| ಎಂ.ಆರ್. ಸತ್ಯನಾರಾಯಣ
ಗದುಗಿನ ನಾರಣಪ್ಪನನ್ನು ಓದದ ಕನ್ನಡಿಗರಾದಾರೂ ಇರುವರೇ! ಓದಿರದಿದ್ದರೆ ಅದು ಅವರಿಗಾದ ನಷ್ಟ. ಅವನ ಹೆಸರು ಹೇಳಿದರೆ ಸಾಕು ಕನ್ನಡ ಭಾಷಾಜ್ಞಾನ ಹೆಚ್ಚುತ್ತದೆ. ಇನ್ನು, ಕಾವ್ಯ ಓದಿ ಅರ್ಥೈಸಿ ಹಾಡುವಂತಾದರೆ ಅಂಥವರಿಗಿನ್ನೆಂಥ ಆನಂದ ಸಿಗಬಹುದು! ಗದುಗಿನ ವೀರನಾರಾಯಣನಂಕಿತದ ಕೋಳಿವಾಡದ ನಾರಣಪ್ಪ ಅರ್ಥಾತ್ ಕುಮಾರವ್ಯಾಸ ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬ ಎಂಬುದರಲ್ಲಿ ಎರಡು ಮಾತಿಲ್ಲ. ‘ತಿಳಿಯ ಹೇಳುವೆ ಕೃಷ್ಣ ಕಥೆಯನು’ ಎಂದು ಕೃಷ್ಣನಿಗೇ ತಿಳಿಯಹೇಳುವ ಯತ್ನ. ‘ಕೃಷ್ಣ ಮೆಚ್ಚಲಿಕೆ ತಿಳಿಯ ಹೇಳುವೆ’ ಎನ್ನುತ್ತ ಯಾವನಿಂದ ಪ್ರೇರಿತನೋ ಅವನಿಗೆ ಅರ್ಪಿಸುವ ವಿನಯ. ವೇದವ್ಯಾಸರು ಹೇಳಿದ್ದನ್ನು ಗಣಪತಿ ಬರೆದ- ಇಲ್ಲಿ ಆ ವ್ಯಾಸರು ಇಲ್ಲ. ಆದರೆ ಕಥಾ ನಿರೂಪಣೆಗೆ ಆದದ್ದೂ ಅವನೇ, ಹೀಗಾಗಿಯೇ ನಾರಣಪ್ಪ ಕುಮಾರವ್ಯಾಸನಾದದ್ದು. ‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂದು ಅರ್ಪಣೆ. ಹೀಗೆ ಹೇಳುತ್ತಲೆ ತಾನು ಆರಿಸಿಕೊಂಡ ಕಥಾವಸ್ತು ಎಂಥದು; ಮಹಾಭಾರತದ ಪಾತ್ರಗಳು ಸಾಮಾನ್ಯವೇ! ಅಂಥವಕ್ಕೆ ಜೀವ ತುಂಬುವ ಸಾಮರ್ಥ್ಯ ತನ್ನಲ್ಲಲ್ಲದೆ ಬೇರೆ ಯಾರಿಗಾದರೂ ಸಾಧ್ಯವೇ: ಅಬ್ಬಾ, ಎಂಥ ಹೆಗ್ಗಳಿಕೆ-ಸ್ವಾಭಿಮಾನ- ತನ್ನ ಕಾವ್ಯ ಅತ್ಯುತ್ಕ ೃ್ಟ ಎಂಬ ಅಚಲ ವಿಶ್ವಾಸ ಅವನಿಗೆ. ‘ಬಣಗು ಕವಿಗಳ ಲೆಕ್ಕಿಪನೆ’- ಕುಣಿಸಿ ನಗನೇ, ಸಫಲನಾಗಲಾರೆ ಕವಿ ಕುಮಾರವ್ಯಾಸನುಳಿದವರ, ಕೇಳವ ಸೂರಿಗಳು ಜಂಗಮ ಜನಾರ್ದನರು, ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ- ಇಂಥ ನುಡಿಗಟ್ಟುಗಳು ಬರಬೇಕಾದರೆ ಅವನ ಕಾವ್ಯಪ್ರತಿಭೆಯನ್ನು ಊಹಿಸಬಹುದು. ಕವಿ 15ನೇ ಶತಮಾನದವ, ಆ ಕಾಲಕ್ಕೆ ಆಸಂಖ್ಯ ರಾಮಾಯಣಗಳು ಪ್ರಸಿದ್ಧ- ತಾನೇನಾದರೂ ರಾಮಾಯಣಕ್ಕೆ ಕೈ ಹಾಕಿದರೆ ಖಂಡಿತ ಸಫಲನಾಗಲಾರೆ, ತಾನು ಬರೆದರೆ ಅದು ಮಹಾಭಾರತದ ಕಥೆಯನ್ನೆ. ಏಕೆಂದರೆ ತನ್ನ ಕವಿಸಾಮರ್ಥ್ಯಕ್ಕೆ ತಕ್ಕುದಾದ ಪಾತ್ರಗಳು ಅಲ್ಲಿವೆ- ಇಂಥ ಸದೃಢ ನಿರ್ಧಾರವೆ ಅವನನ್ನು ಕನ್ನಡ ಕಾವ್ಯಲೋಕದ ಅಪ್ರತಿಮ ಕವಿ ಎನಿಸಲು ಸಾಧ್ಯವಾದುದು.
ಕಥಾ ಆಯ್ಕೆಯಲ್ಲಿ ಯಶಸ್ಸು, ಹತ್ತು ಪರ್ವಗಳಲ್ಲಿ ಎಲ್ಲೆಲ್ಲಿ ಏನೇನು ಔಚಿತ್ಯವೋ, ಯಾರ ಪಾತ್ರಕ್ಕೆ ಎಷ್ಟು ಮನ್ನಣೆಯೊ ಅಷ್ಟು ಕೊಟ್ಟು ಕಾವ್ಯದುದ್ದಕ್ಕೂ ಮೆರೆದಿದ್ದಾನೆ. ಕಥೆಯನ್ನು ಕೃಷ್ಣನಿಗೇ ಹೇಳುವುದರಲ್ಲಿ ಕವಿ ಗೆದ್ದಿದ್ದಾನೆ. ಪುರಂದರದಾಸರು ಒಂದು ಸಣ್ಣ ಸುಳಾದಿಯಲ್ಲಿ ಕವಿಯ ಬಗ್ಗೆ ಆಡಿರುವ ನುಡಿಮುತ್ತುಗಳು ಹೀಗಿವೆ-
ಭಾರತಮಲ್ಲ ಭೀಮನೆಂಬರು ಗಡ, ಭಾರತಮಲ್ಲ ಅರ್ಜುನನೆಂಬರು ಗಡ
ಭಾರತಮಲ್ಲ ಕರ್ಣನೆಂಬರು ಗಡ, ಭಾರತಮಲ್ಲರು ಇವರಾರೂ ಅಲ್ಲ ಗಡ
ಭಾರತಮಲ್ಲ ಗದುಗಿನ ವೀರನಾರೇಯಣನು ಗಡ ಪುರಂದರ ವಿಠಲ
ಈ ಮಾತು ‘ವೀರನಾರಾಯಣನೆ ಕವಿ’ ಮಾತಿಗೆ ಎಷ್ಟು ಹತ್ತಿರ ಅಲ್ಲವೆ?
‘ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದ ಸಾರ’ ಎನ್ನುವ ಪ್ರಸಿದ್ಧ ಪದ್ಯದಲ್ಲಿ, ಈ ಕಾವ್ಯ ವೀರವೂ, ವೇದದ ಸಾರವೂ, ತತ್ವ ವಿಚಾರಗಳ ಶೋಧವೂ, ಮಂತ್ರಿಗಳಿಗೆ ಬುದ್ಧಿಕಾರವೂ ಅಲ್ಲದೆ ಶೃಂಗಾರ ಅಲಂಕಾರವೂ ಹೌದು. ಯಾರ್ಯಾರಿಗೆ ಏನು ಬೇಕೊ ಎಲ್ಲವೂ ಹೇರಳವಾಗಿದೆ ಅವನ ಕಾವ್ಯದಲ್ಲಿ. ದ್ರೌಪದಿಗೆ ಕೃಷ್ಣನನ್ನು ‘ಗುರುಭಾವ’ ಸಂಜನಿಸುವಂತೆ ಮಾಡುವ ಸಂದರ್ಭ, ‘ಕೃಷ್ಣಾ ಕರ್ಣ ಯಾರು ಹೇಳು’ ಎಂದು ಅಂಗಲಾಚುವ ಅರ್ಜುನನ ಕರುಳ ಕೂಗು, ಭೀಮ ಗರ್ಜನೆ ಮಧುರಗೀತವೆ?, ಭೀಮನ ಗರ್ಜನೆಯೆಲ್ಲಾದರೂ ಸುಗಮ ಸಂಗೀತವಾಗಲು ಸಾಧ್ಯವೇ? ಕಾಳಗವನೆ ಬಲಿದು ಬಹೆವೆಂಬ ಕೃಷ್ಣ ವಚನ, ವಿದುರ-ನಾರದ- ಸನಕಾದಿಗಳ ಹಿತವಚನ- ರಾಜಕೀಯ- ನೀತಿ- ಮಾರಿಗೆ ಔತಣವಾಯ್ತು ಎನ್ನುವ ಕರ್ಣ, ಹಾಸ್ಯದಲ್ಲಿ ಮೆರೆವ ಉತ್ತರನ ಪಾತ್ರ-‘ಕೃಷ್ಣ ನೀನೇ ಸಾಕು ನಮಗೆ’ ಎಂದ ಅರ್ಜುನ- ಉಕ್ಕಿ ಹರಿವ ಭಕ್ತಿ ಭಾವ ಧಾರೆಯ ಭಾಮಿನಿಗಳು. ಒಂದೇ ಎರಡೇ… ಈ ಕವಿಯ ಕುರಿತು ಏನು ಬರೆದರೂ-ಬರೆಯಲು ಹೊರಟರೂ ದಾರಿತಪು್ಪವುದು ನಿಶ್ಚಿತ. ‘ಮಾತು ಬಲ್ಲವನಿಗೆ ಜಗಳವಿಲ್ಲ’ಎಂಬುದು ಗಾದೆಮಾತು. ಅದೇ ರೀತಿಯಲ್ಲಿ, ‘ಗದುಗಿನ ಭಾರತ ಓದಿದವನಿಗೆ ಶಬ್ದದಾರಿದ್ರ್ಯವಿಲ್ಲ’. ಕೊನೆಗೆ ಒಂದು ಪದ್ಯದ ಸಾಲು, ಕೌರವನ ಬಾಯಲ್ಲಿ-
ಈತನಂತರ್ಯಾಮಿ- ಜೀವವ್ರಾತದಲಿ ಜನಜನಿತವಿದು/ ಜಗವೀತನಾಜ್ಞೆಯೊಳು ಭಿನ್ನನಂತಿರೆ ತೋರಿ
ಭಿನ್ನಾಭಿನ್ನನೆನಿಸಿಯೆ ಮೆರೆವ, ತಿಳಿಯಲಭಿನ್ನನೈ/ ಮುರವೈರಿ. ನಾವಿನ್ನಂಜಲೇಕೆ-
ಈ ಶೈಲಿ, ಈ ಬರವಣಿಗೆ ಮಹಾಕವಿಯೊಬ್ಬನಿಂದ ಮಾತ್ರ ಸಾಧ್ಯ.
(ಲೇಖಕರು ಗಮಕ ವಿದ್ವಾನ್, ಕರ್ನಾಟಕ ಗಮಕ ಕಲಾ ಪರಿಷತ್ ಮಾಜಿ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − five =
Remember me
