ಹುಬ್ಬಳ್ಳಿ:ಕೇಂದ್ರದಲ್ಲಿ ಹಣಕ್ಕೆ ಕೊರತೆ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಅರಣ್ಯ ಹಾಗೂ ಪರಿಸರ ಇಲಾಖೆಗಳಿಂದ ಅನುಮೋದನೆ ಪಡೆಯಲು ಆದ್ಯತೆ ನೀಡಿದರೆ ರಾಜ್ಯದ ಎಲ್ಲ ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬಹುದಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ನಗರದ ಗಬ್ಬೂರ ಕ್ರಾಸ್​ನ ಟ್ರಕ್ ಟರ್ವಿುನಲ್ ಬಳಿ ಸೋಮವಾರ ಆಯೋಜಿಸಿದ್ದ ಹುಬ್ಬಳ್ಳಿ – ಧಾರವಾಡ ಬೈಪಾಸ್ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ 12,795 ಕೋಟಿ ರೂ. ವೆಚ್ಚದ 925 ಕಿಮೀ ಉದ್ದದ 25 ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭೂಸ್ವಾಧೀನ ಹಾಗೂ ಅರಣ್ಯ ಭೂಮಿಯ ಅನುಮೋದನೆ ಪಡೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಪ್ರತಿ 2 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು. ಇದಕ್ಕೆ ಕೇಂದ್ರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರವು ಜಲ್ಲಿಕಲ್ಲು, ಮಣ್ಣನ್ನು ರಾಜಧನರಹಿತವಾಗಿ ನೀಡಬೇಕು. ಸ್ಟೀಲ್ ಮತ್ತು ಸಿಮೆಂಟ್​ಗೆ ಕರ್ನಾಟಕದ ಶೇ. 9ರಷ್ಟು ಜಿಎಸ್​ಟಿ ಇದ್ದು, ಇದರಲ್ಲಿಯೂ ತನ್ನ ಪಾಲು ನೀಡಬೇಕು. ಹಾಗಾದರೆ, ರಾಷ್ಟ್ರೀಯ ಹೆದ್ದಾರಿಗಳ ಎಲ್ಲ ಬೈಪಾಸ್​ಗಳ ನಿರ್ವಣಕ್ಕೆ ಮಂಜೂರಾತಿ ನೀಡುತ್ತೇನೆ ಎಂದು ತಿಳಿಸಿದರು. ಕಾವೇರಿಯಲ್ಲೂ ಜಲ ಮಾರ್ಗ: ಭಾರತಮಾಲಾ -2 ರ ಯೋಜನೆ ಅಡಿ ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಅನೇಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ಭಾಗದಲ್ಲಿ ಮಹತ್ತರ ಕಾರ್ಯಗಳು ಪ್ರಗತಿಯಲ್ಲಿವೆ. ಕರ್ನಾಟಕದ ಯೋಜನೆಗಳನ್ನು 3 ಪ್ಯಾಕೇಜುಗಳಲ್ಲಿ ಉದ್ಯಮ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೆ ಗಂಗಾ ನದಿಯಲ್ಲಿ ಜಲಮಾರ್ಗ ನಿರ್ವಿುಸಿದ್ದು, ಕಾವೇರಿ ನದಿಯಲ್ಲಿಯೂ ಜಲಮಾರ್ಗ ನಿರ್ವಿುಸಬಹುದು ಎಂದು ಗಡ್ಕರಿ ಹೇಳಿದರು.
ಜಿಎಸ್​ಟಿ ತೆರವಿಗೆ ಸಿದ್ಧ:ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿ ಮೂಲಕ ಆರ್ಥಿಕ, ಕೃಷಿ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಕಬ್ಬಿಣ, ಸಿಮೆಂಟ್ ಇತರ ವಸ್ತುಗಳ ಮೇಲಿನ ಕೇಂದ್ರದ ಜಿಎಸ್​ಟಿ ತೆರವು, ಉಸುಕು ಇನ್ನಿತರ ಖನಿಜಗಳ ಮೇಲಿನ ರಾಜಸ್ವ ವಿನಾಯಿತಿ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಸ್ತೆಗಳು ಅಭಿವೃದ್ಧಿಯಾದರೆ ಬೇರೆ ತೆರಿಗೆಗಳ ರೂಪದಲ್ಲಿ ಆರ್ಥಿಕ ಸಂಪನ್ಮೂಲ ವರ್ಧನೆಯಾಗುತ್ತದೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಶೀಘ್ರ ಒಪ್ಪಂದವಾಗಲಿದೆ ಎಂದು ಹೇಳಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಬದಲಾವಣೆಗಳನ್ನು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತಂದು, ಸಮಸ್ತ ರಾಜ್ಯದ, ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಾಧಾನ್ಯ ನೀಡಲಾಗುವುದು ಎಂದರು.
ಸೂರತ್-ಚೆನ್ನೈ ಎಕ್ಸ್​ಪ್ರೆಸ್ ಹೆದ್ದಾರಿ ಶೀಘ್ರ:ಸೂರತ್ – ಚೆನ್ನೈ ಎಕ್ಸ್​ಪ್ರೆಸ್ ಹೆದ್ದಾರಿಯು ಕರ್ನಾಟಕದ ಮೂಲಕ ಹಾದು ಹೋಗಲಿದೆ. ರಾಜ್ಯದಲ್ಲಿ ನಿರ್ವಣಗೊಳ್ಳಲಿರುವ ಈ ಹೆದ್ದಾರಿಯ ಕಾಮಗಾರಿ ಇನ್ನೂ 6 ತಿಂಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಈ ಹೆದ್ದಾರಿಯು ಕಲಬುರ್ಗಿ, ಯಾದಗಿರಿ ಮತ್ತು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈ ಹೆದ್ದಾರಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ನಡುವೆ ಸಂಪರ್ಕ ಕಲ್ಪಿಸಲಿದ್ದು, 1,270 ಕಿಮೀ ಉದ್ದವಿದೆ. 47 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು – ಮೈಸೂರು ಮಧ್ಯೆ ನಿರ್ವಿುಸುತ್ತಿರುವ ಹೆದ್ದಾರಿ ಈಗಾಗಲೆ ಶೇ. 80 ಪೂರ್ಣಗೊಂಡಿದೆ. ಕನ್ಯಾಕುಮಾರಿ – ಮುಂಬೈ ಮಧ್ಯೆ ನಿರ್ವಿುಸುವ ಹೆದ್ದಾರಿಯು ಕೇರಳ, ಗೋವಾ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಹಾದು ಹೋಗಲಿದೆ. ಭಾರತ ಮಾಲಾ ಯೋಜನೆಯ 2ನೇ ಹಂತದಲ್ಲಿ ಪುಣೆ – ಬೆಂಗಳೂರು ಮಧ್ಯೆ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಪಥದ ಹೆದ್ದಾರಿ ನಿರ್ವಿುಸುವ ಯೋಜನೆ ಇದೆ. ಬೆಂಗಳೂರು – ಚೆನೈ ಎಕ್ಸ್​ಪ್ರೆಸ್ ಹೆದ್ದಾರಿ ಡಿಸೆಂಬರ್​ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಭಾರತ ಮಾಲಾ ಹಾಗೂ ಸಾಗರಮಾಲಾ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಭೂಸಾರಿಗೆ ಹಾಗೂ ಸಮುದ್ರ ಸಾರಿಗೆಯಲ್ಲಿ ಆಮೂಲಾಗ್ರ ಸುಧಾರಣೆ ತಂದಿದೆ. ಪರ್ವತಮಾಲಾ ಯೋಜನೆ ಮೂಲಕ ಈಶಾನ್ಯ ರಾಜ್ಯಗಳ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯದ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲಾ ಮುಖ್ಯ ರಸ್ತೆಗಳನ್ನು ಹೆದ್ದಾರಿಗೆ ಸಂರ್ಪಸುವ ಕಾಮಗಾರಿಗಳಿಗೆ ಪ್ರಾಶಸ್ತ್ಯ ದೊರೆಯಲಿ ಎಂದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣಕ್ಕಾಗಿ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
ಬೆಳಗಾವಿ:ದೇಶದಲ್ಲಿ 9 ಸಾವಿರ ಕಿ.ಮೀ. ಉದ್ದದ ಗ್ರೀನ್​ಫೀಲ್ಡ್ ಹಾಗೂ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 3 ಲಕ್ಷ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ದೆಹಲಿ-ಮುಂಬೈ ಹೆದ್ದಾರಿಯಲ್ಲಿ 120 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಬಹುದು. ಇದರಿಂದ ಎರಡು ನಗರಗಳ ನಡುವಿನ ಪ್ರಯಾಣ ಅವಧಿ 12 ಗಂಟೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಬೆಂಗಳೂರು ಟ್ರಾಫಿಕ್ ಹಾಗೂ ನಗರೀಕರಣ ಒತ್ತಡ ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕ ಭೂಸ್ವಾಧೀನ ಮಾಡಿಕೊಂಡು ಸ್ಮಾರ್ಟ್ ವಿಲೇಜ್ ಹಾಗೂ ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು. ರಾಜ್ಯ ಸರ್ಕಾರ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಕರ್ನಾಟಕ- ಗೋವಾ ರಾಷ್ಟ್ರೀಯ ಹೆದ್ದಾರಿ ಎಕ್ಸ್​ಪ್ರೆಸ್ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪಿಬಿ ಮಾರ್ಗ 100 ಕಿ.ಮೀ. ಅಂತರ ಕಡಿಮೆ:ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರವನ್ನು 100 ಕಿ.ಮೀ. ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದಕ್ಕೆ ಬೆಂಗಳೂರು-ಚೆನ್ನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಆರ್ಥಿಕ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಈ ರಸ್ತೆಗಳು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ರಸ್ತೆ ಸಂಪರ್ಕವನ್ನು ಉತ್ತಮಪಡಿಸಲಿವೆ. ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ನಡುವಿನ ಬಾಂಧವ್ಯವು ಇಲ್ಲಿನ ಮರಾಠಾ-ಕನ್ನಡಿಗರ ಸಹೋದರತ್ವಕ್ಕೆ ಸಾಕ್ಷಿಯಾಗಿದೆ ಎಂದು ಗಡ್ಕರಿ ಬಣ್ಣಿಸಿದರು.
ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ 20 ಅಂತಾರಾಜ್ಯ ವಿವಾದಗಳಿದ್ದವು. ಅವುಗಳಲ್ಲಿ 13 ಅಂತಾರಾಜ್ಯ ಜಲ ವಿವಾದ ಪರಿಹರಿಸಿದ್ದೇನೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿವಾದ ಪರಿಹರಿಸಲು ನನಗೆ ಸಾಧ್ಯವಾಗಲಿಲ್ಲ.
|ನಿತಿನ್ ಗಡ್ಕರಿಕೇಂದ್ರ ಸಚಿವ
ಹುಬ್ಬಳ್ಳಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಗ್ಗೆ ಇಲ್ಲಿಯ ಮಯೂರಿ ಎಸ್ಟೇಟ್​ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿದರು. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ‘ನಾನು ಮತ್ತು ಜೋಶಿಯವರು ಉತ್ತಮ ಗೆಳೆಯರು. ಬಿಡುವಿದ್ದಾಗ ಅವರ ಮನೆಗೆ ಉಪಾಹಾರ ಸೇವನೆಗೆ ಬರುತ್ತೇನೆ. ಇಂದು ಸಹ ಸಂತೋಷದಿಂದ ಕೆಲವು ನಿಮಿಷ ಕಳೆಯಲು ಬಂದಿದ್ದು, ಇದಕ್ಕೆ ಬೇರೆ ಮಹತ್ವವೇನೂ ಇಲ್ಲ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹಿರಿಯರು ಹಾಗೂ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಇಲ್ಲಿ ಅಂಥ ಯಾವ ವಿಷಯವೂ ಚರ್ಚೆಯಾಗಿಲ್ಲ’ ಎಂದರು. ಸಿಎಂ ಬೊಮ್ಮಾಯಿ ಭೇಟಿ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸಹ ಇದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
