ಬೆಂಗಳೂರು:ಅತಂತ್ರವಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತಷ್ಟು ಗೊಂದಲಕ್ಕೆ ಸಿಲುಕಿದೆ. ಈ ನಡುವೆ, ರಾಜ್ಯ ನಾಯಕರು ಯಾರನ್ನಾದರೂ ನೇಮಕ ಮಾಡಿ ಶೀಘ್ರವೇ ಪ್ರಕಟಿಸಿ ಎಂದು ಒತ್ತಡ ಹೇರಲಾರಂಭಿಸಿದ್ದಾರೆ. ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಕಳೆದ ಜೂ.19ರಂದು ಕೆಪಿಸಿಸಿ ವಿಸರ್ಜನೆಯಾಗಿದೆ, ಈ ಮೂಲಕ ಬರೋಬ್ಬರಿ 400ಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ಜವಾಬ್ದಾರಿಯಿಂದ ಮುಕ್ತಿ ನೀಡಲಾಗಿದೆ. ಈ ಪ್ರಕ್ರಿಯೆ ನಡೆದು ಏಳು ತಿಂಗಳು ಕಳೆದಿದ್ದು, ಉಪಚುನಾವಣೆ ಸೋಲಿನ ಕಾರಣಕ್ಕೆ ಡಿ.9ರಂದು ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟು ತಟಸ್ಥರಾಗಿದ್ದಾರೆ. ಒಂದೂವರೆ ತಿಂಗಳಿಂದ ಸಂಘಟನೆ ದಿಕ್ಕಿಲ್ಲದಂತಾಗಿದ್ದು, ಇನ್ನಷ್ಟು ದಿನ ಅಧ್ಯಕ್ಷರ ನೇಮಕ ತಡವಾದರೆ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ, ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ನಾಯಕತ್ವದ ಕೊರತೆ ಎದುರಾಗುತ್ತದೆ ಎಂದು ರಾಜ್ಯ ನಾಯಕರು ಹೈಕಮಾಂಡ್​ಗೆ ಸಂದೇಶ ಕಳುಹಿಸಿದ್ದಾರೆ.
ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಷ್ಟವಾಗಬಹುದು, ಪದಾಧಿಕಾರಿಗಳು ಇಲ್ಲದಿರುವುದರಿಂದ ಸಂಘಟನೆ ದುರ್ಬಲಗೊಂಡಿದೆ ಎಂದು ಪಕ್ಷದ ನಾಯಕರ ಮುಂದೆ ಹೇಳಿಕೊಂಡಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಗುಲಾಂನಬಿ ಆಜಾದ್ ಅವರಿಗೆ ಇರುವ ವಿಷಯ ತಿಳಿಸಿದ್ದು, ಕೂಡಲೇ ಹೈಕಮಾಂಡ್ ತೀರ್ಮಾನ ಪ್ರಕಟಿಸಲಿ ಎಂದು ಒತ್ತಡ ತಂದಿದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆ, ಕಾರ್ಯಾಧ್ಯಕ್ಷರ ನೇಮಕ, ಪ್ರತಿಪಕ್ಷ-ಶಾಸಕಾಂಗ ನಾಯಕ ಸ್ಥಾನದ ಪ್ರತ್ಯೇಕತೆ ಬಗ್ಗೆ ಒಂದಷ್ಟು ಗೊಂದಲಮಯ ಚರ್ಚೆ ನಡೆದಿದೆ. ಈ ಕಾರಣಕ್ಕೆ ಯಾವುದು ಸರಿ ಯಾವುದು ಸರಿಯಲ್ಲ ಎಂದು ಇನ್ನೊಮ್ಮೆ ತಿಳಿಸಿಕೊಡುವ ಅಗತ್ಯವಿದೆ. ಸಮಯ ನೀಡಿದರೆ ಮತ್ತೆ ದೆಹಲಿಗೆ ಬಂದು ಮಾತನಾಡುತ್ತೇವೆ ಎಂದು ಇಬ್ಬರು ಹಿರಿಯ ನಾಯಕರಿಗೆ ಹೈಕಮಾಂಡ್​ಗೆ
ಕೋರಿದ್ದಾರೆ. ಡಿ.ಕೆ.ಶಿವಕುಮಾರ್​ಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ ಎಂಬ ಸುದ್ದಿ ಬರುತ್ತಿದ್ದಂತೆ ಎದುರಾಳಿ ತಂಡದಿಂದ ನಾಲ್ಕೂ ಕಾರ್ಯಾಧ್ಯಕ್ಷ ಸ್ಥಾನದ ಪ್ರಸ್ತಾಪವಾಗಿತ್ತು. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ-ಶಾಸಕಾಂಗ ಸ್ಥಾನ ಪ್ರತ್ಯೇಕತೆ ದಾಳ ಉರುಳಿತ್ತು. ಹೀಗಾಗಿ ಸಿದ್ದರಾಮಯ್ಯ ಬಣದ ಕೈ ಮೇಲಾಗುತ್ತದೋ? ಹಿರಿಯರ ಬಣದ ಕೈ ಮೇಲಾಗುತ್ತದೋ ಎಂಬ ಚರ್ಚೆ ಆರಂಭವಾಗಿತ್ತು. ಈ ಕಾರಣಕ್ಕೆ ಕಾರ್ಯಾಧ್ಯಕ್ಷರ ಅಗತ್ಯವಿಲ್ಲ, ಶಾಸಕಾಂಗ-ಪ್ರತಿಪಕ್ಷ ನಾಯಕ ಸ್ಥಾನ ಬೇರೆಯಾಗ ಬೇಕೆಂದು ಮತ್ತೆ ಮನವಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸೋನಿಯಾತಂಕ
1 ಸಿದ್ದರಾಮಯ್ಯ ಸಲಹೆಗೆ ಪೂರ್ಣ ಒಪ್ಪಿಗೆ ನೀಡಿದರೆ ಇತರ ಹಿರಿಯ ನಾಯಕರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ.
2 ಸಿದ್ದರಾಮಯ್ಯ ಕಡೆಗಣಿಸಿದರೆ ಪಕ್ಷದೊಂದಿಗಿರುವ ಹಿಂದುಳಿದ ಹಾಗೂ ಅವರೊಂದಿಗೆ ಗುರುತಿಸಿಕೊಂಡಿರುವ ಇತರ ಸಮಾಜಕ್ಕೆ ಬೇರೆ ಸಂದೇಶ ರವಾನೆ.
3 ಎರಡೂ ಬಣವನ್ನು ಮೆಚ್ಚಿಸುವಂತ ಸೂತ್ರ ಸಿಗುತ್ತಿಲ್ಲ. ಒಬ್ಬರನ್ನು ಮೆಚ್ಚಿಸಿದರೆ ಮತ್ತೊಂದು ಬಣ ಮುನಿಸಿಕೊಳ್ಳದೆ ಇರುವುದಿಲ್ಲ. 4 ಒಂದು ತಪ್ಪು ಹೆಜ್ಜೆ ಇಟ್ಟರೆ ಇತರ ರಾಜ್ಯಗಳಲ್ಲಾದಂತೆ ಪಕ್ಷ ಸಂಪೂರ್ಣ ನೆಲಕಚ್ಚುವ ಆತಂಕ. 5 ಎರಡೂ ಬಣಗಳು ಇಟ್ಟಿರುವ ವಾದ ಬಲವಾಗಿದೆ. ಇಬ್ಬರ ವಾದವನ್ನೂ ತಳ್ಳಿಹಾಕುವ ಪರಿಸ್ಥಿತಿ ಇಲ್ಲ.

ಯಾರ ಮೇಲೆ ಕೇಸಿಲ್ಲ ಹೇಳಿ?
ರಾಜಕೀಯದಲ್ಲಿ ಕೇಸ್​ಗಳಿರುವುದು ಸಾಮಾನ್ಯ. ಯಾರ ಮೇಲೆ ಕೇಸ್ ಇಲ್ಲ ಹೇಳಿ? ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಡಿಕೆಶಿ ಮೇಲೆ ಇಡಿ ಕೇಸ್ ಇದೆ, ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂದು ಕೆಲ ನಾಯಕರು ಹೈಕಮಾಂಡ್​ಗೆ ಅಭಿಪ್ರಾಯ ನೀಡಿದ್ದಾರೆ. ಈ ವಿಚಾರವನ್ನು ಪತ್ರಕರ್ತರು ಗಮನಕ್ಕೆ ತಂದಾಗ, ‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಡಿ ಕೇಸ್ ಮಾನದಂಡವಲ್ಲ. ರಾಜಕೀಯದಲ್ಲಿ ಕೇಸ್ ಇಲ್ಲದವರಿಲ್ಲ’ ಎಂದರು. ಬಂಗಾರಪ್ಪ ಸಿಎಂ ಆದ ಕಾಲದಿಂದ ಕುಮಾರಸ್ವಾಮಿ ಸರ್ಕಾರದವರೆಗೂ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ ಎಂದು ಪ್ರಶ್ನಿಸಿದರಲ್ಲದೆ, ಕೇಸ್ ಇರುವವರ ಪಟ್ಟಿ ನೀಡಬೇಕೆ? ಎಂದು ಕೇಳಿದರು.
ಬಹಿರಂಗ ಹೇಳಿಕೆ ಬೇಡ
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತ್ತೀಗೆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆ ನಿಯಂತ್ರಿಸಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದೆಂದು ಮುಖಂಡರಿಗೆ ತಾಕೀತು ಮಾಡಿದ್ದಾರೆ. ನಾಲ್ಕು ಕಾರ್ಯಾಧ್ಯಕ್ಷರ ನೇಮಕ ವಾಗುತ್ತೆ ಅಂತ ಯಾರೂ ಹೇಳಿಲ್ಲ. ಅಧ್ಯಕ್ಷರ ನೇಮಕ ಸಂದರ್ಭ ಕೆಲವರು ಕಾರ್ಯಾಧ್ಯಕ್ಷರ ನೇಮಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರಷ್ಟೇ. ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತೆ ಎಂಬುವುದು ಕೆಲವರ ಅಭಿಪ್ರಾಯ. ಮಾಡಬೇಕೇ? ಬೇಡವೇ? ಮಾಡುವುದಾದರೆ ಎಷ್ಟು ಮಂದಿ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ದಿನೇಶ್ ಹೇಳಿದರು.
ನಾನು ಕೆಪಿಸಿಸಿ ಅಧ್ಯಕ್ಷನಾಗಲ್ಲ
ನಾನು ಕೆಪಿಸಿಸಿ ಅಧ್ಯಕ್ಷನಾಗಲ್ಲ, ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಊಹಾಪೋಹವಷ್ಟೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. ನಾನು ಅಧ್ಯಕ್ಷನಾಗಬೇಕೆಂದು ಯಾರೂ ಒತ್ತಡ ಹೇರಿಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಲಿದೆ. ಯಾರನ್ನು ಆಯ್ಕೆ ಮಾಡಲಾಗುತ್ತದೆಂಬ ಬಗ್ಗೆ ನಂಗೇನೂ ಹೇಳಿಲ್ಲ, ಅವರು ಹೇಳಿದ ಮೇಲೆ ಗೊತ್ತಾಗಲಿದೆ ಎಂದರು.
ಮೂಲ, ವಲಸಿಗ ಕಾಂಗ್ರೆಸ್ ಅಂತ ಹೇಳುವವರು ಮೂರ್ಖರು. ಯಾವನೇ ಹೇಳಲಿ ಅದು ಸ್ವಾರ್ಥಕ್ಕೋಸ್ಕರ. ಕೆಲವರನ್ನ ಬಿಟ್ಟು ಬಹುತೇಕ ಎಲ್ಲರೂ ಒಂದಲ್ಲ ಒಂದು ಕಡೆ ಓಡಾಡಿದವರೇ.. ಯಾರೂ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಲ್ಲ.
| ಕೆ.ಎನ್.ರಾಜಣ್ಣ ಮಾಜಿ ಶಾಸಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 8 =
Remember me
