| ರಾಜಶೇಖರ ಜೋಗಿನ್ಮನೆ
ಪಂಡಿತ್‌ ಕುಮಾರ ಗಂಧರ್ವ ಅಂದಾಗ ತಕ್ಷಣ ನೆನಪಾಗುವುದು ಅವರದೇ ಆದ ಸಂಗೀತ ಶೈಲಿ. ಅದೊಂದು ರೀತಿಯಲ್ಲಿ ಸಾಂಪ್ರದಾಯಿಕ ನಿರೂಪಣೆಗಳನ್ನು ಮುರಿದು ರೂಪುಗೊಂಡ ಸಂಗೀತ. ಹೆಜ್ಜೆ ಹೆಜ್ಜೆಗೂ ರಾಗದ ಹೊಸ ಮಗ್ಗುಲನ್ನು ತೆರೆದಿಡುತ್ತ ಸಾಗುವ ಆ ಗಾಯನದ ಸವಿಯೇ ಬೇರೆ. ಇದು ಅಂಥ ಮೇರು ಗಾಯಕನ ಜನ್ಮ ಶತಮಾನೋತ್ಸವ ವರ್ಷ. ದೇಶ ಕಂಡ ಈ ಅದ್ಭುತ ಪ್ರತಿಭೆ ಕನ್ನಡದ ನೆಲದಿಂದ ಬಂದುದು ಎನ್ನುವುದು ಕನ್ನಡಿಗರ ಹರ್ಷ.
ಹೌದು, ಕುಮಾರ ಗಂಧರ್ವ ಜನಿಸಿದ್ದು ಬೆಳಗಾವಿ ಜಿಲ್ಲೆ ಸೂಳಿಬಾವಿಯಲ್ಲಿ, 1924ರ ಏ. 8ರಂದು. ಶಿವಪುತ್ರಪ್ಪ ಸಿದ್ದರಾಮಯ್ಯ ಕೊಂಕಾಳಿಮಠ ಎನ್ನುವುದು ಅವರ ನಿಜ ನಾಮಧೇಯ. ಶಿವಪುರಪ್ಪ ಬಾಲಪ್ರತಿಭೆ. ನಾಲ್ಕು ವರ್ಷದಲ್ಲಿರುವಾಗಲೇ ಸಂಗೀತ ದೀಕ್ಷೆ ಪಡೆದರು. ಐದನೇ ವರ್ಷದಲ್ಲಿದ್ದಾಗ ದಾವಣಗೆರೆಯಲ್ಲಿ ಸ್ವತಂತ್ರ ಸಂಗೀತ ಕಛೇರಿ ನೀಡಿದರು. ಆರು ವರ್ಷದವನಿದ್ದಾಗ ಅವರ ಗಾಯನ ಕೇಳಿದ ಗುರುಕಲ್ಮಠದ ಶಾಂತವೀರ ಸ್ವಾಮೀಜಿ ‘ಓಹೋ! ಇವನು ಕುಮಾರ ಗಂಧರ್ವ’ ಎಂದು ಉದ್ಧರಿಸಿದರು. ಮುಂದೆ ಆ ಹೆಸರೇ ಸ್ಥಿರವಾಯಿತು. ಕುಮಾರ ಗಂಧರ್ವರ ಬದುಕೇ ಒಂದು ಕಾಲ ಸಂಗೀತ ಅವರ ಬದುಕಿನ ಅವಿಭಾಜ್ಯ ಅಂಗವಾಯಿತು. ಹಾಡುವುದೇ ಬದುಕೆಂದು ನಂಬಿದ ಈ ಪ್ರತಿಭಾವಂತನಿಗೆ 23ನೇ ವರ್ಷದಲ್ಲಿ ಕ್ಷಯ ರೋಗ ಕಾಡಿತು, ಅದೂ ಶ್ವಾಸಕೋಶಕ್ಕೆ. ಹಾಡಲು ಸಾಧ್ಯವೇ ಆಗದು ಎಂಬ ಪರಿಸ್ಥಿತಿ. ವಿಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ. ಹೀಗಾಗಿ ಆಗ ಅವರ ಶ್ವಾಸಕೋಶದ ಗಾತ್ರವನ್ನೇ ಮೊಟಕು ಮಾಡಬೇಕಾಯಿತು. ಕೊನೆಗಂತೂ ಒಂದು ಶ್ವಾಸಕೋಶವೇ ಇಲ್ಲದ ಬದುಕು ಅವರದಾಗಿಬಿಟ್ಟಿತು. ಏಳು ವರ್ಷಗಳ ಕಾಲ ಹಾಡುವುದನ್ನೇ ಬಿಡಬೇಕಾಯಿತು. ಮುಂದೆ? ಒಂದೇ ಶ್ವಾಸ ಕೋಶದ ಬಲದ ಮೇಲೆ ಹಾಡಬೇಕಾದ ಸ್ಥಿತಿ. ಹೆಚ್ಚೆಂದರೆ, ಮಂದ್ರ ಪಂಚಮದಿಂದ ಶಾರ ಗಾಂಧಾರದವರೆಗೆ ಅವರ ಓಡಾಟ, ಆದರೆ ಈ ಸ್ಥಿತಿಯನ್ನು ಅವರು ಎದುರಿಸಿ ಸಾಗಿದ ರೀತಿ ಮಾತ್ರ ಅದ್ಭುತ, ಮಿತಿಯೊಂದಿಗೇ ಇದ್ದೂ ಮಿತಿಯನ್ನು ದಾಟಿದ ಪವಾಡ!
ಒಂದೇ ಶ್ವಾಸಕೋಶವನ್ನೇ ಬಳಸಿಕೊಂಡು ಅವರು ಹಾಡತೊಡಗಿದರು. ‘ಉಡಜಾಯೇಗಾ ಹಪ್ಸ್’ ಅಬೇಲಾ, ಜಗದರ್ಶನ ಕಾ ಮೇಲಾ…’ ಎನ್ನುತ್ತ ಸಂಗೀತ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟರು. ತಮ್ಮದೇ ಶೈಲಿ ರೂಪಿಸಿಕೊಂಡರು. ಸ್ವತಃ ಸಂಗೀತ ಸಂಯೋಜಿಸಿದರು. ವಾಗ್ಗೇಯಕಾರ ಎನಿಸಿಕೊಂಡರು. ಮಾಲವಾ ಪ್ರಾಂತದ ಜಾನಪದ ಸಂಗೀತವನ್ನು ಆಳವಾಗಿ ಅಭ್ಯಸಿಸಿದರು. ರಾಗದ ಅಂತರ್ಗತ ಸತ್ವವನ್ನು, ರಹಸ್ಯವನ್ನು, ಸೌಂದರ್ಯವನ್ನು ಹೆಕ್ಕಿ ತೆಗೆಯುವ ಅವರ ಗಾಯನ ಕೇಳುಗನ ಕುತೂಹಲವನ್ನು ಪೋಷಿಸುತ್ತಲೇ ಸಾಗುತ್ತದೆ. ಒಂದು ಸ್ವರದ ಮೇಲೆ ಹೆಚ್ಚು ಹೊತ್ತು ನಿಲ್ಲುವುದು ತನ್ನಿಂದ ಸಾಧ್ಯವಿಲ್ಲವೆಂದು ಅವರಿಗೆ ಗೊತ್ತು. ಹೀಗಾಗಿ ಅವರದು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡ ಶೈಲಿ, ಹೊಸ ಮಿಂಚೊಂದನ್ನು ಹೊಳೆಯಿಸುತ್ತಲೇ ಸಾಗುವ ಗಂಧರ್ವ ಶೈಲಿ. ಒಮ್ಮೆ ಅದು ಜಲಪಾತ. ಮತ್ತೊಮ್ಮೆ ಶಾಂತ ಕಡಲು. ಇನ್ನೊಮ್ಮೆ ಬಳುಕುತ್ತ ಸಾಗುವ ನದಿ. ‘ಯಾರ್ ವಿನಾ ಆಯೋರೇ… ಇರಬಹುದು, ‘ಕಿವಾರ ಕಿನಾರೆ ಕಿನಾರೆ ದರಿಯಾ….’ ಇರಬಹುದು. ಅವರ ಸ್ವಂತ ಸಂಯೋಜನೆಯಂತೂ ಅನನುಕರಣೀಯ. ಅವರಿಗೆ ನೀಡಿದ ‘ಪದ್ಮಭೂಷಣ’ ಆ ಪ್ರಶಸ್ತಿಗೇ ಒಂದು ಭೂಷಣ. ಅವರು ‘ಬಲಗಯೇ ಟೋತ್…’ ಎನ್ನುತ್ತಿದ್ದರೆ ಅಲ್ಲಿ ಯಾವ ಗಿಮಿಕ್, ಸರ್ಕಸ್ ಕಾಣುವುದಿಲ್ಲ. ಅದು ಅಪ್ಪಟ ಕುಮಾರ ಗಂಧರ್ವ ಫರಾಣಾ, ಹೀಗೆ, ಕುಮಾರ ಗಂಧರ್ವ ಶತಮಾನದ ಅಷ್ಟೇ ಅಲ್ಲ, ಶತಶತಮಾನದ ಗಾಯಕ.
ಮೇರುಗಾಯಕ ಪಂಡಿತ್ ಕುಮಾರ ಗಂಧರ್ವ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಎರಡು ದಿನಗಳ ಸಂಗೀತೋತ್ಸವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಾಗೂ ಭಾನುವಾರ (ಆ.19, 20) ಆಯೋಜನೆಗೊಂಡಿದೆ. ಬೆಂಗಳೂರಿನ ಸಪ್ತಕ ಸಂಸ್ಥೆ ಸಹಯೋಗದಲ್ಲಿ ಕುಮಾರ ಗಂಧರ್ವ ಪ್ರತಿಷ್ಠಾನ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಕಾರ್ಯಕ್ರಮ ಆಯೋಜಿಸಿವೆ. ಆ.19ರ ಸಂಜೆ 5.30ರಿಂದ ನಡೆಯುವ ಸಂಗೀತಸಭೆಯಲ್ಲಿ ಕುಮಾರ ಗಂಧರ್ವ ಅವರ ಮೊಮ್ಮಗ ಹಾಗೂ ನಾಡಿನ ಪ್ರಸಿದ್ಧ ಸಂಗೀತಗಾರ ಭುವನೇಶ ಮುಕುಲ್ ಕೊಲಕಾಳಿ ಅವರ ಗಾಯನ ಆಯೋಜನೆಗೊಂಡಿದೆ. ಮಂಜು ಮೆಹ್ರಾ ಅವರ ಸಿತಾರ್ ವಾದನ ಹಾಗೂ ಕೈವಲ್ಯ ಕುಮಾರ್ ಅವರ ಗಾಯನವೂ ಇದೆ. ಆ.20ರಂದು ಸಂಜೆ 5.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ನಾಗೇಶ್‌ ಅಡಗಾಂವಕರ್, ಅರತೆ ಅಂಕಲಿಕ‌ ಗಾಯನ ಪ್ರಸ್ತುಪಡಿಸಲಿದ್ದರೆ, ಸತೀಶ್‌ ವ್ಯಾಸ ಅವರ ಸಂತೂರ್ ವಾದನ ಕಳೆಗಟ್ಟಲಿದೆ. ರವೀಂದ್ರ ಕಾಟೋಟಿ, ವ್ಯಾಸಮೂರ್ತಿ ಕಟ್ಟೆ ಹಾರ್ಮೋನಿಯಂ ಹಾಗೂ ರವೀಂದ್ರ ಯಾವಗಲ್‌, ಆದಿತ್ಯ ಕಲ್ಯಾಣಪುರ್ ಹಾಗೂ ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ ಮೊ: 9535511888 (ಜಿ.ಎಸ್​. ಹೆಗಡೆ) ಸಂಪರ್ಕಿಸಬಹುದು.
ಕುಮಾರ ಗಂಧರ್ವ ಅವರು 12 ರಾಗಗಳನ್ನು ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ, ತಮ್ಮ ಎಲ್ಲ ರಚನೆಗಳನ್ನು ಕಚೇರಿಗಳಲ್ಲಿ ಪಾಡಿ ಶೋತೃಗಳನ್ನು ತಲೆದೂಗಿಸುತ್ತಿದ್ದರು. ಸಂತರ ಆತ್ಮವನ್ನೇ ಪ್ರವೇಶಿಸಿರುವರೋ ಎನ್ನುವಂತೆ ಕಬೀರ ದಾಸ, ಸೂರದಾಸ್ ಮೀರಾ ಭಜನ್‌ಗಳನ್ನು ಭಾವನಾತ್ಮಕವಾಗಿ ಹಾಡುತ್ತಿದ್ದರು. ಭಜನ್‌ಗಳು ಶಾಸ್ತ್ರೀಯ ಸಂಗೀತ ಕಚೇರಿಯ ಒಪ್ಪಿತ ಅಂಗವಾಗಿರುವುದಕ್ಕೆ ಕುಮಾರ ಗಂಧರ್ವರೇ ಬಹುಮಟ್ಟಿನ ಕಾರಣ. ಭಾರಿ ಯಶಸ್ಸು ಪಡೆದ ಅವರ ‘ಸುನತಾ ಹೈ ಗುರು ಗ್ಯಾನಿ ಇದೆಲ್ಲದಕ್ಕೆ ನಾಂದಿ ಹಾಡಿತು.
ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮುಸ್ಲಿಮರೂ ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್

ಚುನಾವಣಾ ಸಮಿತಿಗಳಿಂದ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಯನ್ನು ಕೈಬಿಟ್ಟ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
