ಬೆಂಗಳೂರು:ರಾಜ್ಯದಲ್ಲಿ ಸಹಕಾರ ಕ್ಷೇತ್ರವನ್ನು ದೇಶದಲ್ಲಿಯೇ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಮೊದಲ ಹಂತದಲ್ಲಿ ಪ್ರತಿ ತಾಲೂಕಿಗೊಂದರಂತೆ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳ ನಿಗಮ ಮತ್ತು ಸಹಕಾರ ಇಲಾಖೆ ಸಹಭಾಗಿತ್ವದಲ್ಲಿ ಕೆಂಗೇರಿಯ ಗಣೇಶ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದಲೇ 36 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ನಡೆಯುತ್ತದೆ. ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ದೊರೆಯುವಂತೆ ಮಾಡಲು ಕೆಎಂಎಫ್​ನೊಂದಿಗೆ ಜಂಟಿಯಾಗಿ ತಾಲೂಕಿಗೊಂದು ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಕೆಎಂಎಫ್ 260 ಕೋಟಿ ರೂ. ಹಾಗೂ ಸರ್ಕಾರ 100 ಕೋಟಿ ರೂ. ಬಂಡವಾಳ ಹೂಡಲಿವೆ. ಶೀಘ್ರ ಬ್ಯಾಂಕ್ ಸ್ಥಾಪನೆಗೆ ಕಾರ್ಯಾದೇಶ ನೀಡಲಾಗುವುದು. ರೈತರು ಉತ್ಪಾದಿಸುವ ಹಾಲಿಗೆ ಸರ್ಕಾರ ತಲಾ ಲೀಟರ್​ಗೆ 5 ರೂ. ಪ್ರೋತ್ಸಾಹಧನ ನೀಡಲು 1,250 ಕೋಟಿ ರೂ. ನೀಡಲಾಗಿದೆ. ಇದನ್ನು 2022-23ನೇ ಸಾಲಿನಲ್ಲಿ 1,450 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದರು.
ರಾಜ್ಯದ ಆರ್ಥಿಕತೆಗೆ ಶೇ.30 ಜನರು ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದ ಶೇ.70 ಜನರು ತಮ್ಮ ಜೀವನ ನಿರ್ವಹಣೆಗೆ ಮಾತ್ರ ದುಡಿಯುತ್ತಿದ್ದಾರೆ. ಹೀಗಾಗಿ ಮಹಿಳೆಯರೂ ಆರ್ಥಿಕತೆಗೆ ಕೊಡುಗೆ ನೀಡುವಂತೆ ಮಾಡುವ ಉದ್ದೇಶದಿಂದ ಪ್ರತಿ ತಾಲೂಕಿಗೊಂದರಂತೆ ಸರ್ಕಾರದಿಂದಲೇ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತದೆ. ಮಹಿಳೆಯರ ನೋಂದಣಿ ಶುಲ್ಕವನ್ನು ಮೊದಲ ವರ್ಷ ಸರ್ಕಾರವೇ ಭರಿಸಲಿದೆ. ಈ ಮೂಲಕ ಮಹಿಳೆಯರನ್ನು ಯಾವುದಾದರೂ ಉದ್ಯಮದಲ್ಲಿ ತೊಡಗಿಸಿ ಆರ್ಥಿಕತೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಲಾಗುತ್ತದೆ. ರೈತರ ಆರೋಗ್ಯಕ್ಕೆ ವರದಾನವಾಗಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮರು ಜಾರಿಗೊಳಿಸಲು ಸರ್ಕಾರ 300 ಕೋಟಿ ರೂ. ಹಾಗೂ ಉಳುಮೆ ಕಾರ್ಯಗಳಲ್ಲಿ ಇಂಧನ ನೆರವಿಗಾಗಿ 500 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು.
ಕಗ್ಗಲೀಪುರ ಪೊಲೀಸ್ ಠಾಣೆ ಉದ್ಘಾಟನೆ:ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಗ್ಗಲೀಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವರ್ಚುವಲ್ ಮೂಲಕ ಉದ್ಘಾಟಿಸಿದರು. ಜತೆಗೆ 11.5 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ವಿವಿಧೆಡೆ ಇರುವ 4 ಪೊಲೀಸ್ ಠಾಣೆಗಳ ಹೊಸ ಕಟ್ಟಡ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅರಗ ಜ್ಞಾನೇಂದ್ರ, ರಾಜ್ಯದಲ್ಲಿ ಪೊಲೀಸ್ ಠಾಣೆ ನಿರ್ವಣಕ್ಕೆ 200 ಕೋಟಿ ರೂ. ಮತ್ತು 20 ಸಾವಿರ ಪೊಲೀಸರಿಗೆ ವಸತಿ ಮನೆ ಒದಗಿಸಲು 11 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಈ ಹಿಂದೆ ಸಹಕಾರ ಕ್ಷೇತ್ರವೆಂದರೆ ಕೇವಲ ಹುಲ್ಲುಗಾವಲು ಎಂದು ತಿಳಿದಿದ್ದು, ಈಗ ವಿದ್ಯಾವಂತರೂ ಈ ಕ್ಷೇತ್ರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ತಿಳಿಸಿದರು.
ಯಶವಂತಪುರಕ್ಕೆ 402 ಕೋಟಿ ರೂ.:ನನ್ನ ಕಾರ್ಯವೈಖರಿ ಮೇಲೆ ನಂಬಿಕೆಯಿಟ್ಟು 2 ಬಾರಿ ಸಹಕಾರ ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಕ್ಷೇತ್ರಕ್ಕೆ 402 ಕೋಟಿ ರೂ. ಅನುದಾನ ನೀಡಲಾಗಿದ್ದು, 2008ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ 21 ಹಳ್ಳಿಗಳನ್ನು ಅಭಿವೃದ್ಧಿ ಮಾಡಲಾಗುವುದು. 102 ಕೆರೆಗಳನ್ನು ತುಂಬಿಸಲು 167 ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ. ಜತೆಗೆ 91 ಹಳ್ಳಿಗಳಿಗೆ ಮಂಚನಬೆಲೆ ಜಲಾಶಯದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲು 161 ಕೋಟಿ ರೂ. ನೀಡುವ ಭರವಸೆಯಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತು ಪ್ರಸ್ತಾಪ ಮಾಡಿದ ಎಲ್ಲ ಯೋಜನೆಗಳಿಗೂ ಹಿಂದಿನ ಸಿಎಂ ಯಡಿಯೂರಪ್ಪ ಮತ್ತು ಪ್ರಸ್ತುತ ಬಸವರಾಜ ಬೊಮ್ಮಾಯಿ ಭರಪೂರ ಅನುದಾನ ಕೊಟ್ಟಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ರಾಜ್ಯದಲ್ಲಿ ರೈತರ ಅರೋಗ್ಯ ಕಾಪಾಡಲು ಯಶಸ್ವಿನಿ ಯೋಜನೆ ಮರುಜಾರಿಗೆ ಸರ್ಕಾರ 300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಕೂಡಲೆ, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಯೋಜನೆ ಜಾರಿಗೊಳಿಸಲಾಗುವುದು. ಯಶವಂತಪು ರದಲ್ಲಿ 250 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ನಿರ್ವಿುಸಲಾಗುವುದು.
|ಡಾ. ಕೆ. ಸುಧಾಕರ್ಆರೋಗ್ಯ ಸಚಿವ
ರಾಜ್ಯದಲ್ಲಿ ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಮುದ್ರಾಂಕ ಶುಲ್ಕ ವಿನಾಯಿತಿಯನ್ನು ಸಹಕಾರಿ ಸಂಘಕ್ಕೂ ನೀಡಬೇಕು. ಸಹಕಾರ ವಿಷಯದ ಪದವೀಧರರಿಗೆ ಸಹಕಾರಿ ಬ್ಯಾಂಕ್ ಮತ್ತು ಇಲಾಖೆಯಲ್ಲಿ ಉದ್ಯೋಗ ಮೀಸಲು ಕೊಡಬೇಕು. ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು.
|ಜಿ.ಟಿ. ದೇವೇಗೌಡರಾಜ್ಯ ಸಹಕಾರ ಮಹಾಮಂಡಳ ನಿ. ಅಧ್ಯಕ್ಷ
23 ಸಾವಿರ ಕೋಟಿ ರೂ. ಸಾಲ ನೀಡಿಕೆ:ಕೃಷಿ ಕ್ಷೇತ್ರದಲ್ಲಿ ಶೇ.1 ಬೆಳವಣಿಗೆ ಆದಲ್ಲಿ, ಉತ್ಪಾದನಾ ವಲಯದಲ್ಲಿ ಶೇ.4 ಹಾಗೂ ಸೇವಾ ವಲಯದಲ್ಲಿ ಶೇ.11 ಬೆಳವಣಿಗೆ ಆಗಲಿದೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 30 ಲಕ್ಷ ರೈತರಿಗೆ 20,180 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದ್ದು, ಶೀಘ್ರ ಗುರಿ ಪೂರ್ಣಗೊಳ್ಳಲಿದೆ. ಇನ್ನು 2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ. ಶಾಸಕರ ಅನುದಾನದಲ್ಲಿ ಸಹಕಾರಿ ಸಂಘಗಳ ಕಟ್ಟಡಗಳ ನಿರ್ವಣಕ್ಕೆ ಅನುಮತಿ ನೀಡಲಾಗುವುದು. ಸರ್ಕಾರದ ವಿವಿಧ ಇಲಾಖೆಗಳ ಹಣವನ್ನು ಜಿಲ್ಲಾ ಸಹಕಾರಿ ಬ್ಯಾಂಕ್​ಗಳಲ್ಲಿ ಠೇವಣಿ ಇಡಲಾಗುವುದು. ಪಠ್ಯದಲ್ಲಿ ಸಹಕಾರಿ ಕ್ಷೇತ್ರದ ಅಧ್ಯಯನ ವಸ್ತು ಸೇರಿಸುವ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
60 ಸಾಧಕರಿಗೆ ಸಹಕಾರ ರತ್ನ ಪ್ರಶಸ್ತಿ:ರಾಜ್ಯದ 30 ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 60 ಗಣ್ಯರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ವ್ಯಾಪ್ತಿಯಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಮರಣೋತ್ತರವಾಗಿ ಬಂದ ಪ್ರಶಸ್ತಿ ಪಡೆಯಲು ಕುಟುಂಬ ಸದಸ್ಯರು ಹಾಜರಿರದ ಹಿನ್ನೆಲೆಯಲ್ಲಿ ಹಾಗೂ ಮಾಜಿ ಮಂತ್ರಿ ಭೀಮಣ್ಣ ಖಂಡ್ರೆ ಅವರಿಗೆ ಆರೋಗ್ಯ ಸಮಸ್ಯೆ ಕಾರಣದಿಂದ ಅವರಿಬ್ಬರಿಗೂ ಮನೆಗೆ ಹೋಗಿ ಪ್ರಶಸ್ತಿ ತಲುಪಿಸುವುದಾಗಿ ಘೋಷಿಸಲಾಯಿತು. ಮತ್ತೊಂದೆಡೆ ಕರೇಗೌಡ ಸಿದ್ಲಿಂಗಪ್ಪಗೌಡ ಸಣ್ಣಗೌಡ್ರ ಅವರಿಗೂ ಮರಣೋತ್ತರ ಸಹಕಾರ ಪ್ರಶಸ್ತಿ ಒಲಿದಿದ್ದು, ಕುಟುಂಬ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಇನ್ನು ವಿವಿಧ ಸಹಕಾರ ಕ್ಷೇತ್ರದ ವಿಭಾಗದಡಿ ಅರ್ಹ ಫಲಾನುಭವಿಗಳಿಗೆ ಸಾಲ ವಿತರಣಾ ಚೆಕ್​ಗಳನ್ನು ನೀಡಲಾಯಿತು.
ಶೂನ್ಯ ಬಡ್ಡಿ ಸಾಲ ರಾಜ್ಯದ ಹೆಮ್ಮೆ:ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರವೇ ರೈತರಿಗೆ ಸಹಕಾರ ಕ್ಷೇತ್ರದಡಿ ಶೂನ್ಯ ಬಡ್ಡಿದರದ ಸಾಲ ನೀಡಲಾಗುತ್ತಿರುವುದು ಹೆಮ್ಮೆಯಾಗಿದೆ. ಇನ್ನು ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳನ್ನು ಸಹಕಾರ ಕ್ಷೇತ್ರದಿಂದಲೂ ನಡೆಸಲು ವೇದಿಕೆ ಒದಗಿಸಲಾಗುತ್ತಿದೆ. ಪ್ರಪಂಚದಲ್ಲಿ 2010-11ರಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿದ್ದಾಗ ಭಾರತದಲ್ಲಿ ಯಾವುದೇ ಕೆಟ್ಟ ಪರಿಣಾಮ ಬೀರಲಿಲ್ಲ. ಇದಕ್ಕೆ ಕಾರಣ ಮಹಿಳೆಯರು ಮನೆಯಲ್ಲಿ ಕೂಡಿಟ್ಟ ಹಣ ಮತ್ತು ಸಹಕಾರ ಸಂಘಗಳಲ್ಲಿ ಹೂಡಿಕೆ ಮಾಡಿದ ಬಂಡವಾಳವು ದೇಶದ ಕೈ ಹಿಡಿದಿತ್ತು. ಸರ್ಕಾರಕ್ಕೆ ಸಮಾನಾಂತರವಾಗಿ ಜೀವನ ನಡೆಸುವ ಮತ್ತೊಂದು ವೇದಿಕೆಯೆಂದರೆ ಅದು ಸಹಕಾರಿ ಕ್ಷೇತ್ರವಾಗಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.
ಡೀಸೆಲ್ ಬೆಲೆ ಲೀಟರ್​ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?

ಸೈಕ್ಲೋನ್ ಎಫೆಕ್ಟ್​: ಕರಾವಳಿ-ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
