ಬೆಂಗಳೂರು: ಮಾಸ್ಕೂ ಇಲ್ಲ, ಸ್ಯಾನಿಟೈಸರೂ ಇಲ್ಲ. ದೈಹಿಕ ಅಂತರ ಕಾಣಲೇ ಇಲ್ಲ. ಟಿಕೆಟ್ ಎಲ್ಲಿ ತಗೋಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಕರೊನಾ ಭೀತಿ ನಡುವೆ ಜನರ ಪ್ರಯಾಣ ಪ್ರಾರಂಭವಾಯಿತು. ಇದು ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸೇವೆ ಮಂಗಳವಾರ ಪುನರಾರಂಭಗೊಂಡಾಗ ಕಂಡ ದೃಶ್ಯಾವಳಿ.
ಪೂರ್ವಸಿದ್ಧತೆ ಇಲ್ಲದೆ ಬಸ್ ಸೇವೆ ಆರಂಭಿಸಿದ್ದರಿಂದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನರು ಪರದಾಡುವಂತಾಗಿತ್ತು. ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಮೊದಲಿಗೆ ಬಸ್​ಗಳಲ್ಲೇ ಟಿಕೆಟ್ ವಿತರಿಸುತ್ತೇವೆ ಎಂದು ತಿಳಿಸಲಾಗಿತ್ತು. ನಂತರ ಬಸ್ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿ ಟಿಕೆಟ್ ವಿತರಿಸಲಾಯಿತು. ಈ ಗೊಂದಲದಿಂದಾಗಿ ಜನರು ಟಿಕೆಟ್ ಪಡೆಯಲು ಹೈರಾಣಾಗುವಂತಾಗಿತ್ತು.
ಇದನ್ನೂ ಓದಿಜೂನ್​ 1ರಿಂದ ದೇಶದಲ್ಲಿ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ
ಆರೋಗ್ಯ ಸುರಕ್ಷತೆಯೇ ಇಲ್ಲ: ಬಸ್ ಸೇವೆ ಆರಂಭಿಸುವುದಕ್ಕೂ ಮುನ್ನ ಎಲ್ಲರ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತೇವೆ, ಸ್ಯಾನಿಟೈಸರ್ ನೀಡುತ್ತೇವೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುತ್ತೇವೆ ಎಂದು ತಿಳಿಸಲಾಗಿತ್ತು. ಆದರೆ, ಬಸ್ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳಿರಲಿಲ್ಲ. ದೈಹಿಕ ಅಂತರವಿರವೂ ಇರಲಿಲ್ಲ.
ಪ್ರಯಾಣಿಕರಿಲ್ಲದೆ ನಿಲ್ದಾಣ ಭಣಭಣ: ಯಾವೆಲ್ಲ ಜಿಲ್ಲೆಗಳಿಗೆ ಬಸ್ ಸೇವೆ ಇರಲಿದೆ ಎಂಬುದರ ಬಗ್ಗೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಸೋಮವಾರ ತಿಳಿಸಿರಲಿಲ್ಲ. ಸಂಜೆ 7ರೊಳಗೆ ತಲುಪಬಹುದಾದ ಮಾರ್ಗಗಳಲ್ಲಷ್ಟೇ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಹೀಗಾಗಿ ಕೆಲ ಜಿಲ್ಲೆಗಳಿಗೆ ಬಸ್​ಗಳು ಸಿಗದೆ ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಯಿತು. ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯಾಣಿಕರು ಅಧಿಕಾರಿಗಳನ್ನು ಅಂಗಲಾಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಿಗದಿತ ಜಿಲ್ಲೆಗಳಿಗಷ್ಟೇ ಸೇವೆ ನೀಡಿದ್ದರಿಂದ ಮಧ್ಯಾಹ್ನದ ಬಳಿಕ ಪ್ರಯಾಣಿಕರಿಲ್ಲದೆ ಬಸ್​ಗಳು ನಿಂತಲ್ಲೇ ನಿಲ್ಲುವಂತಾಗಿತ್ತು. ಬುಧವಾರದಿಂದ ಕಲಬುರಗಿ, ಯಾದಗಿರಿ, ವಿಜಯಪುರ ಸೇರಿ ರಾಜ್ಯದ 27 ಜಿಲ್ಲೆಗಳಿಗೆ ಸೇವೆ ನೀಡಲಾಗುತ್ತಿದೆ. ಹೀಗೆ ದೂರದ ಜಿಲ್ಲೆಗಳಿಗೆ ಪ್ರಯಾಣಿಸಬೇಕೆಂದವರು ಬೆಳಗ್ಗೆ 7 ಗಂಟೆಗೆ ನಿಲ್ದಾಣಕ್ಕೆ ಬರಬೇಕಿದೆ.
ಇದನ್ನೂ ಓದಿಅಂಫಾನ್ ಎಫೆಕ್ಟ್: ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಭಾರೀ ಮಳೆ
1,535 ಬಸ್​ಗಳ ಸಂಚಾರ: ಮೊದಲ ದಿನ 1,606 ಬಸ್​ಗಳು ಸಂಚಾರ ನಡೆಸಿದವು. ಪ್ರತಿ ಬಸ್​ನಲ್ಲಿ ಗರಿಷ್ಠ 30 ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಸನಕ್ಕೆ ಅತಿಹೆಚ್ಚು 190 ಬಸ್​ಗಳು ಸಂಚರಿಸಿವೆ. ಬೆಳಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ಮೊದಲ ಬಸ್ ಸಂಚರಿಸಿದ್ದು, ಸಂಜೆ 5 ಗಂಟೆಗೆ ತುಮಕೂರಿಗೆ ಹೊರಟ ಬಸ್ ಕೊನೆಯದಾಗಿತ್ತು. ಮೊದಲ ದಿನವೇ 53 ಸಾವಿರಕ್ಕೂ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ.
ಮಕ್ಕಳ ಜತೆ ಫುಟ್​ಪಾತಲ್ಲಿ ಮಹಿಳೆ
ವಿಜಯಪುರಕ್ಕೆ ತೆರಳಲು ಬಂದಿದ್ದ ಶಾರದ ಎಂಬುವವರು ತಮ್ಮ ಮೂವರು ಮಕ್ಕಳೊಂದಿಗೆ ತಮ್ಮಲ್ಲಿದ್ದ ವಸ್ತುಗಳನ್ನೆಲ್ಲ ತುಂಬಿ ಕೊಂಡು ಬಂದಿದ್ದರು. ಆದರೆ, ಬಸ್ ನಿಲ್ದಾಣಕ್ಕೆ ಬಂದ ಮೇಲೆ ವಿಜಯಪುರಕ್ಕೆ ಬಸ್​ಗಳು ಹೋಗುವುದಿಲ್ಲ ಎಂದು ತಿಳಿದು ನಿಲ್ದಾಣದ ಬಳಿಯ ಪಾದಚಾರಿ ಮಾರ್ಗದಲ್ಲಿಯೇ ಉಳಿದರು.
ಸಿಬ್ಬಂದಿಯ ಪರದಾಟ
ಬಸ್ ಸೇವೆಗಾಗಿ ರಾಮನಗರ, ಮೈಸೂರು ಬೆಂಗಳೂರಿಗೆ ಹತ್ತಿರದ ನಗರಗಳಿಂದ ಬಸ್​ಗಳನ್ನು ಕರೆಸಲಾಗಿತ್ತು. ಪ್ರಯಾಣಿಕರನ್ನು ಆ ಬಸ್​ಗಳ ಮೂಲಕ ಕಳುಹಿಸಲು ಯೋಜಿಸಲಾಗಿತ್ತು. ಆದರೆ, ಆ ಮಾರ್ಗಗಳಿಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸದ ಕಾರಣ, ಬಸ್​ಗಳನ್ನು ತಂದಿದ್ದ ಚಾಲಕ-ನಿರ್ವಾಹಕರು ಬೆಂಗಳೂರಿನಲ್ಲೇ ಉಳಿಯುವಂತಾಯಿತು. ಇಲ್ಲಿ ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ಅವರೂ ಪರದಾಡುವಂತಾಯಿತು.
ಇದನ್ನೂ ಓದಿVIDEO ] ಅನಾಹುತಕಾರಿ ಅಂಫಾನ್!
ಪೂಜೆ ಮಾಡಿದ್ರು
55 ದಿನಗಳ ನಂತರ ಬಸ್ ಸೇವೆ ಆರಂಭವಾದ ಹಿನ್ನೆಲೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಪೂಜೆ ಮಾಡಲಾಯಿತು.
ಮುಂಗಡ ಟಿಕೆಟ್ ಕಾಯ್ದಿರಿಸಿ
ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರೇ ಕೆಎಸ್​ಆರ್​ಟಿಸಿ ವೆಬ್​ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಅದರಂತೆ ಮೇ 20ರಂದು ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸಲು 3,760 ಜನರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ.
ತಂದೆ ಮೃತಪಟ್ಟಿದ್ದಾರೆಂದು ಗೋಳಾಟ
ಕಟ್ಟಡ ಕಾರ್ವಿುಕೆ ಲಕ್ಷ್ಮೀ ಎಂಬುವರು ತಂದೆ ತೀರಿಕೊಂಡಿದ್ದಾರೆಂದು ಬಳ್ಳಾರಿಯ ಸಿರಗುಪ್ಪಕ್ಕೆ ತೆರಳಲು ಮೆಜೆಸ್ಟಿಕ್​ಗೆ ಬಂದಿದ್ದರು. ಆದರೆ, ಸಿರಗುಪ್ಪಕ್ಕೆ ಬಸ್ ಸೇವೆ ಇಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದರಿಂದ ತಂದೆಯ ಅಂತಿಮ ದರ್ಶನ ಮಾಡಲು ಆಗುವುದಿಲ್ಲ ಎಂದು ಗೋಳಾಡುತ್ತಿದ್ದರು. ಬಳಿಕ ಅಧಿಕಾರಿಗಳು, ಬಳ್ಳಾರಿಗೆ ತೆರಳಿ ಅಲ್ಲಿಂದ ಸಿರಗುಪ್ಪಕ್ಕೆ ಹೋಗಲು ಸಲಹೆ ನೀಡಿದರು.
ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ನೇತೃತ್ವ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
