| ದೇವರಾಜ್ ಕನಕಪುರ ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಬಹುತೇಕ ಪರೀಕ್ಷೆಗಳಲ್ಲಿ ಅಲ್ಲಿನ ಅಧಿಕಾರಿಗಳೇ ‘ಪ್ಯಾಕೇಜ್ ಡೀಲಿಂಗ್’ ನಡೆಸುತ್ತಾರೆಂಬ ವಿಚಾರ ಬಯಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹಿಡಿದು ನೇಮಕಾತಿ ಆದೇಶ ಕೈ ಸೇರುವವರೆಗೂ ಒಪ್ಪಂದ ಆಗುತ್ತದೆ. ಒಂದಾದ ಮೇಲೊಂದು ಹಗರಣಗಳು ಬಹಿರಂಗಗೊಳ್ಳುವ ಮುಖಾಂತರ ಕೆಪಿಎಸ್ಸಿ ಮೇಲಿನ ಅಭ್ಯರ್ಥಿಗಳ ನಂಬಿಕೆ ಸುಳ್ಳಾಗುತ್ತಿದೆ.
ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತ ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿಗೆ ಸೇರಿ, ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಆದರೆ, ಅವ್ಯವಹಾರದಿಂದಾಗಿ ದುಡ್ಡಿದ್ದವರಿಗೆ ಮಾತ್ರ ಸರ್ಕಾರಿ ಕೆಲಸ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಎಫ್​ಡಿಎ ಹುದ್ದೆಗೆ 15-25 ಲಕ್ಷ ರೂ.:ಏಜೆಂಟ್​ಗಳ ಮುಖಾಂತರ ಕೆಪಿಎಸ್ಸಿ ಅಧಿಕಾರಿಗಳೇ ಡೀಲ್ ಕುದುರಿಸುತ್ತಾರೆ. ಎಫ್​ಡಿಎ ಹುದ್ದೆಗೆ ಸಾಮಾನ್ಯವಾಗಿ 15 ಲಕ್ಷದಿಂದ 25 ಲಕ್ಷ ರೂ.ವರೆಗೆ ದರ ನಿಗದಿಯಾಗಿದೆ. ಡೀಲ್ ಆರಂಭದಲ್ಲಿ ಒಟ್ಟಾರೆ ಒಪ್ಪಂದದ ಕನಿಷ್ಠ ಶೇ.75 ಹಣವನ್ನು ಅಭ್ಯರ್ಥಿಗಳು ಕೊಡಬೇಕು. ಪರೀಕ್ಷೆ ಹಿಂದಿನ ದಿನ ಹಣ ಕೊಟ್ಟ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಕಾರಿನಲ್ಲಿ ಕರೆದುಕೊಂಡು ಪ್ರತ್ಯೇಕ ಮನೆ ಅಥವಾ ರೂಂಗೆ ಕರೆತರುತ್ತಾರೆ. ಈ ವೇಳೆ ಅಭ್ಯರ್ಥಿಯ ಬಳಿ ಮೊಬೈಲ್ ಫೋನ್, ರೆಕಾರ್ಡರ್ ಯಾವುದೂ ಇಲ್ಲವೆಂದು ಖಚಿತ ಪಡಿಸಿಕೊಳ್ಳುತ್ತಾರೆ. ಪ್ರಶ್ನೆಪತ್ರಿಕೆಗೆ ಮೊದಲೇ ಕೀ-ಉತ್ತರಗಳನ್ನು ತರುವ ಏಜೆಂಟರು ಎರಡು-ಮೂರು ಬಾರಿ ಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದನ್ನು ಅಭ್ಯರ್ಥಿಗಳಿಗೆ ಮನದಟ್ಟು ಮಾಡಿಸುತ್ತಾರೆ. ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆಯ ಶ್ರೇಣಿ ಬದಲಾಗುವುದರಿಂದ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕೆಂದು ಮೊದಲೇ ಸೂಚಿಸಿ ಕೀ-ಉತ್ತರಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಂತೆ ಸೂಚಿಸುತ್ತಾರೆ.
ಆನಂತರ ವಿದ್ಯಾರ್ಥಿಗಳು ಮರುದಿನ ಪರೀಕ್ಷೆಯಲ್ಲಿ ಉತ್ತರ ಬರೆಯಬೇಕು. ಅದೇ ಪ್ರಶ್ನೆಗಳು ಬಂದಿವೆ ಎಂಬುದು ಖಚಿತವಾದ ತಕ್ಷಣ ಅಭ್ಯರ್ಥಿಗಳು ಉಳಿದ ಶೇ. 25 ಹಣ ನೀಡಬೇಕಾಗುತ್ತದೆ. ಹಣದ ವ್ಯವಹಾರ ನಗದು ರೂಪದಲ್ಲಿ ಮಾತ್ರವೇ ನಡೆಯುತ್ತದೆ.
ಪ್ರಶ್ನೆಪತ್ರಿಕೆ ಸೋರಿಕೆ ಏಕೆ?:ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಯಾವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯೂ ಈವರೆಗೆ ಸೋರಿಕೆ ಆಗಿಲ್ಲ. ಕೆಪಿಎಸ್ಸಿ ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳೇ ಸೋರಿಕೆ ಏಕೆಂಬ ಪ್ರಶ್ನೆ ಕಾಡುತ್ತದೆ. ಕೇವಲ ಸಿಇಟಿಗಾಗಿ ಅರಂಭವಾದ ಕೆಇಎ ತದನಂತರದಲ್ಲಿ ಸರ್ಕಾರಿ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳ ಭರ್ತಿ ಜವಾಬ್ದಾರಿ ನಿರ್ವಹಿಸುತ್ತಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ, ಪಿಯು ಉಪನ್ಯಾಸಕ, ಬಿಎಂಆರ್​ಸಿಎಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಸೇರಿ 30ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಇಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಿದ್ದು, ಪರೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಕೆಇಎ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ಮುದ್ರಿಸಿ ನೀಡುವವರೆಗೂ ಕಾರ್ಯನಿರ್ವಾಹಕ ನಿರ್ದೇಶಕರು ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಪ್ರಶ್ನೆಪತ್ರಿಕೆ ಸಾಗಿಸುವ ಪ್ರತಿ ವಾಹನಕ್ಕೂ ಸಿಸಿ ಕ್ಯಾಮೆರಾ, ಜಿಪಿಎಸ್ ಅಳವಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆ ಮುದ್ರಣ ಮಾಡುವವರು ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳವುದಕ್ಕಾಗಿಯೇ ಮುದ್ರಣದ ವೆಚ್ಚವನ್ನು ಹೆಚ್ಚು ನಿಗದಿ ಮಾಡಿರುತ್ತಾರೆ. ಹೊರ ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಮುದ್ರಣವಾಗುತ್ತದೆ. ಇದೇ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೆಪಿಎಸ್ಸಿ ಕೂಡ ಪಾಲಿಸಬೇಕು. ಇಲ್ಲವಾದರೆ ಎಲ್ಲ ಪರೀಕ್ಷೆಗಳ ಹೊಣೆಯನ್ನು ಕೆಇಎಗೆ ವಹಿಸಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ.
ತರಬೇತಿ ಕೇಂದ್ರಗಳ ಮೇಲೂ ಶಂಕೆ
ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪ್ರಶ್ನೆಪತ್ರಿಕೆಗಳು ಸೋರಿಕೆಯಾದಾಗ ಟ್ಯೂಷನ್ ಕೇಂದ್ರಗಳ ಮೇಲೆ ಅನುಮಾನ ಪಡಲಾಗುತ್ತದೆ. ಇದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾದಾಗ ಮೊದಲಿಗೆ ತರಬೇತಿ ಕೇಂದ್ರಗಳ ಮೇಲೆ ಅನುಮಾನ ಮೂಡುತ್ತದೆ. ಈ ಹಿಂದೆ ಕೆಲವು ಕೆಎಎಸ್ ನಂತಹ ಪ್ರಶ್ನೆಪತ್ರಿಕೆಗಳು ಸೋರಿಕೆಯಾದಾಗ ಕೆಲವು ಪ್ರತಿಷ್ಠಿತ ತರಬೇತಿ ಕೇಂದ್ರಗಳ ಮುಖ್ಯಸ್ಥರು ಇದರಲ್ಲಿ ಶಾಮೀಲಾಗಿರುವುದು ಬಯಲಾಗಿತ್ತು.
ಉತ್ತರ ಖಾಲಿ ಬಿಡಿ, ಅವರೇ ಬರೀತಾರೆ!
ಪ್ರಶ್ನೆಪತ್ರಿಕೆ ಸಿಕ್ಕರೂ ಸಹ ಉತ್ತರಗಳನ್ನು ನೆನೆಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯುವುದು ಕೆಲ ಅಭ್ಯರ್ಥಿಗಳಿಗೆ ಸವಾಲಿನ ಪ್ರಶ್ನೆ. ಅಂತಹ ಅಭ್ಯರ್ಥಿಗಳನ್ನು ಡೀಲ್-2ಗೆ ಒಪ್ಪಿಸುತ್ತಾರೆ. ಈ ಡೀಲ್​ಗೆ ಸ್ವಲ್ಪ ಹೆಚ್ಚಿನ ಹಣ ಪಾವತಿಸಬೇಕಿರುತ್ತದೆ. ಹಣ ಪಡೆದ ಮೇಲೆ ಏಜೆಂಟರು ಅಭ್ಯರ್ಥಿಗಳಿಗೆ ಮೊದಲೇ ಯಾವ ಪೆನ್ ಬಳಕೆ ಮಾಡಬೇಕೆಂದು ಸೂಚಿಸುತ್ತಾರೆ. ಅದೇ ಕಂಪನಿಯ ಪೆನ್​ಗಳನ್ನು ಏಜೆಂಟ್​ಗಳು ಹೊಂದಿರುತ್ತಾರೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯಾಗಿರುವುದರಿಂದ ಯಾವುದೇ ಅನುಮಾನವಿಲ್ಲದಂತೆಯೇ ಉತ್ತರ ಪತ್ರಿಕೆಯಲ್ಲಿ ಬೇರೊಬ್ಬರು ಭರ್ತಿ ಮಾಡಬಹುದಾಗಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನೀಡುವ ಉತ್ತರ ಪತ್ರಿಕೆಯ ಒಎಂಆರ್ ಶೀಟ್​ನಲ್ಲಿ ಸಹಿ ಮಾಡಿ ಶೇ.100 ಉತ್ತರ ಗೊತ್ತಿರುವುದನ್ನು ಮಾತ್ರ ಶೇಡ್ ಮಾಡಿದರೆ ಸಾಕು. ಉಳಿದವನ್ನು ಹಾಗೇ ಖಾಲಿ ಬಿಟ್ಟು ಬಂದಲ್ಲಿ ಏಜೆಂಟ್​ಗಳು ಅದನ್ನು ಭರ್ತಿ ಮಾಡುತ್ತಾರೆ. ಮೂಲಗಳ ಮಾಹಿತಿ ಪ್ರಕಾರ ಪರೀಕ್ಷಾ ಕೇಂದ್ರದಲ್ಲೇ ಉತ್ತರ ಪತ್ರಿಕೆಗಳು ಬಂಡಲ್ ಆಗಿ ಗಾಡಿಗೆ ಲೋಡ್ ಆಗುವ ಮೊದಲೇ ಬರೆಯುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 7 =
Remember me
