ಸೋರಲಮಾವು ಶ್ರೀಹರ್ಷ ತುಮಕೂರುಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೆಚ್ಚಾಗಿ ಕೊಬ್ಬರಿ ಬೆಳೆಯುವ ಜಿಲ್ಲೆಯಾಗಿರುವ ತುಮಕೂರಿಗಿಂತ ನೆರೆಹೊರೆಯ ಜಿಲ್ಲೆಗಳಲ್ಲಿಯೇ ನೋಂದಣಿ ಹೆಚ್ಚಾಗಿರುವುದು ಅಚ್ಚರಿ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ 15,199 ರೈತರು ನೋಂದಣಿ ಮಾಡಿಕೊಂಡಿದ್ದು, 5012 ರೈತರು ನೋಂದಣಿ ಮೂಲಕ ತುರುವೇಕೆರೆ ಸಿಂಹಪಾಲು ಪಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಹೆಚ್ಚಾಗಿ ತೆಂಗು ಬೆಳೆಯಲಾಗುತ್ತಿದ್ದರೂ 3,471 ರೈತರು ನೋಂದಣಿ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ತಿಪಟೂರು ಭಾಗದ ವರ್ತಕರೇ ಈ ಕೇಂದ್ರಗಳಲ್ಲಿ ಬೇನಾಮಿ ನೋಂದಣಿ ಮಾಡಿಸಿರುವ ಬಗ್ಗೆ ಜನರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ನೋಂದಣಿ ಹಾಸನ ಜಿಲ್ಲೆಯಲ್ಲಿ ನಡೆದಿದೆ. 15,728 ರೈತರು ಅವಕಾಶ ಪಡೆದಿದ್ದು, ಈ ಪೈಕಿ ಖರೀದಿ ಕೇಂದ್ರ ಐಪಿ ವಿಳಾಸದಲ್ಲಿ ಎಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ.
ನೋಂದಣಿ ಕೇಂದ್ರದ ಹೊರಗಡೆಯೂ ವರ್ತಕರಿಂದ ಕ್ವಿಂಟಾಲ್​ಗೆ 1 ಸಾವಿರದವರೆಗೂ ಹಣ ಪಡೆದು ರೈತರ ಮನೆಗಳಲ್ಲಿ ನೋಂದಣಿ ಮಾಡಿರುವುದು ಗ್ರಾಮೀಣ ಭಾಗದಲ್ಲಿ ಚರ್ಚೆಯಲ್ಲಿರುವ ಬಹಿರಂಗ ಸತ್ಯವಾಗಿದೆ. ಖರೀದಿ ಕೇಂದ್ರದಲ್ಲಿ ಕಾದಿರುವ ನೈಜ ರೈತರಿಗೆ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಅನ್ಯಾಯವೆಸಗಿದ್ದಾರೆ. ಚಾಮರಾಜನಗರದಲ್ಲಿ ಕೇವಲ 8 ರೈತರು, ಚಿಕ್ಕಮಗಳೂರಿನಲ್ಲಿ 4,223, ಚಿತ್ರದುರ್ಗ 3,471, ಹಾಸನ 15,728, ಮಂಡ್ಯ 6,879, ಮೈಸೂರು 399, ರಾಮನಗರ 129 ಹಾಗೂ ತುಮಕೂರು ಜಿಲ್ಲೆಯಲ್ಲಿ 15,199 ಒಟ್ಟು 46,036 ರೈತರು 6.25 ಲಕ್ಷ ಕ್ವಿಂಟಲ್ ಕೊಬ್ಬರಿ ಮಾರಾಟ ಮಾಡಲು ನೋಂದಣಿ ಮಾಡಿದ್ದಾರೆ.
ಖರೀದಿ ಪ್ರಮಾಣ ಹೆಚ್ಚಿಸುವ ಸಾಧ್ಯತೆ?:ರಾಜ್ಯದಲ್ಲಿ ವಾರ್ಷಿಕ 2.50 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಉತ್ಪಾದನೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ನೀಡಿರುವ ಅಂಕಿ-ಅಂಶದ ಆಧಾರದ ಮೇಲೆ ಶೇ.25 ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಂಡುಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.
ಈಗ ನೋಂದಣಿ ಹಗರಣದ ಶಂಕೆ, ರೈತರ ಪ್ರತಿಭಟನೆ ಮತ್ತು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನೂ ಶೇ.15 ಕೊಬ್ಬರಿ ಖರೀದಿಗೆ ಅನುಮತಿ ನೀಡುವ ಸಾಧ್ಯತೆಯಿದ್ದು, ಇದರ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ತುರ್ತಾಗಿದೆ.
ಬಯೋಮೆಟ್ರಿಕ್ ಕಡ್ಡಾಯವಾಗಲಿ:ಪ್ರಸ್ತುತ ನಿಯಮದಂತೆ ರೈತರ ಹೆಸರು ನೋಂದಣಿ ಸಂದರ್ಭದಲ್ಲಿ ಅವರ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಆದರೆ, ಕೊಬ್ಬರಿ ಮಾರಾಟದ ಸಂದರ್ಭದಲ್ಲಿಯೂ ಬಯೋಮೆಟ್ರಿಕ್ ಕಡ್ಡಾಯಗೊಳಿಸಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬಂದಿದೆ. ರೈತರು ನೋಂದಣಿ ಮಾಡಿದರೆ ಯಾರು ಬೇಕಾದರೂ ಬಂದು ಕೊಬ್ಬರಿ ಮಾರಾಟ ಮಾಡಲು ಇರುವ ಅವಕಾಶಕ್ಕೆ ಕೂಡಲೇ ಕಡಿವಾಣ ಬೀಳಬೇಕಿದೆ. ಪ್ರಸ್ತುತ ಖರೀದಿಗೆ ನಡೆದಿರುವ ನೋಂದಣಿ ರದ್ದುಪಡಿಸಬೇಕು ಎಂಬ ಆಗ್ರಹವಿದೆಯಾದರೂ ಈ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸರತಿಯಲ್ಲಿ ನಿಂತು ಸಾವಿರಾರು ರೈತರು ರೈತರು ನೋಂದಣಿ ಮಾಡಿದ್ದು ಅವರ ಹಿತದೃಷ್ಟಿಯಿಂದ ಕೊಂಡುಕೊಳ್ಳುವ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವ ಸಾಧ್ಯತೆಯಿದೆ.
ರೈತರ ಮನೆಗಳಿಗೆ ತೆರಳಿ ನೋಂದಣಿ:ನೋಂದಣಿಗಾಗಿ ಖರೀದಿ ಕೇಂದ್ರದ ಮುಂದೆ ರೈತರು ಅನ್ನ, ನೀರು ಬಿಟ್ಟು ಸರತಿಯಲ್ಲಿ ನಿಂತಿದ್ದರೆ ಕೊಬ್ಬರಿ ವರ್ತಕರು ಸಿಬ್ಬಂದಿಯೊಂದಿಗೆ ಹಳ್ಳಿಗಳಿಗೆ ತೆರಳಿ ಮನೆಗಳಲ್ಲಿ ನೋಂದಣಿ ಮಾಡಿಸಿರುವುದು ಬಹಿರಂಗವಾಗಿಯೇ ನಡೆದಿದೆ. ತುಮಕೂರು ಜಿಲ್ಲೆಯ ಕೊಬ್ಬರಿ ವರ್ತಕರು ಟನ್​ಗಟ್ಟಲೇ ಕೊಬ್ಬರಿಯನ್ನು ದಾಸ್ತಾನು ಮಾಡಿಕೊಂಡಿದ್ದು ನೆರೆಹೊರೆಯ ತಾಲೂಕುಗಳ ಖರೀದಿ ಕೇಂದ್ರದಲ್ಲಿ ಜಿಲ್ಲೆಯ ರೈತರ ಹೆಸರಿನಲ್ಲಿ ಬೇನಾಮಿ ನೋಂದಣಿ ನಡೆದಿದ್ದು, ನೋಂದಣಿ ಪ್ರಕ್ರಿಯೆ ನಡೆದಿರುವ ಐಪಿ ವಿಳಾಸದ ತನಿಖೆಗೆ ರೈತರು ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ರೈತರ ನೋಂದಣಿ: ತುರುವೇಕೆರೆ (5012), ತಿಪಟೂರು (3992), ಚಿ.ನಾ.ಹಳ್ಳಿ (2685), ಗುಬ್ಬಿ (2638), ಕುಣಿಗಲ್ (421), ಶಿರಾ (159), ತುಮಕೂರು (292)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
