ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ಕಸರತ್ತು ನಡೆಸಿರುವಾಗಲೇ ರಾಜ್ಯದ ಮುಖಂಡರಿಂದ ಇನ್ನಿಲ್ಲದ ಒತ್ತಡತಂತ್ರ ಶುರುವಾಗಿದ್ದು, ದೆಹಲಿಯಲ್ಲಿ ಬಲಾಬಲ ತುಲನೆ ಆರಂಭವಾಗಿದೆ. ಆಯ್ಕೆ ವಿಚಾರದಲ್ಲಿ ಸ್ಪಷ್ಟ ಗೆರೆ ಎಳೆದಂತೆ ‘ಸಿದ್ದರಾಮಯ್ಯ ಬಣ’ ಹಾಗೂ ‘ಇತರರು’ ಎಂಬಂತೆ ಗುಂಪು ರಚನೆಯಾಗಿದ್ದು, ಈ ಬೆಳವಣಿಗೆ ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ.
ಎಂ.ಬಿ.ಪಾಟೀಲ್ ಪರ ನಡೆದಿರುವ ಗುಂಪು ಲಾಬಿ ಬಗ್ಗೆ ಪಕ್ಷದಲ್ಲಿ ಅಪಸ್ವರ ಕೇಳಿಬಂದಿದ್ದು, ಈ ರೀತಿ ಒತ್ತಡ ಉಪಯೋಗವಾಗಲ್ಲ ಎಂದು ದೆಹಲಿ ನಾಯಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆಂಬ ಮಾಹಿತಿಯೂ ಲಭಿಸಿದೆ. ಯಾರಿಗೆ ಪಟ್ಟ ಕಟ್ಟಬೇಕೆಂದು ವರಿಷ್ಠರು ಮತ್ತೆಮತ್ತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದು, ಎರಡು ಬಣಗಳಾಗಿರುವ ಕಾರಣ ಸ್ಪಷ್ಟ ತೀರ್ವನಕ್ಕೆ ಬರಲು ಸಾಧ್ಯವಾಗಿಲ್ಲ. ಜಾತಿ ಲೆಕ್ಕಾಚಾರದಲ್ಲಿ ಲಾಭವಾಗುವಂತಹ, ಹಣಕಾಸಿನ ಪರಿಸ್ಥಿತಿ ನಿಭಾಯಿಸಲು ಸಾಮರ್ಥ್ಯ ಇರುವ, ಪ್ರಭಾವಿ ಎನಿಸಿಕೊಂಡ ಪಕ್ಷ ನಿಷ್ಠರನ್ನು ಆಯ್ಕೆ ಮಾಡಲು ಪಕ್ಷ ಆಸಕ್ತಿ ತೋರಿಸಿದೆ. ಇದನ್ನರಿತ ಎರಡೂ ಬಣಗಳು ತಮ್ಮ ಅಪೇಕ್ಷೆಗಳನ್ನು ಮುಂದಿಟ್ಟಿವೆ.
ಸಿದ್ದರಾಮಯ್ಯ ಬಣದಿಂದ ಎಂ.ಬಿ.ಪಾಟೀಲ್ ಹೆಸರು ಮುಂಚೂಣಿಗೆ ತಂದರೆ, ಉಳಿದ ಹಿರಿಯರೆಲ್ಲರೂ ಡಿ.ಕೆ.ಶಿವಕುಮಾರ್ ಬಗ್ಗೆಯೇ ಒಲವು ತೋರಿದ್ದಾರೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್ ಸೇರಿ ಹಲವು ನಾಯಕರು ದೆಹಲಿಗೆ ಬಂದು ಖಚಿತ ಅಭಿಪ್ರಾಯ ತಿಳಿಸಿ ಹೋಗಿದ್ದಾರೆ. ಹೀಗಾಗಿ ಹೈಕಮಾಂಡ್ ಇವರಿಬ್ಬರ ನಾಯಕರ ನಡುವಿನ ಸಾಮ್ಯತೆಯನ್ನು ಲೆಕ್ಕ ಹಾಕಲಾರಂಭಿಸಿದೆ. ಒಂದು ವೇಳೆ ಇಬ್ಬರಲ್ಲಿ ಯಾರನ್ನೇ ಆಯ್ಕೆ ಮಾಡಿದರೂ ಮತ್ತೊಂಡು ತಂಡ ಮಾಡುವ ಹಾನಿಯನ್ನು ಅರಿತು, ಹಿರಿಯ ನಾಯಕರು ಎಚ್ಚರಿಕೆ ಹೆಜ್ಜೆ ಇಟ್ಟು ಆಯ್ಕೆ ಬಗ್ಗೆ ಒಂದು ಸಣ್ಣ ಸುಳಿವೂ ಹೊರಬರದಂತೆ ನೋಡಿಕೊಂಡಿದ್ದಾರೆ. ‘ಪಕ್ಷ ಸೂಕ್ತ ತೀರ್ಮಾನ ಮಾಡುತ್ತದೆ, ಅದನ್ನು ನೀವು ಒಪ್ಪಿಕೊಳ್ಳಿ’ ಎಂದು ತಮ್ಮ ಬಳಿ ಬಂದ ಎಲ್ಲರಿಗೂ ಹೇಳಿಕಳಿಸಿರುವುದು ವಿಶೇಷವಾಗಿದೆ. ಮುಖ್ಯವಾಗಿ ರಾಜ್ಯದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದ ಹಿರಿಯ ನಾಯಕ ಮಧುಸೂಧನ್ ಮಿಸ್ತ್ರಿ, ಹೈಕಮಾಂಡ್​ಗೆ ವರದಿ ನೀಡಿದ್ದರು. ಈ ವರದಿಯನ್ನೇ ಗಟ್ಟಿಯಾಗಿ ನಂಬಿಕೊಂಡಿರುವ ಹೈಕಮಾಂಡ್, ಆ ಆಧಾರದಲ್ಲೇ ದಾಳ ಉರುಳಿಸುತ್ತಿದೆ. ಎರಡೂ ಬಣಗಳ ಪೈಕಿ ಒಮ್ಮತ ಮೂಡದೆ ಹೋದರೆ ‘ಪ್ಲಾ್ಯನ್ ಬಿ’ ಪ್ರಕಾರ ಎರಡೂ ಬಣಗಳೊಂದಿಗೆ ಹೊಂದಿಕೊಂಡು ಹೋಗಬಹುದಾದ ನ್ಯೂಟ್ರಲ್ ಆದಂಥ ಪ್ರಮುಖ ನಾಯಕರೊಬ್ಬರಿಗೆ ಪಟ್ಟ ಕಟ್ಟಲಾಗುತ್ತದೆ. ಇದನ್ನೂ ಮಿಸ್ತ್ರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ. ಹೇಗಿದ್ದರೂ ಸದ್ಯಕ್ಕೆ ಚುನಾವಣೆಗಳಿಲ್ಲ, ಈ ಕಾರಣಕ್ಕೆ ತಾತ್ಕಾಲಿಕವಾಗಿ ಎರಡೂವರೆ ವರ್ಷ ಒಬ್ಬರಿಗೆ ಜವಾಬ್ದಾರಿ ನೀಡಿ, ಚುನಾವಣೆಗೆ ಆರು ತಿಂಗಳಿರುವಾಗ ಪರಿಸ್ಥಿತಿ ನೋಡಿಕೊಂಡು ಸಮರ್ಥರನ್ನು ಆಯ್ಕೆ ಮಾಡುವ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿದೆ ಎಂದು ತಿಳಿದುಬಂದಿದೆ.
ಆಯ್ಕೆಗೆ ತಡ ಬೇಡ
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಹಳ ದಿನ ಖಾಲಿ ಬಿಡಬಾರದು. ಹೈಕಮಾಂಡ್ ಶೀಘ್ರವೇ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ನಾನಂತೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ಅದನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ. ಹೈಕಮಾಂಡ್ ಯಾರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದರೂ ಅದನ್ನು ಒಪ್ಪಿ ಸಂಪೂರ್ಣ ಸಹಕಾರ ಕೊಟ್ಟು ಕೆಲಸ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಎಂಬಿಪಿ v/s ಡಿಕೆಶಿ
ನವದೆಹಲಿ: ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್​ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸಿದ್ದರಾಮಯ್ಯ ಮತ್ತವರ ಆಪ್ತರು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಕಡೆಗಣಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬುದೇ ಹೈಕಮಾಂಡ್​ಗೆ ತಲೆ ನೋವಿನ ವಿಷಯವಾಗಿ ಕಾಡುತ್ತಿದೆ. ಏತನ್ಮಧ್ಯೆ, ಅಧ್ಯಕ್ಷರು ಯಾರೇ ಇರಲಿ. ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ದೆಹಲಿ ನಾಯಕರು ಸ್ಪಷ್ಟ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ. ಜಾತಿ ಸಮೀಕರಣ ಮತ್ತು ಎಲ್ಲರಿಗೂ ಆದ್ಯತೆ ನೀಡಿದ್ದೇವೆ ಎಂಬುದನ್ನು ಸಾರುವ ಉದ್ದೇಶ ಇದರ ಹಿಂದಿದೆ. ಡಿ.ಕೆ.ಶಿವಕುಮಾರ್​ರನ್ನು ಅಧ್ಯಕ್ಷರನ್ನಾಗಿ ಮಾಡಿದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಲ್ವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬೇಕು. ಎಂ.ಬಿ.ಪಾಟೀಲ್ ಅಧ್ಯಕ್ಷರಾದಲ್ಲಿ ಒಕ್ಕಲಿಗ ಮುಖಂಡರೊಬ್ಬರನ್ನು ಸೇರಿಸಿ ನಾಲ್ವರು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ.
ಸಿದ್ದರಾಮಯ್ಯ ಬಣದ ಎಂ.ಬಿ.ಪಾಟೀಲ್​ರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಮತ್ತೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದಂತಾಗುತ್ತದೆ. ಅಷ್ಟಕ್ಕೂ 2013ರ ವಿಧಾನಸಭಾ ಚುನಾವಣೆ ಬಿಟ್ಟರೆ, ಬೇರೆಲ್ಲ ಚುನಾವಣೆಗಳಲ್ಲಿ ಪಕ್ಷ ಉತ್ತಮ ಎನಿಸುವ ನಿರ್ವಹಣೆ ತೋರಿಲ್ಲ. ಸಿದ್ದರಾಮಯ್ಯ ಮಾತಿಗೆ ಮಣಿದು ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದಲ್ಲ. ಯುವಕರು, ಹೊಸ ಮುಖಗಳಿಗೆ ಆದ್ಯತೆ ನೀಡಿ ಸಂಘಟನೆ ಬಲಗೊಳ್ಳುವಂತೆ ಮಾಡಬೇಕು ಎಂದೂ ಮತ್ತೊಂದು ಬಣ ವರಿಷ್ಠರಿಗೆ ಸಂದೇಶ ರವಾನಿಸಿದೆ. ಬುಧವಾರ ಸಂಜೆ ರಾಹುಲ್ ಗಾಂಧಿ ಭೇಟಿ ವೇಳೆಯೂ ಎಂಬಿಪಿ ಹೆಸರನ್ನು ಮುಂದಿಟ್ಟ ಸಿದ್ದರಾಮಯ್ಯ, ಸಂಘಟನೆ ಬಲಗೊಳ್ಳಲು ಹಣಕಾಸಿನ ಕ್ರೋಡೀ ಕರಣವೂ ಮುಖ್ಯ. ಎಂಬಿಪಿ ಇದ್ದರೆ ಆರ್ಥಿಕ ಸಮಸ್ಯೆಯಾಗದು. ಡಿಕೆಶಿ ಕೂಡ ಈ ವಿಷಯದಲ್ಲಿ ಪ್ರಬಲರಾಗಿದ್ದರೂ ಅವರ ಮೇಲಿನ ಕೇಸುಗಳು ಪಕ್ಷಕ್ಕೆ ಹಾನಿಯುಂಟು ಮಾಡಬಲ್ಲವು. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದ್ದಾರೆನ್ನಲಾಗಿದೆ.
ಬೆಂಗ್ಳೂರಿನಿಂದಲೇ ಬ್ಯಾಟಿಂಗ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನವದೆಹಲಿಯಲ್ಲಿ ಲಾಬಿ ನಡೆಯುತ್ತಿರುವ ಹೊತ್ತಿನಲ್ಲಿ, ಆ ಹುದ್ದೆಯ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಬೆಂಗಳೂರು ಬಿಟ್ಟು ಕದಲಿಲ್ಲ. ತಾವಿದ್ದಲ್ಲಿಂದಲೇ ದೆಹಲಿ ಬೆಳವಣಿಗೆಯ ಇಂಚಿಂಚೂ ಮಾಹಿತಿ ಪಡೆಯುತ್ತಿರುವ ಅವರು ಹೈಕಮಾಂಡ್ ಕರೆಗೆ ಕಾಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಪಕ್ಷದ ಬೆಳವಣಿಗೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ‘ರಾಜಕಾರಣ ಮಾಡೋರು ಮಾಡ್ಕೊಂಡಿರಲಿ, ಹೊಲ ಉತ್ಕೊಂಡು, ಹಸು-ದನ-ಕರು ನೋಡ್ಕೊಂಡು ನಾನ್ ಪಾಡಿಗೆ ನಾನಿರ್ತೀನಿ’ ಎಂದು ಮಾರ್ವಿುಕವಾಗಿ ಹೇಳಿದರು. ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ಎಂ.ಬಿ.ಪಾಟೀಲ್ ಪರ ಸಿದ್ದರಾಮಯ್ಯ ಲಾಬಿ ನಡೆಸುತ್ತಿರುವುದರ ಬೆನ್ನಲ್ಲೇ ಶಿವಕುಮಾರ್ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ನಾನಂತೂ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ರಾಜಕಾರಣ ಮಾಡಿಕೊಳ್ಳೂವವರು ಮಾಡಿಕೊಳ್ಳಲಿ ಎಂದರು. ಶೀಘ್ರವೇ ಕೆಪಿಸಿಸಿಗೆ ನೇಮಕ ಮಾಡಬೇಕೆಂಬ ದಿನೇಶ್ ಗುಂಡೂರಾವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ದಿನೇಶ್ ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ. ಸದ್ಯಕ್ಕೆ ಅವರ ಸ್ಥಾನ ಖಾಲಿ ಇಲ್ಲ. ಅವರಅಭಿಪ್ರಾಯವನ್ನು ಹೈಕಮಾಂಡ್ ಬಳಿಯೂ ಚರ್ಚೆ ಮಾಡಲಿ ಎಂದು ಹೇಳಿದರು.
ಕೃಷ್ಣ ಭೇಟಿ ರಾಜಕೀಯವಲ್ಲ
ಸಂಕ್ರಾಂತಿ ಹಬ್ಬದ ದಿನವಾದ ಬುಧವಾರ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಒಂದಷ್ಟು ಚರ್ಚೆಗೆ ಕಾರಣ ವಾಯಿತು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುವಾಗ ಈ ಭೇಟಿ ಕುತೂಹಲವನ್ನೂ ಹುಟ್ಟು ಹಾಕಿದೆ. ಆದರೆ ಈ ಭೇಟಿ ಹಿಂದೆ ರಾಜಕೀಯವಿಲ್ಲ. ಹಬ್ಬದ ಹಿನ್ನೆಲೆ ಇದು ವೈಯಕ್ತಿಕ ಭೇಟಿ ಎಂದು ಸ್ಪಷ್ಟಪಡಿಸಿದರು. ನನ್ನ ಮತ್ತು ಕೃಷ್ಣ ನಡುವಿನ ಸಂಬಂಧ ಎಲ್ಲರಿಗೂ ಗೊತ್ತಿದೆ ಎಂದರು. ಕೃಷ್ಣ ಭೇಟಿಗೂ ಮುನ್ನ ತಮ್ಮ ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದರು.
ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಆಗಲಿದೆ ಎಂದು ನನಗನಿಸುತ್ತದೆ. ಕಾರ್ಯಾಧ್ಯಕ್ಷರನ್ನೂ ನೇಮಿಸಲಾಗುವುದು. ಆದರೆ, ಎಷ್ಟು ಮಂದಿ ಎಂಬ ಬಗ್ಗೆ ಮಾಹಿತಿ ಇಲ್ಲ.
| ಸಿದ್ದರಾಮಯ್ಯ ಮಾಜಿ ಸಿಎಂ
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ವರಿಷ್ಠರಿಗೆ ಪ್ರತಿಯೊಂದು ಮಾಹಿತಿಯೂ ಇದೆ. 4-5 ದಿನದಲ್ಲಿ ತೀರ್ಮಾನ ಹೊರಬೀಳಲಿದೆ. ಪಕ್ಷ ಮುನ್ನಡೆಸಬಲ್ಲ ಯಾರಿಗೆ ಅವಕಾಶ ನೀಡಿದರೂ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಪಕ್ಷದ ಪ್ರಬಲ ನಾಯಕರಿದ್ದು, ಎಲ್ಲವನ್ನೂ ತಿಳಿದುಕೊಂಡು ಪ್ರಸ್ತಾವನೆ ಸಲ್ಲಿಸುತ್ತಾರೆ.
| ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ (ಸಿದ್ಧಗಂಗಾ ಮಠದಲ್ಲಿ)
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಹೈಕಮಾಂಡ್​ಗೆ ಬಿಟ್ಟದ್ದು. ಪಕ್ಷ ಬಯಸಿದರೆ ನಾನು ಯಾವುದೇ ಹುದ್ದೆ ಸ್ವೀಕರಿಸಲು ಸಿದ್ಧ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಾದ ಕೂಡಲೇ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಬಲವರ್ಧನೆ ನಡೆಸುವ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಲಾಗುವುದು.
| ಡಾ.ಜಿ.ಪರಮೇಶ್ವರ್ ಮಾಜಿ ಉಪಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
