಿಂತೆ ಮಾಡಬೇಡಿ. ಇಂತಹ ಒಳ್ಳೆಯ ಬೆಲೆಬಾಳುವ ಉಡುಪು ಧರಿಸಿ ಬಂದಿರುವ ನೀವು, ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತೀರಿಯೇ? ನೀವೇನು ಚಿಂತೆ ಮಾಡಬೇಡಿ. ನಿಮ್ಮ ಬಳಿ ಖಂಡಿತವಾಗಿಯೂ ಟಿಕೆಟ್ ಇದ್ದೇ ಇರುತ್ತದೆ ಎಂಬ ನಂಬಿಕೆ ನನ್ನದು. ಎಲ್ಲಿಯೋ ಇಟ್ಟು ಮರೆತುಬಿಟ್ಟಿದ್ದೀರಿ, ಚಿಂತೆ ಮಾಡಬೇಡಿ’ ಎಂದು ಹೇಳಿ ಹೊರಡಲು ಅನುವಾದರು.
ನಸ್ರುದ್ದೀನರು ‘ಸ್ವಲ್ಪ ನಿಲ್ಲಿ ಪರೀಕ್ಷಕರೇ, ನನಗೆ ಟಿಕೆಟ್ ಬಗ್ಗೆ ಚಿಂತೆ ಇಲ್ಲ. ನನಗಿರುವ ಚಿಂತೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿಯುತ್ತಿಲ್ಲ. ಟಿಕೆಟ್ ಇದ್ದಿದ್ದರೆ ಅದನ್ನು ನೋಡಿಕೊಂಡು ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಗೊತ್ತಾಗುತ್ತಿತ್ತು’ ಎಂದಾಗ ಆಶ್ಚರ್ಯದಿಂದ ಕಣ್-ಬಾಯಿ ಬಿಡುವ ಸರತಿ ಆ ಟಿಕೆಟ್ ಪರೀಕ್ಷಕರದಾಗಿತ್ತು. ಇದನ್ನು ಹೇಳಿದ ಓಶೋರವರು ‘ಇಂತಹ ಪರಿಸ್ಥಿತಿ ನಮ್ಮೆಲ್ಲರ ಬದುಕಿನಲ್ಲೂ ಬರಬಹುದು. ಪ್ರಯಾಣದ ವಿಷಯ ಬಿಡಿ, ಏನನ್ನಾದರೂ ಮಾಡುವ ಮುಂಚೆ ಏಕೆ? ಏನು? ಎತ್ತ? ಎಂಬುದನ್ನು ಮರೆತುಬಿಡುತ್ತೇವಲ್ಲವೇ? ಪೇಚಾಡುತ್ತೇವಲ್ಲವೇ?’ ಎಂದರು.
ಇಂಗ್ಲೀಷಿನಲ್ಲಿ ಹೇಳುವ ಹಾಗೆ ಗಐಖ – ಗಐಖಈಣM ಎರಡೂ ಇರುವ ಕೆಲವೇ ವ್ಯಕ್ತಿಗಳಲ್ಲಿ ನಸ್ರುದ್ದೀನರು ಒಬ್ಬರು! ಅವರ ದೇಶ, ಕಾಲ ಮುಂತಾದವುಗಳ ಬಗ್ಗೆ, ಇದು ಹೀಗೆಯೇ ಎಂದು ಹೇಳುವ ದಾಖಲೆಗಳಿಲ್ಲ. ಆದರೆ ಹಿಂದಿನ ನೂರಾರು ವರ್ಷಗಳು, ಮುಂದಿನ ನೂರಾರು ವರ್ಷಗಳು, ಅವರ ಹೆಸರು, ಅವರ ವಿನೋದಮಯ ಘಟನೆಗಳು ಚಲಾವಣೆಯಲ್ಲಿ ಇರುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ!
ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ಎಲ್ಲಾ ಮಹಾನುಭಾವರುಗಳಿಗೂ ಒಂದು ಧನ್ಯವಾದ ಹೇಳಿ ಇದನ್ನು ಮುಗಿಸಬಹುದಲ್ಲವೇ?
| ಎಸ್. ಷಡಕ್ಷರಿ, ಉದ್ಯಮಿ, ಲೇಖಕ
ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಕೇಂದ್ರ ಸಚಿವರಿಗೆ ಬೆದರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
