| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು
ಮುಡಾ ಹಗರಣಕ್ಕೆ ಸಂಬಂಧಿಸಿ ಮತ್ತೊಂದು ದಾಖಲೆ ಹೊರಬಂದಿದ್ದು, 2023ರಲ್ಲಿ ಸರ್ಕಾರ ರಚಿಸಿದ್ದ ತಾಂತ್ರಿಕ ಸಮಿತಿ ಮುಡಾ ಪ್ರಕರಣ ಆಳ-ಅಗಲವನ್ನು ಸರ್ಕಾರಕ್ಕೆ ಪರಿಚಯಿಸಿತ್ತು. ವರದಿಯನ್ನು ನಗರಾಭಿವೃದ್ಧಿ ಇಲಾಖೆಯು ಸಿಎಂ ಕಚೇರಿ ಗಮನಕ್ಕೂ ತಂದಿತ್ತು ಎಂಬ ಅಚ್ಚರಿ ವಿಚಾರ ಬಯಲಾಗಿದೆ. ಏಳು ಪುಟಗಳ ತಾಂತ್ರಿಕ ಸಮಿತಿ ಅಭಿಪ್ರಾಯ ಸಂಗ್ರಹ, ಜತೆಗೆ 600 ಹಾಳೆಗಳ ವರದಿ ಮತ್ತು ಅನುಬಂಧ, 2021ರ ಆಗಸ್ಟ್ 13ರ ಸಭಾ ನಡಾವಳಿಯ ಪ್ರತಿ, 466 ಹಾಳೆಗಳ ಒಂದು ಹಾಗೂ 372 ಹಾಳೆಗಳ ಇನ್ನೊಂದು ಸಂಪುಟವನ್ನು ಒಳಗೊಂಡ ಸುದೀರ್ಘ ದಾಖಲೆಯಾಗಿದೆ.
ಮುಡಾದಲ್ಲಿ ಅನುದಾನ ದುರ್ಬಳಕೆ, ಬದಲಿ ನಿವೇಶನಗಳ ಹಂಚಿಕೆ, ಭೂ ಸ್ವಾಧೀನ ಪರಿಹಾರ, ಪ್ರಾಧಿಕಾರದ ಸಭೆಯಲ್ಲಿ ಕಾಯ್ದೆ, ನಿಯಮ, ವಲಯ ನಿಯಮಗಳಿಗೆ ವಿರುದ್ಧವಾಗಿ ವಿಷಯ ಮಂಡಿಸಿ ನಿರ್ಣಯ ಕೈಗೊಂಡಿರುವುದು ಮತ್ತು ಅವ್ಯವಹಾರ ನಡೆಸಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಮಗ್ರ ವರದಿ ಸಲ್ಲಿಸಲು ತಾಂತ್ರಿಕ ಸಮಿತಿ ರಚಿಸಲಾಗಿತ್ತು. 50:50ಕ್ಕೆ ಅವಕಾಶವೇ ಇಲ್ಲ: ಸರ್ಕಾರದ ಕೈ ಸೇರಿದ್ದ ವರದಿಯಲ್ಲಿ ಅನೇಕ ಸಂಗತಿಗಳಿವೆ. ಈಗ ಹೆಚ್ಚು ಚರ್ಚೆಯಾಗುತ್ತಿರುವ ಶೇ.50:50 ಅನುಪಾತದ ಕುರಿತೂ ಗಮನಾರ್ಹ ಅಂಶಗಳ ಉಲ್ಲೇಖವಿದೆ.
ಪ್ರಾಧಿಕಾರವು ಅಭಿವೃದ್ಧಿ ಯೋಜನೆ ಪ್ರದೇಶದ ಹೊರಗೆ ನಿಯಮಾನುಸಾರ ಭೂ ಸ್ವಾಧೀನಪಡಿಸಿಕೊಳ್ಳದೆ, ಸರ್ಕಾರದ ಪೂರ್ವಾನುಮೋದನೆ ಪಡೆಯದೆ ಅಕ್ಕಪಕ್ಕದ ಜಮೀನುಗಳಲ್ಲಿ ಕಾಮಗಾರಿ ಕೈಗೊಂಡಿರುವುದು ಮತ್ತು ತಾಂತ್ರಿಕ ಶಾಖೆ ನೀಡುವ ವರದಿ ಮೇಲೆ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸು ಮಾಡುತ್ತಿದ್ದಾರೆಂದು ವರದಿಯಲ್ಲಿದೆ. ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಲ್ಲಿ ಎಷ್ಟೋ ವರ್ಷಗಳ ನಂತರ ಭೂ ಪರಿಹಾರ ಮೊತ್ತ ನೀಡಿರುವ ಬಗ್ಗೆ ಮಾಹಿತಿ ಇರುವುದಿಲ್ಲ, ಕಡತ ಲಭ್ಯ ಇಲ್ಲ ಎಂದು ಟಿಪ್ಪಣಿಯಲ್ಲಿ ನಮೂದಿಸಿ ಬದಲಿ ನಿವೇಶನ ಮಂಜೂರಾತಿಗೆ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸು ಮಾಡಿ ಕ್ರಮಕೈಗೊಳ್ಳುತ್ತಿದ್ದಾರೆಂದು ಸಮಿತಿ ಕಂಡುಕೊಂಡಿದೆ.
ಪ್ರಾಧಿಕಾರದಲ್ಲಿ ಈವರೆಗೂ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಸಂಬಂಧ ಭೂ ಸ್ವಾಧೀನಪಡಿಸಿಕೊಂಡ ವಿವರಗಳು, ನೀಡಲಾದ ಪರಿಹಾರ, ರಚಿಸಲಾದ ಬಡಾವಣೆಗಳು, ಭೂ ಸ್ವಾಧೀನದಿಂದ ಕೈಬಿಟ್ಟಿರುವ ಪ್ರಕರಣಗಳು ಇತ್ಯಾದಿ ಮತ್ತು ಭೂ ಸ್ವಾಧೀನಪಡಿಸದೆ ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ನೀಡಿರುವ ಪರಿಹಾರದ ವಿವರವನ್ನು ಮಂಡಿಸುವಂತೆ ಸೂಚಿಸಿದ್ದರೂ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಬದಲಿ ನಿವೇಶನ, ತುಂಡು ಭೂಮಿ ಮಂಜೂರಾತಿಗೆ ತೀರ್ಮಾನ ಕೈಗೊಳ್ಳುತ್ತಿದ್ದು, ಅನ್ಯ ಬಡಾವಣೆಗಳಲ್ಲಿ ಬದಲಿ ನಿವೇಶನವನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲು ತೀರ್ಮಾನ ಮಾಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಬಹುದೆಂದು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಹಾಗೆಯೇ, ಪ್ರಾಧಿಕಾರ ವಿವಿಧ ಉಪಯೋಗಗಳಿಗೆ ಬಳಸಿಕೊಂಡಿ ರುವ ಜಮೀನಿಗೆ ಬದಲಿಯಾಗಿ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿನ ನಿವೇಶನವನ್ನು ಶೇ.50:50 ಅನುಪಾತದಂತೆ ನೀಡಲು ಅವಕಾಶ ಇಲ್ಲ, ನಿಯಮಬಾಹಿರ ಎಂದು ಕಾಯ್ದೆ ಉಲ್ಲೇಖಿಸಿ ವರದಿಯಲ್ಲಿ ಸ್ಪಷ್ಟವಾಗಿ ಸಮಿತಿ ವಿವರಿಸಿದೆ. ಪ್ರಾಧಿಕಾರದಲ್ಲಿಯೇ ನಿವೇಶನ ಹಂಚಿಕೆ ಕುರಿತು ಪೂರ್ಣ ಮಾಹಿತಿ ಲಭ್ಯ ಇದ್ದಾಗ್ಯೂ ಪರಿಶೀಲಿಸದೆ ಕ್ರಮ ಕೈಗೊಂಡಿರುವುದು ಮತ್ತು ಈ ಮೂಲಕ ಕಾನೂನಾತ್ಮಕ ಗೊಂದಲಗಳಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ತಾಂತ್ರಿಕ ಸಮಿತಿ ಅಸಮಾಧಾನ ಹೊರಹಾಕಿತ್ತು.
ಮುಖ್ಯಾಂಶಗಳು
ಗುಟ್ಟು ರಟ್ಟಾದರೂ ತಡ
ಮುಡಾದಲ್ಲಿ ಅವ್ಯವಹಾರ ಸಾಮಾನ್ಯವಾದುದಲ್ಲ ಎಂದು ತಾಂತ್ರಿಕ ಸಮಿತಿ ಎಚ್ಚರಿಕೆ ಸಹಿತ ವರದಿ ನೀಡಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. 2024ರ ಜುಲೈ 13ರಂದು ಸರ್ಕಾರ ವಿಚಾರಣಾ ಆಯೋಗ ರಚಿಸಿತು. ಈ ಆಯೋಗಕ್ಕೆ ವಿಚಾರಣೆ ನಡೆಸಿ ವರದಿ ಹಾಗೂ ಶಿಫಾರಸು ಮಾಡಲು ಆರು ತಿಂಗಳು ಕಾಲಾವಕಾಶ ನೀಡಲಾಗಿದೆ.
ಸಿದ್ದರಾಮಯ್ಯಗೆ ತಪ್ಪಿನ ಅರಿವಿಲ್ಲ
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತನ್ನ ತಪ್ಪಿನ ಅರಿವಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ. ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡುತ್ತಿದ್ದಾರೆ. ಈ ಪರಿಸ್ಥಿತಿ ಸಿದ್ದರಾಮಯ್ಯಗೆ ಬೇಕಿತ್ತಾ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ನಗರದಲ್ಲಿ ಸೋಮವಾರ ಮಾತನಾಡಿ, ನನ್ನ ಮೇಲೆ ದ್ವೇಷದ ರಾಜಕಾರಣ ಸಿದ್ದರಾಮಯ್ಯ ಮಾಡ್ತಿದ್ದಾರೆ. ಏನು ಬೇಕಾದರೂ ಮಾಡಲಿ. ಜೈಲಿಗೆ ಹೋಗುವಂತಹದ್ದು ಏನು ಮಾಡಿಲ್ಲ, ನೂರು ಜನ್ಮ ಎತ್ತಿ ಬಂದರೂ ಏನು ಮಾಡಲೂ ಆಗಲ್ಲ. ಕಾರಲ್ಲಿ ಏಕೆ ದಾಖಲೆ ಇಟ್ಟುಕೊಂಡಿದ್ದೀರಾ? ಜನಗಳ ಮುಂದೆ ಬಿಡುಗಡೆ ಮಾಡಿ ಎಂದು ಕುಟುಕಿದರು. ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್ ಎಂಬ ಶಾಸಕ ರವಿಕುಮಾರ್ ಗಣಿಗ ಹೇಳಿಕೆಗೆ ತಿರುಗೇಟು ನೀಡಿದ ಎಚ್​ಡಿಕೆ, ನೂರು ಕೋಟಿಗೆ ಸಂಖ್ಯೆ ಗೊತ್ತಿದ್ಯಾ? ಸರ್ಕಾರ ತೆಗೆಯಲು 5000 ಕೋಟಿ ರೂ. ಎಂದರೆ ಯಾರಾದರೂ ನಂಬುತ್ತಾರಾ? ಸರ್ಕಾರ ಬೀಳುತ್ತದೆ ಎಂದು ಅವರೇ ದಿನಾ ಹೇಳುತ್ತಿದ್ದಾರೆ ಎಂದು ಜರಿದರು.
ಅಹಿಂದ ಸಿಎಂ ಸಹಿಸಲಾಗುತ್ತಿಲ್ಲ
ಬೆಳಗಾವಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ನಮ್ಮ ಕಡೆಯವರೇ ಬ್ರಿಟಿಷರಿಗೆ ಹಿಡಿದುಕೊಟ್ಟಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗದ ನಾನು ಮುಖ್ಯಮಂತ್ರಿ ಆಗಿರುವುದು ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು. ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ, ಕಳ್ಳಿಗುದ್ದಿ, ಕಲ್ಲೊಳ್ಳಿ, ಯಾದವಾಡ ಗ್ರಾಮಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ, ಕಲ್ಲಿನ ಕಿರು ಕೋಟೆ ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನ ದೇಶಪ್ರೇಮ ಅಜರಾಮರ. ರಾಯಣ್ಣನ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ನಾನು ಯಾವ ತಪ್ಪೂ ಮಾಡಿಲ್ಲ. ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ಇರುತ್ತದೆಯೋ, ಅಲ್ಲಿಯವರೆಗೂ ನನ್ನ ಅಧಿಕಾರದಿಂದ ಕೆಳಗಿಳಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಅದೇ ರೀತಿ ರಾಯಣ್ಣನನ್ನು ಮೋಸದಿಂದ ಹಿಡಿದಿದ್ದರು ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಜನರ ಗಮನ ಬೇರೆಡೆ ಸೆಳೆಯುವ ಕುತಂತ್ರ
ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ, ಆಪರೇಷನ್ ಕಮಲವೆಂಬ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ಹರಿಬಿಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಮುಡಾ ಮತ್ತು ವಾಲ್ಮೀಕಿ ಅಕ್ರಮಗಳಲ್ಲಿ ಮುಳುಗಿರುವ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ದಾರಿಯಿಲ್ಲದೆ ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಭ್ರಷ್ಟಾಚಾರ, ವೈಫಲ್ಯಗಳ ವಿರುದ್ಧ ಮಾತ್ರ ಹೋರಾಡುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ತಪು್ಪ ಮುಚ್ಚಿಕೊಳ್ಳಲು ಗೂಬೆ ಕೂರಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳ ಸ್ಥಗಿತದಿಂದ ಕಾಂಗ್ರೆಸ್ ಶಾಸಕರು ರೋಸಿ ಹೋಗಿದ್ದಾರೆ. ಗ್ಯಾರಂಟಿಗಳನ್ನು ತೆಗೆದುಹಾಕಬೇಕೆಂದು ಅವರೇ ಒತ್ತಾಯಿಸುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಬೆಲೆಗಳ ಏರಿಕೆ ಮಾರ್ಗ ಕಂಡುಕೊಂಡಿದೆ. ಈಗಾಗಲೆ ಹಲವು ತೆರಿಗೆಗಳನ್ನು ಹೆಚ್ಚಿಸಿದೆ. ಮದ್ಯದ ತೆರಿಗೆಯನ್ನು ಮೂರನೇ ಬಾರಿಗೆ ಏರಿಸಲು, ನೀರು ಹಾಗೂ ಬಸ್ ಟಿಕೆಟ್ ದರ ಹೆಚ್ಚಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
ದ್ವೇಷದ ಕನ್ನಡಕ ಕಳಚಿಟ್ಟು ನೋಡಿ
ಮುಡಾ ಪ್ರಕರಣದಲ್ಲಿ ಪತ್ನಿಯ ಅರ್ಜಿಗೆ ವೈಟ್ನರ್ ಹಚ್ಚಿರುವುದಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ದ್ವೇಷದ ಕನ್ನಡಕ ಕಳಚಿಟ್ಟು ಕಣ್ಣುಬಿಟ್ಟು ನೋಡಿ ಎಂದು ಪ್ರತಿಪಕ್ಷಗಳಿಗೆ ತಾಕೀತು ಮಾಡಿದ್ದಾರೆ. ಮುಡಾ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದ್ದನ್ನೇ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ, ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ನೋಡಿ ಎಂದಿದ್ದಾರೆ.
ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿಪಡಿಸಿದ ಸಮಾನಂತರ ಬಡಾವಣೆಯಲ್ಲಿ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ ಎಂದು ತಿಳಿಸಿದ್ದಾರೆ.
ನಮ್ಮ ನ್ಯೂನ್ಯತೆಗಳು ಬೆತ್ತಲಾಗಿದ್ದೇ ಇವರಿಂದ… ಟೀಮ್ ಇಂಡಿಯಾ ವಿರುದ್ಧ ಕಿಡಿಕಾರಿದ ಪಾಕ್ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + ten =
Remember me
