| ಶಿವಾನಂದ ತಗಡೂರು, ಬೆಂಗಳೂರುನಾಡಿಗೆ ವಿದ್ಯುತ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ನಷ್ಟದಲ್ಲಿ ಮುಳುಗಿ, ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಂದ (ಎಸ್ಕಾಂ) ಕೆಪಿಸಿಗೆ ಬರಬೇಕಾಗಿರುವ ಬಾಕಿ ಬರೋಬ್ಬರಿ 21 ಸಾವಿರ ಕೋಟಿ ರೂ.ಗೆ ಏರಿಕೆ ಆಗಿದೆ. ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲದ ಬಡ್ಡಿ ಕಟ್ಟಲು ಪ್ರತಿ ವರ್ಷವೂ ಕೆಪಿಸಿ ಒದ್ದಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಿಬ್ಬಂದಿಗೆ ಸಂಬಳ ಕೊಡಲು ಪರದಾಟವಾಗುವ ಆತಂಕ ಎದುರಾಗಿದೆ.
ಕೆಪಿಸಿಯೇ ತನ್ನ ಉತ್ಪಾದನೆಯಲ್ಲಿ ಲಾಭ ಮಾಡಿಕೊಂಡು ಸಾಲ ತೀರಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಒಂದೆಡೆ ಸರ್ಕಾರ, ಮತ್ತೊಂದೆಡೆ ವಿದ್ಯುತ್ ಖರೀದಿ ಮಾಡುವ ಎಸ್ಕಾಂಗಳ ನಡುವೆ ಅಡಕತ್ತರಿಯಲ್ಲಿ ಸಿಲುಕಿ ಪರಿತಪಿಸುತ್ತಿದೆ. ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡಿದ ಕೆಪಿಸಿ, ಬಾಕಿ ಬಿಲ್​ಗಾಗಿ ದಿನನಿತ್ಯ ಎಸ್ಕಾಂಗಳ ಕಚೇರಿಯ ಬಾಗಿಲು ಬಡಿಯಬೇಕಾಗಿದೆ. ಇನ್ನೊಂದೆಡೆ, ಗ್ರಾಮ ಪಂಚಾಯಿತಿಗಳಿಂದ ಬರಬೇಕಾದ ಬಾಕಿ ಕೊಡಿಸುವಂತೆ ಎಸ್ಕಾಂಗಳು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರೂ ಪ್ರಯೋಜನವಾಗಿಲ್ಲ.
ಒಮ್ಮೆ ಮಾತ್ರ ನೆರವು:2013-14ರಲ್ಲಿ 12 ಸಾವಿರ ಕೋಟಿ ರೂ. ಇದ್ದ ಬಾಕಿ, ಈಗ 21 ಸಾವಿರ ಕೋಟಿಗೆ ಏರಿಕೆ ಆಗಿದೆ. ನಷ್ಟದಲ್ಲಿದ್ದ ಕೆಪಿಸಿಗೆ 2014ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಒಮ್ಮೆ ನೆರವು ನೀಡುವ ಪ್ರಯತ್ನ ಮಾಡಿತ್ತು. ಆಗ ಬಜೆಟ್​ನಲ್ಲಿ ಕೆಪಿಸಿಗೆ 3,766 ಕೋಟಿ ರೂ ನೀಡಲಾಗಿತ್ತು. ನಂತರ ಯಾವ ಸರ್ಕಾರವೂ ಈ ಬಗ್ಗೆ ಪ್ರಯತ್ನ ಮಾಡಲಿಲ್ಲ.
ಸ್ಥಳೀಯ ಸಂಸ್ಥೆಗಳ ಪಾಲೇ ಹೆಚ್ಚು: ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ನಷ್ಟವಾಗುತ್ತಿರುವುದಕ್ಕೆ ಹತ್ತು ಹಲವು ಕಾರಣಗಳಿವೆ. ಗ್ರಾಪಂ, ತಾಪಂ, ಜಿಪಂನಿಂದ ಹಿಡಿದು ನಗರಸಭೆ, ಮಹಾನಗರ ಪಾಲಿಕೆಗಳ ತನಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇನ್ನು ಬೀದಿ ದೀಪ ಮತ್ತು ಕುಡಿಯುವ ನೀರು ಯೋಜನೆ ಬಿಲ್ ಸಮರ್ಪಕವಾಗಿ ಪಾವತಿಸುವ ವ್ಯವಸ್ಥೆ ಆಗಿಲ್ಲ. ಒಂದೊಂದು ಪಂಚಾಯಿತಿಯಲ್ಲಿ ಒಂದೆರಡು ಲಕ್ಷದಿಂದ ಹತ್ತಿಪ್ಪತ್ತು ಲಕ್ಷ ರೂ.ಗಳವರೆಗೆ ಬಾಕಿ ಇದೆ. ರೈತರ ಪಂಪ್​ಸೆಟ್​ಗಳಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಯೋಜನೆ ಒಂದೆಡೆಯಾರೆ, ಈಗ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡುತ್ತಿರುವುದು ಹೊರೆಯಾಗಿದೆ. ಹೀಗಾಗಿ 21 ಸಾವಿರ ಕೋಟಿ ರೂ. ಬಾಕಿಯನ್ನು ತುಂಬಿಕೊಡಲು ಸರ್ಕಾರ ಮೊದಲು ಕ್ರಮ ಕೈಗೊಳ್ಳಬೇಕಿದೆ. ರೈತರಿಗೆ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಉಚಿತವಾಗಿ ಸರಬರಾಜಾಗುವ ವಿದ್ಯುತ್ ಶುಲ್ಕವನ್ನು ಸರ್ಕಾರವೇ ಸಬ್ಸಿಡಿ ಮೂಲಕ ತುಂಬಿಕೊಡುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡುತ್ತಿಲ್ಲ.
ಸಮಸ್ಯೆ ಯಾಕೆ?:ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನ ಅವುಗಳ ಕಾರ್ಯ ನಿರ್ವಹಣೆಗೆ ಸಾಕಾಗುತ್ತಿಲ್ಲ. ಬೀದಿ ದೀಪಗಳ ವಿದ್ಯುತ್ ಬಿಲ್ ಕೂಡ ಕಟ್ಟುವ ಸ್ಥಿತಿಯಲ್ಲಿ ಬಹಳಷ್ಟು ಗ್ರಾಮ ಪಂಚಾಯ್ತಿಗಳಿಲ್ಲ. ಬಹಳಷ್ಟು ಪಂಚಾಯಿತಿಗಳಲ್ಲಿ ಬೀದಿ ದೀಪ ಸಂಪರ್ಕ ಕಡಿತ ಮಾಡಿ ಬಾಕಿ ವಸೂಲಿ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ನಿಗಮ ನಷ್ಟದಲ್ಲಿ ಸಿಲುಕಿರುವುದು ನೋವಿನ ಸಂಗತಿ. ಸರ್ಕಾರ ಮೊದಲು ಈ ಬಗ್ಗೆ ಗಂಭೀರವಾಗಿ ಗಮನ ನೀಡಿ ಕ್ರಮ ಕೈಗೊಳ್ಳದೆ ಹೋದರೆ, ಸಂಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ಸಂಬಳ ಕೊಡುವುದಕ್ಕೂ ಕಷ್ಟ ಎದುರಾಗಲಿದೆ.
| ಹೆಸರು ಹೇಳಿಕೊಳ್ಳದ ಕೆಪಿಸಿ ಅಧಿಕಾರಿ.
ಕೆಪಿಸಿಗೆ ಬರಬೇಕಾಗಿರುವ ಬಾಕಿ ಹಣದ ಬಗ್ಗೆ ಚರ್ಚೆ ನಡೆದಿದೆ. ಕೂಡಲೆ ಬಾಕಿ ಪಾವತಿ ಮಾಡುವಂತೆ ಆಗಿಂದಾಗ್ಗೆ ಎಲ್ಲ ಎಸ್ಕಾಂಗಳಿಗೂ ಪತ್ರ ಬರೆಯಲಾಗಿದೆ.
| ಕೆಪಿಸಿ ಅಧಿಕಾರಿ
ಗೃಹಜ್ಯೋತಿ ಕಂತು 2,152 ಕೋಟಿ ರೂ.:ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 200 ಯುನಿಟ್ ತನಕ ಉಚಿತ ವಿದ್ಯುತ್ ಯೋಜನೆಗೆ ಸಿಎಂ ಸಿದ್ದರಾಮಯ್ಯ ಮೊದಲ ತ್ರೖೆಮಾಸಿಕ ಕಂತಾಗಿ 2,152 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಆದರೆ ಹಳೆಯ ಬಾಕಿ ಹಾಗೆಯೇ ಉಳಿದಿದೆ.
ನಷ್ಟದಲ್ಲಿರುವ ಎಸ್ಕಾಂಗಳು:ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೊರತುಪಡಿಸಿದರೆ, ಮಂಗಳೂರು (ಮೆಸ್ಕಾಂ), ಗುಲ್ಬರ್ಗಾ (ಜೆಸ್ಕಾಂ), ಚಾಮುಂಡೇಶ್ವರಿ (ಸೆಸ್ಕ್) ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ನಷ್ಟದಲ್ಲಿವೆ. ಎಸ್ಕಾಂಗಳಿಗೆ ಸ್ಥಳೀಯ ಸಂಸ್ಥೆಗಳಿಂದಲೇ ಹೆಚ್ಚು ಹಣ ಬರಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿ ಗಮನ ಸೆಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಹೆಚ್ಚುತ್ತಿರುವ ಸಾಲದ ಬಡ್ಡಿ:ವಿದ್ಯುತ್ ಉತ್ಪಾದಿಸಿ 6 ದಶಕಗಳಿಂದಲೂ ನಾಡು ಬೆಳಗಿಸುತ್ತ ಬಂದಿರುವ ಕೆಪಿಸಿ ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲದ ಮೇಲಿನ ಬಡ್ಡಿ ಬೆಳೆಯುತ್ತಲೇ ಇದೆ. ಬಾಂಡ್​ಗಳ ಮೂಲಕ ಹಣ ಸಂಗ್ರಹಿಸಿ ಸಾಲ ತೀರಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ಅರ್ಧಕ್ಕೆ ನಿಂತಿವೆ. ಇದೇ ರೀತಿಯಲ್ಲಿ ನಿಗಮ ನಷ್ಟದಲ್ಲಿಯೇ ಮುಂದುವರಿದರೆ ಮುಂದೆ ಖಾಸಗೀಕರಣದ ಅಪಾಯ ಎದುರಾದರೂ ಅಚ್ಚರಿಯೇನಿಲ್ಲ.
ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ಸೋತಿದ್ದಕ್ಕೆ ಬೇಜಾರಾಗಿ ಸತ್ತ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
