ಬೆಂಗಳೂರು:ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿ ಸರ್ಕಾರ ಕೋಲಾರ ಕೃಷಿ ಮಾದರಿಯಲ್ಲಿ ಹೊಸ ಕೃಷಿ ನೀತಿ ಜಾರಿಗೆ ತರಲು ಸಜ್ಜಾಗಿದೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಯಲ್ಲಿ ರಾಜ್ಯದ ರೈತರ ಕಣ್ಮುಂದೆಯೇ ಇರುವ ಕೋಲಾರ ರೈತರನ್ನೇ ನೂತನ ಕೃಷಿ ನೀತಿಗೆ ಆಧಾರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ.
ವಿಜಯವಾಣಿ ನಡೆಸಿದ ಸಂವಾದದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ನೂತನ ಕೃಷಿ ನೀತಿ ತರುವ ಕುರಿತು ಮಾಹಿತಿ ಹಂಚಿಕೊಂಡರು. ದೂರದ ಇಸ್ರೇಲ್ ಮಾದರಿಗಿಂತ ರಾಜ್ಯದಲ್ಲೇ ಯಶೋಗಾಥೆಗಳ ಸರಮಾಲೆ ಇರುವ ಕೋಲಾರ ಕೃಷಿಕರ ಬದುಕು, ಕೃಷಿ ಪದ್ಧತಿಗಳೇ ಹೊಸ ಕೃಷಿ ನೀತಿಯ ಜೀವಾಳವಾಗಲಿವೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಹಲವು ಹತ್ತು ಉಪಕ್ರಮಗಳನ್ನು ಜಾರಿಗೊಳಿಸಿರುವ ಸರ್ಕಾರ ನೂತನ ಕೃಷಿ ನೀತಿ ಮೂಲಕ ರೈತನಿಗೆ ಬೆನ್ನೆಲುಬಾಗಿ ನಿಲ್ಲಲು ಮುಂದಾಗಿದೆ ಎಂದರು.
ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಪ್ರಾಕೃತಿಕ ವೈಪರೀತ್ಯಗಳ ಜತೆಗೆ ಸೆಣಸಾಡಿ ದೇಶಕ್ಕೆ ಅನ್ನ ನೀಡುತ್ತಿರುವ ರೈತನ ಬದುಕಿನ ಕ್ಷಿತಿಜವನ್ನು ಇನ್ನಷ್ಟು ವಿಸ್ತಾರಗೊಳಿಸುವ ಮಹತ್ವಾಕಾಂಕ್ಷೆಯಲ್ಲಿ ಈ ನೀತಿ ನಿರೂಪಣೆಯಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಮಂಡನೆಯಾಗಲಿದೆ. ಕೃಷಿಯನ್ನು ಖುಷಿಯಾಗಿ ಮಾಡಬೇಕು. ಕೃಷಿ ಉದ್ಯಮವಾಗಬೇಕು ಎಂಬ ನಿಟ್ಟಿನಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ, ಉಪ ಉತ್ಪನ್ನ ತಯಾರಿಕೆಗೆ ಪೂರಕವಾಗಿ ಈ ನೀತಿ ಅಂಕುರಿಸಲಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಏಕಕಾಲದಲ್ಲಿ ಬಹು ವಿಧದ ಬೆಳೆ ಬೆಳೆಯುವ ಮೂಲಕ ರೈತನನ್ನು ಸ್ವಾವಲಂಬಿಯಾಗಿಸುವುದು ನೂತನ ನೀತಿಯ ಸಂಕಲ್ಪವಾಗಿದೆ ಎಂದು ವಿವರಿಸಿದರು.
ಅಧ್ಯಯನ ಪ್ರಯೋಗದ ಫಲ:ನನ್ನ ಕ್ಷೇತ್ರದ ಪ್ರಗತಿಪರ ರೈತರ ತಂಡವನ್ನು ಕೋಲಾರಕ್ಕೆ ಕಳುಹಿಸಿಕೊಟ್ಟು ಮಾದರಿಗಳನ್ನು ತೋರಿಸಿದ್ದೇನೆ. ಅಧ್ಯಯನವನ್ನೂ ಮಾಡಿಸಿದ್ದೇನೆ. ಇದರಿಂದ ರೈತರಿಗೆ ಸಾಕಷ್ಟು ಲಾಭವಾಗಿದೆ. ಹೀಗಾಗಿ ಕೋಲಾರವೇ ನಮ್ಮ ನೂತನ ಕೃಷಿ ನೀತಿಗೆ ಭೂಮಿಕೆಯಾಗಲಿದೆ ಎಂದು ಪಾಟೀಲ್ ಹೇಳಿದರು.
ಉಪ ಕಸುಬುಗಳು ಸಮಗ್ರ ಕೃಷಿಗೆ ಒತ್ತು:ಕೋಲಾರ ಜಿಲ್ಲೆಯ ರೈತರು ರಾಜ್ಯದ ರೈತರಿಗೆ ಮಾದರಿಯಾಗಬೇಕು. ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗದ ಪ್ರದೇಶದಲ್ಲಿ ಹನಿ ನೀರನ್ನೂ ಕಾಪಾಡುತ್ತಾರೆ. ಏಕ ಬೆಳೆ ಪದ್ಧತಿಗಿಂತ ಬಹು ಬೆಳೆ ಹಾಗೂ ಉಪ ಕಸುಬುಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯವಾಗಿಸಿಕೊಂಡಿದ್ದಾರೆ. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಬಾಳಬಹುದೆಂದು ತೋರಿಸಿದ್ದಾರೆ ಎನ್ನುತ್ತಾರೆ ಪಾಟೀಲ್.
ಐದು ಸಿರಿಧಾನ್ಯ ಹಬ್:ಸಿರಿಧಾನ್ಯ ಕೃಷಿ ಪ್ರೋತ್ಸಾಹಿಸಲು ‘ರೈತ ಸಿರಿ’ ಯೋಜನೆ ಜಾರಿಗೊಳಿಸಲಾಗಿದೆ. ಕೆಪೆಕ್ ಸಂಸ್ಥೆಯನ್ನು ಸಂಪರ್ಕ ಸೇತು ಮಾಡಿಕೊಂಡು ಸಿರಿಧಾನ್ಯ ರಫ್ತಿಗೆ ಯೋಜನೆ ರೂಪಿಸಲಾಗುತ್ತಿದೆ. ಈ ಮೊದಲು ಆಹಾರ ಭದ್ರತೆ ಮುಖ್ಯವಾಗಿತ್ತು. ಈಗ ಪೌಷ್ಟಿಕಾಂಶ ಭದ್ರತೆ ಖಾತ್ರಿಪಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಸಿರಿಧಾನ್ಯ ಬೆಳೆ, ಮಾರುಕಟ್ಟೆ, ರಫ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಹಾವೇರಿ, ವಿಜಯಪುರ, ಬನವಾಸಿ, ಚಿಕ್ಕಬಳ್ಳಾಪುರ, ಮೈಸೂರನ್ನು ಸಿರಿಧಾನ್ಯ ಹಬ್​ಗಳನ್ನಾಗಿ ಗುರುತಿಸಲಾಗಿದೆ. ಅಲ್ಲದೆ, ಈ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲು ವಿಶೇಷ ಯೋಜನೆಯನ್ನೂ ರೂಪಿಸಲಾಗುವುದು. ಸಿರಿಧಾನ್ಯ ಬೆಳೆಯುವುದರ ಜತೆಗೆ ಅವುಗಳ ಸಂಸ್ಕರಣೆ, ಮೌಲ್ಯವರ್ಧನೆ, ಬ್ರಾ್ಯಂಡಿಂಗ್ ಮಾಡಲು ರೈತರಿಗೆ ಪೂರಕ ತರಬೇತಿ, ಪ್ರೋತ್ಸಾಹ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವರಿಸಿದರು.
‘ಕಾಂತಾರ’ ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
