ಶಿವಮೊಗ್ಗ:ಸಕ್ಷಮ ಪ್ರಾಧಿಕಾರಗಳಾದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ನಿರ್ಣಯಗಳ ಉಲ್ಲಂಘನೆ, ಕುಲಸಚಿವರೊಂದಿಗೆ ಸಂಘರ್ಷ, ವಿವಿ ಕಾಯ್ದೆ ಉಲ್ಲಂಘಿಸಿ ತೀರ್ಮಾನ ಸೇರಿದಂತೆ ಹಲವು ಕಾರಣಗಳಿಂದ ವಿವಾದಕ್ಕೆ ಸಿಲುಕಿದ ಕುಲಪತಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಕ್ಷಮೆ ಕೋರಿದ ಘಟನೆ ಬುಧವಾರ ರಾಜ್ಯದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲೇ ಮೊದಲ ಪ್ರಕರಣವಾಗಿ ದಾಖಲಾಯಿತು.
ಇಷ್ಟೇ ಅಲ್ಲದೆ ಸಿಂಡಿಕೇಟ್ ಸದಸ್ಯರೊಂದಿಗೆ, ಸಚಿವರು, ಸಂಸದರು, ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮಿಂದ ಆಗಿರುವ ತಪ್ಪುಗಳನ್ನು ನಿವೇದಿಸಿಕೊಂಡು ಇನ್ನು ಮುಂದೆ ವಿವಿ ಘನತೆ ಎತ್ತಿ ಹಿಡಿಯುವಂತೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ ಮೊದಲ ಕುಲಪತಿ ಎಂಬ ಕಳಂಕಕ್ಕೂ ಸಿಲುಕಿದರು. ರಾಷ್ಟ್ರಕವಿ ಹೆಸರು ಹೊಂದಿರುವ ಕುವೆಂಪು ವಿವಿಯಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಪತ್ರಿಕಾ ಗೋಷ್ಠಿಯಲ್ಲಿ ಶರಣಾಗತಿ ರೀತಿಯಲ್ಲೇ ಕ್ಷಮೆ ಕೋರಿ ತಪ್ಪುಗಳನ್ನು ಮನ್ನಿಸಿಬಿಡಿ ಎಂದು ಮನವಿ ಮಾಡಿದರು.
ಕುಲಪತಿ ಪ್ರೊ. ಬಿ.ಪಿ. ವೀರ ಭದ್ರಪ್ಪ ಅವರ ಕಾನೂನುಬಾಹಿರ ಕ್ರಮಗಳು ಮತ್ತು ಸರ್ವಾಧಿಕಾರದ ಮನೋಭಾವದ ಬಗ್ಗೆ ವಿಜಯವಾಣಿಯಲ್ಲಿ ದಾಖಲೆ ಗಳೊಂದಿಗೆ ಸತತವಾಗಿ ಪ್ರಕಟವಾದ ಸರಣಿ ವರದಿಗಳು ವಿವಿ ಮೇಲೆ ಪರಿಣಾಮ ಬೀರಿದ್ದವು. ಸಿಂಡಿಕೇಟ್ ಸದಸ್ಯರು ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ ಕುಲಪತಿಗಳ ಕಾಯ್ದೆಬಾಹಿರ ನಿರ್ಧಾರಗಳ ಬಗ್ಗೆ ದೂರು ನೀಡಿದ್ದರು. ಅವರ ನಿರ್ಣಯಗಳು ವಿವಿಗೆ ಕಳಂಕ ತರುತ್ತಿದ್ದು, ಹಿಂದಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದರು. ಈ ಎಲ್ಲ ಬೆಳವಣಿಗೆ ಬಗ್ಗೆ ಮಂಗಳವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ತಪ್ಪುಗಳನ್ನು ಒಪ್ಪಿಕೊಂಡು ಇನ್ನು ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನ ಹಾಗೂ ವಿಶ್ವವಿದ್ಯಾಲಯ ಕಾಯ್ದೆ ಪ್ರಕಾರ ನಡೆದುಕೊಳ್ಳುತ್ತೇನೆ. ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವ ಮುನ್ನ ಬಹಿರಂಗ ಕ್ಷಮೆ ಕೇಳಿ, ಇನ್ನು ಮುಂದೆ ಈ ರೀತಿಯ ತಪ್ಪುಗಳು ಮರುಕಳಿಸದಂತೆ ಕೆಲಸ ಮಾಡುವ ವಾಗ್ದಾನ ಮಾಡುತ್ತಿದ್ದೇನೆ ಎಂದರು. ನಮ್ಮಿಂದ ಹಲವಾರು ತಪ್ಪುಗಳಾಗಿವೆ. ಲೋಪಗಳನ್ನು ಗಮನಕ್ಕೆ ತಂದಿದ್ದೀರಿ, ಮನ್ನಿಸಿಬಿಡಿ, ಇನ್ನು ಮುಂದೆ ಈ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ. ಇದು ನಿಮ್ಮೆಲ್ಲರಿಗೆ ನಾನು ನೀಡುತ್ತಿರುವ ವಾಗ್ದಾನ ಎಂದು ಹೇಳಿದರು.
ಇಬ್ಬರೂ ರಿಜಿಸ್ಟ್ರಾರ್​ಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿ ಸಹೋದ್ಯೋಗಿಗಳೊಂದಿಗೆ ಯಾವುದೇ ಸಂಘರ್ಷಕ್ಕೆ ಬೀಳದೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ವಿಶ್ವವಿದ್ಯಾಲಯದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದುಹೋಗಿವೆ. ನೀವು (ಪತ್ರಕರ್ತರು) ನನ್ನ ಕಣ್ಣು ತೆರೆಸಿದ್ದೀರಿ, ಘನತೆ-ಗೌರವ ಮನಗಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಶರಣಾಗತಿ ರೀತಿ ಮಾತನಾಡಿದ ಕುಲಪತಿ, ನಮ್ಮಿಂದ ತಪ್ಪುಗಳಾದಾಗ ಛಡಿ ಏಟು ಕೊಟ್ಟಿದ್ದೀರಿ, ನಾನು ಅನುಭವಿಸಿದ್ದೇನೆ. ವಾಗ್ದಂಡನೆ ನಿಮ್ಮ ಹಕ್ಕು, ತಪ್ಪುಗಳು ಕಂಡಾಗ ವಾಗ್ದಂಡನೆ ಮಾಡಿದ್ದಕ್ಕೆ ಬೇಸರಪಟ್ಟುಕೊಳ್ಳಲಾರೆ. ಇದನ್ನು ನನ್ನ ಕಣ್ಣು ತೆರೆಸಲು ನೀವು ಮಾಡಿದ ಕೆಲಸ ಎಂದು ಭಾವಿಸಿದ್ದೇನೆ ಎಂದರು. ವಿವಿ ಆಡಳಿತ ವಿಭಾಗದಲ್ಲಿ ಸಹಮತ ಇಲ್ಲ, ಸಂಘರ್ಷದ ವಾತಾವರಣ ಇದೆ, ಸಾಮರಸ್ಯ ಕಾಣಿಸುತ್ತಿಲ್ಲ ಎಂದು ಬರೆದಿರುವುದನ್ನು ಗಮನಿಸಿದ್ದೇನೆ. ಇನ್ನು ಮುಂದೆ ನಾವೆಲ್ಲಾ ಒಂದೇ ಕುಟುಂಬದವರಂತೆ ನಡೆದುಕೊಂಡು ಹೋಗುತ್ತೇವೆ. ಇದು ನನ್ನ ವಾಗ್ದಾನ ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಯುಜಿಸಿ ನಿಯಮಾವಳಿಗಳ ಪ್ರಕಾರವೇ ನಡೆದುಕೊಳ್ಳುತ್ತೇನೆ. ಇನ್ನು ಮುಂದೆ ಕೈಗೊಳ್ಳುವ ನಿರ್ಧಾರಗಳೆಲ್ಲವೂ ಏಕವ್ಯಕ್ತಿ ನಿರ್ಧಾರಗಳಾಗಿರುವುದಿಲ್ಲ. ಎಲ್ಲರೂ ಸೇರಿ ನಿರ್ಧಾರ ಕೈಗೊಳ್ಳ್ಳುತ್ತೇವೆ ಎಂದರು.
ಸಿಂಡಿಕೇಟ್ ಸಭೆಯಲ್ಲಿ ಚರ್ಚೆ:ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿವಿ ಕಾಯ್ದೆ ಮತ್ತು ಸಕ್ಷಮ ಪ್ರಾಧಿಕಾರಿಗಳ ನಿರ್ಣಯಗಳನ್ನು ಉಲ್ಲಂಘಿಸಿ ಆದೇಶ ಮಾಡುತ್ತಿದ್ದ, ಕುಲಸಚಿವರೊಂದಿಗೆ (ಆಡಳಿತ) ಸಂಘರ್ಷಕ್ಕೆ ಇಳಿಯುತ್ತಿದ್ದ ಹಾಗೂ ಕುಲಪತಿಗಳು ಕೈಗೊಂಡಿದ್ದ ಏಕಪಕ್ಷೀಯ ನಿರ್ಣಯಗಳ ಬಗ್ಗೆ ವಿಜಯವಾಣಿ ಸರಣಿ ವರದಿ ಪ್ರಕಟ ಮಾಡಿತ್ತು. ವಿಜಯವಾಣಿ ವರದಿಗಳು ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಗಿ ವಿವಾದಕ್ಕೀಡಾಗಿ ಸಭೆಯನ್ನು ಮುಂದೂಡಲಾಗಿತ್ತು. ಮಂಗಳವಾರ ನಡೆದ ಸಭೆಯಲ್ಲಿ ಕುಲಪತಿಗಳು ಇನ್ನು ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
ಸಿಂಡಿಕೇಟ್ ಸದಸ್ಯರ ಸಮರ್ಥನೆ:ಕುಲಪತಿ ವೀರಭದ್ರಪ್ಪ ವಿವಿ ಕಾಯ್ದೆ ಮತ್ತು ಸಕ್ಷಮ ಪ್ರಾಧಿಕಾರಗಳ ನಿರ್ಣಯಗಳನ್ನು ಉಲ್ಲಂಘಿಸಿ ತೀರ್ವನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದ ಸಿಂಡಿಕೇಟ್ ಸದಸ್ಯರು, ಬಹಿರಂಗ ಕ್ಷಮೆ ಯಾಚಿಸಿದ ಬಳಿಕ ಕುಲಪತಿ ವೀರಭದ್ರಪ್ಪ ಅವರನ್ನು ಬೆಂಬಲಿಸಿ ಮಾತನಾಡಿದರು. ಕುಲಪತಿ ದೊಡ್ಡ ವ್ಯಕ್ತಿಯಾಗಿದ್ದರೂ ಯಾವುದೇ ಅಹಂ ತೋರಿಸದೆ ಸಿಂಡಿಕೇಟ್ ಸಭೆಯಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು. ಅವರ ಈ ನಡೆ ನಮಗೆ ಮೆಚ್ಚುಗೆಯಾಯಿತು ಎಂದು ಸಿಂಡಿಕೇಟ್ ಸದಸ್ಯ ಧರ್ಮಪ್ರಸಾದ್ ಸರ್ಟಿಫಿಕೇಟ್ ನೀಡಿದರು. ಈಗಾಗಲೇ ಉನ್ನತ ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರಿಗೆ ಸಲ್ಲಿಸಿರುವ ದೂರು ಆಧರಿಸಿ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ಅವರ ಮೇಲೆ ಕ್ರಮ ಕೈಗೊಂಡರೆ? ಎಂಬ ಪ್ರಶ್ನೆಗೆ ಸಿಂಡಿಕೇಟ್ ಸದಸ್ಯರಿಂದ ಸಮರ್ಪಕ ಉತ್ತರ ಬರಲಿಲ್ಲ.
ಸಿಎಂ, ಗವರ್ನರ್ ಭೇಟಿ:ಸಿಂಡಿಕೇಟ್ ಸದಸ್ಯರೊಂದಿಗೆ ಉನ್ನತ ಶಿಕ್ಷಣ ಸಚಿವರು, ಸಿಎಂ, ರಾಜ್ಯಪಾಲರನ್ನು ಭೇಟಿಯಾಗುತ್ತೇನೆ. ಆಗಿರುವ ಅಚಾತುರ್ಯಗಳನ್ನು ಗಮನಕ್ಕೆ ತಂದು ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ಹೀಗಾಗದಂತೆ ಕುವೆಂಪು ವಿವಿ ಘನತೆ ಎತ್ತಿ ಹಿಡಿಯುವ ರೀತಿ ಕೆಲಸ ಮಾಡುತ್ತೇನೆ ಎಂದು ಪ್ರೊ. ಬಿ.ಪಿ. ವೀರಭದ್ರಪ್ಪ ಹೇಳಿದರು.

ಫೋನ್​ ಪೇ ಮೂಲಕ ಲಂಚ ಪಡೆದಿದ್ದ ಇಬ್ಬರು ಎಸಿಬಿ ಬಲೆಗೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
