ಬೆಂಗಳೂರು:ಕೋವಿಡ್ ಸಂಭಾವ್ಯ ನಾಲ್ಕನೇ ಅಲೆ ಸಾಧ್ಯತೆ ಅರಿಯಲು ಹಾಗೂ ಕರೊನಾ ವೈರಸ್​ನ ಹೊಸ ತಳಿ ಪತ್ತೆಗಾಗಿ ಜಿನೋಮಿಕ್ ಸೀಕ್ವೆನ್ಸಿಂಗ್ (ತಳಿ ಪರೀಕ್ಷೆ) ನಡೆಸಲು ಇದೀಗ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್​ಐ) 1.35 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ.
ಈ ಪ್ರಯೋಗಾಲಯಕ್ಕೆ ರಾಜ್ಯ ಸರ್ಕಾರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ್ದು, ಪರೀಕ್ಷೆಗೆ ಬೇಕಾದ ಯಂತ್ರೋಪಕರಣ ಖರೀದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಆರ್ಥಿಕ ನೆರವು ಒದಗಿಸಿದೆ. ಏಕಕಾಲದಲ್ಲಿ 40 ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಈ ಪ್ರಯೋಗಾಲಯ ಹೊಂದಿದೆ ಎಂದು ಬಿಎಂಸಿಆರ್​ಐ ಡೀನ್ ಡಾ.ರವಿ ಹೇಳಿದ್ದಾರೆ.
ಪ್ರಾಯೋಗಿಕ ಪರೀಕ್ಷೆ:ಸಂಸ್ಥೆಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್​ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಸದ್ಯ 40 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ವರದಿಯನ್ನು ಮರುಪರಿಶೀಲನೆಗಾಗಿ 4-5 ದಿನಗಳಲ್ಲಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗುವುದು. ಅಲ್ಲಿನ ವರದಿ ಹಾಗೂ ಸಲಹೆಗಳನ್ನು ಆಧರಿಸಿ ಪ್ರಯೋಗಾಲಯವನ್ನು ಸಜ್ಜುಗೊಳಿಸಲಾಗುವುದು. ಆ ನಂತರ ಅಧಿಕೃತವಾಗಿ ಜಿನೋಮಿಕ್ ಪರೀಕ್ಷೆ ಪ್ರಾರಂಭಿಸಲಾಗುವುದು ಎಂದು ಬಿಎಂಸಿಆರ್​ಐನ ಮೈಕ್ರೋ ಬಯಾಲಾಜಿಕಲ್ ವಿಭಾಗದ ಮುಖ್ಯಸ್ಥೆ ಡಾ.ಆರ್. ಅಂಬಿಕಾ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಈ ಪ್ರಯೋಗಾಲಯದಲ್ಲಿ ಕೋವಿಡ್ ವೈರಾಣು ಉಪತಳಿಗಳ ಪತ್ತೆ ಕಾರ್ಯ ಮಾತ್ರ ಮಾಡಲಾಗುವುದು. ಕೋವಿಡ್ ನಂತರದಲ್ಲಿ ಇದು ಇತರೆ ವೈರಾಣುಗಳ ತಳಿಗಳ ಪತ್ತೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ತಜ್ಞರ ಶಿಫಾರಸು:ರಾಜ್ಯದಲ್ಲಿ ಸದ್ಯ ನಿಮ್ಹಾನ್ಸ್​ನ ರಾಷ್ಟ್ರೀಯ ವೈರಾಣು ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದಲ್ಲಿ (ಎನ್​ಸಿಬಿಎಸ್) ಜಿನೋಮಿಕ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ. ಇಲ್ಲಿ ಬೇರೆ ವೈರಸ್​ಗಳ ತಳಿಪರೀಕ್ಷೆಯನ್ನು ಮಾಡಲಾಗುತ್ತಿದೆ. ಕರೊನಾ ವೈರಸ್ ನಿಗಾಕ್ಕಾಗಿಯೇ ಹೊಸ ಪ್ರಯೋಗಾಲಯ ಸಜ್ಜುಗೊಂಡಿದ್ದು, ಇನ್ನು ಮುಂದೆ, ಬಿಎಂಸಿಆರ್​ಐಗೆ ಕಳುಹಿಸುವಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಏಕೆ?:ಕೋವಿಡ್ ವೈರಾಣು ಈಗಾಗಲೇ ಹಲವು ರೂಪಾಂತರ ಹೊಂದಿದ್ದು, ಆಲ್ಪಾ, ಬೀಟಾ, ಡೆಲ್ಟಾ, ಈಟಾ, ಕಪ್ಪಾ, ಪ್ಯಾಂಗೊ, ಒಮಿಕ್ರಾನ್ ಹಾಗೂ ಕೆಲ ಉಪತಳಿಗಳು ಪತ್ತೆಯಾಗಿವೆ. ಇವುಗಳಲ್ಲಿ ಆಲ್ಪಾ, ಡೆಲ್ಟಾ ಹಾಗೂ ಒಮಿಕ್ರಾನ್ ತಳಿಯಿಂದಾಗಿ ದೇಶವು ಕೋವಿಡ್ ಮೂರು ಅಲೆಗಳನ್ನು ಎದುರಿಸಬೇಕಾಯಿತು. ಈಗೇನಾದರೂ ಹೊಸ ತಳಿ ಪತ್ತೆಯಾದಲ್ಲಿ ನಾಲ್ಕನೇ ಅಲೆಯ ಸಾಧ್ಯತೆ ಬಗ್ಗೆ ತಿಳಿಯಲು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡಲಾಗುತ್ತದೆ.
270 ಪ್ರಯೋಗಾಲಯಗಳು:ಕೋವಿಡ್ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕು ಪತ್ತೆಗೆ ಯಾವುದೇ ಪ್ರಯೋಗಾಲಯ ಇರಲಿಲ್ಲ. ಹೀಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಸಂಗ್ರಹ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ಕೋವಿಡ್ ಸೋಂಕು ತೀವ್ರತೆ ಹಿನ್ನೆಲೆಯಲ್ಲಿ ಐಸಿಎಂಆರ್ ಮಾನ್ಯತೆ ಪಡೆದು ರಾಜ್ಯದಲ್ಲಿಯೇ ಹಂತಹಂತವಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಯಿತು. ಇದೀಗ ರಾಜ್ಯದಲ್ಲಿ ಕೋವಿಡ್ ಸೋಂಕು ಪರೀಕ್ಷೆ ನಡೆಸಲು 270 ಪ್ರಯೋಗಾಲಯಗಳಿವೆ.

ನವದೆಹಲಿ:ದೇಶದಲ್ಲಿ ಗುರುವಾರ ಬೆಳಗ್ಗೆವರೆಗಿನ ಒಂದು ದಿನದ ಅವಧಿಯಲ್ಲಿ ಕರೊನಾ ಸೋಂಕಿನ 7,240 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಸತತ ಎರಡನೇ ದಿನವೂ ಸೋಂಕಿನ ಕೇಸ್​ಗಳಲ್ಲಿ ಶೇಕಡ 40 ಏರಿಕೆ ದಾಖಲಾಗಿದೆ. ಇದು ಮಾ.2ರ ನಂತರ ದೈನಿಕ ಪ್ರಕರಣಗಳಲ್ಲಿ ಅತಿ ಹೆಚ್ಚಿನ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕಿನ ಏರಿಕೆಯೇ ದೈನಿಕ ಹೆಚ್ಚಳಕ್ಕೆ ಕಾರಣವಾಗಿದೆ. ಎಂಟು ಜನರ ಸಾವಿನೊಂದಿಗೆ ಕೋವಿಡ್​ಗೆ ದೇಶದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 5,24,723ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಬುಧವಾರ 2,701 ಹೊಸ ಪ್ರಕರಣಗಳಿದ್ದು, ಜ.25ರ ನಂತರದ ಅತಿ ಹೆಚ್ಚು ಕೇಸ್ ಆಗಿದೆ. ಜತೆಗೆ, ಬಿ.ಎ.5 ಪ್ರಭೇದದ ಒಂದು ಪ್ರಕರಣ ದೃಢಪಟ್ಟಿದೆ. ಕೇರಳದಲ್ಲಿ ಒಂದು ದಿನದ ಅವಧಿಯಲ್ಲಿ 2,271 ಪ್ರಕರಣ ವರದಿಯಾಗಿದ್ದು ಒಂದು ವಾರದಲ್ಲಿ ಒಟ್ಟು 10,805 ಕೇಸ್​ಗಳು ದೃಢಪಟ್ಟಿವೆ.
ಕೇಂದ್ರ ಮುನ್ನೆಚ್ಚರಿಕೆ:ಮಹಾರಾಷ್ಟ್ರ, ಕೇರಳ, ಕರ್ನಾಟಕ, ದೆಹಲಿ ಮೊದಲಾದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದ್ದು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಯಾವಾಗ ಪರೀಕ್ಷೆ?:ಕೋವಿಡ್ ಸೋಂಕು ದೃಢಪಟ್ಟ ಎಲ್ಲರಿಗೂ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಬದಲಿಗೆ ಸೋಂಕು ದೃಢಪಟ್ಟವರಲ್ಲಿ ಯಾರಿಗೆ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುತ್ತದೋ ಅಂಥವರ ಮಾದರಿಗಳನ್ನು ಮಾತ್ರ ತಳಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಿಂದ ಹೊಸ ತಳಿ ಪತ್ತೆ ಹಚ್ಚಲು ಅನುಕೂಲವಾಗಲಿದೆ ಎನ್ನುತ್ತಾರೆ ತಜ್ಞರು.
ರಾಜ್ಯದಲ್ಲಿ ಕೋವಿಡ್ ಸಂಭಾವ್ಯ 4ನೇ ಅಲೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಶೇ.2 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಹೊಂದಿರುವ ಸೋಂಕಿತರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ಕಳುಹಿಸಲು ಸೂಚಿಸಲಾಗಿದೆ.
|ಡಾ. ಎಂ.ಕೆ. ಸುದರ್ಶನ್ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ
ಬೆಂಗಳೂರು:ರಾಜ್ಯದಲ್ಲಿ ಗುರುವಾರ 21,927 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 471 ಸೋಂಕು ಪ್ರಕರಣಗಳು ವರದಿಯಾಗಿವೆ. ದಿನದ ಸೋಂಕು ಪ್ರಮಾಣ ದರ ಶೇ.2.14ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಸಾವಿರಕ್ಕೆ (2,880) ಸಮೀಪಿಸಿದೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 458 ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ ಮೂವರು, ಕಲಬುರಗಿ ಹಾಗೂ ಉಡುಪಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!

ರಾಜಧಾನಿಯಲ್ಲಿ ಸಿಗ್ತಿದೆ ಅರ್ಧಬೆಲೆಗೆ ಮದ್ಯ, ಕಳ್ಳಸಾಗಾಟ ಶುರು: 70ಕ್ಕೂ ಅಧಿಕ ಮಂದಿಯ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
